Tuesday, February 22, 2022

ಭಗವಂತನೊಬ್ಬ ಭಾವನೆ ಹಲವು (Bhagavanthanobba, Bhaavane Halavu)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)ಬೃಂದಾವನದಿಂದ ಮಥುರೆಗೆ ಆಗಮಿಸುತ್ತಿರುವ ಶ್ರೀಕೃಷ್ಣನನ್ನು, ವೃದ್ಧರು ಗಜೇಂದ್ರನನ್ನು ಉದ್ಧರಿಸಿದ ನಾರಾಯಣ ಎಂಬುದಾಗಿಯೂ, ಯುವತಿಯರು ಲಕ್ಷ್ಮೀಕಾಂತ ಎಂಬುದಾಗಿಯೂ, ಬಾಲಕರು ನಮ್ಮಂತೆಯೇ ಸಾಧಾರಣ ಬಾಲಕ ಎಂಬಿತ್ಯಾದಿಯಾಗಿ ತಮ್ಮ ಬುದ್ಧಿ ಸಾಮರ್ಥ್ಯಕ್ಕನುಗುಣವಾಗಿ ನಾನಾ ವಿಧವಾಗಿ ಭಾವಿಸುತ್ತಾರೆ. ಅಂತೆಯೇ ಯಶೋದೆಯು "ಪರಮಾತ್ಮನನ್ನು ತನ್ನ ಮುದ್ದಿನ ತುಂಟ ಕಂದ" ಎಂಬುದಾಗಿ ಭಾವಿಸಿ ವಾತ್ಸಲ್ಯದಿಂದ ಲಾಲಿಸಿ ಪಾಲಿಸುತ್ತಾಳೆ, ದೇವಕಿಯ ಕಣ್ಣು ತಪಸ್ಯೆಯಿಂದ ಪರಿಪಕ್ವವಾದ್ದರಿಂದ ಅವಳು ಶ್ರೀಕೃಷ್ಣನ ಮೂಲ ಸ್ವರೂಪವನ್ನೇ ಕಂಡು 'ಸಾಕ್ಷಾತ್ ಆಧ್ಯಾತ್ಮ ದೀಪ' ಎಂಬುದಾಗಿ ಸ್ತುತಿಸುತ್ತಾಳೆ. ವಸುದೇವನ ಕಣ್ಣಿಗೆ ಪರಮಾತ್ಮನು ಶಂಖ ಚಕ್ರ ಗಧಾಧರನಾಗಿ ಗೋಚರಿಸುತ್ತಾನೆ, ಕೃಷ್ಣನಲ್ಲಿ ತಾದಾತ್ಮ್ಯಭಾವ ಹೊಂದಿದ ಗೋಪಿಯರಿಗೆ ಅವನೇ ಸರ್ವಸ್ವ. ಅರ್ಜುನನು ಭಗವಂತನನ್ನು ಆಪ್ತ ಮಿತ್ರನೆಂದೇ ಭಾವಿಸಿದವನು, ಹೆಜ್ಜೆ ಹೆಜ್ಜೆಗೂ ತನ್ನನ್ನು ರಕ್ಷಿಸಿದ ದ್ರೌಪದಿಗೆ ಪರಮಾತ್ಮನು ಆಪ್ತರಕ್ಷಕನೇ ಹೌದು, ವಿದುರ ಭೀಷ್ಮಾದಿಗಳು ಕೃಷ್ಣನನ್ನು ಸಾಕ್ಷಾತ್ ಪರಮಾತ್ಮನೆಂದರಿತು ಪೂಜಿಸಿದವರು, ಕಲಿಯುಗದಲ್ಲಿಯೂ ಸಹ ಮೀರಾಬಾಯಿ, ಗೋದಾದೇವಿ(ಆಂಡಾಳ್)ಯಂತಹ ಭಕ್ತ ಶಿರೋಮಣಿಯರು ಭಗವಂತನನ್ನೇ ಪತಿಯೆಂದು ಭಾವಿಸಿ ಅವನಲ್ಲಿಯೇ ಅನುರಕ್ತಿಯನ್ನು ಹೊಂದಿದವರು, ಹೀಗೆ ಭಕ್ತರು ಭಗವಂತನನ್ನು ಪರಿಪರಿಯಾಗಿ ಭಾವಿಸಿದರೆ, ದುರ್ಬುದ್ಧಿಯ ದುರ್ಯೋಧನ ಶಿಶುಪಾಲ ಮುಂತಾದವರು ಅಜ್ಞಾನದ ಕಾರಣದಿಂದಾಗಿ ಭಗವಂತನನ್ನು ಗೊಲ್ಲ, ಕಪಟಿ, ಮಾಯಾವಿ, ಸ್ತ್ರೀಲೋಲ ಇತ್ಯಾದಿಯಾಗಿ ನಿಂದಿಸುತ್ತಾರೆ. 


ಅಮೂಲ್ಯವಾದ ಇಂದ್ರನೀಲಮಣಿಯನ್ನು ಗಾಜಿನ ಚೂರೆಂದು ಭಾವಿಸುವಂತೆ, ಒಬ್ಬನೇ ಭಗವಂತನು ತಮ್ಮ ತಮ್ಮ ಪ್ರಕೃತಿ ವೈಧರ್ಮ್ಯಕ್ಕೆ ಅನುಗುಣವಾಗಿ ಜನಗಳಿಂದ ಪರಿಪರಿಯಾಗಿ ಭಾವಿಸಲ್ಪಡುತ್ತಾನೆ. ಆದರೆ ಅವನ ಪರಿಪೂರ್ಣ ಸ್ವರೂಪವನ್ನರಿತು ಅಂತೆಯೇ ಭಾವಿಸಿದವರು ಅತ್ಯಂತ ವಿರಳ. ನಿತ್ಯ ಜೀವನದಲ್ಲಿಯೂ ಕೂಡ ಒಬ್ಬ ವ್ಯಕ್ತಿಯು ಎಲ್ಲರಿಂದಲೂ ಒಂದೇ ರೀತಿಯಾಗಿ ಭಾವಿಸಲ್ಪಡುವುದಿಲ್ಲ, ಆ ವ್ಯಕ್ತಿಯೊಡಗಿನ ಒಡನಾಟ, ಅವನೊಂದಿಗಿನ ಸಂಬಂಧ, ಅವನ ಬಗ್ಗೆ ಏಕದೇಶೀಯ ನೋಟ ಕೆಲವೊಮ್ಮೆ ಪೂರ್ವಗ್ರಹ ಪೀಡಿತ ದೃಷ್ಟಿಯ ಕಾರಣ-ಇವುಗಳಿಂದಾಗಿ ಅನೇಕ ವಿಧವಾಗಿ ಭಾವಿಸಲ್ಪಡುವುದಕ್ಕೆ ಅವಕಾಶವಿರುತ್ತದೆ. ಒಬ್ಬರಿಗೆ ಅತ್ಯಂತ ಗೌರವಕ್ಕೆ ಪಾತ್ರನಾದ ವ್ಯಕ್ತಿ ಇನ್ನೊಬ್ಬರಿಂದ ನಿಂದಿಸಲ್ಪಡಬಹುದು ಅಥವಾ ಇದಕ್ಕೆ ವಿಪರೀತವೂ(ವಿರುದ್ಧ ) ಆಗಬಹುದು, ಒಬ್ಬ ವ್ಯಕ್ತಿಯ ನೈಜ ಸ್ವರೂಪವನ್ನು ಎಲ್ಲರಿಂದಲೂ ಅರಿಯಲು ಅಸಾಧ್ಯವೇ ಸರಿ. ಗೀತಾಚಾರ್ಯನು ಧರ್ಮಕ್ಕೆ ಗ್ಲಾನಿಯುoಟಾಗಿ ಅಧರ್ಮದ ಪ್ರಭಾವ ಹೆಚ್ಚಾದಾಗ, ಅಧರ್ಮವನ್ನು ಅಳಿಸಿ ಧರ್ಮವನ್ನು ಪುನರ್ಪ್ರತಿಷ್ಠಾಪಿಸಲು ಭುವಿಯಲ್ಲಿ ಅವತರಿಸುತ್ತೇನೆ, ಎಂದು ಹೇಳಿರುವಂತೆ ರಾಮ ಕೃಷ್ಣಾದಿ ಪ್ರಸಿದ್ಧ ಹತ್ತು ಅವತಾರಗಳನ್ನಷ್ಟೇ ಅಲ್ಲದೇ ಕಾಲಕಾಲಕ್ಕೆ ಬಂದೊದಗುವ ಅಧರ್ಮವನ್ನು ಅಳಿಸಿ ಧರ್ಮಸೇತುವನ್ನು ಕಟ್ಟಲು ಪರಂಜ್ಯೋತಿಯು ಪುರುಷಾಕಾರವನ್ನು ತಾಳಿ ಧರೆಗಿಳಿದು ಬಂದಾಗ ಕೇವಲ ಶುದ್ಧಾತ್ಮರು ಅವನನ್ನು ಭಗವಂತನೆಂದು ಭಾವಿಸಿ, ನಂಬಿ ಉದ್ಧಾರವಾಗುತ್ತಾರೆ. "ಭಗವಂತನು ಮನುಷ್ಯ ಮಾತ್ರನಾಗಿ ಬಂದರೂ ತನ್ನ ದೈವೀಧರ್ಮದೊಡನೆ ಬಂದಿರುತ್ತಾನೆ. ಅದನ್ನು ಅರ್ಥಮಾಡಿಕೊಂಡು, ಅನುಸರಿಸಿದರೆ ಅವನ ಪೂರ್ಣತೆ ತಿಳಿಯುತ್ತದೆ. ಇಲ್ಲದಿದ್ದರೆ ನಮ್ಮಂತೆಯೇ ಅವನು ಎಂದುಕೊಳ್ಳಬಹುದು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.


ಸೂಚನೆ: 22/2/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.