Thursday, February 3, 2022

ಸಂಸ್ಕೃತಿಮರದ ಬುಡಮೇಲಾದ ಸತ್ಯ (Sanskrtimarada Budamelada Satya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಒಂದು ಮರವು ಚೆನ್ನಾಗಿರಬೇಕಾದರೆ ಏನು ಮಾಡಬೇಕು? "ಬುಡಕ್ಕೇ ಕೊಡಲಿ ಏಟು ಕೊಡಬೇಕು" - ಎಂದು ಯಾರಾದರೂ ಹೇಳಿಯಾರೇ? ಮೂಲವು ಚೆನ್ನಾಗಿರಬೇಕು, ಮೂಲಕ್ಕೆ ಪೋಷಣೆಯಾಗಬೇಕು, ಅದುವೇ ಮರವು ಚೆನ್ನಾಗಿ ಬೆಳೆಯುವಂತೆ ಮಾಡುವಂತಹುದು. ಬೇರನ್ನೇನಾದರೂ ಕತ್ತರಿಸಿದರೆ ಮರವೂ ಇರದು, ಕೊಂಬೆಗಳೂ ಇರವು :"ಛಿನ್ನೇ ಮೂಲೇ ನೈವ ವೃಕ್ಷಂ ನ ಶಾಖಾಃ!" 

ಒಂದು ಮರದಲ್ಲಿ ಹಣ್ಣು ಬಿಡಲಿಲ್ಲವೆಂದರೆ, ಮಾರುಕಟ್ಟೆಯಿಂದ ಹಣ್ಣನ್ನು ತಂದು ಅಂಟಿಸುವುದುಂಟೇ? ಮರವಾದರೂ ಅದನ್ನು ತನ್ನದೆಂದು ಮಾಡಿಕೊಂಡೀತೇ? ಮರದ ಜೀವರಸವು ಅದಕ್ಕೆ ಹರಿದೀತೆ? ಬದಲಾಗಿ, ಮೂಲಕ್ಕೆ - ಎಂದರೆ ಬೇರಿಗೆ, ಕಾಲಕಾಲಕ್ಕೆ ಜಲಧಾರೆಯನ್ನೆರೆಯುತ್ತಿದ್ದರೆ, ಅದು ತಾನಾಗಿಯೇ ಪುಷ್ಪ-ಫಲಗಳನ್ನು ಯುಕ್ತವಾದ ಕಾಲದಲ್ಲಿ ಹೊಮ್ಮಿಸುವುದು.

ಸಂಸ್ಕೃತಿಯೆಂಬುದೂ ಒಂದು ವೃಕ್ಷ. ಅದು ಚೆನ್ನಾಗಿರಬೇಕಾದರೂ ಅದರ ಬುಡವನ್ನು ಕಾಪಾಡಬೇಕು. ಮೂಲವು ಸುಪುಷ್ಪವಾಗಿದ್ದರೆ ಅದರ ಸುಪುಷ್ಪ-ಫಲಗಳು - ಎಂದರೆ ಕಲೆ-ವಿದ್ಯೆಗಳು - ಸೊಂಪಾಗಿ ಬೆಳೆಯುವುವು, ತಮ್ಮ ಕಂಪನ್ನೂ ರಸವನ್ನೂ ಹೊರಹೊಮ್ಮಿಸುವುವು.


ಋಷಿಸಂಸ್ಕೃತಿ

ಭಾರತೀಯ ಸಂಸ್ಕೃತಿಯೆಂದರೆ ಋಷಿಗಳ ಸಂಸ್ಕೃತಿಯೇ ಸರಿ. ಬೇರೂರಿದ್ದ ಜಾನಪದಾಂಶಗಳನ್ನು ಚೆದುರಿಸದೆ, ಕ್ಷೀಣಗೊಳಿಸದೆ, ಅವೂ ಕೂಡ ಜೀವನದ ಉನ್ನತ ಧ್ಯೇಯಗಳಿಗೆ – ಎಂದರೆ ವ್ಯಕ್ತಿಹಿತ, ಸಮಾಜಹಿತಗಳಿಗೆ - ಪೋಷಕವಾಗುವಂತೆಯೇ ಅವರು ಬೆಳೆಸಿದರು. ಇದುವೇ ಭಾರತೀಯ ಸಂಸ್ಕೃತಿಯಲ್ಲಿಯ ಅಪಾರವೈವಿಧ್ಯದೊಂದಿಗಿನ ಏಕಸೂತ್ರತೆಗೆ ಕಾರಣವೆನ್ನಬಹುದು.

ಋಷಿಸಂಸ್ಕೃತಿಯು ಬೆಳೆದುದು ಹೇಗೆ? ಎಲ್ಲಿ? ಋಷಿಗಳ ತಪೋವನಗಳಿದ್ದುದು ಅರಣ್ಯಗಳಲ್ಲಿ. ನಮ್ಮ ಆರ್ಷಸಾಹಿತ್ಯವೆಲ್ಲವೂ ವೃಕ್ಷರೂಪಕಗಳಿಂದ ತುಂಬಿರುವುದೇ: ವೇದಗಳ ಒಂದು ಮುಖ್ಯಭಾಗದ ಹೆಸರೇ "ಆರಣ್ಯಕ"; ವೇದಗಳಲ್ಲಿ "ಶಾಖೆ"ಗಳುಂಟು. ವೇದಗಳಲ್ಲೇ ಕರ್ಮ"ಕಾಂಡ"-ಜ್ಞಾನ"ಕಾಂಡ"ಗಳುಂಟು; ಮಂತ್ರ"ಪುಷ್ಪ"ವೂ ಉಂಟು. ರಾಮಾಯಣದಲ್ಲೂ ಏಳು "ಕಾಂಡ"ಗಳಿವೆ. ಮಹಾಭಾರತದಲ್ಲಿ ಹದಿನೆಂಟು "ಪರ್ವ"ಗಳಿವೆ. (ಪರ್ವವೆಂದರೆ ಗಿಡ-ಮರಗಳ ಗಿಣ್ಣು). ಎಂತಹ ಅರಮನೆಯಾದರೂ ಭವನದ ಪಕ್ಕದಲ್ಲೇ ಉಪವನ. ರಾಕ್ಷಸರಿಗೂ ಪ್ರಕೃತಿಪರಿಸರದ ಪ್ರೀತಿಯಿತ್ತು!: ಶೋಕತಪ್ತಳಾದ ಸೀತೆಯನ್ನು ರಾವಣನಿಟ್ಟದ್ದೂ ಅಶೋಕ'ವನ'ದಲ್ಲಿಯೇ ಅಲ್ಲವೇ!

ವನವೆಂದರೆ ಏಕಾಂತ. ಜನಸಂದಣಿಯಲ್ಲಿ ಸಾಗೀತೇ ತಪಸ್ಸು? ಗ್ರಾಮ-ಪಟ್ಟಣಗಳಲ್ಲಿದ್ದೂ ಋಷಿಜೀವನವನ್ನು ನಡೆಸಿದ ಮಂದಿ ಇಲ್ಲವೆಂದಲ್ಲ. "ನನ್ನನ್ನು ಋಷಿಗಳಿಗೆ ಸಮಾನನೆಂದು ತಿಳಿಯಿರಿ" - ಎಂದು ಅರಸನಾದ ಶ್ರೀರಾಮಚಂದ್ರನೇ ಉದ್ಗರಿಸಲಿಲ್ಲವೇ?: "ವಿದ್ಧಿ ಮಾಮ್ ಋಷಿಭಿಸ್ ತುಲ್ಯಮ್"

ಗರ್ಭಿಣಿಯಾದ ಸೀತೆಯ ಬಯಕೆಯಾದರೂ ತಪೋವನಗಳನ್ನು ಸಂದರ್ಶಿಸಬೇಕೆಂದೇ! ಜೀವನದ ಕೊನೆಯ ಭಾಗವನ್ನವಳು ನೆಮ್ಮದಿಯಾಗಿ ಕಳೆದುದೂ ತಪೋವನದಲ್ಲೇ. ರಾಜಪುತ್ರರಾದ ಲವ-ಕುಶರ ಜನನವೂ, ಗಾನಕಲೆ-ಧನುರ್ವಿದ್ಯೆಗಳನ್ನೂ ಒಳಗೊಂಡ ವೇದವಿದ್ಯಾಭ್ಯಾಸವೂ ನೆರವೇರಿದುದೂ ವಾಲ್ಮೀಕಿಮಹರ್ಷಿಗಳ ತಪೋವನದಲ್ಲೇ. ಆ ಋಷಿಗಳು ಬರೆದುದೇ ರಸ್ಯ ಆದಿಕಾವ್ಯ. ಜನಸಾಮಾನ್ಯರ ವಿಶ್ವಕೋಶವೆನಿಸುವ ಮಹಾಭಾರತ-ಪುರಾಣಗಳನ್ನು ಬರೆದ ವ್ಯಾಸರೂ ಋಷಿಗಳೇ. ರಾಮಾಯಣದಲ್ಲಿ (ಮೂರನೆಯದಾದ) ಅರಣ್ಯಕಾಂಡವಿದ್ದರೆ, ಮಹಾಭಾರತದಲ್ಲಿಯೂ (ಮೂರನೆಯದಾದ) ಅರಣ್ಯಪರ್ವವಿರುವುದೇ. ವನವಾಸದ ಹನ್ನೆರಡೋ ಹದಿನಾಲ್ಕೋ ವರ್ಷಗಳಲ್ಲಿ ಋಷಿಸಂಗದಿಂದ ಬಂದ ಬೋಧವು, ಧರ್ಮಮಯವಾದ ರಾಜ್ಯಭಾರವನ್ನು ರಾಮ-ಯುಧಿಷ್ಠಿರರು ಮಾಡಲು ಆಕರವಾಯಿತು. (ತತ್ತ್ವಜ್ಞಾನಿಗಳು ರಾಜರಾಗಬೇಕು ಅಥವಾ ರಾಜರು ತತ್ತ್ವಜ್ಞರಾಗಬೇಕು; ಇಲ್ಲದಿದ್ದಲ್ಲಿ ಅತ್ತ ಅಧಿಕಾರದ ದುರುಪಯೋಗವೂ ತಪ್ಪದು; ಇತ್ತ ಜನಗಳಿಗೆ ಸುಖವೆಂಬುದೂ ದಕ್ಕದು- ಎಂಬುದು ಪ್ಲೇಟೋವಿನ ಕೊರಗಾಗಿತ್ತು; ಆದರೆ ಅವನ ಜನ್ಮಕ್ಕೆ ಶತಮಾನಗಳ  ಮುಂಚೆಯೇ ಭಾರತದಲ್ಲಿ ಅದೊಂದು ವಾಸ್ತವಸಾಧನೆಯೇ ಆಗಿತ್ತು!).

ಧರ್ಮತರುವಿನ ಬೀಜವೇ ರಾಮನಾಮ: "ಬೀಜಂ ಧರ್ಮದ್ರುಮಸ್ಯ"; ಯುಧಿಷ್ಠಿರನು ಸಾಕ್ಷಾತ್ ಧರ್ಮವೃಕ್ಷವೇ: "ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ" – ಎಂಬ ಉಕ್ತಿಗಳಿವೆ. ಕಾವ್ಯ-ನಾಟ್ಯಗಳಾಗಲಿ, ಚಿತ್ರ-ಶಿಲ್ಪಗಳಾಗಲಿ, ಹರಿಕಥೆ-ಗಮಕವಾಚನಗಳಾಗಲಿ, ಯಕ್ಷಗಾನ-ಬಯಲುನಾಟಕಗಳಾಗಲಿ - ಮೈತಾಳಿದ್ದೇ ಈ ಧರ್ಮಪುರುಷರ ನಡೆ-ನುಡಿಗಳಿಗೆ ಕನ್ನಡಿ ಹಿಡಿಯಲೆಂದು! 'ರಾಮೋ ವಿಗ್ರಹವಾನ್ ಧರ್ಮಃ': ಧರ್ಮವೇ ಮೈತಾಳಿದರೆ ಅದುವೇ ರಾಮ; "ಕೃಷ್ಣಂ ಧರ್ಮಂ ಸನಾತನಂ": ಕೃಷ್ಣನೆಂದರೆ ಸನಾತನವಾದ ಧರ್ಮವೇ. ಹೀಗೆ ವಿದ್ಯೆ-ಕಲೆಗಳಿಗೆ ಜೀವಾತುವಾದುದು ಧರ್ಮವೇ. ಇನ್ನು ಶಿವ-ಪಾರ್ವತಿಯರೂ ತಪೋಮಯರೇ: ಹಿಮಾಲಯದ ತಪೋವನಗಳಿಗೆ ಸಾಟಿಯುಂಟೇ? ಹೀಗಾಗಿ ನಮ್ಮ ದೇವತೆಗಳೆಲ್ಲ ಧರ್ಮ-ತಪಸ್ಸು-ತಪೋವನ - ಇವುಗಳೊಂದಿಗಿನ ಹಾರ್ದವಾದ ನಂಟಿನವರೇ.

 

ಮರಗಳೀವ ಪಾಠ

ತಪೋವನಗಳಲ್ಲಿಯ ತರುಗಳ ತಾಣವು ತರುವ ಪಾಠವು ಸಾಧಾರಣವಲ್ಲ. ನಿಂತಲ್ಲೇ ನಿಂತಂತೆ ಕಂಡರೂ, ನಿಂತ ನೀರಿನಂತಾಗದೆ, ಮುಗಿಲತ್ತ ಸಾಗುವ ಊರ್ಧ್ವಗಾಮಿತ್ವವು ತರುಗಳಲ್ಲುಂಟು; ಸಾತ್ತ್ವಿಕತೆಯ ಒಂದು ಲಕ್ಷಣವೂ "ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾಃ" – ಎಂಬ ಗೀತೋಕ್ತಿಯಂತೆ. ಸುಮ್ಮನೆ ಲಂಬುವೆಂಬ ಹಿರಿಮೆಯಲ್ಲ; ಸದಾ ಸೂರ್ಯನತ್ತ ಅಭಿಮುಖತೆ ಮರಗಳದ್ದು; ಜ್ಞಾನಸೂರ್ಯಾಭಿಮುಖರಾದ ಋಷಿಗಳೂ ದೀರ್ಘಜೀವಿ ವೃಕ್ಷಗಳಂತೆ ದೀರ್ಘಾಯುಷಿಗಳಾಗಿಯೇ ಬಾಳಿದವರು. ತಮ್ಮ ರಸಸಾರವನ್ನು ಪಾದಪಗಳು ಪರಮೋಚ್ಚಕ್ಕೆ ಒಯ್ಯುವುವು; ಋಷಿಗಳೂ ಊರ್ಧ್ವರೇತಸ್ಕರು. ತರುಲತೆಗಳು ನಾನಾಜೀವಿಗಳ ಆಶ್ರಯಸ್ಥಾನ; ಋಷಿಗಳೂ ಆಶ್ರಯಪ್ರದರೇ. ಮುನಿಗಳಿಗೂ ಮೌನವಾದ ಪಾಠವೇ, ಮರಗಳ ಮೌನವಾದರೂ!

ವೃಕ್ಷಗಳ ಕಾಂಡ-ಶಾಖೆ-ಪುಷ್ಪ-ಫಲಗಳು ವ್ಯಕ್ತ; ಅವುಗಳ ಬೇರು ಭೂಮಿಯೊಳಗೆ ಹುದುಗಿದ್ದು ಅವ್ಯಕ್ತ. ಕಾಣದ್ದು ಸುಳ್ಳಲ್ಲ; ಬದಲಾಗಿ, ಕಾಣದ ಬೇರೇ ಮುಖ್ಯ! ಬೇರಿಗೆ ಭದ್ರತೆಯಿರುವಷ್ಟು ಕಾಲ ಮರಕ್ಕೂ ಭದ್ರತೆ. ಬೇರಿಗೇನಾದರೂ ಹುಳ ಹಿಡಿಯಿತೋ ಮರಕ್ಕೆ ಮರಣವೇ. ಕೊಂಬೆಗಳಿಗೆ ಪ್ರಹಾರವಾದರೂ ಮರವುಳಿದೀತು; ಆದರೆ ಬೇರಿಗೆ ಕುಠಾರವಾದರೆ, ವೃಕ್ಷಕ್ಕೆ ಉಳಿವೆಲ್ಲಿ? ಹಾಗೆಯೇ "ಜೀವನದ ಬೇರಿನಿಂದ ಬೇರಾಗಬೇಡಿ" ಎಂದು ಶ್ರೀರಂಗಮಹಾಗುರುಗಳು ಎಚ್ಚರಿಸುತ್ತಿದ್ದರು.

ಆ ಬೇರು ಎಲ್ಲಿದೆ? ಇದಕ್ಕುತ್ತರವು ಗೀತೆಯಲ್ಲಿದೆ: ಸಂಸಾರವೇ ಒಂದು ಅಶ್ವತ್ಥವೃಕ್ಷ. ಅದರ ಬುಡ ಮೇಲುಗಡೆ ಇದೆ. ಕೊಂಬೆಗಳು ಕೆಳಗಿವೆ - ಎಂದು ಅದು ಹೇಳುತ್ತದೆ. "ಇಂತಹ ವೃಕ್ಷವನ್ನೇನಾದರೂ ಕಂಡಿದ್ದೀರಾ?" ಎಂಬ ಪ್ರಶ್ನೆಯನ್ನು ಕೇಳಿ, ಅದಕ್ಕೆ ಉತ್ತರವನ್ನೂ ಶ್ರೀರಂಗಮಹಾಗುರುಗಳೇ ಕೊಟ್ಟಿದ್ದರು. "ನಮ್ಮ ಶರೀರವೇ ಅಂತಹ ಊರ್ಧ್ವಮೂಲವಾದ ವೃಕ್ಷ. ನಮ್ಮ ಶಿರಸ್ಸೇ ಮೂಲ. ನಮ್ಮ ಕೈ-ಕಾಲುಗಳು ಅದರ ಕೊಂಬೆಗಳು". ಮನುಷ್ಯನರಮಂಡಲದ ಚಿತ್ರದಲ್ಲಿ ಇನ್ನೂ ಸ್ಪಷ್ಟವಾಗುವ ಈ ವೃಕ್ಷಸಾದೃಶ್ಯವನ್ನೂ ಕಾಣಿಸಿದ್ದರು. 

ಮನುಷ್ಯನು ಚೆನ್ನಾಗಿರಬೇಕಾದರೆ ಮುಖ್ಯವಾಗಿ ತಲೆಯು ಸರಿಯಾಗಿರಬೇಕು. ಕೈ-ಕಾಲುಗಳಿಗಲ್ಲ ಹೆಲ್ಮೆಟ್ಟನ್ನು ಹಾಕಿಕೊಳ್ಳುವುದು; ತಲೆಗೇ ಶಿರಸ್ತ್ರಾಣ. ಅದೂ ಉತ್ತಮವಾದ ಗುಣಮಟ್ಟದ್ದೇ ಆಗಬೇಕು. ಇಲ್ಲವೋ, ಸಾವಿಗೆ ನಾವೇ ಆಸ್ಪದವಿತ್ತಂತೆ! ಬಹುತೇಕ ಪ್ರಾಣಿಗಳೆಲ್ಲ ಅಧೋಮುಖಗಳೇ; ಮನುಷ್ಯನೇ "ತಲೆ ಎತ್ತಿ" ನಡೆಯಬಲ್ಲವನು.


ಉತ್ತಮಾಂಗ

ತಲೆಯೇಕೆ ಉತ್ತಮಾಂಗ? ಎಲ್ಲ ಇಂದ್ರಿಯಗಳ ತಾಣವೇ ತಲೆ: ಕಣ್ಣು-ಕಿವಿ-ಮೂಗು-ನಾಲಿಗೆ- ಚರ್ಮಗಳೆಲ್ಲವೂ ಅಲ್ಲಿಯೇ ಇವೆ. ಕಣ್ಣನ್ನೋ ಕಿವಿಯನ್ನೋ ಕಳೆದುಕೊಂಡವರ ಪಾಡು ಅವರ್ಣ್ಯ! ಅಲ್ಲದೆ, ಇಂದ್ರಿಯಗಳು ಚೆನ್ನಾಗಿದ್ದರೂ, ತಲೆಯೊಳಗೇನಾದರೂ ಘಾಸಿಯಾಗಿದ್ದರೆ ಜೀವನವೇ ದುರ್ಭರ: ಮಾನಸಿಕರೋಗಗಳಿಗೆ ರಾಜಮಾರ್ಗವದು! "ಮರದ ಬುಡಕ್ಕೆ ಏನೂ ರೋಗ ತಗುಲದಿದ್ದರೆ ಮರವು ಚೆನ್ನಾಗಿ ಮುಂದುವರಿಯುವುದುಂಟಷ್ಟೇ? ಹಾಗೆಯೇ ತಲೆಯು ಅನಾಮಯವಾಗಿದ್ದರಷ್ಟೆ ದೇಹವು ಚೆನ್ನಾಗಿರುವುದು" – ಎನ್ನುತ್ತದೆ ಚರಕಸಂಹಿತೆ.

ಪ್ರಾಣಿಗಳಿಗೂ ಮನುಷ್ಯರಿಗೂ ಭೇದವಿರುವುದು ಪ್ರಧಾನವಾಗಿ ಮೆದುಳಿನ ರಚನೆಯಲ್ಲಿ. ಪ್ರಾಣಿಗಳಲ್ಲಿಲ್ಲದ ಕಾರ್ಟೆಕ್ಸ್ ಮತ್ತು ನಿಯೋಕಾರ್ಟೆಕ್ಸ್ ಎಂಬ ಮೆದುಳಿನ ಅಂಗಗಳಿಂದಾಗಿ ಚಿಂತನಶಕ್ತಿ, ವಾಕ್-ಶಕ್ತಿ, ಊಹನಶಕ್ತಿ ಮುಂತಾದುವು ಮನುಷ್ಯನಿಗೆ ಲಭ್ಯವಾಗಿವೆ.

ಗರ್ಭಶಾಸ್ತ್ರವು ತೋರಿಸಿಕೊಡುವಂತೆ ಮೊದಲು ಆರಂಭವಾಗುವುದೇ ಶಿರೋನಿರ್ಮಾಣ; ಇದನ್ನನುಸರಿಸಿ ಬೆನ್ನುಹುರಿಯ ನಿರ್ಮಾಣ. ಇವಾದರೂ ಮರದ ಬೇರು-ಕಾಂಡಗಳನ್ನು ಹೋಲುವುವೇ. ಇವು ಗಟ್ಟಿಯಾಗುತ್ತಲೇ ಶರೀರದ ಅನ್ಯಾಂಗಗಳು ನಿರ್ಮಾಣಗೊಳ್ಳಲಾರಂಭಿಸುತ್ತವೆ. ಈ ಕಪಾಲ-ಬೆನ್ನೆಲುಬುಗಳೇ ಜೀವನಕ್ಕೆ ಆಧಾರಸ್ತಂಭ: ಎಲ್ಲ ಅಂಗಗಳಿಗಿಂತಲೂ ಮೊದಲು ನಿರ್ಮಿತವಾಗಿ, ಸತ್ತಾಗ ಉಳಿದೆಲ್ಲ ಅಂಗಗಳೂ ಅಳಿದರೂ ಇನ್ನೂ ಚಿರಕಾಲ ಗಟ್ಟಿಯಾಗಿ ಉಳಿಯತಕ್ಕ ಅಂಗಗಳೆಂದರೆ ಇವೇ ಸರಿ. ಜನನವಾಗುವಾಗಲೂ ತಲೆಯೇ ಮೊದಲು ಈಚೆಗೆ ಬರುವುದು. ಸಾರವಾಗಿ, ಜೀವನವು ಚೆನ್ನಾಗಿ ನಡೆಯಲು ಗಟ್ಟಿಯಾದ ಮಂಡೆ ಬೇಕು. ಅದಕ್ಕೆ ಬೆಂಬಲವಾಗಿ ಬೆನ್-ಬಲವೂ ಬೇಕು.


ಬ್ರಹ್ಮರಂಧ್ರ-ಪೃಷ್ಠವಂಶ

ವಿಜ್ಞಾನಿಗಳು ಕಾಣುವ ಈ ನೋಟದೊಂದಿಗೇ ಮಹರ್ಷಿಗಳ ಆಳವಾದ ನೋಟವನ್ನೂ ಒಮ್ಮೆ ಗಮನಿಸಬಹುದು. ನಮ್ಮ ಶರೀರದ ಬೆನ್ನಿನಲ್ಲೇ, ಬೆನ್ನ ಮೂಳೆಯಲ್ಲೇ, ಸುಷುಮ್ನಾನಾಡಿಯಿರುವುದು; ಮೆದುಳಿನಲ್ಲೇ ಸಹಸ್ರಾರಚಕ್ರವಿರುವುದು. ಇವೆರಡೂ ಭೌತಿಕದೃಷ್ಟಿಗೆ ಗೋಚರಿಸವು; ಯೋಗದೃಷ್ಟಿ-ಯೋಗಾನುಭವಗಳಿಂದ ಅರಿಯಬೇಕಾದವು. ಮನುಷ್ಯನ ಆಧ್ಯಾತ್ಮಿಕಪ್ರಗತಿಯಲ್ಲಿ ಮಸ್ತಿಷ್ಕ-ಸುಷುಮ್ನೆಗಳ ಪಾತ್ರವು ಅತ್ಯಂತ ಮುಖ್ಯವಾದದ್ದು. ಬ್ರಹ್ಮರಂಧ್ರಸ್ಥಾನವಾದ ನೆತ್ತಿಗೂ ಪೃಷ್ಠವಂಶವೆನಿಸುವ ಬೆನ್ನಮೂಳೆಗೂ ಆರೋಗ್ಯವನ್ನು ವಿಶೇಷವಾಗಿ ತಂದುಕೊಡುವುದಕ್ಕಾಗಿಯೇ ನಮ್ಮಲ್ಲಿ ಅಭ್ಯಂಗಸ್ನಾನಕ್ರಮವು  ಬಂದಿರುವುದೆಂಬುದನ್ನು ಶ್ರೀರಂಗಮಹಾಗುರುಗಳು ಅರುಹಿದ್ದರು.

"ತಲೆ ಕಾಯಿಸಿಕೊಳ್ಳಬೇಡಿ" ಎಂಬ ಎಚ್ಚರಿಕೆಯನ್ನು ಕೊಡುತ್ತಾ, ಶಿರಸ್ಸಿನ ತಂಪನ್ನೂ ಮನಸ್ಸಿನ ಸ್ತಿಮಿತವನ್ನೂ ಸದಾ ಕಾಪಾಡಿಕೊಳ್ಳುವುದರ ಮುಖ್ಯತೆಯನ್ನೂ ಸೂಚಿಸುತ್ತಿದ್ದರು.

ಆತ್ಮನ ಆವಾಸವು ಈ ಮೂರ್ಧವೇ (ಶಿರಸ್ಸೇ) ಎಂದು ಮಹಾಭಾರತವು ಹೇಳುತ್ತದೆ. ಶರೀರವೆಂಬ ಸಾಮ್ರಾಜ್ಯವನ್ನಾಳುವ ರಾಜನೆಂದರೆ ಮಸ್ತಿಷ್ಕವೇ - ಎಂದೂ ವೇದೋಕ್ತಿಯುಂಟು. ಶರೀರದಲ್ಲಿ ಎಪ್ಪತ್ತೆರಡುಸಾವಿರ ನಾಡಿಗಳುಂಟೆಂದೂ, ಅವೆಲ್ಲಾ ಪ್ರಾಣವಾಯುಮಾರ್ಗಗಳೆಂದೂ, ಅವೆಲ್ಲವೂ "ಈ ಮೇಲ್‍ಬುಡದ ಕೆಳಗೊಂಬೆಯ ಶರೀರ"ದಲ್ಲುಂಟೆಂದೂ ಯೋಗೋಪನಿಷತ್ತುಗಳು ಸೂಚಿಸುತ್ತವೆ.

ಹೀಗಾಗಿ ಶರೀರವೆಂಬ ವೃಕ್ಷದ ಮೂಲವಾಗಿರುವ ಮಸ್ತಿಷ್ಕವೂ, ಅದರ ಕಾಂಡದಂತಿರುವ ಬೆನ್ನೆಲುಬೂ, ಲೋಕಜೀವನಕ್ಕೆ, ಹಾಗೆಯೇ ಜೀವನಸಾರವಾದ ಅಧ್ಯಾತ್ಮಕ್ಕೆ, ಅತ್ಯಂತ ಮುಖ್ಯವಾದುದು: ಹೀಗೆ ಸಂಸ್ಕೃತಿಯ ಮೂಲವನ್ನೇ ದರ್ಶನಮಾಡಿ(ಸಿ)ದ ಹಿರಿತನದ ಋಷಿಗಳ  ಹೆಗ್ಗಳಿಕೆಯಿದಾಗಿದೆ.


ಮರ-ಅಮರ

ತಪೋವನಗಳಲ್ಲಿ ತಪೋಧನರಾಗಿ ವಾಸಿಸುತ್ತಾ, ವೃಕ್ಷಧರ್ಮವನ್ನೂ, ಸಂಸಾರವೃಕ್ಷದ ಮರ್ಮವನ್ನೂ ಶರೀರವೃಕ್ಷದ ಕರ್ಮವನ್ನೂಅರಿತು ಸಂಸ್ಕೃತಿವೃಕ್ಷದ ಮೂಲವನ್ನು ತೋರಿಸಿದ ಋಷಿಗಳಿಗೆ, ಮರಗಳ ಮಧ್ಯದಲ್ಲಿದ್ದೂ ಅಮರವಾದುದರ ಹಾದಿ ತೋರಿಗೊಟ್ಟ ಮುನಿಗಳಿಗೆ - ನಮ್ಮ ನಮ್ರನಮನಗಳು. ನಾವೂ ಸಹ ಅವರಂತೆ ಅತ್ತ ವೃಕ್ಷಪ್ರೀತಿಯನ್ನು ಬೆಳೆಸಿಕೊಂಡು, ಇತ್ತ ನಾವು ಸದಾ ಹೊತ್ತೇ ಇರುವ ಶರೀರತರುವು ತರುವ  ಸ-ಫಲವಾದ ಜೀವನವನ್ನು ಮಾಡಬೇಕಲ್ಲವೇ?


ಸೂಚನೆ: 2/3/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.