Sunday, February 27, 2022

ಶ್ರೀ ರಾಮನ ಗುಣಗಳು - 45 ಪತಿತೋದ್ಧಾರಕ- ಶ್ರೀರಾಮ (Sriramana Gunagalu - 45 Patitoddharaka-Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನಿಗೆ 'ಪತಿತೋದ್ಧಾರಕ' ಎಂಬ ಬಹು ವಿಶಿಷ್ಟವಾದ ಅನ್ವರ್ಥವಿದೆ. ವಿಶ್ವಾಮಿತ್ರರು ಶ್ರೀರಾಮನನ್ನು ಮಿಥಿಲೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಜನಕನ ಪುರೋಹಿತರಾದ ಶತಾನಂದರನ್ನು ಸಂದರ್ಶಿಸುತ್ತಾರೆ. ಅವರಾದರೋ ಗೌತಮ ಮಹರ್ಷಿಗಳ ಹಿರಿಯ ಮಗ. ಶ್ರೀರಾಮನು ಮಾಡಿದ ಅಹಲ್ಯೋದ್ಧಾರದ ಕಥೆಯನ್ನು ವಿಶ್ವಾಮಿತ್ರರು ಶತಾನಂದರಿಗೆ ಹೇಳುತ್ತಾರೆ. ತನ್ನ ತಾಯಿಯ ಶಾಪವಿಮೋಚನೆಯನ್ನು ಮಾಡಿದ ಈ ಮಹಾತ್ಮನನ್ನು ಕಂಡೊಡನೆ ಶತಾನಂದರು ಪುಲಕಿತರಾಗುತ್ತಾರೆ. ಆಗ ಶತಾನಂದರು ವಿಶ್ವಾಮಿತ್ರರನ್ನು ಪ್ರಶ್ನಿಸುತ್ತಾರೆ – "ಮುನಿಗಳೇ ! ನನ್ನ ತಾಯಿಯ ಶಾಪವಿಮೋಚನೆಯ ಕಥೆಯನ್ನು ವಿಸ್ತಾರವಾಗಿ ತಿಳಿಸಿ" ಎಂದು ಕೇಳುತ್ತಾರೆ. ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತಾ- "ಯಾವ ರೀತಿಯಾಗಿ ಪರಶುರಾಮನ ತಾಯಿಯಾದ ರೇಣುಕೆಯು ತನ್ನ ಪತಿಯನ್ನೇ ಮತ್ತೆ ಸೇರಿದಳೋ, ಅಂತೆಯೇ ನಿನ್ನ ತಾಯಿಯೂ ಪತಿಯಾದ ಗೌತಮರನ್ನು ಸೇರಿದಳು" ಎಂದು.  

ಗೌತಮರ ಭಾರ್ಯಾ ಅಹಲ್ಯೆ. ಆಕೆ ಅನೇಕ ವರ್ಷಗಳ ಕಾಲ ಪತಿಯ ಯಜ್ಞದಲ್ಲಿ ಸಹಧರ್ಮಿಣಿಯಾಗಿ ಸೇವೆಯನ್ನೂ ಸಲ್ಲಿಸಿದ್ದಳು. ಒಮ್ಮೆ ಇಂದ್ರನು, ಗೌತಮರ ವೇಷವನ್ನು ಧರಿಸಿ, ಗೌತಮರು ಇಲ್ಲದ ವೇಳೆಯನ್ನು ಗಮನಿಸಿ ಆಶ್ರಮಕ್ಕೆ ಹೋಗುತ್ತಾನೆ. ಅಹಲ್ಯೆಯ ಜೊತೆ ಬಹುವಾಗಿ ಮಾತನಾಡಿ ಅವಳ ಸಮಾಗಮವನ್ನೂ ಬಯಸುತ್ತಾನೆ. "ದೇವೇಂದ್ರನೇ ಬಂದು ಕೇಳುತ್ತಿರುವಾಗ ಹೇಗೆ ನಿರಾಕರಿಸುವುದು?" ಎಂಬ ಸಂದೇಹದಿಂದ ಅಹಲ್ಯೆ ಅನುಮತಿಸಿದಳು. ಇಲ್ಲೇ ಅಹಲ್ಯೆಯ ಪತನ ಉಂಟಾಯಿತು. ತನ್ನ ಪತಿವ್ರತಾಧರ್ಮದಿಂದ ಜಾರಿದಳು. ಇದರ ಫಲವಾಗಿ ಅವಳಿಗೆ 'ಸಾವಿರವರ್ಷ ಗಾಳಿಯನ್ನು ಸೇವಿಸುತ್ತಾ ಅದೃಶ್ಯಳಾಗಿ ಇರು' ಎಂದು ಶಪಿಸಿದರು ಗೌತಮರು. ಶಾಪಗ್ರಸ್ತಳಾಗಿ ಪತಿಯ ವಿಯೋಗವನ್ನು ಪಡೆಯುವಂತಾಯಿತು. ಶಾಪವಿಮೋಚನೆಯ ಪರಿಹಾರವಾಗಿ "ಯಾವಾಗ ದಶರಥನ ಮಗನಾದ ಶ್ರೀರಾಮನು ಬರುವನೋ ಅಂದು ನೀನು ಪೂತಳಾಗುವೆ" ಎಂದೂ ಅನುಗ್ರಹಿಸಿದರು. ಅಂದಿನಿಂದ ಅಹಲ್ಯೆಯು ಗೌತಮರಿಂದ ದೂರವಾದಳು. ಶ್ರೀರಾಮಚಂದ್ರನ ಆಗಮನದಿಂದ ಮತ್ತೆ ಅಹಲ್ಯೆಯು ಪೂತಳಾಗಿ ತನ್ನ ಪತಿದೇವರನ್ನು ಸೇರುವಂತಾಯಿಯು. ಇದು ಶ್ರೀರಾಮನು 'ಪತಿತೋದ್ಧಾರಕ' ನಾದ ಪರಿ.

ಉತ್ – ಮೇಲಕ್ಕೆ, ಹರಣ ಎತ್ತುವುದನ್ನು 'ಉದ್ಧಾರ' ಪತಿತರನ್ನು ಮೇಲಕ್ಕೆತ್ತುವುದನ್ನು 'ಉದ್ಧಾರ' ಎನ್ನುತ್ತಾರೆ. "ಮಹರ್ಷಿಗಳ ಅಂತರಂಗ ಭೂಮಿಕೆಯಲ್ಲಿ ಕಂಡ ಋತ-ಸತ್ಯಕ್ಕೆ ಅವಿರೋಧವಾಗಿ ನಡೆಯುವ ಮಾರ್ಗವೇ ಸನ್ಮಾರ್ಗ, ಇದಕ್ಕೆ ವಿರೋಧವಾಗಿದ್ದರೆ ದುಷ್ಕೃತ" ಎಂದು ಶ್ರೀರಂಗಮಹಾಗುರುಗಳು ಪಾಪಕರ್ಮಕ್ಕೆ ಈರೀತಿಯಾದ ವಿವರಣೆಯನ್ನು ಕೊಟ್ಟಿದ್ದರು. ಹಾಗು ಶಾಸ್ತ್ರದಲ್ಲಿ ಪತಿತರ ಲಕ್ಷಣವನ್ನು ಹೀಗೆ ಹೇಳಿದ್ದಾರೆ " ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಚ ಸೇವನಾತ್ | ಅನಿಗ್ರಹಾಚ್ಚೇಂದ್ರಿಯಾಣಾಂ ನರಃ ಪತನಮೃಚ್ಛತಿ" – ಮಾಡಲೇಬೇಕಾದ ಕಾರ್ಯವನ್ನು ಮಾಡದೇ ಇರುವುದರಿಂದ, ನಿಂದಿತವಾದ ಕರ್ಮವನ್ನು ಮಾಡುವುದರಿಂದ, ಇಂದ್ರಿಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದರಿಂದ ಮಾನವನು ಪತಿತನಾಗುತ್ತಾನೆ. ಎಂದು. ಇಲ್ಲಿ ಹೇಳಿದ ಎಲ್ಲಾ ರೀತಿಯಿಂದಲೂ ಅಹಲ್ಯೆ ಪತಿತಳಾಗಿರುತ್ತಾಳೆ. ಪತಿತರಾದಾಗ ಆ ವ್ಯಕ್ತಿಯು ವಿವೇಕವನ್ನು ಕಳೆದುಕೊಂಡಿರುತ್ತಾನೆ. ಆಗ ಸರಿ-ತಪ್ಪುಗಳನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಭಗವಂತನ ಸಂಕಲ್ಪವೇ ಪತಿತರನ್ನು ಉದ್ಧರಿಸುವುದು, ಅವರ ಪಾಪಗಳನ್ನು ದೂರಮಾಡುವುದು, ಅವರನ್ನು ನಿಷ್ಕಲ್ಮಷರನ್ನಾಗಿಸುವುದು. ಹಾಗಾಗಿ ಶ್ರೀರಾಮ ಅಹಲ್ಯೆಯಂತಹ ಪತಿತರನ್ನು ಉದ್ಧಾರಮಾಡುವ ಮೂಲಕ ಪತಿತೋದ್ಧಾರಕ ಎಂಬ ಶಾಶ್ವತ ನಾಮವನ್ನು ಪಡೆದ.

ಸೂಚನೆ : 27/2/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.