Thursday, March 10, 2022

ಕರ್ಮವು ಕರ್ಮಯೋಗವಾಗುವುದು ಹೇಗೆ? ( Karmavu Karmayogavaguvudu Hege?)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


 ಭಕ್ತಶ್ರೇಷ್ಠ ಆಂಜನೇಯನು ತನ್ನ ಪ್ರಾಣ ಪ್ರಭುವಾದ ಶ್ರೀರಾಮಚಂದ್ರನ ಸೇವಾಕಾರ್ಯಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿ ಶ್ರೀರಾಮ- ಸೀತಾಮಾತೆಯರ ಪ್ರೀತಿಗೆ ಪಾತ್ರನಾಗುತ್ತಾನೆ. ಸೀತಾನ್ವೇಷಣೆಯ ಸಮಯದಲ್ಲಿ ಮಹಾಸಮುದ್ರವನ್ನು ಹಾರಿ ಲಂಕೆಗೆ ಹೋಗಿ ಅಶೋಕವನದಲ್ಲಿದ್ದ ಸೀತಾಮಾತೆಯನ್ನು ಸಂದರ್ಶಿಸಿ, ಸಂತೈಸಿ, ಪ್ರಭುವಿನ ಸಂದೇಶವನ್ನು ತಲುಪಿಸಿ ನಂತರ ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯ ಸಂದೇಶವನ್ನು ಅರುಹಿ ಇಬ್ಬರ ಪುನರ್ಮಿಲನಕ್ಕೆ ಸೇತುವಾಗುತ್ತಾನೆ. ಅಂತೆಯೇ ರಾಮ-ರಾವಣರ ಯುದ್ಧದಲ್ಲಿ ಮೂರ್ಛಿತನಾದ ಲಕ್ಷ್ಮಣನ ಚಿಕಿತ್ಸೆಗಾಗಿ ಹಿಮಾಲಯ ಪರ್ವತಕ್ಕೆ ಹಾರಿ ಸಂಜೀವಿನಿ ಪರ್ವತವನ್ನೇ ತಂದು ಲಂಕೆಯಲ್ಲಿ ಸ್ಥಾಪಿಸುತ್ತಾನೆ. ಹೀಗೆ ಅನೇಕ ರೀತಿಯಾಗಿ ಭಗವಂತನ ಕಾರ್ಯಗಳನ್ನು ಪ್ರಸನ್ನವಾದ ಮನಸ್ಸಿನಿಂದ ಮಾಡುತ್ತಾನೆ.


 ಹನುಮಂತನ ಸೇವೆಯಿಂದ ಪ್ರಸನ್ನನಾದ ಶ್ರೀರಾಮ, ಆಂಜನೇಯನನ್ನು ಕುರಿತು, ನೀನು ನನಗಾಗಿ ಮಹತ್ತಾದ ಉಪಕಾರವನ್ನೇ ಮಾಡಿರುವೆ. ಆದರೆ ನನ್ನಿಂದ ಪ್ರತ್ಯುಪಕಾರವನ್ನು ಮಾತ್ರ ಅಪೇಕ್ಷಿಸಬೇಡ. 'ಏಕೆಂದರೆ ಯಾರು ಪ್ರತ್ಯುಪಕಾರವನ್ನು ಬಯಸುತ್ತಾರೋ ಅವರು ಆಪತ್ತನ್ನೇ ಬಯಸಿದಂತೆ' ಎಂದು ಹೇಳಿದನೆಂದು ಕವಿಯೊಬ್ಬರು ಚಮತ್ಕಾರಯುತವಾಗಿ ಕರ್ಮದ ಗತಿಯನ್ನು  ವರ್ಣಿಸಿದ್ದಾರೆ.

ನಾವು ಕಷ್ಟದಲ್ಲಿದ್ದವರಿಗೆ ಪ್ರತ್ಯುಪಕಾರದ ಅಪೇಕ್ಷೆಯಿಂದ ಉಪಕಾರವನ್ನು ಮಾಡಿದರೆ ನಮಗೆ ಕಷ್ಟ ಬಂದಾಗ ತಾನೇ ಅವರಿಂದ ಉಪಕಾರವನ್ನು ಪಡೆಯುವಂತಾಗುವುದು!


ಆಂಜನೇಯನಿಗೆ ಯಾವುದೇ ಕಷ್ಟಕಾರ್ಪಣ್ಯಗಳು ಬಾರದಿರಲಿ ಎಂಬ ಶ್ರೀರಾಮನ ಇಚ್ಛೆಯ ಜೊತೆಗೆ  ಪ್ರತಿಫಲವನ್ನು ಅಪೇಕ್ಷಿಸಿ ಕರ್ಮಗಳನ್ನು ಮಾಡಿದಾಗ ಕರ್ಮಬಂಧನಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತೆ ಎಂಬುದು ಲೋಕಕ್ಕೆ ಸಂದೇಶ. ನಾವು ಮಾಡುವ ಪ್ರತಿಯೊಂದು ಕರ್ಮಕ್ಕೂ ಅದರದರ ಫಲವೂ ನಿಶ್ಚಿತವಾಗಿಯೇ ಇದ್ದು, ಒಂದಲ್ಲ ಒಂದು ದಿನ ಸತ್ಕರ್ಮಕ್ಕನುಗುಣವಾದ ಸತ್ಫಲ ಹಾಗೂ ದುಷ್ಕರ್ಮಕ್ಕನುಗುಣವಾದ ದುಷ್ಫಲವನ್ನು ಪಡೆಯಬೇಕಾಗುತ್ತದೆ. ಕೆಲವು ಕರ್ಮಗಳ ಫಲ ಶೀಘ್ರವಾಗಿ ದೊರೆಯಬಹುದು ಮತ್ತೆ ಕೆಲವು ವಿಳಂಬವಾಗಬಹುದು. ಇನ್ನೂ ಕೆಲವನ್ನು ಜನ್ಮಾಂತರದಲ್ಲಿಯೂ ಅನುಭವಿಸಬೇಕಾಗಿ ಬರಬಹುದು. ಕರ್ಮಗಳ ಗತಿ ಅತ್ಯಂತ ಗಹನವಾದದ್ದು. ಹಾಗಾಗಿ, ದುಷ್ಕರ್ಮಗಳನ್ನು ಸರ್ವಾತ್ಮನಾ ತ್ಯಜಿಸಿ, ಸತ್ಕರ್ಮಗಳನ್ನು ಫಲಾ ಪೇಕ್ಷೆಯಿಲ್ಲದೇ, ಅಹಂಭಾವವನ್ನು ತೊರೆದು, ಭಗವದರ್ಪಣಭಾವದಿಂದ ಆಚರಿಸುತ್ತಾ ಬಂದಾಗ ಕರ್ಮವು ಸಂಸಾರ ಬಂಧನಕ್ಕೆ ಕಾರಣವಾಗದೇ  ಭಗವಂತನೊಡನೆ ಒಂದಾಗುವ ಮಾರ್ಗವಾಗಿ ಕರ್ಮಯೋಗ ವಾಗುತ್ತದೆ. "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ "ಎಂಬ ಭಗವದ್ವಾಣಿಯಂತೆ ನಮ್ಮ ಪಾಲಿನ ಕರ್ತವ್ಯಗಳನ್ನು ಶ್ರದ್ಧೆಯಿಂದ ಆಚರಿಸುವುದಷ್ಟೇ ನಾವು ಮಾಡಬೇಕಾಗಿರುವುದು. ಫಲಾಫಲಗಳು ಭಗವಂತನಿಗೆ ಸೇರಿದ್ದು. ಪ್ರತಿಫಲಾಪೇಕ್ಷೆಯನ್ನು ಬಿಟ್ಟು ಶ್ರದ್ಧಾ ಭಕ್ತಿಯಿಂದ ಕಾಯಾ ವಾಚಾ ಮನಸಾ ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿದ ಆಂಜನೇಯನು ಚಿರಂಜೀವತ್ವ ಹಾಗೂ ಶ್ರೀರಾಮಚಂದ್ರನ ಆಲಿಂಗನ ಸೌಖ್ಯದಂತಹ ಮಹಾಫಲವನ್ನೇ ಪಡೆದನು. ಅದೇ ರಾವಣನು ಸರ್ವದಾ ಭಗವದ್ಧರ್ಮಕ್ಕೆ ವಿರುದ್ಧವಾದ ಕಾರ್ಯಗಳನ್ನೇ ಗೈದು ರಾಮನ ಬಾಣಗಳ ಪ್ರಹಾರಕ್ಕೆ ತುತ್ತಾಗಿ ಮಡಿದನು. "ನಾವು ನಮ್ಮ ಜೀವಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡಿದರೂ ಅದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಉದ್ದೇಶವಿರಬೇಕು; ಮೂಲಕ್ಕೆ ಕರೆದೊಯ್ಯುವಂತಿರಬೇಕು ಪ್ರತಿನಿತ್ಯದ ನಮ್ಮ ಕಾರ್ಯಗಳೂ ಕೂಡ ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯುವಂತೆ ಇರಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ, ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿ ಕರ್ಮಯೋಗಿಗಳಾಗೋಣ.


ಸೂಚನೆ: 10/03/2022 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.