Sunday, March 6, 2022

ಅಷ್ಟಾಕ್ಷರೀ -7 ದೇಹೋ ದೇವಾಲಯಃ ಪ್ರೋಕ್ತಃ (Astakshara Darshana -7 Deho Dealayah Proktah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಮಾನವಶರೀರದ ಹಿರಿಮೆಯನ್ನು ಕೊಂಡಾಡದವರಾರು? "ಮಾನವಜನ್ಮ ದೊಡ್ಡದು, ಇದ ಹಾನಿಮಾಡಬೇಡಿ ಹುಚ್ಚಪ್ಪಗಳಿರಾ" - ಎಂದು ದಾಸರು ಹಾಡಿದ್ದಾರಲ್ಲವೆ? ದಾಸರು ಹೇಳುವುದೇನು? ನಮಗೂ ತಿಳಿಯುತ್ತದೆ: ಮಾನವನಿಗೆ ಮಾತನಾಡಲು ಬರುತ್ತದೆ; ಮತ್ತಾವ ಪ್ರಾಣಿಗೂ ಅದಾಗದು. ಭಾಷಾಸಾಮರ್ಥ್ಯದಿಂದಾಗಿಯೇ ತನ್ನ ಮನಸ್ಸಿನಲ್ಲಿಯ ಅನುಭವ-ಅಭಿಪ್ರಾಯಗಳನ್ನು ಲಿಖಿತ ಮಾಡಿಯೋ ಬಾಯ್ಮಾತಿನಲ್ಲಿಯೋ ಅನ್ಯರಿಗೂ ಅದು ಲಭ್ಯವಾಗುವಂತೆ ಮಾಡಲು ಮಾನವನಿಗೆ ಮಾತ್ರ ಸಾಧ್ಯ; ಮತ್ತಾವ ಪ್ರಾಣಿಗೆ ಶಕ್ಯ? ವಿಜ್ಞಾನಿಗಳಿಗೂ ಮಾನವನ ಶರೀರದ ಬಗ್ಗೆ ಮೆಚ್ಚುಗೆಯೇ: ಶರೀರ-ರಚನೆಯಲ್ಲಿಯ ಹತ್ತು ಹಲವು ಸೂಕ್ಷ್ಮಾಂಶಗಳನ್ನು ತಮ್ಮ ಸಂಶೋಧನೆಗಳ ಮೂಲಕ ಅವರು ಕಂಡುಕೊಳ್ಳುವರಲ್ಲವೇ?

ಮಾತಿಗಿಂತಲೂ ದೊಡ್ಡದೆಂದರೆ ಮನಸ್ಸು. ಮಾತು ಮನಸ್ಸಿಗೊಂದು ಕಾಲುವೆಯಷ್ಟೆ - ಎಂಬುದು ವೇದೋಕ್ತಿ. ಮಾನವನನ್ನು 'ಮಾನವ'ನೆನ್ನಲಿ, 'ಮನುಷ್ಯ'ನೆನ್ನಲಿ, ಮೂಲಪುರುಷನಾದ 'ಮನು'ವಿನ ಸ್ಮರಣೆಯೇ ಅಲ್ಲಿ- ಎಂಬುದು ವ್ಯಾಕರಣಶಾಸ್ತ್ರದ ಸಾಧಾರಣಪರಿಚಯವಿರುವವರಿಗೂ ವೇದ್ಯವಾಗುತ್ತದೆ. 'ಮನು' ಎಂಬ ಪದವಾದರೂ, ಸಂಸ್ಕೃತದ  'ಮನು ಅವಬೋಧನೇ' ಎಂಬ ಧಾತುವಿನಿಂದಲೇ ಬಂದದ್ದು. ಇಂಗ್ಲೀಷಿನ 'ಮ್ಯಾನ್' (man) ಪದವೂ ಸಹ ಇದರಿಂದಲೇ ಆದದ್ದೇ.

ಹೀಗಾಗಿ ಅವಬೋಧನ ಅಥವಾ ಅರಿವೆಂಬುದೇ ಮನುಷ್ಯನ ವಿಶಿಷ್ಟಲಕ್ಷಣ. ಇತರ ಪ್ರಾಣಿಗಳಿಗೂ ಅರಿವೆಂಬುದುಂಟೇ ಆದರೂ, ಮನುಷ್ಯನಿಗೆ ಇರುವ ತಿಳಿವಳಿಕೆಯ ಬಗೆಯನ್ನೂ ಸ್ತರವನ್ನೂ ಇತರ ಪ್ರಾಣಿಗಳಲ್ಲಿ ಕಾಣಲಾಗದು.

ಇಷ್ಟಾದರೂ ಮನುಷ್ಯನಿಗೇ ಅಧಿಕವಾಗಿ ಸಲ್ಲುವ ದೋಷಗಳೂ ಉಂಟೇ. ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯಗಳು ಮನುಷ್ಯನ ಮನಸ್ಸಿನಲ್ಲಿ ಮನೆ ಮಾಡತಕ್ಕವು : ಅವನನ್ನು ಅಮಾರ್ಗಕ್ಕೆ ಎಳೆಯಬಲ್ಲವು, ಬೀಳಿಸಬಲ್ಲವು – ಶತ್ರುಗಳಂತೆ: ಎಂದೇ ಅವನ್ನು ಅರಿಗಳೆಂದು ಅರಿಯಬೇಕಾದದ್ದು. ಅರಿವನ್ನೇ ಅಳಿಸುವ ಅರಿಗಳಿವು! : ಹೀಗೆ ಮಾಡಬಾರದೆಂದು ಗೊತ್ತಿದ್ದರೂ, ಹಾಗೆಯೇ ಮಾಡುವಂತೆ ಪ್ರೇರಿಸಿಬಿಡಬಲ್ಲವು. ಎಂದೇ ಆರರ ಸಮೂಹಕ್ಕೆ ಅರಿಷಡ್ವರ್ಗವೆನ್ನುವುದು. ಇವಾರೂ ಇಲ್ಲದವರಾರೂ ಇರರಲ್ಲವೇ?

ಜೀವನದಲ್ಲಿಯ ಬಹುತೇಕ ಸಮಸ್ಯೆಗಳು ಉದ್ಭವಿಸುವುದು ನಾನು-ನನ್ನದುಗಳಿಂದ: ಅಹಂ- ಮಮಗಳಿಂದ. ಅಹಂಕಾರ-ಮಮಕಾರಗಳೆಂದರೂ ಇವೇ. ತಾನು ಭೋಗಿಸಬೇಕು, ಮೆರೆಯಬೇಕು; ತನ್ನವರು ಭೋಗಿಸಬೇಕು ಮೆರೆಯಬೇಕು - ಎಂಬ ರಾಗವೂ; ತಾನಲ್ಲದೆ ಬೇರೆಯವರು ಭೋಗಿಸಬಾರದು, ತನ್ನವರಲ್ಲದವರು ಶೋಭಿಸಬಾರದು - ಎಂಬ ದ್ವೇಷವೂ ನಮಗೆ ಕಾಟಕೊಡುತ್ತವೆ. ರಾಗವೇ ದ್ವೇಷದ ಬೀಜ.

ರಾಗವುಳ್ಳವನು 'ರಾಗಿ'. ಅತಿರಾಗಿಯು ಅತಿರೋಗಿಯೇ. ಅತಿರಾಗದಿಂದಾಗುವ ಕೆಡುಕನ್ನು, ಪಡಬಾರದ ಪಾಡನ್ನು, ಪಟ್ಟ ಬಳಿಕವೇ ಅದನ್ನು ಬಿಡಬೇಕೆನ್ನಿಸುವುದು: ರಾಗಕ್ಕೆ ವಿರುದ್ಧವಾದ ವಿರಾಗ ಆಗ ಜನಿಸುವುದು. ವೈರಾಗ್ಯವು ಬಂದಾಗ ತನ್ನ ದೇಹದ ಬಗೆಗೇ ಅವಜ್ಞೆಯು ಜನಿಸಿ ಅದನ್ನು ತುಚ್ಛವೆಂದು ಭಾವಿಸುವುದಾಗುತ್ತದೆ. ಎಷ್ಟಾದರೂ ಅಳಿದುಹೋಗುವುದಾದ್ದರಿಂದಲೇ "ಶರೀರ": ಶೀರ್ಯತೇ ಇತಿ ಶರೀರಂ - ಎಂದೇ ವ್ಯುತ್ಪತ್ತಿ.

ಅಳಿವು ದೇಹಕ್ಕೇ ವಿನಾ ಜೀವಕ್ಕಲ್ಲ. ಅದರೆ ದೇಹಾಹಂಭಾವ - ಎಂದರೆ ದೇಹವನ್ನೇ ತಾನೆಂದುಕೊಳ್ಳುವುದು - ಸದಾ ಕೆಲಸ ಮಾಡುತ್ತಿರುವುದೇ ಬಂಧಕ್ಕೆ ಕಾರಣವೆಂಬುದಾಗಿ ಜ್ಞಾನಿಗಳು ತಿಳಿಯಹೇಳುವರು.

ದೇಹವು ಜಡ, ಜೀವವು ಚೈತನ್ಯ  ಎಂಬ ವಿರುದ್ಧಸ್ವಭಾವಗಳು ಇಲ್ಲಿವೆ ಸರಿಯೇ. ಆದರೆ ಹಾಗೆಂದು ದೇಹದ ಬಗ್ಗೆ ತುಚ್ಛಭಾವನೆಯೇ ಇರಬೇಕೆಂದಿಲ್ಲ: ಮೈಯನ್ನು ಮಲ-ಮೂತ್ರಾದಿಗಳ ಮನೆಯೆಂದು ಚಿತ್ರಿಸಿ, ನರ-ಮೂಳೆ-ಮಾಂಸಗಳ ಜಾಲವೆಂದು ಜರೆದು, ಅದರ ಬಗ್ಗೆ ಹೇಗಾದರೂ ಹೇವರಿಕೆಯುಂಟುಮಾಡಿಯೇ ಆತ್ಮಿಕ-ಪ್ರಗತಿಯನ್ನು ಸಾಧಿಸಬೇಕೆಂದೇನಿಲ್ಲ. ಬದಲಾಗಿ, ದೇಹರಚನೆಯಲ್ಲಿರುವ ಸೌಷ್ಠವ-ಸೌಕರ್ಯಗಳನ್ನು ಮನಗಂಡು, ಸಾಧು-ಯೋಗದಿಂದ ಸಾಧಿಸಬಹುದಾದ ಉದಾತ್ತವಾದ ಲಕ್ಷ್ಯದತ್ತ ದತ್ತಚಿತ್ತರಾಗಬೇಕೆಂಬುದು ಯೋಗಜ್ಞರಾದ ಶ್ರೀರಂಗಮಹಾಗುರುಗಳ ನಿಲುವಾಗಿತ್ತು: ದೇಶಹಿತ-ಆತ್ಮಹಿತಗಳನ್ನು ಸಾಧಿಸಿಕೊಳ್ಳಲೆಂದು ಕಾಯವನ್ನು ಕಾಪಾಡಿಕೊಳ್ಳಬೇಕು.

ಹಾಗೆ ಗಮನಿಸಿಕೊಂಡಾಗಲೇ ದೇಹವು ದೇವಾಲಯವೆಂಬ ತತ್ತ್ವವು ಗೋಚರವಾಗುವುದು: "ದೇಹೋ ದೇವಾಲಯಃ ಪ್ರೋಕ್ತಃ" - ಎಂಬ ಮಾತು ಮೈತ್ರಾಯಣ್ಯುಪನಿಷತ್ತಿನಲ್ಲಿ ಮೊದಲು ಮೂಡಿರುವುದು. (ಆಮೇಲಿನ ಹಲವು ಕೃತಿಗಳಲ್ಲೂ ಇದು ಬಂದಿದೆ.)

ವಾಕ್ಯವನ್ನೂ ಉದ್ಧರಿಸಿ, ಶರೀರವೆಂಬುದು ಶಿವ-ಶಕ್ತಿನಿಕೇತನವೆಂದೂ ವಿಷ್ಣು-ಲಕ್ಷ್ಮೀನಿಕೇತನವೆಂದೂ ಸಾರುವ ಉಪನಿಷದ್ವಾಕ್ಯಗಳನ್ನೂ ಉಲ್ಲೇಖಿಸಿ, ಶರೀರವನ್ನು ಆದರಿಸುವ ಬಗೆಯನ್ನು ಅವರು ತೋರಿಗೊಟ್ಟರು: ದೇಶರಕ್ಷಣೆ-ಧರ್ಮರಕ್ಷಣೆಗಳಿಗಾಗಿ ಮೈ-ಮನಸ್ಸುಗಳನ್ನು ಮುಡಿಪಾಗಿಟ್ಟುಕೊಳ್ಳಬೇಕು; ಇಹಕ್ಕೂ ಪರಕ್ಕೂ ಇರಬಹುದಾದ ಸಾಧನಗಳಲ್ಲಿ ಶರೀರವು ಅಗ್ರಗಣ್ಯವಾದದ್ದು. ಉದಾತ್ತಲಕ್ಷ್ಯದತ್ತ ಸಾಗಲು ಸರಿಯಾಗಿ ಸಜ್ಜಾಗಲು ಯೋಗವಿದ್ಯೆಯ ಯೋಗವೇ ಬೇಕು.

ದೇಹವನ್ನು ತೆಗಳುವ ಬದಲು, ಈ ಆಲಯದೊಳಗಿನ ದೇವನಿಗೆ ಪ್ರೀತಿಯಾಗಲೆಂದು ಇದನ್ನು ಚೆನ್ನಾಗಿಟ್ಟುಕೊಳ್ಳಬೇಕಲ್ಲವೇ? 

ಸೂಚನೆ: 6/3/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.