Thursday, February 24, 2022

ನಾಭಾಗನ ಆದರ್ಶ (Nabhagana Adarsha)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಮದ್ಭಾಗವತದ ಒಂದು ಕಥೆ- ನಭಗನೆಂಬ ಮಹಾರಾಜನಿಗೆ ಹಲವು ಮಕ್ಕಳಿದ್ದರು. ಅದರಲ್ಲಿ ಕಿರಿಯವನು ನಾಭಾಗ. ಇವನು ಚಿಕ್ಕವಯಸ್ಸಿನಲ್ಲೇ  ವಿದ್ಯೆಯಲ್ಲಿ ಆಸಕ್ತನಾಗಿ ವಿದ್ಯಾಭ್ಯಾಸಕ್ಕೆಂದು ಗುರುಕುಲವಾಸಕ್ಕೆ ತೆರಳಿದ್ದನು. ಅಲ್ಲಿ ಅವನು ಅನೇಕ ವರ್ಷಗಳು ಆಸಕ್ತಿಯಿಂದ ಕಲಿತು ವಿದ್ಯಾಪಾರಂಗತನಾಗಿ ರಾಜ್ಯಕ್ಕೆ ಹಿಂತಿರುಗುತ್ತಾನೆ. ತಂದೆಯು ತಪಸ್ಸಿಗೆ ಹೋಗಿದ್ದರು. ಅಣ್ಣಂದಿರು ತಂದೆಯ ರಾಜ್ಯವನ್ನು ನಾಭಾಗನ ಪಾಲಿಗೆ ಏನನ್ನೂ ಉಳಿಸದೇ ಹಂಚಿಕೊಂಡಿದ್ದರು. ಸಹೋದರರ ಬಳಿ 'ನನ್ನ ಪಾಲಿನ ರಾಜ್ಯವನ್ನು ಕೊಡಿ' ಎಂದು ಕೇಳಿದಾಗ; ಅವರು-"ನಾವು ಹಂಚಿಕೊಳ್ಳುವಾಗ ನಿನ್ನನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈಗ ಎಲ್ಲವೂ ಮುಗಿದಿದೆ. ನೀನು ತಂದೆಯವರನ್ನೇ ನಿನ್ನ ಭಾಗವೆಂದು ತಿಳಿ" ಎಂದುಬಿಟ್ಟರು.

 

ನಾಭಾಗನು ತಂದೆಯ ಹತ್ತಿರ ಹೋಗಿ 'ಅಪ್ಪಾ, ಅಣ್ಣಂದಿರು ರಾಜ್ಯವನ್ನು ನನಗೇನೂ ಉಳಿಸದೇ ತಾವೇ ಹಂಚಿಕೊಂಡಿದ್ದಾರೆ!  ಈಗ ನಾನೇನು ಮಾಡಲಿ ?' ಎಂದು ಪ್ರಶ್ನಿಸಿದನು. ಆ ಮಾತಿಗೆ ನಭಗ ಮಹಾರಾಜನು "ಅವರು ನಿನಗೆ ಬರಬೇಕಾದ ಸ್ವತ್ತನ್ನು ನಿನಗೆ ಕೊಡದೆ ವಂಚಿಸಿದ್ದಾರೆ; ಅದಕ್ಕೆ ಅಸೆ ಪಡಬೇಡ. ಅನತಿದೂರದಲ್ಲಿ ಆಂಗೀರಸ ಮಹರ್ಷಿಗಳು ೧೨ ದಿನಗಳ ಮಹಾಯಾಗವನ್ನು ಮಾಡುತ್ತಿದ್ದಾರೆ.  ಅವರು ಮಹಾ ವಿದ್ವಾಂಸರಾದರೂ,  ೬ ನೇ ದಿನದ ಯಾಗದ ವಿಧಿ ತಿಳಿಯದೆ ಆತಂಕಕ್ಕೊಳಗಾಗುತ್ತಾರೆ. ನಿನ್ನ ವಿದ್ಯೆಯ ಬಲದಿಂದ ಅವರಿಗೆ ಸಹಾಯಮಾಡು. ಅವರು ಯಾಗ ಮುಗಿಸಿ ಸ್ವರ್ಗಕ್ಕೆ ಹೋಗುವಾಗ  ಯಜ್ಞಶೇಷವನ್ನೆಲ್ಲ ನಿನಗೇ ಕೊಡುತ್ತಾರೆ" ಎಂದು ಹೇಳಿದ.

 

ಆ ಯಜ್ಞಮಂಟಪಕ್ಕೆ ಬಂದ ನಾಭಾಗನು, ಯಾಗದ ೬ ನೇ ದಿನದ ಸೂಕ್ತವನ್ನು ಪಠಿಸಿ ಯಾಗವು ಸಾಂಗವಾಗಿ ನೆರವೇರಲು ಸಹಕರಿಸುತ್ತಾನೆ. ಆಂಗೀರಸರು ಬಹಳ ಸಂತೋಷದಿಂದ 'ಯಾಗದಲ್ಲಿ ಉಳಿದ ಧನಕನಕಗಳನ್ನೆಲ್ಲಾ ನೀನೇ ತೆಗೆದುಕೋ' ಎಂದು ತಿಳಿಸಿ ಸ್ವರ್ಗಕ್ಕೆ ತೆರಳುವರು. ಆ ಧನರಾಶಿಯನ್ನು ಸಾಗಿಸಲು ಅನುವುಮಾಡಿಕೊಳ್ಳುತ್ತಿದಾಗ ಅಲ್ಲಿಗೆ ಕಪ್ಪು ವರ್ಣದ ಆಜಾನುಬಾಹುವಾದ ವ್ಯಕ್ತಿಯೊಬ್ಬನು  ಬರುತ್ತಾನೆ. "ಈ ಧನವೆಲ್ಲಾ ನನಗೆ ಸೇರಬೇಕು; ನೀನು ಅದನ್ನು ಎಲ್ಲಿಗೆ ಒಯ್ಯುವೆ?" ಎಂದನು. ಅಂಗೀರಸರು ಈ ಯಾಗದ ಧನವನ್ನೆಲ್ಲಾ ನನಗೆ ನೀಡಿರುವರು ಎಂದನು ನಾಭಾಗ. ಆ ಕಪ್ಪು ವ್ಯಕ್ತಿಯು ಇದರ ತೀರ್ಮಾನವನ್ನು ನಿಮ್ಮ ತಂದೆಯವರನ್ನೇ ಕೇಳೋಣ ಎಂದು ಸೂಚಿಸುತ್ತಾನೆ. ನಾಭಾಗನು ತಂದೆಯಾದ ನಭಗನನ್ನು ಕೇಳಲಾಗಿ ನಭಗನು- ಮಗನಿಗೆ "ಯಾಗ ಶೇಷವೆಲ್ಲವೂ ರುದ್ರದೇವರ ಸ್ವತ್ತು. ಆ ಕಪ್ಪುಬಣ್ಣದ ವ್ಯಕ್ತಿಯೇ ಸಾಕ್ಷಾತ್ ರುದ್ರದೇವ. ಎಲ್ಲಾ ಧನರಾಶಿಯನ್ನೂ ಅವನಿಗೆ ಸಮರ್ಪಿಸಿ ಕೃತಾರ್ಥನಾಗು" ಎಂದನು. ನಾಭಾಗನು ಬಹಳ ಸಂತೋಷದಿಂದ ರುದ್ರದೇವರಿಗೆ ಎಲ್ಲವನ್ನೂ ಸಮರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನಿಂದಾದ ತಪ್ಪಿಗೆ ಕ್ಷಮೆ ಯಾಚಿಸಿದನು. 

 

ಮಹಾದೇವನು ತನ್ನ ನಿಜ ಸ್ವರೂಪದ ದರ್ಶನನೀಡಿ ನಾಭಾಗನ ಸಮರ್ಪಣ ಭಾವವನ್ನು ಮೆಚ್ಚಿ ಎಲ್ಲಾ ಸಂಪತ್ತನ್ನೂ ಅವನಿಗೇ ಕೊಟ್ಟನು. ಜೊತೆಯಲ್ಲಿ ಈ ಎಲ್ಲಾ ಸಂಪತ್ತನ್ನೂ ಮೀರಿದ ಬ್ರಹ್ಮಜ್ಞಾನವನ್ನು  ಬೋಧಿಸುತ್ತಾನೆ. ಶಿವನಿಂದ ಅನುಗೃಹೀತನಾದ ನಾಭಾಗನು ಮುಂದೆ ಸುಖಜೀವನವನ್ನು ನಡೆಸುತ್ತಾನೆ. ಅದೇ ಅನುಗ್ರಹದ ಫಲಸ್ವರೂಪವಾಗಿ ಲೋಕಪ್ರಸಿದ್ಧನಾದ 'ಅಂಬರೀಷ" ನೆಂಬ ಸತ್ಪುತ್ರನನ್ನು ಪಡೆಯುತ್ತಾನೆ.   

 

ಈ ಶ್ರೀಮದ್ಭಾಗವತದ ಕಥೆಯು ನಮಗೆ ಹಲವು ಪಾಠಗಳನ್ನು ತಿಳಿಸುತ್ತದೆ. ನಾಭಾಗನು ವಿದ್ಯಾಭ್ಯಾಸದ ಕಡೆಗೇ ಗಮನ ಕೊಟ್ಟಿದ್ದರಿಂದ, ಅಣ್ಣಂದಿರು ಮೋಸಮಾಡಿದರೂ ಸ್ವತ್ತಿಗಾಗಲಿ, ಸಂಪತ್ತಿಗಾಗಲಿ ಕಾದಾಡಲಿಲ್ಲ, ಪಿತೃವಾಕ್ಯ ಪಾಲನೆಮಾಡಿದನು, ಅವನಲ್ಲಿನ ಆರ್ಷವಿದ್ಯೆ ಅವನ ಮನಸ್ಸನ್ನು ಪಕ್ವಗೊಳಿಸಿತ್ತು. ಅದೇ ವಿದ್ಯಾಬಲದಿಂದಲೇ ಮಹಾಯಾಗಕ್ಕೆ ಸಹಾಯ ಮಾಡಿದನು. ಯಜ್ಞಶೇಷವಾದ ಸಂಪತ್ತೆಲ್ಲವೂ ರುದ್ರದೇವನಿಗೆ ಸೇರಿದ್ದು ಎಂಬ ತಂದೆಯ ಸತ್ಯಾರ್ಥಪೂರ್ಣವಾದ ನುಡಿಯನ್ನು ಯಥಾರ್ಥವಾಗಿ ಕಾರ್ಯರೂಪಕ್ಕೆ ತಂದನು. ವಿದ್ಯಾವಂತನಾದ ನಾಭಾಗನು ಎದುರಿಗೆ ಪರಶಿವನೇ ಇದ್ದಾಗ ಯಾವ ಸಂಪತ್ತಿನಿಂದ ಏನಾಗಬೇಕಾಗಿದೆ ಎಂಬ ಸಹಜವಾದ ತೀರ್ಮಾನಕ್ಕೆ ಬಂದನು. ಹೀಗೆ  ಪರಶಿವನನ್ನು ಒಲಿಸಿಕೊಂಡುದರ ಫಲವಾಗಿ ಬ್ರಹ್ಮಜ್ಞಾನಿಯಾದನು. "ವಿದ್ಯೆ" ಎನ್ನುವ ಪದ ಏನು ಹೇಳುತ್ತೆ?  'ವಿದ್ ' ಎಂದರೆ ಜ್ಞಾನ; 'ಯಾ'ಎಂದರೆ ಹೊಂದಿಸುವುದು. ಜ್ಞಾನದ ಕಡೆಗೆ ಒಯ್ಯುವ ವಿಷಯವೇ ವಿದ್ಯೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯ.

 

ನಾಭಾಗನು ಇಂದಿಗೂ ನಮ್ಮೆಲ್ಲರಿಗೆ ಆದರ್ಶವಾಗಿದ್ದಾನೆ. ನಾಭಾಗನ ಗುಣಗಳನ್ನು ಬೆಳೆಸಿಕೊಂಡರೆ ಇಹ-ಪರ ಜೀವನಗಳೆರಡರಲ್ಲೂ ಆನಂದವಾಗಿರಬಹುದು.


ಸೂಚನೆ: 24/02/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.