Sunday, March 6, 2022

ಶ್ರೀ ರಾಮನ ಗುಣಗಳು - 46 ಸಮಾಧಿಮಾನ್ - ಶ್ರೀರಾಮ (Sriramana Gunagalu - 46 Samadhiman - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



'ಸಮಾಧಿಮಾನ್' ಎಂಬ ಬಿರುದು ಶ್ರೀರಾಮನಿಗೆ ವಾಲ್ಮೀಕಿಗಳೇ ಕೊಟ್ಟಿರುವುದು. ಬುದ್ಧಿ ಉಳ್ಳವನು ಬುದ್ಧಿಮಾನ್, ನೀತಿ ಉಳ್ಳವನು ನೀತಿಮಾನ್ ಎಂಬಂತೆ ಸಮಾಧಿ ಉಳ್ಳವನು ಸಮಾಧಿಮಾನ್ ಎಂಬ ಅರ್ಥವೇ? ಅಥವಾ ಸಾಮಾನ್ಯವಾಗಿ ಒಬ್ಬ ಮಹಾಪುರುಷನ ಮರಣಾನಂತರದಲ್ಲಿ ಅವರ ಶವವನ್ನು ಭೂಮಿಯಲ್ಲಿ ಹೂತು, ಅಲ್ಲಿ ಒಂದು ಗುರುತಿಗಾಗಿ ಗುಡಿಯನ್ನು ಕಟ್ಟುತ್ತಾರೆ. ಇದಕ್ಕೆ ಸಮಾಧಿ ಎಂದೂ ಹೇಳುತ್ತಾರೆ. ಇದಕ್ಕೆ ಸಮಾಧಿಮಾನ್ ಎಂಬ ಹೆಸರೇ? ಅಥವಾ ಅಷ್ಟಾಂಗದಲ್ಲಿ ಎಂಟನೆ ಅಂಗವನ್ನು ಸಮಾಧಿ ಎಂದು ಹೇಳುತ್ತಾರೆ. ಈ ಸಮಾಧಿಯ ಅನುಭವ ಉಳ್ಳವನು ಎಂಬ ಅರ್ಥದಲ್ಲಿ 'ಸಮಾಧಿಮಾನ್' ಎಂಬುದಾಗಿ ಹೇಳಲಾಗಿದೆಯೋ?

ಶಾಂಡಿಲ್ಯೋಪನಿಷತ್ತು ಸಮಾಧಿಯ ಬಗ್ಗೆ ಈ ರೀತಿಯಾದ ವಿವರಣೆಯನ್ನು ಕೊಡುತ್ತದೆ- ಉಪ್ಪು ನೀರೊಡನೆ ಸೇರಿದಾಗ ಉಪ್ಪಿನ ಅಸ್ತಿತ್ವವು ಇಲ್ಲದೆ ನೀರಲ್ಲಿ ಹೇಗೆ ಪೂರ್ಣವಾಗಿ ಸೇರಿಕೊಳ್ಳುವುದೋ, ಅಂತೆಯೇ ಮನಸ್ಸು ಆತ್ಮಗಳ ಐಕ್ಯವನ್ನು ಸಮಾಧಿ ಎಂದು. ಅಂದರೆ ಮನಸ್ಸಿಗೆ ಒಂದು ವಿಷಯವನ್ನು ಕೊಟ್ಟು ಅದರಲ್ಲೇ ತನ್ಮಯತೆಯನ್ನು ಪಡೆಯುವಂತೆ ಮಾಡಿದಾಗ ಸಿದ್ಧಿಸುವ ಅವರ್ಣನೀಯವಾದ ಯಾವ ಆನಂದಾನುಭವ ಅವಸ್ಥೆಯಿದೆಯೋ ಅದನ್ನು 'ಸಮಾಧಿ' ಎನ್ನುತ್ತಾರೆ. ಇದು ಎಂಟನೆಯ ಯೋಗಾಂಗ. ಈ ಹಿಂದಿನ ಏಳು ಸಾಧನಗಳಿಂದ ಮನಸ್ಸನ್ನು ಏಕಾಗ್ರತೆಗೆ ಪಳಗಿಸಲಾಗುತ್ತದೆ. ಇಲ್ಲಿ ಮನಸ್ಸು ಧ್ಯೇಯವಿಷಯದಲ್ಲಿ ಲಯವಾಗಿ ಆ ಧ್ಯೇಯರೂಪವನ್ನೇ ಪಡೆದುಕೊಳ್ಳುತ್ತದೆ. ಇದನ್ನೇ ಗೀತೆಯಲ್ಲಿ ಇನ್ನೊಂದು ಬಗೆಯಲ್ಲಿ ವಿವರಿಸಿದೆ- ಮೊದಲನೆಯ ಏಳು ಅಂಗಗಳು 'ಕರ್ಮ' ಎಂದು; ಅನಂತರದ ಅಂಗವು 'ಶಮ'ಕ್ಕೆ ಸಾಧನವಾದುದು ಎಂದು. ಇಂತಹ ಸಮಾಧಿಯ ಭಾವವನ್ನು ಹೊಂದಿರುವವನನ್ನು ನಿಜಾರ್ಥದಲ್ಲಿ 'ಸಮಾಧಿಮಾನ್' ಎನ್ನಲಾಗುತ್ತದೆ. ಇದೇ ಅರ್ಥದಲ್ಲೇ ಶ್ರೀರಾಮನನ್ನೂ 'ಸಮಾಧಿಮಾನ್' ಎನ್ನುವುದು.

ಸಕಾಲದಲ್ಲಿ ಒಳ್ಳೆಯ ನಿದ್ದೆ ಬರಬೇಕಾದರೆ ಹಿಂದಿನ ಅವಸ್ಥೆಗಳಾದ ಜಾಗೃತ್ ಸ್ವಪ್ನಗಳು ವ್ಯವಸ್ಥಿತವಾಗಿದ್ದರೆ ಮಾತ್ರ ಸಾಧ್ಯ. ಒಂದು ವೇಳೆ ಜಾಗೃತ್ತಿನಲ್ಲಿ ವಿಪರೀತವಾದ ವ್ಯವಹಾರವನ್ನು ಮಾಡಿದ್ದರೆ ಅಥವಾ ಜಾಗೃತ್ ಕಾಲದಲ್ಲೇ ಮಿತಿ ಮೀರಿ ನಿದ್ರಿಸಿದ್ದರೆ ನಿದ್ದೆಯ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವೋ? ಅಂತೆಯೆ ಸಮಾಧಿಯ ಇನ್ನೊಂದು ಹೆಸರಾದ ತುರೀಯದ ಅನುಭವವನ್ನು ಪಡೆಯಲು ಹಿಂದಿನ ಎಲ್ಲ ಅವಸ್ಥೆಗಳೂ ಸುಬದ್ಧವಾಗಿರಬೇಕು. ಶ್ರೀರಾಮನು ತನ್ನೆಲ್ಲ ಕಾರ್ಯವನ್ನು ಸಮಾಧಿಗೆ ಹಿತವಾಗುವಂತೆ ಜೋಡಿಸಿಕೊಂಡು, ಅದ್ವಿತೀಯವಾದ ಅವಸ್ಥೆಯನ್ನು ತನ್ನಿಷ್ಟದಂತೆ ಪಡೆಯಬಲ್ಲ ಸಾಮರ್ಥ್ಯವನ್ನು ಸಂಪಾದಿಸಿದ್ದ ಎಂದರ್ಥ.

ಶ್ರೀರಾಮನ ಮನಸ್ಸಿನ ಏಕಾಗ್ರತೆ ಎಷ್ಟಿತ್ತು? ತಾಟಕಿಯ ಸಂಹಾರದ ಬಳಿಕ ವಿಶ್ವಾಮಿತ್ರರು ಶ್ರೀರಾಮನಿಗೆ ಬ್ರಹ್ಮಾಸ್ತ್ರ, ವಾರುಣಾಸ್ತ್ರ, ಆಗ್ನೇಯಾಸ್ತ್ರ, ವಾಯವ್ಯಾಸ್ತ್ರ, ಸೌಮ್ಯ, ಮರ್ಷಣ ಹೀಗೆ ಅನೇಕ ದಿವ್ಯಾಸ್ತ್ರಗಳನ್ನು ಉಪದೇಶಿಸುತ್ತಾರೆ. ಪ್ರತಿಯೊಂದು ಅಸ್ತ್ರಕ್ಕೂ ಒಂದೊಂದು ಮಂತ್ರವಿರುತ್ತದೆ. ದೇವತೆಗಳು ಮಂತ್ರಕ್ಕೆ ಅಧೀನರಾಗಿರುತ್ತಾರೆ. ಮಂತ್ರಗಳನ್ನು ಏಕಾಗ್ರಮಸ್ಸಿನಿಂದ ಉಚ್ಚರಿದಾಗ ಮಾತ್ರ ಅವುಗಳಲ್ಲಿ ಅಧೀನರಾದ ದೇವತೆಗಳು ಪ್ರತ್ಯಕ್ಷವಾಗುತ್ತವೆ. ವಿಶ್ವಾಮಿತ್ರರು ಮಹಾಮಂತ್ರಗಳನ್ನು ಒಂದೊಂದಾಗಿ ಉಪದೇಶಿಸುತ್ತಿದ್ದಂತೆ ಅವುಗಳನ್ನು ಶ್ರೀರಾಮನು ಹಾಗೆಯೇ ಉಚ್ಚರಿಸುತ್ತಿದ್ದನು. ಮಂತ್ರಾಧಿಷ್ಠಾತೃದೇವತೆಗಳು ಅವನ ಎದುರು ಉಪಸ್ಥಿತರಾಗುತ್ತದ್ದರಂತೆ. ಕಾರ್ಯಮುಗಿದ ಬಳಿಕ ಅವರನ್ನು ಕಳುಹಿಸುತ್ತಿದ್ದ. ಇದು ಶ್ರೀರಾಮನಿಗಿರುವ ಮನಸ್ಸಿನ ಏಕಾಗ್ರತೆಯ ಬಲವನ್ನು ತಿಳಿಸುತ್ತದೆ. ಇಷ್ಟೇ ಅಲ್ಲ, ದೇವತೆಗಳಿಗೂ ದೇವನಾದ ದೇವದೇವಲ್ಲಿ ಸ್ವಾತ್ಮಾರಾಮನಾಗಿ ವಿರಾಜಿಸುವವ, ಶ್ರೀರಾಮನಾಗಿದ್ದ. 

ಸೂಚನೆ :06/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.