Thursday, February 17, 2022

ಗಂಗಾಸ್ನಾನದ ಸಾಫಲ್ಯವೆಂತು? (Gangasnanada Saphalyaventu?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಸಂಸ್ಕೃತಿಯಲ್ಲಿ ಗಂಗೆ ಪೂಜ್ಯೆ. ಸ್ವರ್ಗದಿಂದವತರಿಸಿ ಹರಿದು ಸಾಗರ ಸೇರಿದವಳಾದರೂ, ಅವಳ  "ಅಧೋಮುಖ"ದ ಪಯಣದಲ್ಲೂ ಜೀವಕೋಟಿಯನ್ನು ಉದ್ಧರಿಸುತ್ತಿರುತ್ತಾಳೆ. ನಮ್ಮ ಸಂತರೂ ಕವಿಗಳೂ ಗಂಗೆಯ ಎಲ್ಲಾ ಮುಖಗಳನ್ನೂ ವರ್ಣಿಸಿರುವರಾದರೂ, ಅವಳ ಲೋಕಪಾವಕತ್ವವೇ ಅವುಗಳಲ್ಲಿ ಪ್ರಮುಖವಾದದ್ದು.


ಋಷಿ-ಕವಿಗಳ ಮಾತುಗಳು

ಗಂಗಾವತರಣದ ಕಥೆಯನ್ನು ರಾಮಾಯಣದಲ್ಲಿ ಕಾಣುತ್ತೇವೆ. ಕರ್ತೃಗಳಾದ ವಾಲ್ಮೀಕಿಗಳು ಗಂಗೆಯ ಬಗ್ಗೆ ಹೇಳಿರುವ ಮಾತುಗಳು ಇಲ್ಲಿ ಸ್ಮರಣಾರ್ಹ. ಆದಿಕವಿಗಳೂ ಋಷಿಗಳೂ ಆದವರು ಈ ನದಿಯನ್ನು ಹೇಗೆ ಕಂಡಿರುವರು!: ಅವಳ ಪಾವಕತ್ವವನ್ನು ವರ್ಣಿಸುತ್ತಾ, ಬೇರೆಡೆಯಲ್ಲಿ ರಾಜನಾಗಿರುವುದಕ್ಕಿಂತ ಅವಳ ದಡದಲ್ಲಿ ಹೀನ ಜಂತುಗಳಾಗಿರುವುದು ಲೇಸೆನ್ನುತ್ತಾರೆ. ಅವಳಲ್ಲಿ ಸ್ನಾನಮಾಡಿದವರು ಸಂಸಾರಚಕ್ರಕ್ಕೆ ಮತ್ತೆ ಬೀಳುವುದಿಲ್ಲವೆಂದೂ, ಅವಳು ಮೋಕ್ಷಲಕ್ಷ್ಮಿಗೆ ವಿಜಯಧ್ವಜವೆಂದೂ ವರ್ಣಿಸುತ್ತಾರೆ. ಇಷ್ಟೇ ಅಲ್ಲ, ತಮ್ಮ ಮರಣವು ಅವಳ ಸ್ಮರಣೆಯೊಂದಿಗೇ ಆಗಬೇಕೆಂಬ ಕನಸು ಕಾಣುತ್ತಾರೆ.

ಶಂಕರಾಚಾರ್ಯರು ಗಂಗೆಯನ್ನು ಕುರಿತಾಗಿ ಎರಡು ಸ್ತೋತ್ರಗಳನ್ನು ರಚಿಸಿದ್ದಾರೆ. ಗಂಗೆಯು ಸ್ವರ್ಗದಿಂದಲೂ ಪರ್ವತಗಳ ಮೂಲಕವೂ ಧುಮುಕುತ್ತಿರುವ  ಪರಿಯನ್ನೂ, ಅವಳು ಪಾಪನಾಶಿನಿಯೆಂಬುದನ್ನೂ ಅವುಗಳಲ್ಲಿ ವರ್ಣಿಸುತ್ತಾರೆ.  ಅವಳ ಅನುಗ್ರಹದಿಂದ ನಾರಾಯಣ ಪದಪದ್ಮಗಳ ಸ್ಮರಣೆಯೊಂದಿಗೆ ತಮ್ಮ ಅವಸಾನಸಮಯವು "ಪ್ರಾಣ-ಪ್ರಯಾಣೋತ್ಸವ"ವಾಗಲೆಂದು ಆಶಿಸುತ್ತಾರೆ.

ಭತೃಹರಿಯ "ಕನಸು" ಇದು: ಎಂದಿಗಾದರೂ ನಾನು ಗಂಗೆಯ ದಡದಲ್ಲಿ ಹಿಮಾಲಯದ ಶಿಲೆಯೊಂದರ ಮೇಲೆ ಪದ್ಮಾಸನವನ್ನು ಹಾಕಿ ಕುಳಿತಿರಬೇಕು; ಬ್ರಹ್ಮ-ಧ್ಯಾನಾಭ್ಯಾಸದಿಂದಾಗಿ ಯೋಗ-ನಿದ್ರೆಯನ್ನು ಹೊಂದಿರಬೇಕು; ಅದೆಷ್ಟು ಆಳವಾಗಿರಬೇಕೆಂದರೆ, ಮುದಿಜಿಂಕೆಗಳು ತಮ್ಮ ಮೈಯನ್ನು ನನ್ನ ಮೈಗೆ ಉಜ್ಜಿಕೊಳ್ಳುತ್ತಾ ತಮ್ಮ ಮೈತುರಿಯನ್ನು ಕಳೆದುಕೊಳ್ಳುತ್ತಿರಬೇಕು! [ಅರ್ಥಾತ್, ನಾನಾದರೂ ಅದರ ಪರಿವೆ ಸಹ ಇಲ್ಲದೆ ಧ್ಯಾನದಲ್ಲಿ ಮುಳುಗಿಹೋಗಿರರಬೇಕು] - ಅಂತಹ ಸುದಿವಸಗಳು ಅದೆಂದು ಬಂದಾವೋ! - ಎಂದು ಎದುರುನೋಡುತ್ತಿದ್ದೇನೆ, ಎನ್ನುತ್ತಾನೆ : "ಗಂಗಾತೀರೇ... ಮಮ ಸುದಿವಸೈಃ" ! ತನ್ನ ನೀತಿಶತಕದಲ್ಲಿ ಗಂಗೆಯ ಬಗ್ಗೆ ನಕಾರಾತ್ಮಕವಾಗಿ ಅಧೋಗತಿಯನ್ನು ಹೊಂದಿದವಳೆಂದು ಹೇಳಿದ್ದರೂ, ಆಮೇಲಿನ ವೈರಾಗ್ಯ-ಶತಕದಲ್ಲಿ ಮೇಲೆ ಹೇಳಿರುವುದನ್ನು ಚಿತ್ರಿಸಿದ್ದಾನೆ: 

ವೈರಾಗ್ಯ-ಶತಕದ ಕಟ್ಟಕಡೆಯ ಭಾಗವಾದ "ಅವಧೂತ-ಚರ್ಯಾ"ಪ್ರಕರಣದಲ್ಲಿ, ತನ್ನ ಭಾಗ್ಯ ಫಲಿಸಿದರೆ ಗಂಗಾತೀರದ ಆ ಸನ್ನಿವೇಶ ದೊರೆತೀತೆಂಬ ಮೇಲಿನ ಮಾತು ಬರುತ್ತದೆ. ಇದಕ್ಕೆ ಸ್ವಲ್ಪ ಮುಂಚೆ ಕೂಡ, "ಸ್ನಾತ್ವಾ ಗಾಂಗೈಃ ಪಯೋಭಿಃ" ಎಂದು ಗಂಗಾ-ಸ್ನಾನದ ಶ್ರೇಷ್ಠತೆಯನ್ನು ಕೊಂಡಾಡಿದ್ದಾನೆ. ಆರಂಭದ ಧೋರಣೆಯು ಒಂದಾದರೂ ಅಂತ್ಯದ "ಕನಸು" ಸಕಾರಾತ್ಮಕವೇ.

ಆತನು ಮಾತ್ರವಲ್ಲ, ಶಂಕರಭಗವತ್ಪಾದರೂ ಹೀಗೆಯೇ ಮಾಡಿದ್ದಾರೆ!  ಅವರ ಪ್ರಸಿದ್ಧ ಸ್ತೋತ್ರವೆನಿಸುವ "ಭಜಗೋವಿಂದ"ವನ್ನೇ ನೋಡಿ: "ಜನರು ಏನೆಲ್ಲ ಮಾಡುತ್ತಾರೆ! ಗಂಗೆಗೆ ಹೋಗುವುದೇನು, ಸಾಗರಕ್ಕೆ ಹೋಗುವುದೇನು, ವ್ರತಗಳನ್ನು ಮಾಡುವುದೇನು, ದಾನವನ್ನು ಮಾಡುವುದೇನು? - ಇವೆಲ್ಲವನ್ನೂ ಮಾಡುತ್ತಾರೆ! ಆದರೆ ಮುಕ್ತಿಯೊಂದಕ್ಕಾಗಿ ನೂರುಜನ್ಮವಾದರೂ ಏನು ಶ್ರಮಪಡಲೂ ಸಿದ್ಧರಿಲ್ಲವಲ್ಲಾ!" - ಎನ್ನುತ್ತಾ ಜನರ ಮೂರ್ಖತನವನ್ನು ಅಧಿಕ್ಷೇಪಿಸುತ್ತಾರೆ. (ಕುರುತೇ ಗಂಗಾ-ಸಾಗರ-ಗಮನಂ …  ಮುಕ್ತಿಂ ನ ಭಜತಿ ಜನ್ಮ-ಶತೇನ! ಭಜ ಗೋವಿಂದಂ…). ಈ ಮಾತಿನ ಮರ್ಮವನ್ನು ಮುಂದೆ ನೋಡುತ್ತೇವೆ. ಏಕೆಂದರೆ, ಭತೃಹರಿಯಾದರೂ ಮೊದಲೊಂದು ಕೊನೆಗೊಂದು ಹೇಳಿದ. ಆದರೆ ಇವರು, ಇನ್ನು ಮೂರೇ ಶ್ಲೋಕವಾದಮೇಲೆ ಹೇಳಿರುವುದೇನು?  ಗಂಗಾಪಾನದಿಂದಲೇ  ಮೋಕ್ಷವು ಸಿದ್ಧಿಸುವುದು -ಎಂದು!: "ಗೀತೆಯನ್ನು ಕಿಂಚಿತ್ತಾಗಿ ಓದಿದರೂ ಆಯಿತು; ಗಂಗಾಜಲದ ಒಂದು ಲವದ ಒಂದು ಕಣದ ಒಂದು ಭಾಗವಷ್ಟನ್ನಾದರೂ ಪಾನಮಾಡಿದರಾಯಿತು … ಆತನಿಗಿನ್ನು ಯಮದರ್ಶನವಾಗದು – ಎಂದು! ( ಭಗವದ್-ಗೀತಾ ಕಿಂಚಿದ್-ಅಧೀತಾ ಗಂಗಾ-ಜಲ-ಲವ-ಕಣಿಕಾ ಪೀತಾ). (ವಾಲ್ಮೀಕಿಗಳ ಗಂಗಾಸ್ತುತಿಯ ಛಾಯೆಯೇ ಇಲ್ಲಿದೆ : ಮಾತರ್ ಗಂಗೇ ತ್ವಯಿ ಯೋ ಭಕ್ತಃ / ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ!).

ಸ್ವಲ್ಪ ಗಮನಿಸಿ: ಗಂಗೆಯ ಮಹಿಮೆಯೆಷ್ಟೆಂದರೆ, ಅದರ ಒಂದು ಬಿಂದುವಿನ ಮಹಿಮೆಯನ್ನಲ್ಲ ಇಲ್ಲಿ ಹೇಳಿರುವುದು. ಜಲದ ಲವದ ಕಣಿಕೆಯದು. ಲವವೆಂದರೂ ಲೇಶವೆಂದರೂ ಒಂದೇ; ಕಣವೆಂದರೂ ಅಣುವೆಂದರೂ ಒಂದೇ; ಇನ್ನು ಕಣದೊಂದು ಪುಟ್ಟ ಭಾಗವೇ "ಕಣಿಕೆ". ಅಲ್ಲಿಗೆ, ಗಂಗೆಯ ಜಲದ ಲವದ ಕಣದ ಕಿರುಭಾಗವಾಯಿತು! ಇಷ್ಟೇ ಸಾಕು! ಅಷ್ಟು ಶಕ್ತಿ ಅದಕ್ಕೆ, ಅಬ್ಬಬ್ಬ!


ಹಾಗಾದರೆ ಇದನ್ನು ಹೇಗೆ ಕಾಣಬೇಕು?

ಹೀಗೆ ಕವಿಯೊಬ್ಬರು, ಜ್ಞಾನಿಯೊಬ್ಬರು - ಇಬ್ಬರೂ ಗಂಗೆಯನ್ನು ತೆಗಳಿಯೂ ಹೊಗಳಿಯೂ ಇದ್ದಾರೆ. ಇದೇನೀ ದ್ವಂದ್ವ? ಸರಿಯಾದುದು ಯಾವುದು? -  ಎಂಬ ವ್ಯವಸ್ಥೆ ಬೇಕಲ್ಲವೆ?

ಈ ಪ್ರಶ್ನೆಗೆ ಉತ್ತರವನ್ನು ಎರಡು-ಮೂರು ಸ್ತರಗಳಲ್ಲಿ ಕಾಣಬಹುದು. ಮೊದಲನೆಯದಾಗಿ, ಮಹಾತ್ಮರಲ್ಲೂ ಕೆಲವೊಮ್ಮೆ ಸಣ್ಣ-ಪುಟ್ಟ ದೋಷಗಳು ಬರಬಹುದು. ಅವು ಆದರ್ಶವೆಂದಲ್ಲ. ಆ ಅಂಶದಲ್ಲಿ ಅವರನ್ನು ಅನುಕರಿಸಬೇಕಾದುದಿಲ್ಲ, ಅಷ್ಟೆ. ಅಲ್ಲಿಗವನ್ನು ಬಿಡಬೇಕು.

ಇನ್ನೂ ಸರಿಯೆಂದರೆ, ಸರಿಯಾದುದೂ ಸಹ ತಪ್ಪೆಂದು ನಮ್ಮ ಕಣ್ಣಿಗೆ ತೋರಬಹುದು. ವಾಸ್ತವವಾಗಿ ಗಂಗೆಯಿಂದಾದುದು ಲೋಕೋದ್ಧಾರವೇ. ಆದರೆ ನಮ್ಮ ಕಣ್ಣಿಗೆ ಬಿದ್ದದ್ದು ಅವಳು ಬಿದ್ದದ್ದು, ಅಷ್ಟೆ. ಸಹಾಯಮಾಡಲು ಧುಮುಕಿ ಬಂದವರನ್ನು "ಅಯ್ಯೋ ಬಿದ್ದುಹೋದೆಯಾ!" ಎಂದಂದಂತಾಯಿತು, ಅಷ್ಟೆ! ಶ್ರೀರಂಗಮಹಾಗುರುಗಳು ಒಂದು ಭವ್ಯವಾದ ಉದಾಹರಣೆಯನ್ನು ಕೊಡುತ್ತಿದ್ದರು: ಈಜು ಬರದೆ ನೀರಿನಲ್ಲಿ ಮುಳುಗುತ್ತಿರುವನನ್ನು ಉಳಿಸಲು ಈಜುಬಲ್ಲವನೊಬ್ಬ ನೀರಿಗೆ ಧುಮುಕಿದರೆ, ಇಬ್ಬರಿಗೂ ಭೇದ ತಿಳಿಯದವ ಇಬ್ಬರೂ ಬಿದ್ದಿರುವವರೇ ಎಂದುಕೊಂಡಾನು!

ಮೂರನೆಯದಾಗಿ, ಕವಿಗಳು ಕೊಡುವ ಉದಾಹರಣಗಳೆಲ್ಲಾ ಸದಾ ಪೂರ್ಣವಾಗಿಯೂ ಔಚಿತ್ಯ-ಪೂರ್ಣವಾಗಿಯೂ ಇರುತ್ತವೆಂದು ಹೇಳುವಂತಿಲ್ಲ.  ಒಟ್ಟಾರೆ ಚಿತ್ರವನ್ನು ಬಿಟ್ಟು ಕೆಲವೊಮ್ಮೆ ಏಕದೇಶವನ್ನೇ – ಎಂದರೆ ಒಂದು ಸಣ್ಣ ಭಾಗವನ್ನೇ - ತೆಗೆದುಕೊಂಡು ಯಾವುದಕ್ಕೋ ಉದಾಹರಣೆಯನ್ನಾಗಿ ಕೊಡುವುದುಂಟು! ಆಗ ಏನೋ ಭಾಗಶಃ ಅನ್ವಯವು ಘಟಿಸೀತು, ಅಷ್ಟೆ. ಕವಿ-ವಿವಕ್ಷೆಯನ್ನು ಗಮಿನಿಸಿ, ಉಳಿದದ್ದನ್ನು ಬಿಡುವುದರಲ್ಲಲ್ಲವೇ ಔಚಿತ್ಯವಿರುವುದು?  


ಮರ್ಮ

ಇದಕ್ಕಿಂತಲೂ ಮುಖ್ಯವಾಗಿ, ಶ್ರದ್ಧೆಯೆಂಬುದಿಲ್ಲದೆ ಹೋದಲ್ಲಿ, ಗಂಗೆಗೆ ಹೋಗಿಬಂದರೂ, ಮಿಂದುಬಂದರೂ ಫಲವಿಲ್ಲ,. ಮುಕ್ತಿಯತ್ತಲೇ ಉತ್ಕಟವಾಗಿ ಮನಸ್ಸು ಲಗ್ನವಾಗಿದ್ದಲ್ಲಿ ಗಂಗಾ-ಸ್ನಾನವೇ ಏಕೆ, ದೂರದಲ್ಲೆಲ್ಲೋ ಇದ್ದುಕೊಂಡೇ ಗಂಗಾ-ಜಲ-ಬಿಂದುವೊಂದರ ಪಾನ ಮಾಡಿದರೇ ಸಾಕಾದೀತು! "ಸ್ಮರಣೆಯೊಂದೆ ಸಾಲದೇ?"

ಹೀಗೆ ಒಂದೇ ಕೆಲಸವನ್ನೇ ಒಡ್ಡಾಗಿ ಗೊಡ್ಡಾಗಿ ಮಾಡುವುದಕ್ಕೂ, ಬದಲಾಗಿ ಅರಿವಿನೊಂದಿಗೆ ತಿಳಿವಿನ ಮನಸ್ಸಿನೊಂದಿಗೆ ಶ್ರದ್ಧೆಯೊಂದಿಗೆ, ಮಾಡುವುದಕ್ಕೂ ಇರುವ ಭೇದವನ್ನು ಹೀಗೆ ತಿಳಿಸಿದ್ದಾರೆಂಬುದನ್ನು ಮನಗಾಣಬೇಕು. ಯಾವುದೇ ಕರ್ಮವಾಗಲಿ,  "ವಿದ್ಯಯಾ ಶ್ರದ್ಧಯಾ ಉಪನಿಷದಾ"  ಮಾಡು – ಎಂದು ತಾನೆ ಉಪನಿಷತ್ತು ಹೇಳುವುದೂ? ಶ್ರೀರಂಗಮಹಾಗುರುಗಳು ಹೇಳುವಂತೆ "ಮರ್ಮವರಿತು ಕರ್ಮಮಾಡಬೇಕು. "

ಆದರಿದೋ: ಗಂಗಾಸ್ನಾನದಿಂದ ಪಾಪವು ಹೇಗೂ ಕಳೆಯುವುದಲ್ಲವೇ? ಎಂದುಕೊಂಡು  ಮತ್ತೆ ಪಾಪಕೃತ್ಯಕ್ಕೆ ಮನಸ್ಸು ತೊಡಗಿತೋ, ಕೆಟ್ಟೆವು. ಎಂದೇ, ಮುಖ್ಯತೀರ್ಥವಾವುದೆಂದು ಕೇಳಿಕೊಂಡು, "ಯಾವುದು ಮನೋ-ಮಲವನ್ನು ಹೋಗಲಾಡಿಸುವುದೋ ಅದೇ ಮುಖ್ಯತೀರ್ಥ" – ಎಂದು ಶಂಕರರೇ ಹೇಳುತ್ತಾರೆ ( ಕಿಂ ತೀರ್ಥಮಪಿ ಚ ಮುಖ್ಯಂ? ಚಿತ್ತ-ಮಲಂ ಯನ್ನಿವರ್ತಯತಿ).

ಇಲ್ಲದಿದ್ದಲ್ಲಿ, ಅವರೇ ಕೇಳುವ ಪ್ರಶ್ನೆ ಕಣ್ಣ ಮುಂದೆ ನಿಲ್ಲುತ್ತದೆ ("ಅನಾತ್ಮಶ್ರೀ-ವಿಗರ್ಹಣ"ಸ್ತೋತ್ರದಲ್ಲಿ): "ಜಾಹ್ನವಿಯಲ್ಲಿ ಸ್ನಾನ ಮಾಡಿದರೇನು ಬಂದಿತು - ಆತ್ಮ-ಸಾಕ್ಷಾತ್ಕಾರವನ್ನೇ ಮಾಡಿಕೊಳ್ಳದಿದ್ದಲ್ಲಿ!?: "ಸ್ನಾತಸ್ತೀರ್ಥೇ ಜಹ್ನುಜಾದೌ ತತಃ ಕಿಂ/ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್?".


ಅಂತಃಶುದ್ಧಿ-ಬಹಿಃಶುದ್ಧಿಗಳು

ಯಾವನು ಅತ್ಯಂತ ಶುದ್ಧನೋ - ಅರ್ಥಾತ್ ಅಂತರಂಗಶುದ್ಧಿಯನ್ನು ವಿಶೇಷವಾಗಿ ಹೊಂದಿರುವನೋ - ಅಂತಹವನು ಗಂಗೆಯ ಪರ್ಯಂತ ಹೋಗಲೇಬೇಕಿಲ್ಲವೆಂಬ ಮಾತು ಸಹ ಉಂಟು! ಹಾಗೆಂದು ಸಾಕ್ಷಾತ್ ಮನುಸ್ಮೃತಿಯಲ್ಲೇ ಹೇಳಿದೆ: "ನಿನ್ನ ಹೃದಯದಲ್ಲೇ ಯಮನಿದ್ದಾನಲ್ಲವೇ? ಅವನೊಡನೆ ನಿನಗೆ ತಕರಾರಿಲ್ಲವೋ, ನಿನಗೇಕೆ ಗಂಗೆ, ನಿನಗೇಕೆ ಕುರುಕ್ಷೇತ್ರ? ಅಲ್ಲೆಲ್ಲಿಗೂ ಹೋಗಬೇಕಿಲ್ಲ!  "ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿ ಸ್ಥಿತಃ | ತೇನ ಚೇದ್ ಅವಿವಾದಸ್ತೇ ಮಾ ಗಂಗಾಂ ಮಾ ಕುರೂನ್ ಗಮಃ ||"

ಇದೋ ನೋಡಿ ಸೃಷ್ಟಿಯ ಮಧುರ ವೈಚಿತ್ರ್ಯ! ಗಂಗೆಯ ಬಿಂದುಪಾನವಾದರೂ ಆಯಿತು, ಯಮನ ದರ್ಶನವಿನ್ನಿಲ್ಲ; ಹಾಗೆಯೇ, ಒಳಗಣ ಯಮನೊಡನೆ "ವಿವಾದ"ವಿಲ್ಲವೋ, ನಿನಗಿನ್ನು ಗಂಗೆಯ ಹಂಗೂ ಇಲ್ಲ!

ಸಾರವಿಷ್ಟೆ: ಗಂಗಾಸ್ನಾನ-ಪಾನ-ಸ್ಮರಣಗಳೆಲ್ಲವೂ ಸಫಲವೇ – ಯುಕ್ತವಾದ ಭಾವವಿದ್ದಲ್ಲಿ. ಮೈಮಾತ್ರ ಮುಳುಗುಹಾಕಿದರಾಗದು, ಜೊತೆಗೆ ಮನಸ್ಸು ಭಗವದ್ಭಾವದಲ್ಲಿ ಮುಳುಗಲಿ: [ಒಳಗಣ ಜ್ಞಾನ] ಗಂಗೆಯಲ್ಲಿ ಮೀಯುವುದಕ್ಕಿಂತಲೂ ಸಫಲತೆ ಮತ್ತೊಂದುಂಟೇ?

ಸೂಚನೆ: 17/2/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.