Sunday, March 27, 2022

ಶ್ರೀ ರಾಮನ ಗುಣಗಳು - 49 ಆದರ್ಶ ಮಾನವ ಶ್ರೀರಾಮ (Sriramana Gunagalu -49 Adarsha Manava Sriramana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಒಬ್ಬ ಆದರ್ಶ ಪುರುಷ. ಆತನು ದಶರಥ ಮತ್ತು ಕೌಸಲ್ಯೆಯರ ಪುತ್ರ. ಸೀತಾಮಾತೆಯ ಪತಿ ಎಂದೆಲ್ಲ ಅನೇಕ ಸುತ್ತಲಿನ ಸಂಬಂಧಗಳನ್ನು ಹೇಳುತ್ತಾ ಆತನನ್ನು ಒಬ್ಬ ಮಾನವನಾಗಿ ಹೇಳಬಹುದು. ವಾಲ್ಮೀಕಿ ಮಹರ್ಷಿಗಳು ಕೂಡ ಮಹರ್ಷಿ ನಾರದರನ್ನು ಪ್ರಶ್ನಿಸುವಾಗ ಅನೇಕ ಗುಣಗಳನ್ನು ಪಟ್ಟಿಮಾಡಿ ಅಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿ ಯಾರಾದರೂ ಇರುವನೇ? ಎಂಬುದನ್ನು ಕೇಳುತ್ತಾರೆ. ಆಗ ನಾರದರ ಉತ್ತರ ಎಂತಹ ಮಾರ್ಮಿಕವಾದುದು! ಎಂಬುದನ್ನು ಗಮನಿಸಬೇಕು. ಏಕೆಂದರೆ ಒಬ್ಬ ಲೋಕದಲ್ಲಿ ಇರುವ ವ್ಯಕ್ತಿಯನ್ನು ಹೆಸರಿಸಿವುದು ಸುಲಭ ತಾನೇ! ಆದರೆ ಅವರು ಅಲ್ಲಿ ಬಳಸುವ ಶಬ್ದದಿಂದಲೇ ಶ್ರೀರಾಮನು ಎಂತಹ ಲೋಕೋತ್ತರನಾದ ಪುರುಷನಾಗಿದ್ದ ಎಂಬುದನ್ನು ತಿಳಿಯಬಹುದು. ಅಲ್ಲಿ ನಾರದರು "ವಕ್ಷ್ಯಾಮ್ಯಹಂ 'ಬುದ್ಧ್ವಾ' ಎಂಬ ವಾಕ್ಯವನ್ನು ಬಳಸುತ್ತಾರೆ. ಕೇವಲ ಚರ್ಮಚಕ್ಷುಸ್ಸಿನಿಂದ ನೋಡಿದರೆ ಆತನ ಗುಣಗಳಗಳೆಲ್ಲವೂ ತಿಳಿಯುವುದೇ? ಹಾಗೆ ನೋಡಿದರೆ ಅದು ಸಂಕುಚಿತವಾದ ನೋಟವಾಗಬಹುದು. ಹಾಗಾಗಿ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಲು ಒಳಹೊಕ್ಕು ಬುದ್ಧಿಯಿಂದ ಪರಿಶೀಲಿಸಬೇಕು. ಬುದ್ಧಿಯ ಸ್ವಭಾವ ನಿಶ್ಚಯವನ್ನು ತಾನೇ ಕೊಡುವುದು. ಬುದ್ಧಿಯ ಕ್ಷೇತ್ರಕ್ಕೂ ಮೀರಿದ್ದು ಪುರುಷತತ್ತ್ವ. ಹಾಗಾಗಿ ಶ್ರೀರಾಮನನ್ನು ಅರಿಯಲು ಬುದ್ಧಿಯಿಂದ ಮಾತ್ರ ಸಾಧ್ಯ ಎಂಬುದನ್ನು ನಾರದರು 'ಬುದ್ಧ್ವಾ' ಎಂಬ ಪದವನ್ನು ಬಳಸಿದ್ದನ್ನು ನೋಡಬಹುದು.    


ಇಂತಹ ಒಬ್ಬ ಸಾಮಾನ್ಯ ಮಾನವನು ಶ್ರೀರಾಮನೇ ? ಇದಕ್ಕೆ ಬುದ್ಧಿ ಎಂಬ ವಿಶೇಷ ಸಾಮಗ್ರಿಯೇ ಬೇಕೇ? ಹಾಗಾದರೆ ಮಾನವನು ಯಾರು ? ಅಂತಹ ವಿಶೇಷತೆ ಶ್ರೀರಾಮನಲ್ಲಿ ಏನಿದೆ? ಅವನಿಗೂ ಇರುವುದು ನಮ್ಮoತೆ  ಎರಡೇ ಕೈ ತಾನೇ? ಇದಕ್ಕಿಂತಲೂ ವಿಶೇಷತೆ ಏನು? 


ಯಾವುದೇ ಒಂದು ಪದಾರ್ಥವನ್ನು ನೋಡಲು ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರೂ ದೃಷ್ಟಿಯು ಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಪದಾರ್ಥವು ಭೌತಿಕ, ದೈವಿಕ ಮತ್ತು ಆತ್ಮಿಕ ಎಂಬ ಮೂರೂ ಪದರಗಳನ್ನು ಒಳಗೊಂಡಿರುತ್ತದೆ. ಈ ಮೂರನ್ನು ನೋಡಲು ಮೂರೂ ದೃಷ್ಟಿ ಬೇಕೇ ಬೇಕು.  " ನ ಶಕ್ಯಶ್ಚಕ್ಷುಷಾ ದ್ರಷ್ಟುo ದೇಹೇ ಸೂಕ್ಷ್ಮತಮೋ ವಿಭು: । ದೃಶ್ಯತೇ ಜ್ಞಾನಚಕ್ಷುರ್ಭಿ: ತಪಶ್ಚಕ್ಷುರ್ಭಿರೇವ ಚ" ಎಂಬಂತೆ ಜ್ಞಾನ ಮತ್ತು ತಪ್ಪಸ್ಸೆಂಬ ದೃಷ್ಟಿಯಿದ್ದವನು ಮಾತ್ರ ಈ ಮೂರನ್ನು ನೋಡಬಲ್ಲನು. ಅಂದರೆ ನಾರದರಂತಹ ಮಹರ್ಷಿಗಳು 'ಬುದ್ಧ್ವಾ' ಎಂದು ಹೇಳಲು ಇಷ್ಟು ವಿಶಾಲವಾದ ಅರ್ಥ ಅಲ್ಲಿ ಹುದುಗಿದೆ ಎಂಬುದನ್ನು ನಾವು ತಿಳಿಯಬೇಕು. ಇವರ ದೃಷ್ಟಿಯಲ್ಲಿ ಶ್ರೀರಾಮನು ಒಬ್ಬ ಪರಿಪೂರ್ಣ ಮಾನವ. ಆದ್ದರಿಂದಲೇ ಆತ ಆದರ್ಶ ಮಾನವ. ಅವನನ್ನು ನೋಡಿ ನಮ್ಮಲ್ಲಿರುವ ಅಂಕುಡೊಂಕುಗಳನ್ನು ನಾವು ಅರಿಯಬಹುದು. ಏಕೆಂದರೆ ಅದೊಂದು ಆದರ್ಶ- ಕನ್ನಡಿ. ಕನ್ನಡಿ ಶುದ್ಧವಾಗಿದ್ದಾಗ ಮಾತ್ರವೇ ಅಲ್ಲಿ ಕಾಣುವ ಪ್ರತಿಬಿಂಬ ಪರಿಶುದ್ಧವಾಗಿ ಕಾಣಲು ಸಾಧ್ಯ. ಆದ್ದರಿಂದ ಶ್ರೀರಾಮನು ಆದರ್ಶ. "ನಾರಾಯಣನು ನರನಾಗಿ ಅವತರಿಸಿ ನರರೊಡನೆ ಕರೆದುಕೊಂಡು ಹೋಗಲು ಇಳಿದು ಬಂದವನೇ ಶ್ರೀರಾಮ" ಎಂಬ ಶ್ರೀರಂಗಮಹಾಗುರುಗಳು ಹೇಳಿದ ಮಾತನ್ನು ಇಲ್ಲಿ ನೆಪಿಸಿಕೊಳ್ಳಬೇಕು.


ಸೂಚನೆ :27/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.