Thursday, February 10, 2022

ನಮ್ಮೊಳಗಿನ ಬೆಳಕನ್ನು ಮರೆಯದಿರೋಣ (Nammolagina Belakannu Mareyadirona)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಕೇನೋಪನಿಷತ್ತಿನ ಒಂದು ಆಖ್ಯಾಯಿಕೆ ಹೀಗಿದೆ- ಒಮ್ಮೆ ದೇವತೆಗಳಿಗೆ ಮತ್ತು ಅಸುರರಿಗೆ ನಡೆದ ಯುದ್ಧದಲ್ಲಿ ಪರಬ್ರಹ್ಮನು ದೇವತೆಗಳಿಗೆ ಜಯವನ್ನು ದೊರಕಿಸಿಕೊಟ್ಟನು. ವಿಜಯವನ್ನು ಹೊಂದಿದ ದೇವತೆಗಳು ಮಹಿಮಾನ್ವಿತರಾದರು  ಮತ್ತು ಆ ಮಹಿಮೆಯೆಲ್ಲವೂ ತಮಗೇ ಸೇರಿದ್ದು ಎಂಬ ಅಭಿಮಾನವನ್ನು ತಾಳಿದರು. ಹೀಗಿದ್ದಾಗ,  ಒಮ್ಮೆ ಆಕಾಶದಲ್ಲಿ, ಅವರೆಂದೂ ಕಾಣದ ಯಕ್ಷನೊಬ್ಬನ ದರ್ಶನವಾಯಿತು. ಯಾರು ಈ ಯಕ್ಷ ಎಂಬ ಪ್ರಶ್ನೆ ಏಳಲಾಗಿ, ಪ್ರಮುಖ ದೇವತೆಗಳಲ್ಲೊಬ್ಬನಾದ ಅಗ್ನಿದೇವನನ್ನು ಯಕ್ಷನ ಪರಿಚಯವನ್ನು ಪಡೆದುಬರಲು ಕಳುಹಿಸಲಾಯಿತು. ಅಗ್ನಿಯು ಆ ಯಕ್ಷನ ಮುಂದೆ ನಿಂತು ಅವನ ತೇಜಸ್ಸಿನ ಪ್ರಭಾವದಿಂದ ಯಾವ ಮಾತೂ ಹೊರಡದೇ ಹಾಗೆಯೇ ನಿಂತನು. ಆಗ ಆ ಯಕ್ಷನೇ ಅಗ್ನಿಯನ್ನು ಕುರಿತು-ಯಾರು ನೀನು? ನಿನ್ನ ಪರಾಕ್ರಮವೇನು? ಎಂದು ಕೇಳಿದನು. ಆಗ ಅಗ್ನಿಯು-"ನಾನು ಅಗ್ನಿ. ಲೋಕದಲ್ಲಿರುವ ಯಾವುದೇ ವಸ್ತುವನ್ನಾದರೂ ನನ್ನ ಬಲದಿಂದ ದಹಿಸಬಲ್ಲೆ ಎಂದು ತನ್ನ ಪರಾಕ್ರಮವನ್ನು ಹೇಳಿಕೊಂಡನು. ಆಗ ಯಕ್ಷನು-ಹಾಗಾದರೆ ಈ ಹುಲ್ಲುಕಡ್ಡಿಯನ್ನು ದಹಿಸು ಎಂದನು. ಎಷ್ಟೇ ಪ್ರಯತ್ನಿಸಿದರೂ ಅಗ್ನಿಗೆ ಆ ಹುಲ್ಲುಕಡ್ಡಿಯನ್ನು ಸ್ವಲ್ಪವೂ ದಹಿಸಲಾಗಲಿಲ್ಲ. ಅವನು ನಾಚಿಕೆಯಿಂದ ಹಿಂತಿರುಗಿದನು. ನಂತರ ವಾಯುವಿನ ಸರದಿ. ಯಕ್ಷನು ಅದೇ ಪ್ರಶ್ನೆಯನ್ನು ವಾಯುದೇವನಿಗೂ ಕೇಳಿದನು. ಆಗ ವಾಯುವು ತನ್ನ ಪರಿಚಯವನ್ನು ಹೀಗೆ ಹೇಳಿಕೊಂಡನು-"ನಾನು ವಾಯು, ಜಗತ್ತಿನ ಎಲ್ಲವನ್ನೂ ನನ್ನ ವೇಗದಿಂದ ಸ್ಥಾನಪಲ್ಲಟ ಮಾಡಬಲ್ಲೆ. ಪುನಃ ಯಕ್ಷನು ಅದೇ ಹುಲ್ಲುಕಡ್ಡಿಯನ್ನು ತೋರಿಸಿ ಇದನ್ನು ನಿನ್ನ ಪರಾಕ್ರಮದಿಂದ ಹಾರಿಸು ನೋಡೋಣ ಎಂದನು. ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿದರೂ ಆ ಹುಲ್ಲುಕಡ್ಡಿಯನ್ನು ಅಲ್ಲಾಡಿಸಲೂ ವಾಯುವಿನಿಂದ ಸಾಧ್ಯವಾಗಲಿಲ್ಲ. ಅವನೂ ನಾಚಿ ಹಿಂತಿರುಗಿದನು. ಆಗ ಇಂದ್ರ ದೇವನೇ ಆ ಯಕ್ಷನಲ್ಲಿಗೆ ಬಂದಾಗ ಯಕ್ಷನು ಅದೃಶ್ಯನಾದನು. ಇಂದ್ರನಿಗೆ ಆಶ್ಚರ್ಯವಾದರೂ ಅಲ್ಲೇ ನಿಂತು ಧ್ಯಾನಿಸಿದ. ಆಗ ಆ ಯಕ್ಷನ ಜಾಗದಲ್ಲಿ ಹೇಮವತಿಯಾದ, ಶಂಕರಾರ್ಧ ಶರೀರಿಣಿಯಾದ ಉಮಾದೇವಿಯು ಕಾಣಿಸಿಕೊಂಡಳು. ಇಂದ್ರನು ಅವಳಿಗೆ ಶಿರಸಾ ನಮಿಸಿ ಆ ಯಕ್ಷನು ಯಾರೆಂದು ಕೇಳುತ್ತಾನೆ. ಆಗ ಜಗದಂಬೆಯು ಹೇಳುತ್ತಾಳೆ- ಆ ಯಕ್ಷನು ಪರಬ್ರಹ್ಮನೇ. ನಿಮ್ಮೆಲ್ಲರ ಮಿಥ್ಯಾಭಿಮಾನವನ್ನು ದೂರಮಾಡಲು ಯಕ್ಷರೂಪದಲ್ಲಿ ಬಂದನು. ಎಲ್ಲರ, ಎಲ್ಲದರ ಹಿಂದಿನ ಪ್ರೇರಕ ಶಕ್ತಿ ಆ ಭಗವಂತನೇ. ಅವನ ಕಾರಣದಿಂದಲೇ ನೀವು ಜಯಗಳಿಸಿದಿರಿ. ಅದನ್ನು ಮರೆತು ನಿಮ್ಮದೇ ಜಯವೆಂದು ಮಿಥ್ಯಾಭಿಮಾನ ತೋರಿದಿರಿ. ಅದರಿಂದಲೇ ನಿಮ್ಮನ್ನು ಸರಿದಾರಿಗೆ ತರಲು ಅವನು ನಿಮಗೆ ಪರೀಕ್ಷೆಗಳನ್ನು ಒಡ್ದಬೇಕಾಯಿತು ಎಂದಳು. ದೇವತೆಗಳೆಲ್ಲರಿಗೂ ತಮ್ಮ ತಪ್ಪಿನ ಅರಿವಾಗಿ ಭಗವಂತನಿಗೆ ತಲೆಬಾಗಿದರು.

ಭಗವಂತನ ಶಕ್ತಿಯಿಂದಲೇ ಸೃಷ್ಟಿಯೆಲ್ಲವೂ ನಡೆಯುತ್ತಿದೆ ಎಂಬುದನ್ನು ನಿರೂಪಿಸುವ ಸುಂದರ ಆಖ್ಯಾಯಿಕೆ ಇದು. ಮಿಥ್ಯಾಭಿಮಾನ ದಾರಿತಪ್ಪಿಸುತ್ತದೆ. ನಾನಲ್ಲದುದನ್ನು ನಾನು ಎಂದು ಭಾವಿಸುವಂತಾಗುತ್ತದೆ. ಹಾಗಾದಾಗ ಸತ್ಯದ ದಾರಿ ದುರ್ಗಮವಾಗುತ್ತದೆ. ದೇವತೆಗಳಿಗೆ ಈ ಶಿಕ್ಷಣ ಕೊಡದಿದ್ದರೆ ಅಂತಹ ದುರಭಿಮಾನವನ್ನು ಬೆಳೆಸಿಕೊಂಡು ಅವರೂ ಅಸುರರಾಗುತ್ತಾರೆ ಎಂದೇ, ಅವರ ಮೇಲಿನ ಅನುಗ್ರಹದಿಂದಲೇ, ಭಗವಂತ ಹೀಗೆ ಪಾಠ ಕಲಿಸಿದನು. ಇದು ದೇವತೆಗಳ ನೆಪದಲ್ಲಿ ನಮ್ಮೆಲ್ಲರಿಗೂ ಪಾಠವಾಗಿದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಇಂತಹ ಎಷ್ಟೋ ಮಿಥ್ಯಾಭಿಮಾನದ ಉದಾಹರಣೆಗಳು ಸಿಗುತ್ತವೆ. ಎಲ್ಲದರ ಹಿಂದಿನ ಭಗವಂತನ ನಿಜವಾದ ಶಕ್ತಿಯನ್ನು, ಹಿರಿಮೆಯನ್ನು ಮರೆತು ನಮ್ಮ ಅಭಿಮಾನವನ್ನೇ ಮೆರೆಯುತ್ತೇವೆ. ಇದನ್ನೇ ಯಮನು ನಚಿಕೇತನಿಗೆ ಉಪದೇಶ ಮಾಡುತ್ತಾನೆ-ನ ತತ್ರ ಸೂರ್ಯೋಭಾತಿ ನ ಚಂದ್ರ ತಾರಕಂ, ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿ: ತಮೇವ ಭಾಂತಂ ಅನುಭಾತಿ ಸರ್ವಂ, ತಸ್ಯ ಭಾಸಾ ಸರ್ವಮಿದಂ ವಿಭಾಂತಿ||- ಎಂಬಂತೆ ಸೂರ್ಯ,ಚಂದ್ರ, ತಾರೆಗಳು,ವಿದ್ಯುತ್ತು,ಅಗ್ನಿ, ಇವು ಎಲ್ಲವೂ ಪರಬ್ರಹ್ಮನಿಂದಲೇ  ಬೆಳಕನ್ನು ಪಡೆದು ಬೆಳಗುತ್ತಿವೆ ಎಂದು ಮೂಲ ಬೆಳಕಾದ ಪರಬ್ರಹ್ಮನೆಡೆಗೆ ಕೈದೋರುತ್ತಾನೆ. ಭಗವಂತನ ಸ್ವರೂಪವನ್ನು ಮನಗಾಣಿಸುವ ಉಪನಿಷತ್ತಿನ ಶೈಲಿ ಅತ್ಯಂತ ಮಾರ್ಮಿಕ, ರಮಣೀಯ, ಸಹಜ-ಸುಂದರ. ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳ ಈ ಮಾತು ಸ್ಮರಣೀಯ-"ದಿವಿಯಲ್ಲಿರುವ ಸೂರ್ಯನು ಬಹಳ ದೂರದಲ್ಲಿದ್ದರೂ,ಭುವಿಯಲ್ಲಿರುವ ಪುಷ್ಪಗಳು ಅವನಿಂದ ಅರಳುತ್ತವೆ. ಅಂತೆಯೇ ಈ ಪುಷ್ಪಗಳು ಸೂರ್ಯನು ದೂರದಲ್ಲಿದ್ದಾನೆಂದು ಯೋಚಿಸಬೇಕಾಗಿಲ್ಲ. ಅಂತೆಯೇ ಜ್ಞಾನಸೂರ್ಯನ ಕರಸ್ಪರ್ಶದಿಂದ ಜೀವಕುಸುಮಗಳು ಎಷ್ಟೇ ದೂರದಲ್ಲಿದ್ದರೂ ಅರಳುವುದು ಸತ್ಯಸಿದ್ಧವಾಗಿದೆ." ಎಂದೇ ಜೀವನದ ಹಿಂಬದಿಯಲ್ಲಿ ಬೆಳಗುತ್ತಿರುವ ಪರಬ್ರಹ್ಮನ ಮಹಿಮೆಯನ್ನು ನಾವೆಲ್ಲಾ  ಅರಿಯುವಂತಾಗಲಿ.

ಸೂಚನೆ:  10/02/2022 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.