Sunday, March 20, 2022

ಶ್ರೀ ರಾಮನ ಗುಣಗಳು - 48 ಋಷಿಜನ-ಪ್ರೀತ - ಶ್ರೀರಾಮ (Sriramana Gunagalu - 48 Rushijana - Prita)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಋಷಿಗಳಿಗೆ ಜ್ಞಾನಿಗಳಿಗೆ ಪರಮಪ್ರಿಯನಾದವನು ಶ್ರೀರಾಮನು. ಈ ಹಿಂದೆ ಹೇಳಿದ ಎಲ್ಲಾ ಗುಣಗಳಿಗಿಂತಲೂ ಶ್ರೇಷ್ಠತಮವಾದುದು ಈ ಗುಣ.  ಅಂದರೆ ಉಳಿದವುಗಳು ಶ್ರೇಷ್ಠ, ಇದು ಶ್ರೇಷ್ಠತಮ ಎಂದರ್ಥ. ಋಷಿಗಳು - ಜ್ಞಾನಿಗಳು. ಅವರ ದೃಷ್ಟಿಯು ವಿಶಾಲ ಮತ್ತು ಆಳವಾದುದು. ಯಾವ ವಸ್ತುವನ್ನು ಹೇಗೆ ನೋಡಬಹುದು? ಎಂಬುದರ ಮೇಲೆ ಅವರ ದೃಷ್ಟಿಯನ್ನು ನೋಡಬಹುದು. ಹೇಗೆಂದರೆ ಪ್ರತಿಯೊಂದು ವಸ್ತುವು ಮೂರು ಪದರಗಳಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಲು ಸ್ಥೂಲ, ಸೂಕ್ಷ್ಮ, ಪರಾ ಎಂಬ ಮೂರೂ ಬಗೆಯ  ದೃಷ್ಟಿಯು ಬೇಕು.  ಆದರೆ ಆ ಎಲ್ಲಾ ಪದರಗಳನ್ನು ಸಾಮಾನ್ಯನು ನೋಡಲು  ಸಾಧ್ಯವಿಲ್ಲ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಆ ವಿಷಯ ಗೋಚರವಾಗುತ್ತದೆ. ಸಾಮಾನ್ಯ ಮನುಷ್ಯರು ಸ್ಥೂಲವಾದ ವಿಷಯವನ್ನು ಮಾತ್ರ ಪರಿಗ್ರಹಿಸುತ್ತಾರೆ. ಇನ್ನು ಒಳಗಿನ ಸೂಕ್ಷ್ಮರೂಪವನ್ನು ಸೂಕ್ಷ್ಮದೃಷ್ಟಿಯುಳ್ಳವರು ಮಾತ್ರ ನೋಡಬಲ್ಲರು. ಇನ್ನೂ ಒಳಗಿನ  ಪದರವಾದ ಪರಾರೂಪವನ್ನು ಋಷಿಜನರು ಮಾತ್ರವೇ ಅರಿಯಬಲ್ಲರು. ಇವರು ಮೂರೂ ಪದರಗಳನ್ನು ನೋಡುವ ಸಾಮರ್ಥ್ಯವುಳ್ಳವರು. ಇದನ್ನೇ ಪುಷ್ಟಿಕರಿಸುವಂತಹ ಶ್ರೀರಂಗಮಹಾಗುರುಗಳ ಮಾತನ್ನು ಮನನ ಮಾಡಬಹುದು- "'ರಾಮ' ಎಂಬ ಶಬ್ದವೇ ಯೋಗೀಹೃದಯದಲ್ಲಿ, ಜ್ಞಾನಿಗಳ ಹೃದಯದಲ್ಲಿ ರಮಿಸಲು ಯೋಗ್ಯನಾದವನು ಎಂಬ ಅರ್ಥವನ್ನು ಕೊಡುತ್ತದೆ. 'ರಾಮಾ' ಎಂಬ ಹೆಸರನ್ನು ಪಡೆದ ಸ್ತ್ರೀಯು ಪತಿಯೊಡನೆ ಕ್ರೀಡಿಸುವಂತೆ, ಜೀವವು ತನ್ನ ದೇವನೊಡನೆ ಒಂದಾಗಿ ಸೇರಿ, ಪರಮಾತ್ಮನಲ್ಲಿ-ಪರಮಪುರುಷನಲ್ಲಿ ರಮಿಸುವುದಾದರೆ, ಹಾಗೆ ರಮಿಸಲು ಯೋಗ್ಯನಾದ ದೇವನೇ ರಾಮ. ಪರಮಪುರುಷನೇ 'ರಾಮ'ನಪ್ಪಾ" ಎಂದು. ಋಷಿಗಳ ಹೃದಯದಲ್ಲಿ ಆತ್ಮಾರಾಮನಾಗಿ ಸದಾ ವಿರಾಜಿಸಬಲ್ಲ ಪರಂಜ್ಯೋತೀರೂಪನವನು.  ಹಾಗಾಗಿ ರಾಮ ಋಷಿಜನಪ್ರೀತ.   


ಶ್ರೀರಾಮನು ವನವಾಸಕ್ಕೆಂದು  ಹೊರಡಲು ಸಿದ್ಧನಾಗುತ್ತಾನೆ. ಆಗ ಅಯೋಧ್ಯಾವಾಸಿಗಳು ಆತನನ್ನು ಬಿಟ್ಟಿರಲು ಒಪ್ಪಲಾರರು. ರಾಮನಿಲ್ಲದೆ ಅದು ಅಯೋಧ್ಯೆ ಆಗಲಾರದು. ಮತ್ತು ಎಲ್ಲಿ ರಾಮನಿರುವನೋ ಅದುವೇ ಅಯೋಧ್ಯೆ. ಆಗ ಅವರು ಹೇಳುವ ಮಾತು ಹೀಗಿತ್ತು - " ಎಲೈ! ಸತ್ಯಪರಾಕ್ರಮ! ಮಹಾತ್ಮಾ! ರಾಮಾ ! ಈ ಋಷಿಸಮೂಹವು ನಿನ್ನನ್ನೇ ಅನುಸರಿಸಿಕೊಂಡು ಬರುತ್ತಿದೆ. ಹಾಗಾಗಿ ನಾವು ಆಚರಿಸುವಂತಹ ನಿತ್ಯಾನುಷ್ಠಾನಗಳು ನಿತ್ಯಾಗ್ನಿಹೋತ್ರಗಳು ನಿನ್ನನ್ನು  ಅನುಸರಿಸುತ್ತವೆ. ವೇದಗಳೆಲ್ಲವೂ ನಮ್ಮ ಹೃದಯವನ್ನು ಅಲಂಕರಿಸಿವೆ. ಆದರೆ ಅವು ಇಂದು ನಿನ್ನ ವನವಾಸವನ್ನೇ ಅನುಸರಿಸುತ್ತಿವೆ. ನಮ್ಮ ಪತ್ನಿಯರಾದರೋ ಪತಿವ್ರತೆಯರು. ಅವರು ತಮ್ಮ ಚಾರಿತ್ಯ್ರದಿಂದ ತಮ್ಮನ್ನು ರಕ್ಷಿಸಿಕೊಳ್ಳಬಲ್ಲವರು. ಆದರೆ ಅವರು ಇಂದು ಪತಿವಿಯೋಗವನ್ನು ಪಡುವಂತಾಗುತ್ತದೆಯಲ್ಲವೇ? ನಾವಂತೂ ನಿನ್ನನ್ನೇ ಅನುಸರಿಸುವ ಮನಸ್ಸುಳ್ಳವರಾಗಿದ್ದೇವೆ. ನೀನು ಧರ್ಮಮೂರ್ತಿ. ನೀನು ಧರ್ಮವನ್ನು ಉಪೇಕ್ಷೆ ಮಾಡಿದಲ್ಲಿ ಬೇರೆ ಯಾವ ಪ್ರಾಣಿ ತಾನೇ ಧರ್ಮಾಚರಣೆಯಲ್ಲಿ ನಿಷ್ಠೆ ತೋರಿಸೀತು ಹೇಳು. ಹಂಸಪಕ್ಷಿಯಂತೆ ಬಿಳಿಯ ಕೂದಲಿನಿಂದ ಕೂಡಿದ, ವಯಸ್ಸಾದ ನಾವೆಲ್ಲರೂ ಧೂಳಿನಿಂದ ಧೂಸರಸಿರಿತವಾದ ಈ ಭೂಮಿಯನ್ನು ಆಣೆ  ಮಾಡಿ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ "ಯಾಚಿತೋ ನೋ ನಿವರ್ತಸ್ವ- ಹಿಂದಿರುಗು ಅಯೋಧ್ಯೆಗೆ. ಅರಣ್ಯಕ್ಕೆ ನಿನ್ನ ಗಮನ ಸಲ್ಲದು" ಎಂಬುದಾಗಿ ಬಹಳ ಆರ್ದ್ರ ಹೃದಯರಾಗಿ ಶ್ರೀರಾಮನಲ್ಲಿ ಬೇಡಿಕೊಳ್ಳುತ್ತಾರೆ. ಇದನ್ನು ನೋಡಿದರೆ ನಮಗೆ ತಿಳಿಯುತ್ತದೇ ಶ್ರೀರಾಮನು ಎಷ್ಟರ ಮಟ್ಟಿಗೆ ಋಷಿಜನಮಾನಸ- ಋಷಿಜನಪ್ರೀತನಾಗಿದ್ದ ಎಂದು. 


ಸೂಚನೆ :20/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.