Thursday, February 10, 2022

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು (Tayi Mattu Tayinadu Svargakkinta Migilu)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)





"ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬುದು ಭಾರತದಲ್ಲಿ ಪ್ರಸಿದ್ಧವಾದ ಒಂದು ಘೋಷವಾಕ್ಯವಾಗಿದೆ - 'ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದವು'. ಇದು ತಾಯಿ-ತಾಯಿನಾಡಿನ ಮೇಲಿನ ಅಭಿಮಾನವನ್ನು ಸಾರುವ ಮಾತು. ಹೊತ್ತು-ಹೆತ್ತು-ಸಾಕಿದ ತಾಯಿ ಅಭಿಮಾನಕ್ಕೆ ಪಾತ್ರಳೆನ್ನುವುದು ನಿರ್ವಿವಾದವಾದದ್ದು. ಆದರೆ ತಾಯಿನಾಡಿಗೆ ಈ ಮಾತನ್ನು ಅನ್ವಯಿಸುವುದು ಹೇಗೆ? ವಿದೇಶಕ್ಕೆ ಹಾರಿ, ಅಲ್ಲಿಯೇ ನೆಲೆಸುವುದರಲ್ಲೇ ಜೀವನದ ಸಾರ್ಥಕ್ಯ ಅಡಗಿದೆಯೆಂದು ಭಾವಿಸುವ ಭಾರತದ ಇಂದಿನ ಪೀಳಿಗೆಗೆ ಇದು ಹಾಸ್ಯಾಸ್ಪದವಾಗಿ ತೋರಿದರೆ ಅಚ್ಚರಿಯೇನಿಲ್ಲ. ಅಮೇರಿಕಾ, ಯೂರೋಪಿನಂತಹ ದೇಶಗಳಲ್ಲಿ ದೊರಕುವ ಸುಖ-ಸೌಲಭ್ಯಗಳನ್ನು ಒಮ್ಮೆ ಅನುಭವಿಸಿದರೆ ಸಾಕು, ಭಾರತಕ್ಕೆ ಹಿಂದಿರುಗುವ ಮನಸ್ಸಾಗುವುದು ಕಷ್ಟಸಾಧ್ಯವೇ ಸರಿ.  ಆದ್ದರಿಂದ ಆ ದೇಶದವರು ತಮ್ಮ ನಾಡನ್ನು ಸ್ವರ್ಗಕ್ಕಿಂತಲೂ ಮಿಗಿಲಾಗಿ ಭಾವಿಸಿ ಪ್ರೀತಿಸುತ್ತೇವೆ ಎಂದರೆ ಅದು ಅರ್ಥವತ್ತಾಗುವುದು.  ನಮ್ಮ ದೇಶವನ್ನು ಸ್ವಲ್ಪ ಮಟ್ಟಿಗೆ "ನಮ್ಮದು" ಎಂಬ ಅಭಿಮಾನದಿಂದ ನೋಡ ಬಹುದಷ್ಟೇ. ಆದರೆ ಸ್ವರ್ಗಕ್ಕೆ ಹೋಲಿಸುವುದು ಅತಿಶಯೋಕ್ತಿಯೇ ಎನ್ನುವವರ   ಸಂಖ್ಯೆಯೇ  ಪ್ರಾಯಶಃ ಹೆಚ್ಚಾಗಿದೆಯೇನೋ.

ಯಾರೇ ಆಗಲಿ ತಮ್ಮ ರಾಷ್ಟ್ರವನ್ನು ತಾವು ಹುಟ್ಟಿದ ಭೂಮಿ ಎನ್ನುವ ಕಾರಣಕ್ಕಾಗಿ ಪ್ರೀತಿಸ ಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಸಂಪನ್ಮೂಲಗಳನ್ನು ಕಂಡು ಹೆಮ್ಮೆಯಿಂದ ಪ್ರೀತಿಸಬಹುದು. ಇದು ವಿಶ್ವದ ಎಲ್ಲ ದೇಶಗಳಿಗೂ ಅನ್ವಯಿಸುವ ಮಾತಾಗಿದೆ. ಆದರೆ ಭಾರತೀಯ ಮಹರ್ಷಿಗಳು ರಾಷ್ಟ್ರಪ್ರೇಮದ ಬಗೆಗೆ ಹೊಂದಿದ್ದ ಅಭಿಪ್ರಾಯವೇನು? ಅವರು ತಮ್ಮ ರಾಷ್ಟ್ರವನ್ನು  ಪ್ರೀತಿಸಲು ಕಾರಣವೇನು? ಈ ವಿಚಾರಗಳನ್ನು ಅರಿತಾಗ ಭಾರತವು ಹೇಗೆ ಸ್ವರ್ಗಕ್ಕಿಂತಲೂ  ಮಿಗಿಲಾದೀತು ಎಂಬುದನ್ನು ಮನಗಾಣಬಹುದು.    

ಭಾರತದ ಮಹರ್ಷಿಗಳು ಅಂತರಂಗದಲ್ಲಿ ತಮ್ಮ ಯೋಗಭೂಮಿಯಲ್ಲಿ, ತಪೋಭೂಮಿಯಲ್ಲಿ

ಪರಮಾನಂದವನ್ನೀಯುವ ಪರಂಜ್ಯೋತಿಯನ್ನೂ ಅದರ ವಿಸ್ತಾರವನ್ನೂ ಕಂಡರು. ಅನೇಕ ದೈವಿಕ-ಆಧ್ಯಾತ್ಮಿಕ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಂಡರು. ಲೌಕಿಕವಾಗಿ ಭೌತಿಕ ಪದಾರ್ಥಗಳಿಂದ ಸಿಗಬಹುದಾದ ಆನಂದದ ಪರಮಾವಧಿಗಿಂತಲೂ ಕೋಟಿಕೋಟಿ ಪಾಲು ಹೆಚ್ಚಿನ ಆನಂದವನ್ನೂ, ನೆಮ್ಮದಿಯನ್ನೂ ತುಂಬುವ ಆ  ಒಳ ಸತ್ಯದ ಕಡೆ ಲೋಕವನ್ನೆಲ್ಲ ಸೆಳೆದು ಮನುಕುಲವನ್ನೇ ಪವಿತ್ರಗೊಳಿಸುವ ವಿಶಾಲ ಹೃದಯಾವುಳ್ಳವರಾಗಿದ್ದರು. ಆದ್ದರಿಂದಲೇ ಅವುಗಳ ಅಚ್ಚನ್ನು ಪರ್ವತಗಳು, ನದಿಗಳು, ವಿವಿಧ ಪ್ರಾಂತ್ಯಗಳು ಹೀಗೆ ದೇಶದ ಎಲ್ಲೆಡೆಯಲ್ಲೂ ಒತ್ತಿದರು. ಈ ದೇಶಕ್ಕೆ ಅವರಿಟ್ಟಿರುವ ಹೆಸರೇ ಅವರ ಮನಸ್ಸಿನ ಆಳವನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು.    

'ಭಾ'-ಒಳಬೆಳಗುವ ಪರಂಜ್ಯೋತಿ, ಪ್ರಕಾಶ; ರತ–ಆ ಜ್ಯೋತಿಯಲ್ಲಿ ರಮಿಸುವವರು: ಇಂತಹವರು ವಾಸಿಸುವ ದೇಶ ಎಂಬುದನ್ನು ಸೂಚಿಸುತ್ತದೆ ಭಾರತವೆಂಬ ಹೆಸರು. ಅಷ್ಟೇ ಅಲ್ಲದೆ ಅಂತಹ ಭಾರತರು ಲೋಕದ ಜೀವಿಗಳಿಗೆಲ್ಲ   ಅ ಜ್ಯೋತಿಯಲ್ಲಿ ರಮಿಸಲು ಪುಷ್ಟಿಯನ್ನು ನೀಡಿ ಅತ್ತ ಕೈತೋರಿದ ದೇಶವಿದು.  ಅಂತೆಯೇ ಈ  ದೇಶದ ವಿವಿಧ ಸ್ಥಳಗಳನ್ನು ಕಾಶಿ, ಕಾಂಚೀ, ಜಲಂಧರ ಮುಂತಾಗಿಯೂ, ನದಿಗಳನ್ನು ಗಂಗಾ, ಯಮುನಾ, ಸರಸ್ವತೀ ಮುಂತಾಗಿಯೂ ಹೆಸರಿಸಿದ್ದಾರೆ. ಇವೆಲ್ಲವೂ ಸಹ ಒಳಪ್ರಪಂಚದ ಹೊರ ನಕ್ಷೆಗಳೇ ಆಗಿವೆ. ಇದನ್ನು ಸೂಚಿಸುವ ಕೆಲವು ಉದಾಹರಣೆಗಳನ್ನು ಗಮನಿಸಬಹುದಾಗಿದೆ. 

ಮಹಾಮೇರುವೆಂಬ ಜ್ಞಾನರಜ್ಜು(ಬೆನ್ನು ಹುರಿ)ವಿನ ಉತ್ತುಂಗ ಸ್ಥಾನದಲ್ಲಿ ಪರಮಾತ್ಮನ ಸ್ಥಾನದಿಂದ ಉದ್ಭವಿಸುವ ಜ್ಞಾನಸ್ರೋತಸ್ಸು ಕೆಳಗೆ ಹರಿಯುತ್ತಾ  ಏಳಾಗಿ ಕವಲೊಡೆಯುವುದನ್ನು ತಮ್ಮ ಯೋಗಭೂಮಿಯಲ್ಲಿ ಈ ದೇಶದ ಜ್ಞಾನಿಗಳು ಕಂಡರು. ಹೊರಗೆ ಹಿಮಾಲಯದ ಉತ್ತುಂಗ ಸ್ಥಾನದಿಂದ ಉಗಮವಾಗಿ ಮುಂದೆ ಸಪ್ತಶಾಖೆಯಾಗಿ  ಹರಿಯುವ ನದಿಯು ಒಳಗೆ ಹರಿಯುವ  ಜ್ಞಾನಗಂಗೆಯನ್ನೇ ಹೋಲುವುದನ್ನು ಗುರುತಿಸಿದರು. ಆದ್ದರಿಂದ ಲೋಕಕ್ಕೆ ಒಳಗೆ ಹರಿಯುವ ಜ್ಞಾನಪ್ರವಾಹವನ್ನು ನೆನಪಿಸಲು ಅದರ ಪ್ರತೀಕವಾಗಿ ಕಂಡ ಹೊರ ನದಿಯನ್ನು ಗಂಗಾ ಎಂದು ಹೆಸರಿಸಿದರು.

ತಪೋಭೂಮಿಯಲ್ಲಿ ಸಂಚರಿಸುವಾಗ ಬೆನ್ನುಹುರಿಯ ಒಳಗೆ ಇಡಾ, ಪಿಂಗಳಾ ಎಂಬ ಎರಡು  ನಾಡಿಗಳು ಪ್ರಾಣಸಂಚಾರಕ್ಕೆ ಎಡೆಯಾಗಿರುವುದನ್ನೂ, ಅವೆರಡರ ಮಧ್ಯೆ ಇರುವ  ಸುಷುಮ್ನೆ(ಸರಸವತೀ)ಯೆಂಬ  ಮೂರನೆಯ ನಾಡಿಯನ್ನೂ ಗುರುತಿಸಿದರು. ಅವು ಮೂರೂ ಸೇರುವ ಪವಿತ್ರವಾದ-ತ್ರಿವೇಣಿ ಸಂಗಮಸ್ಥಾನವನ್ನೂ ಗುರುತಿಸಿದರು. ಅತ್ತ ಕಡೆ ಲೋಕದ ಗಮನವನ್ನು ಸೆಳೆಯಲು ಭಾರತದಲ್ಲಿ ಪ್ರಕೃತಿಯೇ ಒದಗಿಸಿಕೊಟ್ಟಿರುವಂತಹ    ಗಂಗಾ-ಯಮುನಾ-ಸರಸ್ವತಿಗಳ ಸಂಗಮಸ್ಥಾನವನ್ನು ಪವಿತ್ರವಾದ ತ್ರಿವೇಣೀಸಂಗಮವೆಂದು ಸಾರಿದರು.

ಇಡಾ ಭಾಗೀರಥೀ  ಪ್ರೋಕ್ತಾ ಪಿಂಗಳಾ ಯಮುನಾ ನದೀ  

ತಯೋರ್ಮಧ್ಯೇ ಸ್ಥಿತಾ ನಾಡೀ ಸುಷುಮ್ನಾಖ್ಯಾ ಸರಸ್ವತೀ

ಎಂಬ ವಾಣಿಯು ಇದನ್ನೇ ಸಾರುತ್ತಿದೆ.

ಮಹರ್ಷಿಗಳು ಯೋಗಮಾರ್ಗದಲ್ಲಿ ಸಾಗುತ್ತ ಜ್ಞಾನರಜ್ಜುವಿನ ಉನ್ನತಶಿಖರೋಪಾದಿಯ ಸ್ಥಾನದಲ್ಲಿ ಪಾರ್ವತೀ-ಪರಮೇಶ್ವರರನ್ನು ಸಾಕ್ಷಾತ್ಕರಿಸಿಕೊಂಡರು. ಆ ಊರ್ಧ್ವಸ್ಥಾನಕ್ಕೆ ಏರಲು ಪುಷ್ಟಿಯನ್ನು ನೀಡುತ್ತಾ ಒಳ ಔನ್ನತ್ಯವನ್ನು ಸೂಚಿಸುವ ಅತ್ಯುನ್ನತವಾದ ಶಿಖರವೊಂದನ್ನು ಹೊರಗೆ ಕಂಡಾಗ ಅದನ್ನು 'ಗೌರೀಶಂಕರ ಶಿಖರ' ಎಂಬುದಾಗಿ ಹೆಸರಿಸಿದರು. ಯಾವ ಸ್ಥಳವು ಯೋಗಮಾರ್ಗದಲ್ಲಿ ಹರಿಯಮಾರ್ಗಕ್ಕೂ ಅಂತೆಯೇ ಹರನಮಾರ್ಗಕ್ಕೂ ದ್ವಾರವಾಗಿದೆಯೋ ಆ ಸ್ಥಾನಕ್ಕೆ ಜೀವಿಯನ್ನು ಏರಿಸಬಲ್ಲ ಹೊರಗಡೆಯ ಸ್ಥಾನವೊಂದನ್ನು ಗುರುತಿಸಿದಾಗ ಅದನ್ನು ಹರಿದ್ವಾರ-ಹರದ್ವಾರ ಎಂಬುದಾಗಿ ಕರೆದರು.  ಮಾನಸಸರೋವರ, ಮಣಿಕರ್ಣಿಕಾ ಮುಂತಾದ ಹೆಸರುಗಳು ಸಹ ಒಳ ಸತ್ಯಗಳ ನಕ್ಷೆಗಳಾಗಿಯೇ ಗುರುತಿಸಲ್ಪಟ್ಟಿವೆ.   

      ಹೀಗೆ ಭಾರತದೇಶದಲ್ಲಿ ಪ್ರಕೃತಿಯೇ ಒದಗಿಸಿರುವ ಸನ್ನಿವೇಶಗಳಲ್ಲಿ ಅಂತರ್ದರ್ಶನದ ಗುರುತಾಗಿರುವವುಗಳನ್ನು ಒಳ ಸತ್ಯಗಳ ಹೆಸರಿನಿಂದಲೇ ಕರೆದು ಜನರನ್ನು ಅತ್ತಕಡೆ ಸೆಳೆಯುವ  ಉಪಾಯವನ್ನು ಮಾಡಿರುವರು.

      ಭಾರತದ ಪುಣ್ಯನದಿಗಳಾಗಲೀ ಪುಣ್ಯಕ್ಷೇತ್ರಗಳಾಗಲೀ ಒಳಸತ್ಯಗಳ ಪ್ರತೀಕಗಳಾಗಿರುವುದಷ್ಟೇ ಅಲ್ಲ. ಅ ನದಿಗಳಲ್ಲಿ  ವಿಧಿಪೂರ್ವಕವಾಗಿ ಅವಗಾಹನ ಮಾಡುವವರನ್ನು, ತೀರ್ಥಕ್ಷೇತ್ರಗಳಿಗೆ  ಯಾತ್ರೆಯನ್ನು ಕೈಗೊಂಡು ಅಲ್ಲಿನ ದೇವತಾಮೂರ್ತಿಗಳನ್ನು ವಿಧಿವತ್ತಾಗಿ ದರ್ಶನ ಮಾಡುವವರ ಮನಸ್ಸನ್ನೂ ಊರ್ಧ್ವಮುಖವಾಗಿ-ದೇವಭಾವಕ್ಕೇರಿಸುವ ಶಕ್ತಿಯಿಂದ ಕೂಡಿವೆ. ಇವು ಭೂಗುಣದಿಂದಲೂ, ಅನೇಕಕಾಲಗಳಿಂದ ಅನೇಕ ಋಷಿ-ಮಹರ್ಷಿಗಳ, ಸಾಧು-ಸಂತರ ಅವಗಾಹನ, ದರ್ಶನಗಳಿಂದ ತೀರ್ಥತ್ತ್ವವನ್ನು ಪಡೆದಿವೆಯೆಂಬುದು    

ಜ್ಞಾನಿಗಳ ಅಭಿಪ್ರಾಯವಾಗಿದೆ. 'ತೀರ್ಥೀಕುರ್ವಂತಿ ತೀರ್ಥಾನಿ ತೀರ್ಥಭೂತಾಹಿ ಸಾಧವ:' ಎಂಬ ಆರ್ಷವಾಣಿಯು ಇದನ್ನೇ ಸಾರುತ್ತದೆ.

      ಮೇಲಿನ ವಿಚಾರಗಳು ಬರಿಯ ಮಾತುಗಳಾಗಿ ಉಳಿಯದಂತೆ ಕ್ಷೇತ್ರಗಳ, ನದೀತೀರ್ಥಗಳ ಪಾವಿತ್ರ್ಯವನ್ನು ತಮ್ಮ ನಾಡೀವಿಜ್ಞಾನದ ದ್ವಾರ ನಿರೂಪಿಸಿದವರು ಶ್ರೀರಂಗಮಹಾಗುರುಗಳು. ತೀರ್ಥಗಳೂ-ಕ್ಷೇತ್ರಗಳೂ ನಮ್ಮ ಮನಸ್ಸಿನ ಮೇಲೆ ಮಾಡುವ ಅದ್ಭುತ ಪರಿಣಾಮಗಳನ್ನೂ ಸಹ ಈ ವಿಜ್ಞಾನದ ಮೂಲಕ ಅಳೆದು ತೋರಿಸುತ್ತಿದ್ದರು. ಯೋಗಭೂಮಿಯಲ್ಲಿ ಸಂಚರಿಸಿ ಒಳಸತ್ಯಗಳನ್ನು ಸಾಕ್ಷಾತ್ಕರಿಸಿಕೊಂಡಿರುವ ಸುಸಂಸ್ಕಾರಿಗಳು ಇಂದೂ ಸಹ ಇವುಗಳ ಪ್ರಭಾವವನ್ನು ಗುರುತಿಸ ಬಲ್ಲರು ಎಂಬುದು ಅವರ ನಿಲುವಾಗಿತ್ತು.

ಲೌಕಿಕಜೀವನದ ಏಳಿಗೆಗೆ ಬೇಕಾದ ಸಂಪತ್ತುಗಳಿಂದ ಮಾತ್ರವೇ ಅಳೆಯದೆ  ಜೀವನವನ್ನು ಸಾರ್ಥಕಗೊಳಿಸುವ ದೈವಿಕ-ಆಧ್ಯಾತ್ಮಿಕಸಂಪತ್ತುಗಳ ದೃಷ್ಟಿಯಿಂದಲೂ ಅಳೆದಾಗ  ಭಾರತದ ಹಿರಿಮೆಯು ಅರಿವಾಗುವುದರಲ್ಲಿ ಸಂಶಯವಿಲ್ಲ.  

      ಇತರ ದೇಶಗಳಲ್ಲಿ ಎಲ್ಲೂ ಮೂರು ನದಿಗಳು ಸಂಗಮಿಸುವುದಿಲ್ಲವೇ? ಪಾವನಗೊಳಿಸುವ ಸ್ಥಳಗಳು ಬೇರೆಲ್ಲೂ ಇಲ್ಲವೇ? ಎಂಬ ಪ್ರಶ್ನೆಗಳು ತರ್ಕಬದ್ಧವಾಗಿವೆ. ವಿದೇಶಗಳಲ್ಲಿ  ಇಂತಹ ಸನ್ನಿವೇಶಗಳು ಇಲ್ಲ ಎಂಬ ಅಭಿಪ್ರಾಯವಲ್ಲ. ಪ್ರಕೃತಿಯಲ್ಲಿ ಸೃಷ್ಟಿಸಹಜವಾಗಿರುವ ಪಾವಿತ್ರ್ಯವನ್ನೂ, ದೈವಿಕ-ಆಧ್ಯಾತ್ಮಿಕ ಸತ್ಯಗಳ ಹೋಲಿಕೆಯನ್ನೂ ಗುರುತಿಸಿ, ಅದನ್ನು ಲೋಕಕ್ಕೆ ಸಾರುತ್ತ  ಜನಮನವನ್ನು  ಅತ್ತ ಸೆಳೆಯುವ ಪ್ರಯತ್ನವು ಭಾರತದಲ್ಲಿ ನಡೆದಿರುವಂತೆ ಇನ್ನೆಲ್ಲೂ  ನಡೆದಿರುವುದು ಇತಿಹಾಸಗಳಲ್ಲಿ ಕಂಡುಬರುವುದಿಲ್ಲ ಎಂಬ ಬಲ್ಲವರ ಮಾತನ್ನು ಇಲ್ಲಿ ಸ್ಮರಿಸುತ್ತೇವೆ.

      ಹೀಗೆ ಜೀವನದಲ್ಲಿ ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಿ ಧನ್ಯರಾಗಲು ಬೇಕಾದ ಪ್ರಕೃತಿಸಂಪತ್ತುಗಳನ್ನೂ, ಜ್ಞಾನಿಗಳು ರೂಪಿಸಿದ ರಾಷ್ಟ್ರವ್ಯವಸ್ಥೆಗಳನ್ನು   ಭಾರತದೇಶವು  ಹೊಂದಿದೆ. "ತಮ್ಮ ಸುಕೃತಗಳಿಂದ ಸ್ವರ್ಗಕ್ಕೇರಿದವರೂ ಕರ್ಮಫಲ ಮುಗಿದು ಮತ್ತೆ ಭೂಮಿಗೆ ಬರುವಾಗ ಭಾರತದಲ್ಲೇ ಜನ್ಮತಾಳೆಯುವಂತಾಗಲಿ ಎಂದು ಆಶಿಸುತ್ತಾರೆ. ದೇವತೆಗಳೂ ಸಹ ಪುರುಷಭಾವದಿಂದ ಭಾರತದಲ್ಲಿ ಜನಿಸಲು ಇಚ್ಛಿಸುವರು" ಎಂದು ಸಾರುವ ಗೀತವೊಂದು ಹೀಗಿದೆ.

ಗಾಯಂತಿ ದೇವಾ: ಕಿಲ ಗೀತಕಾನಿ  ಧನ್ಯಾಸ್ತು ತೇ ಭಾರತ ಭೂಮಿಭಾಗೇ  

ಸ್ವರ್ಗಾಪವರ್ಗಾಸ್ಪದ ಮಾರ್ಗಭೂತೇ ಭವಂತಿಭೂಯ: ಪುರುಷಾ: ಸುರತ್ವಾತ್  

        ಆದ್ದರಿಂದ ಜನ್ಮವಿತ್ತ ತಾಯಿಯು ಮಾತ್ರವಲ್ಲ, ಜನ್ಮಕ್ಕೆಡೆಯಾದ ತಾಯಿನಾಡು ಭಾರತವೂ ಸಹ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎಂಬ ಹೆಮ್ಮೆಯ ಮಾತು ಅತಿಶಯೋಕ್ತಿ ಅಲ್ಲ ಎಂಬುದಾಗಿ ಧೈರ್ಯವಾಗಿ ಸಾರಬಹುದಾಗಿದೆ. ಈ ಕಾರಣಕ್ಕಾಗಿ ನಮ್ಮ ಭಾರತವನ್ನು ಪ್ರೀತಿಸೋಣ ಎಂಬುದು ಮಹರ್ಷಿಗಳ ರಾಷ್ಟ್ರಪ್ರೇಮದ ತಿರುಳಾಗಿದೆ.

ಪ್ರೀತಿಯಿರುವೆಡೆಯಲ್ಲಿ ನಮ್ಮದಾದ ಜವಾಬ್ದಾರಿಯಿರುವುದು ಸಹಜವೇ ಆಗಿದೆ. ಭಾರತವನ್ನು ಪ್ರೀತಿಸುವುದು ಭಾವುಕತೆಯ ವಿಚಾರವಷ್ಟೇ ಆಗದೆ ಅದರ ಪಾವಿತ್ರ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆಯನ್ನೂ ತಿಳಿಯಬೇಕಾಗಿದೆ.   

ಇಲ್ಲಿ ಶ್ರೀರಂಗಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ. ಹೊರಗಡೆಯಿಂದ ನದಿಗಳ-ತೀರ್ಥಕ್ಷೇತ್ರಗಳ-ದೇವಾಲಯಗಳ ಶುಚಿತ್ವವನ್ನು ಉಳಿಸಿ-ರಕ್ಷಿಸಿಕೊಳ್ಳುವುದು ಒಂದಂಶವಾದರೆ ಮತ್ತೊಂದು ಅವುಗಳ ಪಾವಿತ್ರ್ಯದ ಬಗೆಗೆ ಪ್ರಜ್ಞೆಯನ್ನು ಮೂಡಿಸುವುದು. ಎರಡನೆಯ ಕೆಲಸಕ್ಕೆ ಜ್ಞಾನಿಗಳೇ ಅಧಿಕಾರಿಗಳಾಗಿದ್ದರೂ ಮೊದಲನೆಯದು ಎಲ್ಲರಪಾಲಿನ ಜವಾಬ್ದಾರಿಯಾಗಿದೆ. ಸುದೀರ್ಘಕಾಲದಿಂದ ಮರೆಯಾಗಿದ್ದ ಹೊರರಕ್ಷಣೆಯ ಪ್ರಜ್ಞೆಯು ಈಗ  ಮೂಡಿಬಂದಿದೆ. ಇದರಿಂದಲೇ ಗಂಗಾನದಿ-ಕಾಶೀಕ್ಷೇತ್ರಗಳ ಶುದ್ಧೀಕರಣ ಕೈಗೊಳ್ಳಲಾಗಿ ಅವುಗಳ ಪಾವಿತ್ರ್ಯವನ್ನು ಉಳಿಸುವ ಕಾರ್ಯವು  ಸಂಪನ್ನವಾಗುತ್ತಿರುವುದು ಅತ್ಯಂತ ಹರ್ಷದ ಸಂಗತಿ. ಈ ಹೊರ ಪಾವಿತ್ರ್ಯವು ಒಳ ಪ್ರಸನ್ನತೆಗೆ ಸಹಕಾರಿಯಾಗಲಿ ಎಂದು ಆಶಿಸೋಣ.  ಇಂತಹ ಪವಿತ್ರಭಾರತಕ್ಕೆ - ಮಹರ್ಷಿಭಾರತಕ್ಕೆ ಸದಾ ನಮ್ಮ ನಮನವಿರಲಿ.  

ಸೂಚನೆ: 10/2/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.