Saturday, March 12, 2022

ಕಾಳಿದಾಸನ ಜೀವನದರ್ಶನ-೧ ಪರಂಪರೆ ಕಾಳಿದಾಸನನ್ನು ಕಂಡ ಬಗೆ (Kalidasana Jivanadarshana - 1 Parampare Kalidasanannu Kanda Bage)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 
 
 

ಕಾಳಿದಾಸನು ಭಾರತದ ರಾಷ್ಟ್ರಕವಿ. ವಾಲ್ಮೀಕಿ-ವ್ಯಾಸರ ಸಾಲಿಗೆ ಸೇರಬಲ್ಲ ಏಕೈಕ-ಕವಿಯೆಂದರೆ ಕಾಳಿದಾಸನೇ ಸರಿ. ವಾಲ್ಮೀಕಿಗಳೂ ವ್ಯಾಸರೂ ಮಹರ್ಷಿಗಳು. ವಾಲ್ಮೀಕಿಗಳಂತೂ ಆದಿಕವಿಯೆಂದೇ ಪ್ರಸಿದ್ಧರಾದವರು. ಅವರಿಬ್ಬರೂ ರಾಜ-ಮಹಾರಾಜರುಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರಾದರೂ ಪ್ರಧಾನವಾಗಿ ತಪಸ್ವಿಗಳು, ಭೋಗಮಯ-ಜೀವನಕ್ಕೆ ವಿಮುಖರಾದವರು.

ಒಂದರ್ಥದಲ್ಲಿ ಕಾಳಿದಾಸನು ತದ್ವಿರುದ್ಧವೇ. ಆತನಿದ್ದುದು ರಾಜಾಶ್ರಯದಲ್ಲಿ. ರಾಜಮರ್ಯಾದೆ-ರಾಜಭೋಗಗಳಿಗೆ ಪಾತ್ರನಾಗಿದ್ದನವನೆಂದು ಹೇಳಿದರೂ ತಪ್ಪಾಗದೇನೋ. ಶೃಂಗಾರಲೋಲನೆಂದೇ ಪ್ರಸಿದ್ಧಿ ಕಾಳಿದಾಸನಿಗೆ. ಶೃಂಗಾರ-ರಸದ ನಿರೂಪಣೆಯಿರದ ಆತನ ಕಾವ್ಯವೇ ಇಲ್ಲ, ನಾಟಕವೇ ಇಲ್ಲ. ಆದರೂ, ಅವನು ಚಿತ್ರಿಸುವ ಶೃಂಗಾರವಾದರೂ ಎಂದೂ ರೇಜಿಗೆ ತರಿಸುವುದಲ್ಲ. ಏಕೆಂದರೆ, ಆತನ ಶೃಂಗಾರ-ಚಿತ್ರಣವು ಯಾವುದೋ ಒಂದು ಎಲ್ಲೆ-ಕಟ್ಟಿನೊಳಗೇ ಇರುತ್ತದೆ.

ಅನೇಕಾನೇಕ ಪ್ರಸಿದ್ಧ-ರಾಜರುಗಳ ಜೀವನ-ವೃತ್ತಾಂತವನ್ನು ತನ್ನ ಕೃತಿಗಳಲ್ಲಿ ಸೊಗಸಾಗಿ ಮೂಡಿಸಿರುವನಾದರೂ, ಆತನು ತನ್ನಾವ ಕೃತಿಯಲ್ಲೂ ಪ್ರಕೃತಿ-ಸೌಂದರ್ಯ-ವರ್ಣನ, ತಪೋವನ-ಜೀವನ-ಚಿತ್ರಣ - ಇವುಗಳನ್ನು ಬಿಟ್ಟಿಲ್ಲ.

ಹೀಗಾಗಿ ಕಾಳಿದಾಸನು ಇತ್ತ ಭೋಗ-ಜೀವನವನ್ನೂ ಯೋಗ-ಜೀವನವನ್ನೂ ಅರಿತೇ ಅವನ್ನು ಚಿತ್ರಿಸಿದವನು. ಮೇಲಾಗಿ, ಸಾಂಖ್ಯ-ಯೋಗಗಳನ್ನೂ ವೇದಾಂತವನ್ನೂ ಅರಿತವನು. ಯೋಗವು ಎಷ್ಟಾದರೂ ಅನುಭವದ ವಿದ್ಯೆ. ಅದರ ಮರ್ಮಗಳನ್ನೂ ಅರಿತಿದ್ದವನು. ಹೀಗಾಗಿ ಭಾರತೀಯ ಸಂಸ್ಕೃತಿಯ ಸಮರ್ಥ ಪ್ರತಿಪಾದಕ, ಕಾಳಿದಾಸ. (ಈ ಕುರಿತಾಗಿ ಮುಂದೆ ಕೊಡಲಾಗುವ ಹಲವು ಸಾಕ್ಷ್ಯಗಳನ್ನು ಅವಲೋಕಿಸಬಹುದು.).

ಹಾಗಾದರೆ ಒಬ್ಬ ಮಹಾಕವಿಯಾಗಿ ಆತನು ಕಾಣಿಸುವ ಜೀವನ-ದರ್ಶನವಾವುದು? ಎಂಬ ಪ್ರಶ್ನೆ ಬರುತ್ತದಲ್ಲವೇ? ಅದನ್ನು ಅರಿಯಲು ಯತ್ನಿಸುವ ಮೊದಲು, ಆತನನ್ನು ಕುರಿತಾಗಿ ಬಲ್ಲವರಾಡಿರುವ ನುಡಿಗಳನ್ನೊಮ್ಮೆ ನೋಡಬೇಕಲ್ಲವೇ?

ಆತನ ಕಾಲಾನಂತರದ ಹತ್ತಾರು ಕವಿಗಳು ಆತನನ್ನು ಮೆಚ್ಚಿರುವರು. ಬರೀ ಕವಿಗಳಲ್ಲ, ಆಲಂಕಾರಿಕರೂ ಮೆಚ್ಚಿರುವರೇ. ಆಲಂಕಾರಿಕರೆಂದರೆ ಕಾವ್ಯಶಾಸ್ತ್ರದಲ್ಲಿ ಪರಿಣತರು (ಕಾವ್ಯವು ಹೇಗಿರಬೇಕು, ಹೇಗಿರಬಾರದು? - ಮುಂತಾದ ವಿಷಯಗಳನ್ನು ಚರ್ಚಿಸುವ ಕ್ಷೇತ್ರವೇ ಕಾವ್ಯಶಾಸ್ತ್ರ). ನಮ್ಮವರು ಮಾತ್ರವಲ್ಲ. ವಿದೇಶಗಳ ಕವಿಗಳೂ ಅಲ್ಲಿನ ವಿಮರ್ಶಕರೂ ಸಹ ಕಾಳಿದಾಸನ ಬಗ್ಗೆ ತಮ್ಮ ಆದರಾತಿಶಯವನ್ನು ಸೂಚಿಸಿದ್ದಾರೆ.

ಹಲವು ಮಂದಿ ಕಾಳಿದಾಸನನ್ನು ಪ್ರಶಂಸಿಸಿದ್ದಾರೆ - ಎಂದು ಸುಮ್ಮನೆ ಹೇಳಿಬಿಟ್ಟರೆ ಏನು ಪ್ರಯೋಜನ? ಈ ಕವಿವರನನ್ನು ಸ್ತುತಿಸಿದವರಾರು? ಅವರುಗಳ ಸ್ಥಾನಮಾನವೇನು? - ಎಂಬುದೊಂದಿಷ್ಟು ತಿಳಿಯಬೇಕಲ್ಲವೆ? ಅದಕ್ಕಾಗಿ ಕೇವಲ ಒಬ್ಬಿಬ್ಬರು ಕವಿಗಳು, ಒಬ್ಬಿಬ್ಬರು ಕಾವ್ಯಶಾಸ್ತ್ರಜ್ಞರು - ಇವರ ನುಡಿಗಳನ್ನು ಸಂಕ್ಷೇಪವಾಗಿ ಗಮನಿಸೋಣ.

ಕ್ರಿಸ್ತಶಕ ಏಳನೆಯ ಶತಮಾನದ ಸುಪ್ರಸಿದ್ಧ ಸಂಸ್ಕೃತ ಕವಿ ಬಾಣಭಟ್ಟ. ಆತನ ಕಾದಂಬರಿಯೆಂಬ ನೀಳ್ಗತೆಯನ್ನು ಅನುಸರಿಸಿಯೇ ಕನ್ನಡ ಮೊದಲಾದ ಭಾಷೆಗಳಲ್ಲಿ ಕಾದಂಬರಿಯೆಂಬ ಹೆಸರು ಒಂದು ಕಾವ್ಯಪ್ರಕಾರಕ್ಕೇ ಸಂದಿತು. ಆತನು ಹೇಳುವುದು ಹೀಗೆ: ಕಾಳಿದಾಸನ ಸೂಕ್ತಿಗಳೆಂದರೆ ಮಧು-ರಸದಿಂದ ಒದ್ದೆಯಾದ ಗುಚ್ಛಗಳ ಹಾಗೆ: ಅವುಗಳಿಂದ ಯಾರಿಗೆ ಸಂತೋಷವಾಗದು? "ಮಧು-ರಸ-ಆರ್ದ್ರ-ಮಂಜರಿ" - ಎಂಬ ಪದಗುಚ್ಛದಿಂದ ಕಾಳಿದಾಸನ ಸೂಕ್ತಿಗುಚ್ಛವನ್ನು ಆತ ವರ್ಣಿಸುತ್ತಾನೆ.

ರಘುವಂಶದ ಅರಸರಿಗೆ ವಸಿಷ್ಠರು ಕುಲಗುರುಗಳೆನ್ನುವರಲ್ಲವೆ? "ಕವಿಕುಲಕ್ಕೇ ಕಾಳಿದಾಸನು ಗುರು". ಹೀಗೆಂದವನು ಜಯದೇವನೆಂಬ ಕವಿ. (ಗೀತಗೋವಿಂದವನ್ನು ಬರೆದ ಜಯದೇವಕವಿ ಬಹಳ ಪ್ರಸಿದ್ಧನೇ ಸರಿ; ಆದರೆ ಈ ಜಯದೇವ ಬೇರೆಯವನು, ನಾಟಕಕಾರ; ಕಾವ್ಯಚಮತ್ಕಾರದಲ್ಲಿ ಕಡಿಮೆಯೇನಿಲ್ಲ.) ಕವಿತೆಯೆಂಬುದನ್ನೇ ಒಬ್ಬಳು ನಾರಿಯೆಂದುಕೊಳ್ಳಿ. ಆ ಕವಿತಾಕಾಮಿನಿಯ ವಿಲಸಿತವೇ ಕಾಳಿದಾಸ! – ಎಂದಾತನೆನ್ನುತ್ತಾನೆ: "ಕವಿಕುಲಗುರುಃ ಕಾಲಿದಾಸೋ ವಿಲಾಸಃ".

ಇಬ್ಬರು ಕವಿಗಳು ಕಾಳಿದಾಸನನ್ನು ಕುರಿತು ಹೇಳುವುದನ್ನು ನೋಡಿದ್ದಾಯಿತು. ತಾನೇ ಕವಿಯೂ ಆಗಿದ್ದು ಕಾಳಿದಾಸನ ಕಾವ್ಯಗಳಿಗೆ ವ್ಯಾಖ್ಯಾನವನ್ನು ಬರೆದವನು ಮಲ್ಲಿನಾಥನೆಂಬುವನು. ೧೪-೧೫ನೇ ಶತಮಾನದವನು. ಆತನು ಹೇಳುವುದು "ಕಾಳಿದಾಸನ ಮಾತಿನ ಸಾರವನ್ನು ಕಾಳಿದಾಸನೇ ಬಲ್ಲ" - ಎಂದು. ಏನು ಹಾಗೆಂದರೆ? ಯಾರಿಗೂ ಅರ್ಥವಾಗದಂತೆಯೇ ಕಾಳಿದಾಸನು ಬರೆದನೆಂದೇ? ಸರ್ವಥಾ ಇಲ್ಲ. ಇನ್ನಿಬ್ಬರಿಗೇ ಕಾಳಿದಾಸನ ಮಾತಿನ ಆಂತರ್ಯ ಗೊತ್ತಾಗುವುದು - ಎಂದೂ ಆತ ಹೇಳುತ್ತಾನೆ: ಸರಸ್ವತೀ ಹಾಗೂ ಬ್ರಹ್ಮರಿಗೆ - ಅರ್ಥಾತ್ ವಾಗ್ದೇವಿ ಹಾಗೂ ವಾಕ್ಪತಿಗಳಿಗೆ, "ನನ್ನಂತಹವರು ಅದೆಲ್ಲಿ ಬಲ್ಲರು?" ಎಂದೂ ಉದ್ಗರಿಸುತ್ತಾನೆ!

 ವಾಸ್ತವವಾಗಿ ಕಾಳಿದಾಸನ ಶೈಲಿ ಸರಳವಾದದ್ದೇ. ವ್ಯಾಸ-ವಾಲ್ಮೀಕಿಗಳ ಭಾಷೆಯ ಹಾಗೆ ಕಾಳಿದಾಸನ ಭಾಷೆಯೂ ಸಾರಲ್ಯ-ಲಾಲಿತ್ಯಗಳಿಗೆ ಎತ್ತಿದ ಕೈ. ಇದು ಚೆನ್ನಾಗಿ ಅರಿವಿಗೆ ಬರುವುದು ಯಾವಾಗ ಎಂದರೆ, ಕಾಳಿದಾಸಾನಂತರ ಬಂದ ಕವಿಗಳ ಕಾವ್ಯಗಳನ್ನು ಓದಿದಾಗ. ಭಾರವಿ-ಮಾಘ-ಶ್ರೀಹರ್ಷ ಎಂಬ ಕವಿಗಳು ಕಿರಾತಾರ್ಜುನೀಯ-ಶಿಶುಪಾಲವಧ-ನೈಷಧೀಯಚರಿತ - ಎಂಬ ಕಾವ್ಯಗಳನ್ನು ಬರೆದವರು. ೬-೮-೧೨ನೇ ಶತಮಾನಗಳ ಕವಿಗಳು. ಅವರ ಕಾವ್ಯಗಳು ಮಹಾಕಾವ್ಯಗಳಾದರೂ  ಅವುಗಳ ಭಾಷೆ ಪ್ರೌಢ: ಅವುಗಳನ್ನು ಕಬ್ಬಿಣದ ಕಡಲೆಗಳೆಂದೇ ಹೇಳಬಹುದು!

ಇಷ್ಟೆಲ್ಲ ಮಾತಿನ ತಾತ್ಪರ್ಯವಿಷ್ಟೆ: ಭಾಷೆ ಸರಳವಾದರೂ ಕಾಳಿದಾಸನ ಮಾತುಗಳಲ್ಲಿ ಒಳ ಅರ್ಥವಿರುತ್ತದೆ. ಮೇಲ್ನೋಟಕ್ಕೆ ತೋರುವ ಅರ್ಥಕ್ಕಿಂತಲೂ ವಿಶೇಷವಾದ ಅರ್ಥಗಳು ಅಡಕವಾಗಿದ್ದಲ್ಲಿ ಅದನ್ನು ಅರ್ಥಗರ್ಭಿತ - ಎನ್ನುತ್ತಾರೆ. ಗರ್ಭಿತವಾದ ಅರ್ಥವನ್ನು ಗ್ರಹಿಸಲು ಜಾಣ್ಮೆ ಬೇಕು, ಅದಕ್ಕಿಂತಲೂ ಹೆಚ್ಚಾಗಿ ಸಹೃದಯತೆ ಬೇಕು. ಇವೆರಡೂ ಮಲ್ಲಿನಾಥನಲ್ಲಿ ಚೆನ್ನಾಗಿ ಇರತಕ್ಕವೇ. ಆದರೂ ಕಾಳಿದಾಸನು ಜೀವನವನ್ನು ಎಷ್ಟು ಆಳವಾಗಿ ಕಂಡುಕೊಂಡಿದ್ದನೆಂದರೆ, ಮೇಲ್ನೋಟದ ಅರ್ಥ ಬಹುಮಂದಿಗೆ ಗೊತ್ತಾಗುವುದಾದರೂ ಒಳಹೊಕ್ಕು ನೋಡಿದಾಗಲೇ ಸಾರಭೂತವಾದ ಅರ್ಥಗಳು ಗೋಚರಿಸಿಯಾವು. ಅಂತಹ ಎಷ್ಟೋ ಅರ್ಥವಿಶೇಷಗಳನ್ನು ತಾನೇ ತೋರಿಸಿಕೊಟ್ಟಿದ್ದಾನಾದರೂ, ಕಾಳಿದಾಸನ ಮಾತಿನ ಅರ್ಥಸಂಪತ್ತು ತನಗೆಟುಕದು - ಎಂಬ ಭಾವ ಆತನಿಗೆ ಮೂಡಿದೆ! ಹೀಗಾಗಿ ಕಾಳಿದಾಸನನ್ನು ಆತನು ಹಾಗೆ ಸ್ತುತಿಸಿದ್ದಾನೆ.

ಭಾರತೀಯ ಸಾಹಿತ್ಯ-ಶಾಸ್ತ್ರಪರಂಪರೆಯ ದಿಗ್ಗಜವೆಂದರೆ ಆನಂದವರ್ಧನನೇ. ಕಾಳಿದಾಸನನ್ನು ವಾಲ್ಮೀಕಿ-ವ್ಯಾಸರ ಪಂಕ್ತಿಗೇ ಸೇರಿಸಿ, ಮೂವರನ್ನೂ "ಪ್ರಖ್ಯಾತ-ಕವೀಶ್ವರರು" - ಎಂದಿದ್ದಾನೆ. ಪ್ರಪಂಚದಲ್ಲಿ ಐದೋ ಆರೋ ಮಹಾಕವಿಗಳು – ಕಾಳಿದಾಸನಂತಹವರು - ಎಂದಿದ್ದಾನೆ.

ಇನ್ನು ವಿದೇಶೀಯರೂ ಕಾಳಿದಾಸನ ಬಗ್ಗೆ ಹೇಳಿರುವ ಒಂದೆರಡು ನುಡಿಗಳನ್ನು ಗಮನಿಸಿ, ಕಾಳಿದಾಸನ ಜೀವನ-ದರ್ಶನವನ್ನು ಮುಂದೆ ಅರಿಯೋಣ.

ಸೂಚನೆ : 12/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.