Saturday, March 26, 2022

ಕಾಳಿದಾಸನ ಜೀವನದರ್ಶನ – 3 ಕಾಳಿದಾಸನ ಅಗ್ರಗಣ್ಯ ರಾಷ್ಟ್ರಕವಿತ್ವ (Kalidasana Jivanadarshana - 3 Kalidasana Agraganya Rashtrakavitva)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕಾಳಿದಾಸನನ್ನು ಕುರಿತಾಗಿ ನಮ್ಮ ದೇಶದ ಕವಿಗಳು, ಕಾವ್ಯಶಾಸ್ತ್ರಜ್ಞರು, ವಿದೇಶೀಯ ಕವಿಗಳು, ವಿಮರ್ಶಕರು - ಇವರುಗಳು ಏನೆಂದು ಹೇಳಿದ್ದಾರೆಂದು ಪ್ರಾತಿನಿಧಿಕವಾದ ಉದಾಹರಣೆಗಳ ಮೂಲಕ  ಗಮನಿಸಿಕೊಂಡದ್ದಾಯಿತು. ಕಾಳಿದಾಸನ ಅಗ್ರಗಣನೀಯತೆಯನ್ನು ಎಣಿಕೆಯ ಚಮತ್ಕಾರದಿಂದ ಮತ್ತೊಬ್ಬ ಕವಿ ಹೇಳಿರುವುದನ್ನೊಮ್ಮೆ ಗಮನಿಸಿ ಈ ಭಾಗಕ್ಕೆ ಮುಗಿತಾಯ ಹಾಕಬಹುದು.  

ನಮ್ಮ ಕೈಬೆರಳುಗಳಿಗೈದಕ್ಕೂ ಒಂದೊಂದು ಹೆಸರುಗಳಿವೆಯಷ್ಟೆ. ಹೆಬ್ಬೆಟ್ಟನ್ನು 'ಅಂಗುಷ್ಠ'ವೆನ್ನುತ್ತೇವೆ. ತೋರ್ಬೆರಳಿಗೆ 'ತರ್ಜನೀ" (ಅರ್ಥಾತ್, 'ಬೆದರಿಸುವ ಬೆರಳು') ಎಂದು. ಮಧ್ಯದ್ದಾದ್ದರಿಂದ ಮೂರನೆಯದು 'ಮಧ್ಯಮಾ'. ಎಲ್ಲ ಬೆರಳುಗಳಲ್ಲಿ 'ಕನಿಷ್ಠ"ವಾದ, ಎಂದರೆ ಅತ್ಯಂತ ಚಿಕ್ಕದಾದ, ಕಿರುಬೆರಳು 'ಕನಿಷ್ಠಿಕಾ'. ಹಾಗಾದರೆ ಬಿಟ್ಟುಹೋದ ಬೆರಳಿಗೇನು ಹೆಸರು? ಎದ್ದು ತೋರುವ ಒಂದು ವೈಶಿಷ್ಟ್ಯವೇ ಅದಕ್ಕಿಲ್ಲವಾಗಿ, ಅದಕ್ಕೊಂದು ಸರಿಯಾದ ಹೆಸರೇ ಇಲ್ಲವಾಗಿದೆ! ಹಾಗಾಗಿ " ಹೆಸರೇ ಇಲ್ಲದ್ದು" ಎಂಬುದೇ ಅದರ ಹೆಸರಾಯಿತು!: "ಅನಾಮಿಕಾ" ಎಂದರೆ ಹೆಸರಿಲ್ಲದ್ದು.

ಲೋಕಾರೂಢಿಯಾಗಿ ಒಂದು-ಎರಡು ಎಂದು ಮುಂತಾಗಿ ಎಣಿಕೆಮಾಡುವಾಗ ಅಂಗುಷ್ಠಾದಿಯಾಗಿ ಬೆರಳೆಣಿಸುವ ಕ್ರಮ ಅಮೆರಿಕದಲ್ಲಿದೆ; ನಮ್ಮಲ್ಲಿಲ್ಲ. (ಕರನ್ಯಾಸದ ವಿಷಯ ಬೇರೆ). ಹೆಬ್ಬೆಟ್ಟಿನಿಂದಾರಂಭಿಸಿ ಬೆರಳುಗಳನ್ನು ಒಂದೊಂದನ್ನಾಗಿ ತೆರೆದುಕೊಂಡು ಅವರು ಎಣಿಸುತ್ತಾರೆ! ನಮ್ಮಲ್ಲಿ ಹಾಗಲ್ಲ; ಎಣಿಸಲಾರಂಭಿಸುವಾಗ ಬೆರಳುಗಳನ್ನೆಲ್ಲ ಮಡಿಚಿಕೊಂಡು, ಆ ಬಳಿಕ ಎಣಿಸುವಾಗ ಒಂದೊಂದನ್ನಾಗಿ ಹೊರತೆಗೆಯುತ್ತೇವೆ - ಅದೂ ಕನಿಷ್ಠಿಕೆಯಿಂದಾರಂಭಿಸಿ. ಹೀಗಾಗಿ ಎರಡನೆಯ ಬೆರಳೆಂದರೆ ಅನಾಮಿಕೆ, ಮುಂದಕ್ಕೆ ಮಧ್ಯಮಾ ಇತ್ಯಾದಿ.

ಹಿಂದೊಮ್ಮೆ ಕವಿಗಳು ಯಾರಾರು? – ಎಂದೆಣಿಸುವ ಪ್ರಸಂಗ ಬಂದಿತಂತೆ. ಎಣಿಸಲು ಪ್ರಾರಂಭಮಾಡಿದಾಗ ಮೊಟ್ಟಮೊದಲ ಸ್ಥಾನಕ್ಕೆ, ಎಂದರೆ ಕನಿಷ್ಠಿಕೆಗೆ, ಕಾಳಿದಾಸ ಬಂದ. ಎಷ್ಟು ಹುಡುಕಾಡಿದರೂ ಆತನ ಸಮಕ್ಕೆ ನಿಲ್ಲಬಲ್ಲ ಮತ್ತೊಬ್ಬ, ಎಂದರೆ ಎರಡನೆಯ ಸ್ಥಾನಕ್ಕೆ ಸಲ್ಲುವ, ಕವಿಯು ಕಾಣಿಸಲೇ ಇಲ್ಲವಾಯಿತು. ಹೀಗಾಗಿ ಎರಡನೆಯ ಹೆಸರನ್ನು ಹೇಳಲೇ ಯಾರೂ ಇಲ್ಲವಾಗಿಹೋಗಿ, ಅದೋ ಆ ಕಾರಣಕ್ಕಾಗಿಯೇ, ಆ ಎರಡನೆಯ ಬೆರಳಿಗೆ "ಅನಾಮಿಕಾ" ("ಹೆಸರಿಲ್ಲದ್ದು") ಎಂಬ "ಹೆಸರು" ಸಾರ್ಥಕವಾಯಿತು - ಎಂದುಕೊಂಡರಂತೆ! ಕಾಳಿದಾಸನ ಅಗ್ರಗಣ್ಯತ್ವ-ಮಾತ್ರವಲ್ಲದೆ ಆತನ ಅನ್ಯವಿಲಕ್ಷಣತೆಯನ್ನೂ ಅದು ತೋರಿಗೊಡುತ್ತದೆ:

ಪುರಾ ಕವೀನಾಂ ಗಣನಾ-ಪ್ರಸಂಗೇ ಕನಿಷ್ಠಿಕಾಧಿಷ್ಠಿತ-ಕಾಳಿದಾಸಾ |

ಅದ್ಯಾಪಿ ತತ್ತುಲ್ಯ-ಕವೇರ್ ಅಭಾವಾದ್ ಅನಾಮಿಕಾ ಸಾರ್ಥವತೀ ಬಭೂವ||

ಕಾಳಿದಾಸನು ಅಗ್ರ್ಯ -ಎಂದರೆ ಅಗ್ರಸ್ಥಾನದಲ್ಲಿ ನಿಲ್ಲತಕ್ಕವನು, ಹಾಗೂ ಅದ್ವಿತೀಯ – ಎಂಬುದನ್ನುಸುರುವ ಅದ್ವಿತೀಯವಾದ ಬಗೆ!

ಆದರೆ ಆತನೇ ರಾಷ್ತ್ರಕವಿಯೆಂಬಂತೆ ಆರಂಭದಲ್ಲೇ ನುಡಿದುದು ಸುಮ್ಮನೆ ಹೊಗಳಿಕೆಯ ಮಾತೇ?, ಅಥವಾ ವಾಸ್ತವವಾದ ಆತನ ಗಳಿಕೆಯ ಮಾತೇ? – ಎಂಬ ಪ್ರಶ್ನೆ ಮೂಡಬಹುದಾದದ್ದೂ ಸರಿಯೇ. ಹಾಗೂ ಆ ಪಟ್ಟವನ್ನು ಆತನಿಗೆ ಕಟ್ಟಿದವರು ಅಥವಾ ಕೊಟ್ಟವರು ಯಾರು? - ಎಂಬ ಪ್ರಶ್ನೆಯೂ ಯುಕ್ತವೇ.

ಅದಕ್ಕೂ ಮೊದಲು ಆತ ಯಾವ ಊರಿನವನು? - ಎಂದು ತಿಳಿದುಕೊಳ್ಳುವುದೂ ಅವಶ್ಯವಾಗುತ್ತದೆ. ಕೊನೆಯ ಪಕ್ಷ ಯಾವ ರಾಜ್ಯದವನಿರಬಹುದು?  ಆತನಂತೂ ತಾನು ಹುಟ್ಟಿದ ಸ್ಥಾನವನ್ನೇನೂ ಸೂಚಿಸಿಲ್ಲ. ವಾಸ್ತವವಾಗಿ ತನ್ನ ಹೆಸರನ್ನೂ ಸೂಚಿಸಿದಂತಿಲ್ಲ! ತಾನು "ಕಾಳಿಯ ಒಬ್ಬ ದಾಸ"ನೆಂಬಷ್ಟೇ ಭಾವವು ಆತನ ಹೆಸರಿನಲ್ಲಿದ್ದು, ಅದು ಆತನಿಗೆ ವಸ್ತುತಃ ಮನೆಯಲ್ಲಿಟ್ಟ ಹೆಸರೋ, ವಂಶನಾಮವೋ, ಬಿರುದೋ, ಕಾವ್ಯನಾಮವೋ ಏನೂ ಹೇಳುವಂತಿಲ್ಲ! ನಮ್ಮ ದೇಶದ ಪೂರ್ವಿಕರ ಬಹುಮಂದಿ ಗರಿಷ್ಠರ ಜಾಯಮಾನವೇ ಆ ಬಗೆಯದು!: ಹೆಸರಿಗಾಗಿ ಹೊಡೆದಾಡುವುದೇನು? ಬಿರುದಿಗಾಗಿ ಬಾಯ್ಬಾಯ್ಬಿಡುವುದೇನು? ಬೆಳೆಯಬಯಸುವವರಿಗೆ ಬಳಸಲಾಗುವಂತಿದ್ದರಾಯಿತು, ತಮ್ಮ ರಚನೆ – ಎಂಬುದಷ್ಟೇ ಅವರ ಮಾನಸದಲ್ಲಿದ್ದ ಕಾಳಜಿ.

ಅಷ್ಟೇ ಅಲ್ಲ; ಹೇಗೆ ಸಂಸ್ಕೃತಭಾಷೆಯೂ – ಒಂದರ್ಥದಲ್ಲಿ ಅದೊಂದೇ - ಇಡೀ ಭಾರತಕ್ಕೆ ಸೇರಿದುದೋ, ಹಾಗೆಯೇ ಈತನೂ – ಪ್ರಾಯಃ ಈತನೊಬ್ಬನೇ - ಅಖಂಡಭಾರತಕ್ಕೆ ಸೇರಿದವನೆಂಬ ಧ್ವನಿಯೇ ಅಲ್ಲಡಗಿರುವಂತಿದೆ.

ಸಿಂಹಳದ ವೇಶ್ಯೆಯೊಬ್ಬಳ ಸಹವಾಸ ಮಾಡಿದನೆಂಬೊಂದು ಕಥೆಯು ಆತನಿಗೂ ಶ್ರೀಲಂಕೆಗೂ ಕೊಂಡಿಹಾಕಿದೆ. ಕಾಳೀಪೂಜೆಯೂ ಕಾಳೀಭಕ್ತರ ಹೆಸರೂ ಬಂಗಾಳದಲ್ಲಿ ಪ್ರಚುರವೆಂಬ ಕಾರಣಕ್ಕಾಗಿ ಬಂಗಾಳಿಗಳು "ಆತ ನಮ್ಮವ" ಎನ್ನುವುದುಂಟು. ತೆಂಗಿನ ಪ್ರಚುರವಾದ ಬಳಕೆ ದಕ್ಷಿಣದ ಸಮುದ್ರತೀರದಲ್ಲಲ್ಲವೇ, ಅದರ ವರ್ಣನೆಯಿರುವುದಾಗಿ ತಮ್ಮವನಿವನೆಂದು ಇವರೂ ಹೇಳುವುದುಂಟು. ಕಾಶ್ಮೀರವೆಂದರೇ ಕೇಸರಪುಷ್ಫದ ನೆಲೆ; ಅದನ್ನು ಯಥಾವತ್ತಾಗಿ ಚಿತ್ರಿಸಿರುವಾತನು ಅಲ್ಲಿಯವನಾಗಿರಬಾರದೇ? ಹಿಮಾಲಯ-ಅಲಕೆ-ಮಾನಸಸರೋವರಗಳ ನಡುವೆ ವಾಸಿಸುತ್ತಿದ್ದವನೆಂದು ಹೇಳುವುದರಲ್ಲಿ ಹೆಚ್ಚು ಔಚಿತ್ಯವಿದೆ - ಎನ್ನುವವರೂ ಇರಬಹುದು. ಸ್ವರ್ಗದ ಭಾಗವೊಂದರಂತಿರುವಂತಹ ಉಜ್ಜಯಿನಿಯನ್ನು ಮಾತ್ರ ನೋಡದಿರಬೇಡ - ಎನ್ನುವ ಆತ ಮಹಾರಾಷ್ಟ್ರದವನೇ – ಎಂದು ಉದ್ಗರಿಸುವವರೂ ಉಂಟು. ಸಿಂಧು-ಸರಸ್ವತೀನದಿಗಳನ್ನೂ ವಾಯವ್ಯಪ್ರಾಂತಗಳನ್ನೂ ಚಿತ್ರಿಸಬಲ್ಲವನು ಅಲ್ಲಿಯವನಾಗನೆ? (ಪಾಣಿನಿಯು ಇಂದಿನ ಪಾಕಿಸ್ತಾನದಲ್ಲಿದ್ದವನಲ್ಲವೇ? ಗಾಂಧಾರವು ವೇದಭೂಮಿಯಲ್ಲವೇ?) ಗೋಮಾಂತಕ (ಗೋವಾ)-ಕಚ್ಛಪ್ರದೇಶಗಳನ್ನು ಬಣ್ಣಿಸಿರುವನು ಗುಜರಾತಿನವನಾಗಿರಬಾರದೇ?

ಭಾರತಭೂಮಿಯ ಬಗ್ಗೆ ಆತನಿಗೆ ಅದೆಷ್ಟು ಪ್ರೀತಿ-ಗೌರವಗಳೆಂದರೆ, ರಘುವಂಶದಲ್ಲಿಯ ರಘುದಿಗ್ವಿಜಯವರ್ಣನ ಪ್ರಸಂಗದಲ್ಲಿ ಪ್ರದಕ್ಷಿಣ-ಕ್ರಮದಲ್ಲೇ ಭಾರತವನ್ನು ಸುತ್ತಿಸುತ್ತಾನೆ: ಮೊದಲು ಪೂರ್ವದಿಕ್ಕು, ಆಮೇಲೆ ದಕ್ಷಿಣ, ಆಮೇಲೆ ಪಶ್ಚಿಮ, ಕೊನೆಗೆ ಉತ್ತರ. ರಘುವಂಶದಲ್ಲೇ ವೈಮಾನಿಕವಾದ ಹಾದಿಯಲ್ಲಿ ರಾಮ-ಸೀತೆಯರು ಲಂಕೆಯಿಂದ ದಂಡಕಾರಣ್ಯಕ್ಕೆ ಆಗಮಿಸುವ ವರ್ಣನೆ, ಇಂದುಮತೀ-ಸ್ವಯಂವರ-ಪ್ರಸಂಗದಲ್ಲಿ ಉಳಿದ ಹಲವೆಡೆಗಳ ಅರಸುಗಳ ವರ್ಣನೆ - ಇಲ್ಲೆಲ್ಲ ಭಾರತದ ನಾನಾ-ಪ್ರಾಂತಗಳ ವರ್ಣನೆಯೂ ಇದೆ. ಮೇಘದೂತದಲ್ಲಿ ರಾಮಗಿರಿಯಿಂದ ಅಲಕೆಯವರೆಗಿನ ಮಾರ್ಗದ ವರ್ಣನೆಯಿದೆ. ಕುಮಾರಸಂಭವದ ಆದಿಯಲ್ಲಿ ಹಿಮಾಲಯದ ವರ್ಣನೆಯೇ.

ರಾಜಕೀಯ-ಭೂಪಟವು ಬದಲಾಗುತ್ತಿರಬಹುದು, ಆದರೆ ಸ್ಥಾಯಿ-ಸ್ಥಾನಗಳೆಂದರೆ ನಗ-ನದಿಗಳೇ. (ಎಂದೇ "ಗಿರಿ-ಸರಿತ್ತುಗಳಿರುವ ತನಕ" ರಾಮಾಯಣವು ಸ್ಥಾಯಿ - ಎನ್ನುವ ವರವೂ.) ನಗರಗಳು ಗಣ್ಯವೆಂದು ಜನಪದ-ಜೀವನವನ್ನು ಕವಿಯು ನಗಣ್ಯ ಮಾಡಿಲ್ಲ. ಇಲ್ಲಿಯ ಸಸ್ಯವರ್ಗ-ಪ್ರಾಣಿವರ್ಗಗಳೆಲ್ಲವನ್ನೂಆತನ ಕೃತಿಗಳಲ್ಲಿ ಕಾಣುತ್ತೇವೆ. ಉಪವನ-ವನ-ತಪೋವನಗಳ, ಒಟ್ಟಿನ ಸಂಸ್ಕೃತಿಯ ವರ್ಣನೆಯೂ ಅವಲ್ಲುಂಟು. ಈ ಎಲ್ಲ ಕಾರಣಗಳಿಂದ ಆತನು ರಾಷ್ಟ್ರಕವಿಯೇ. ಆದರೆ ಅದರ ಸಾರ್ಥಕ್ಯವನ್ನು ಮತ್ತೂ ಒಂದು ನೆಲೆಯಿಂದ  ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು. 

ಸೂಚನೆ : 26/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.