Saturday, February 19, 2022

ನವವಿಧ ಭಕ್ತಿ - 16 ಮಾಧುರ್ಯಭಾವದಲ್ಲಿ ಪರದೈವವೇ ಪತಿ (Madhuryabhavadalli paradaivave pathi)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)ಆತ್ಮನಿವೇದನಂ - 3  


ನವವಿಧಭಕ್ತಿಯಲ್ಲದೆ ವಿಶೇಷವಾದ ಮಾಧುರ್ಯಭಾವವು ಭಕ್ತಿಯ ಪ್ರಕಾರಗಳಲ್ಲಿ ಒಂದಾಗಿ ನಮ್ಮ ಸಾಹಿತ್ಯದಲ್ಲಿ ಕಂಡುಬರುತ್ತದೆ. ಮಾಧುರ್ಯಭಕ್ತಿಯಲ್ಲಿ ಭಗವಂತನನ್ನೇ ಪತಿಯಾಗಿ ವರಿಸುವುದು  ವಿಶೇಷ ಅಂಶವಾಗಿದೆ. ಈ ಸನ್ಮಾರ್ಗದಲ್ಲಿ ಜೀವನು ಭಗವಂತನನ್ನು ಪ್ರಿಯತಮನಾದ ಪತಿಯನ್ನಾಗಿಯೂ ತನ್ನನ್ನು ಅವನ ಪ್ರೇಯಸಿಯನ್ನಾಗಿಯೂ ಭಾವಿಸಿ ಭಜಿಸಲಾಗುವುದು. ಮಾಧುರ್ಯಭಕ್ತಿಗೆ ಹೆಸರಾಂತ ಭಕ್ತೆಯರು ಗೋದಾದೇವಿ, ಅಕ್ಕಮಹಾದೇವಿ ಮತ್ತು ಮೀರಾಬಾಯಿ. ಈ ಭಾವವನ್ನು  ಅನೇಕರು ಟೀಕೆ ಮಾಡುತ್ತಾರೆ.  ಈ ಭಾವನೆ "ಅಪವಿತ್ರ, ದೈವದ್ರೋಹ" ಎಂದೆಲ್ಲಾ ಟೀಕೆಮಾಡಿದ ಮಹಿಳೆಯೊಬ್ಬಳನ್ನು ಪೂಜ್ಯ ರಂಗಪ್ರಿಯಸ್ವಾಮಿಗಳು ಅವರ ಸಂಪ್ರದಾಯದಲ್ಲಿ ಭಗವಂತನನ್ನು ಹೇಗೆ ಸಂಬೋಧಿಸುತ್ತಾರೆಂದು ವಿಚಾರಿಸಲು Father(ತಂದೆ) ಎಂಬುದಾಗಿ ಉತ್ತರಿಸಿದರು. ತಕ್ಷಣವೇ "ತಂದೆಯೂ ಒಬ್ಬರ ಪತಿಯೇ ಆಗಿರಬೇಕಲ್ಲವೇ?" ಎಂದಾಗ ಆಕೆಯು ತಬ್ಬಿಬ್ಬಾಗಿ ಉತ್ತರವಿಲ್ಲದೆ ಹೊರಟುಹೋದರು. ಹಾಗೆ ಲೋಕಕ್ಕೆಲ್ಲಾ ಪತಿ-ಜಗದೀಶ್ವರ, ಪತಿಗಳಿಗೆಲ್ಲಾ ಪತಿ ಅವನು ಎಂಬುದೇ ವಾಸ್ತವ. 


ಗೋದಾದೇವಿ 

ಗೋದಾದೇವಿಯ ಭಕ್ತಿಭಾವವನ್ನು ಹಿಂದಿಯೇ ಗಮನಿಸಿದ್ದೇವೆ. ಗೋದೆಯು ಭಗವಂತನೇ ತನಗೆ ಪತಿಯಾಗಬೇಕೆಂದು ಹಂಬಲಿಸಿ ವ್ರತವನ್ನು ಕೈಗೊಂಡಳು.  ಈ  ವೃತ್ತಾಂತವನ್ನು "ತಿರುಪ್ಪಾವೈ" ಎಂಬ ಮೂವತ್ತು ಪಾಶುರಗಳಲ್ಲಿ ವಿವರಿಸಿರುವುದು ಸುಪ್ರಸಿದ್ಧ. ಅವಳ ಹಂಬಲವನ್ನು 'ನಾಛ್ಚಿಯಾರ್ ತಿರುಮೊಳಿ' ಎಂಬ 143 ಪಾಶುರಗಳಲ್ಲಿ(ಪದ್ಯಗಳಲ್ಲಿ) ವ್ಯಕ್ತಪಡಿಸಿದ್ದಾಳೆ. ಅವನನ್ನೇ ಸಾಂಗವಾಗಿ ವಿವಾಹವಾಗುವಂತಹ ಹೊಂಗನಸನ್ನು ಕಂಡೆ ಎಂಬುದಾಗಿ ಸಖಿಯ ಬಳಿ "ವಾರಣಮಾಯಿರಂ" ಎಂಬ ಪಾಶುರಗಳ ಮೂಲಕ ಹಂತಹಂತವಾಗಿ ಹೇಳಿ ಹರ್ಷಿಸುತ್ತಾಳೆ. ತಾನು ಅವನನ್ನೇ ವಿವಾಹವಾಗಬೇಕು, ಅವನಲ್ಲಿಯೇ ಒಂದಾಗಬೇಕು ಎನ್ನುವ ಉತ್ಕಟೇಚ್ಛೆಯು ಬಂದಾಗ ಭಗವಂತ ಅನೇಕ ವಿಧಗಳಲ್ಲಿ ಪರೀಕ್ಷೆಮಾಡಿ ಕೊನೆಯಲ್ಲಿ ಇವಳ ಹಂಬಲವನ್ನು ಪೂರೈಸುವ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ. ತಂದೆ ಪೆರಿಯಾಳ್ವಾರರಿಗೆ ಕನಸಿನಲ್ಲಿ ಭಗವಂತನು ಗೋದೆಯನ್ನು ತಾನು ವಿವಾಹಮಾಡಿಕೊಳ್ಳಲು ನಿರ್ಧರಿಸಿರುವುದನ್ನು ವ್ಯಕ್ತಪಡಿಸುತ್ತಾನೆ. ಅದರಂತೆ ನಿರ್ದಿಷ್ಟ ದಿನದಂದು ಗೋದಾದೇವಿಯನ್ನು ವಧುವಿನ ಸರ್ವಾಲಂಕಾರದೊಂದಿಗೆ ಶ್ರೀರಂಗಕ್ಷೇತ್ರಕ್ಕೆ ಕರೆತರಲು ಆಜ್ಞೆ ಮಾಡುತ್ತಾನೆ. ಪೆರಿಯಾಳ್ವಾರ್  ಮತ್ತು ಗೋದಾದೇವಿ ಇಬ್ಬರೂ ಅತ್ಯಂತ ಸಂತುಷ್ಟರಾಗುತ್ತಾರೆ. ಅಲ್ಲಿನ ಅರ್ಚಕರು ಇದನ್ನೊಪ್ಪುತ್ತಾರೆಯೇ ಎಂಬ ಚಿಂತೆಗವಕಾಶವಿಲ್ಲದಂತೆ ಭಗವಂತನು ಅರ್ಚಕರಿಗೂ ತನ್ನ ಸಂಕಲಪನ್ನು ತಿಳಿಸಿ "ಗೋದೆಯನ್ನು ಪೂರ್ಣ ಮರ್ಯಾದೆಯೊಂದಿಗೆ ಬಿಜಯ ಮಾಡಿಸಿಕೊಂಡು ಬನ್ನಿ" ಎಂಬುದಾಗಿ ಆದೇಶಿಸುತ್ತಾನೆ. ಅಷ್ಟಲ್ಲದೆ ಪಾಂಡ್ಯರಾಜನಿಗೆ  ಆ ದಿನ ಗೋದಾದೇವಿಯನ್ನು ಪಲ್ಲಕ್ಕಿಯಲ್ಲಿ ಶ್ರೀರಂಗಕ್ಕೆ ವಿಜೃಂಭಣೆಯಿಂದ ದಾರಿಯುದ್ದಕ್ಕೂ ತಳಿರು-ತೋರಣಗಳಿಂದ ಸಿಂಗರಿಸಿ ಕರೆತರಲು ಆಜ್ಞಾಪಿಸುತ್ತಾನೆ!  ಭಗವಂತ ತನ್ನ ಭಕ್ತರಿಗೆ ಒಲಿದರೆ ಅನಾಯಾಸವಾಗಿ ಎಲ್ಲ ವಿಘ್ನಗಳನ್ನೂ ನಿವಾರಿಸುತ್ತಾನಲ್ಲವೇ?  ಭಗವಂತನ ಆಜ್ಞೆಯಂತೆಯೇ ಗೋದಾದೇವಿಯು ಸರ್ವಾಲಂಕಾರ ಭೂಷಿತೆಯಾಗಿ ಶ್ರೀರಂಗವನ್ನು ತಲುಪಿದಳು. ರಂಗನಾಥಮೂರ್ತಿಯನ್ನು ನೋಡೀದಾಗ ಅವಳಿಗೆ ಸಾಕ್ಷಾತ್ ಭಗವಂತನೇ ಕಾಣುತ್ತಾನೆ. ಆಗ ಪೆರಿಯಾಳ್ವಾರ್, ಭಗವಂತನಲ್ಲಿ "ನಿಮ್ಮ ಆಜ್ಞೆಯಂತೆ ಅವಳನ್ನು ಕರೆತಂದಿರುವೆ. ಆದರೆ ವಿವಾಹ ಮಂಗಳವು ನಮ್ಮ ಊರಿನ ಜನರೆಲ್ಲರೂ ಕಣ್ತುಂಬ ನೋಡಿ ಸಂತೋಷಿಸುವಂತೆ ಶ್ರೀವಿಲ್ಲಿಪುತ್ತೂರಿನಲ್ಲೇ ಸಂಪನ್ನಗೊಳ್ಳಬೇಕು" ಎಂದು ಪ್ರಾರ್ಥಿಸುತ್ತಾರೆ. ಭಗವಂತನೂ ಒಪ್ಪಿಕೊಳ್ಳುತ್ತಾನಂತೆ. ಆದರೆ ನಿಶ್ಚಯಿಸಿದ ಮತ್ತೊಂದು ದಿನದಲ್ಲಿ ಭಗವಂತನ ಆಗಮನ ತಡವಾದದ್ದನ್ನು ನೋಡಿ ದುಃಖಿತಳಾದ ಗೋದಾದೇವಿಯು ಗರುಡಾಳ್ವಾರರ ಸಹಾಯವನ್ನು ಬೇಡುತ್ತಾಳೆ. ಭಕ್ತವತ್ಸಲನಾದ ಭಗವಂತನು ಕ್ಷಣಮಾತ್ರದಲ್ಲೇ ಗರುಡವಾಹನನಾಗಿ ದಯಮಾಡಿಸುತ್ತಾನೆ. ವಿವಾಹಮಂಗಳವು ಎಲ್ಲರ ಕಣ್ಮನಗಳನ್ನು ತಣಿಸುವಂತೆ ಸಂಪನ್ನಗೊಂಡಿತು. ಗೋದೆಯು ಅಲ್ಲಿಯೇ ಭಗವಂತನಲ್ಲಿ ಐಕ್ಯಹೊಂದಿದಳೆಂದು ಐತಿಹ್ಯ.  ಭಗವಂತನನ್ನು ಪತಿಯಾಗಿ ಭಾವಿಸುವುದಷ್ಟೇ ಅಲ್ಲದೆ ಬಾಹ್ಯವಾಗಿಯೂ ಅವನನ್ನೇ ವಿವಾಹ ಮಾಡಿಕೊಂಡ ಮಹಾಭಕ್ತಶಿರೋಮಣಿ ಆಂಡಾಳ್ ದೇವಿ. 


ಅಕ್ಕಮಹಾದೇವಿ

ಅಂತೆಯೇ ನಮ್ಮ ಕರ್ನಾಟಕ ರಾಜ್ಯದವರಾದ ಅಕ್ಕಮಹಾದೇವಿಯೂ ಶಿವಭಕ್ತಿಯಲ್ಲಿ ಮುಳುಗಿದವರು. ಮೀರಾಬಾಯಿಯಂತೆಯೇ ಅಕ್ಕಮಹಾದೇವಿಯೂ ಕೂಡ ರಾಣಿಯಾಗಿದ್ದಳು. ಆದರೂ ಲೌಕಿಕದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲದವಳಾಗಿ ಲೌಕಿಕ-ಸುಖ-ಭೋಗಗಳೆಲ್ಲವನ್ನೂ ನಶ್ವರವೆಂದು ತಿಳಿದು ಪತಿಯನ್ನೂ ಅರಮನೆಯನ್ನೂ ತ್ಯಜಿಸಿ ಚನ್ನಮಲ್ಲಿಕಾರ್ಜುನನನ್ನು ಹಂಬಲಿಸಿ ಹಿಂಬಾಲಿಸಿದಳು. ತನ್ನ ಉಡಿಗೆ-ತೊಡಿಗೆ ಎಲ್ಲವನ್ನೂ ತ್ಯಾಗಮಾಡಿ ಪರಮವೈರಾಗ್ಯದಿಂದ ಜಡೆಯಿಂದಲೇ ತನ್ನನ್ನು ಆವರಿಸಿಕೊಂಡಿದ್ದ ಭಕ್ತಶಿರೋಮಣಿ. ಲೋಕಕ್ಕೆ ಹೆದರಿದವಳಲ್ಲ. ತಾನುಡುವ ವಸ್ತ್ರ ತ್ಯಜಿಸಿದುದರಿಂದ ಜನರ ಟೀಕೆಗೆ ಗುರಿಯಾಗಿ "ಏನು ನಾಚಿಕೆಯಾಗುವುದಿಲ್ಲವೇ?" ಎಂಬ ಪ್ರಶ್ನೆಗೆ: "ನಾಚಿಕೆ ಏಕೆ? ಲೋಕಕ್ಕೆಲ್ಲಾ ತಂದೆ ಚನ್ನಮಲ್ಲಿಕಾರ್ಜುನ ಇಡೀ ಜಗತ್ತನ್ನೇ ನೋಡುತ್ತಿರಲು ನಾಚಿಕೆ ಏನಿದೆ?" ಎಂದು ದಿಟ್ಟತನದ ಉತ್ತರವಿತ್ತ  ಪರಮ ವಿರಾಗಿಣಿ ಭಕ್ತೆ.

ಮಾಧುರ್ಯಭಾವದಿಂದಲೂ ಚನ್ನಮಲ್ಲಿಕಾರ್ಜುನನೊಬ್ಬನೇ ತನ್ನ ಪತಿಯೆಂದು ಭಾವಿಸಿ ಟೀಕಿಸುವವರಿಗೆ "ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವದ ಗಂಡು ಆತ" ಎಂದು ಧೀರವಾಣಿಯಿಂದ ಘೋಷಣೆ ಮಾಡಿದವಳು. ತನ್ನನ್ನು ಚನ್ನನಿಗೆ ಪರಿಪೂರ್ಣವಾಗಿ ಸಮರ್ಪಿಸಿಕೊಂಡು ಯಾವುದೇ ರೀತಿಯ ಭಯವೂ ಇಲ್ಲದಿದ್ದವಳು. "ಚನ್ನಮಲ್ಲಿಕಾರ್ಜುನನೇ ಗಂಡನೆನಗೆ, ನಾನು ಚನ್ನಮಲ್ಲಿಕಾರ್ಜುನಂಗೆ ಮದುವಳಿಗೆ ...." ಎಂಬುದು ಆಕೆಯ ಅವ್ಯಾಜ ಪ್ರೇಮಕ್ಕೆ ಹಿಡಿದ ಕನ್ನಡಿ. ಅಕ್ಕನ ಮಾಧುರ್ಯಭಕ್ತಿಯ ಸ್ಥಿರವಾದ ಮನವನ್ನು ಬಿಂಬಿಸುವ ವಚನವಿದು: "ಎನ್ನ ದೈವ ಚನ್ನಮಲ್ಲಿಕಾರ್ಜುನನಂಗಲ್ಲದೆ  ಅನ್ಯಕ್ಕೆಳಸುವುದೆ ಎನ್ನ ಮನ?"  ವಿರಕ್ತಳಾಗಿ ಅರಮನೆ ತ್ಯಜಿಸಿದಾಗ ಹಸಿವು-ಬಾಯಾರಿಕೆ ಮುಂತಾದ ಅವಶ್ಯಕತೆಗಳಿಗೆ ಮನಗೊಡದೆ ಆಡಿದ ವೈರಾಗ್ಯದ ಮಾತು ಇಂತು: "ಹಸಿವಾದೆಡೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ-ಬಾವಿ-ಹಳ್ಳಗಳುಂಟು..... ಆತ್ಮ ಸಂಗಾತಕ್ಕೆ ನೀನೆನಗುಂಟು". ತನು-ಮನ-ಪ್ರಾಣಗಳೂ ಅವನೇ ಆಗಿರುವಾಗ ತನ್ನ ಆಸ್ತಿತ್ವವೆಲ್ಲಿಯದು? ಎಂಬ ಭಾವನೆಯನ್ನು ತೋರ್ಪಡಿಸಿದ ಪರಿ ಆತ್ಮನಿವೇದನಭಕ್ತಿಗೆ ಎಂತಹ ಉನ್ನತ ಉದಾಹರಣೆ! ಪ್ರಕೃತಿ ಸಿರಿಯಲ್ಲೂ ಭಗವಂತನನ್ನೇ ಕಾಣುವ ಆಳವಾದ ಅಧ್ಯಾತ್ಮದನುಭವದ ಮಾತು - "ವನವೆಲ್ಲಾ ನೀನೇ , ವನದೊಳಗಣ ದೇವತರುವೆಲ್ಲ ನೀನೆ....."   ಲೋಕ ವಿಲಕ್ಷಣವಾಗಿದ್ದು ಇತರರ ನಿಂದನೆಯನ್ನು ಕಿಂಚಿತ್ತೂ ಲೆಕ್ಕಿಸದೆ ತನ್ನ ನಿಲುವಿನಲ್ಲಿಯೇ ಸ್ಥಿರವಾಗಿ ನಿಂತ ಪರಮ ವಿರಾಗಿಣಿ. ತನ್ನ ಗುರಿಸಾಧನೆ, ಅದರ ಅನುಭವದಲ್ಲಿ ನಿರತಳಾಗಿದ್ದು ಕಡೆಗೆ ಶ್ರೀಶೈಲದಲ್ಲಿ ತನ್ನ ನಲ್ಲ ಚನ್ನನೊಡನೆ ಒಂದಾಗಿ ಸೇರಿದಭಕ್ತ ಶಿರೋಮಣಿ ಈಕೆ.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 19/2/2022 ರಂದು ಪ್ರಕಟವಾಗಿದೆ.