Sunday, February 13, 2022

ಶ್ರೀರಾಮನ ಗುಣಗಳು -44 ಜನಾನುರಾಗೀ- ಶ್ರೀರಾಮ (Sriramana Gunagalu - 43 Jananuragi- Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)ಶ್ರೀರಾಮನು ಜನಾನುರಾಗಿಯಾದ ಒಬ್ಬ ಆದರ್ಶ ರಾಜಕುಮಾರನಾಗಿದ್ದ.  ಶ್ರೀರಾಮನು ದಶರಥನ ಆಜ್ಞೆಯಂತೆ ಪಟ್ಟಾಭಿಷಿಕ್ತನಾಗಬೇಕಿದ್ದವನು ವನಕ್ಕೆ ತೆರಳಲು ಸಿದ್ಧನಾಗುವ  ಸಂದರ್ಭದಲ್ಲಿ ಅಯೋಧ್ಯೆಯ ಪುರಜನರು ತೋರಿದ ಸ್ನೇಹಭಾವವು ಅವನು ಯಾವ ರೀತಿ ಜನಾನುರಾಗಿಯಾಗಿದ್ದ ಎಂಬುದನ್ನು ತಿಳಿಸುತ್ತದೆ. ಒಬ್ಬ ರಾಜನನ್ನು ಪ್ರೀತಿಸಲು ಅನೇಕ ಕಾರಣಗಳಿರುತ್ತವೆ. ಅವನು ಜನರನ್ನು ತನ್ನ ಪ್ರಜೆಗಳಂತೆ ನೋಡಿಕೊಳ್ಳಬೇಕು. ತಾನು ಸತ್ಯ, ಪ್ರಾಮಾಣಿಕತೆ, ಧರ್ಮ ಮೊದಲಾದ ಅನೇಕ ಸದ್ಗುಣಗಳನ್ನು ಮೈಗೂಡಿಸಿಕೊಂಡವನಾಗಿರಬೇಕು. ಪ್ರಜಾಹಿತವೇ ತನ್ನ ಹಿತವೆಂಬಷ್ಟರ ಮಟ್ಟಿಗೆ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೂ ಅದಕ್ಕೆಲ್ಲಕ್ಕೂ ರಾಜನೇ ಕಾರಣ ಎಂಬ ಭಾವನೆ ಇರಬೇಕು. 'ರಾಜಾ ಕಾಲಸ್ಯ ಕಾರಣಂ' ಎಂಬಂತೆ ರಾಜ್ಯದಲ್ಲಿ ಮಳೆ ಬೆಳೆ ಶಾಂತಿ ಸೌಹಾರ್ದಗಳಂತಹ ಸಂಪತ್ತುಗಳು ವೃದ್ಧಿಸಲು ರಾಜನು ಹೇಗೆ ಕಾರಣನೋ, ಅಂತೆಯೇ ಸಂಭವಿಸುವ ಎಲ್ಲಾ ವಿಧವಾದ ಅನಾಹುತಗಳಿಗೂ ರಾಜನೇ ನೇರವಾಗಿ ಹೊಣೆಯಾಗಿರುತ್ತಾನೆ. ಹೇಗೆಂದರೆ ಶ್ರೀರಾಮನ ಕಾಲದಲ್ಲಿ ಒಬ್ಬ ಬ್ರಾಹ್ಮಣಪುತ್ರನ ಅಕಾಲಿಕ ಮರಣವಾಗುತ್ತದೆ. ಯಾವುದೇ ವ್ಯಕ್ತಿಯು ಅಕಾಲಿಕವಾಗಿ ಮರಣವಾದಲ್ಲಿ ಅದಕ್ಕೆ ಕಾರಣ ರಾಜನು ಮಾಡುವ ದೋಷವೇ. ಈ ಮರಣಕ್ಕೆ ಕಾರಣವೇನೆಂದು ಅನ್ವೇಷಿಸಹೊರಟಾಗ ಒಬ್ಬ ಶೂದ್ರಕನೆಂಬುವವನು ಪ್ರಕೃತಿಗೆ ವಿರೋಧವಾಗುವ ರೀತಿಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದನು. ಇದನ್ನು ಕಂಡುಹಿಡಿದು ಪ್ರಕೃತಿಗೆ ವಿರೋಧವಾಗುವಂತಹ ನಡೆಯನ್ನು ತಡೆಯುವುದು ರಾಜನ ಕರ್ತವ್ಯವಷ್ಟೇ. ಹೀಗೆ ಒಂದು ಸಣ್ಣ ಅನಾಹುತಕ್ಕೂ ರಾಜನೇ ಕಾರಣನಾಗುತ್ತಾನೆ. ಇಂತಹ ಸೂಕ್ಷ್ಮಾತಿಸೂಕ್ಷ್ಮವಾದ ವಿಷಯವನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಯಾವುದೇ ಬಗೆಯಲ್ಲೂ ಪ್ರಕೃತಿಗೆ ಮತ್ತು ಪ್ರಜೆಗಳಿಗೆ ಅಹಿತವಾಗುವಂತೆ ರಾಮನು ನಡೆದುಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕೆ ಶ್ರೀರಾಮನು ಜನಾನುರಾಗಿಯಾಗಿದ್ದ.

ಶ್ರೀರಾಮನಿಗೆ ಪ್ರಜೆಗಳು ಯಾವ ರೀತಿಯಾಗಿ ಪ್ರೀತಿಯನ್ನು ತೋರಿಸಿದ್ದರು ಎಂಬುದಕ್ಕೆ ಒಂದೆರಡು ನಿದರ್ಶನಗಳನ್ನು ನೋಡಬಹುದು. ಯಾವಾಗ ರಾಮನು ಅರಣ್ಯಕ್ಕೆ ಹೊರಡಲು ಸಿದ್ಧನಾದನೋ ಪುರಜನರೆಲ್ಲರೂ ಅವನನ್ನೇ ಹಿಂಬಾಲಿಸತೊಡಗಿದರು. ಎಷ್ಟೇ ಬಲಾತ್ಕಾರವಾಗಿ ಹಿಂದಿರುಗಿಸಿದರೂ ಮತ್ತೆ ಮತ್ತೆ ಅನುಸರಿಸುತ್ತಿದ್ದರು. ಶ್ರೀರಾಮನಾದರೋ ತನ್ನ ಮಕ್ಕಳನ್ನು ಮಾತನಾಡಿಸುವಂತೆ ಮಾತನಾಡಿಸುತ್ತಾ, ಸ್ನೇಹಪೂರ್ವಕವಾಗಿ ನೋಡುತ್ತಾ, ತನ್ನ ಕಣ್ಣಾಲೆಯಲ್ಲಿ ಕಂಬನಿಯನ್ನು ಮಿಡಿಯುತ್ತಿದ್ದನು. "ನನ್ನನ್ನು ಯಾವ ರೀತಿಯಾಗಿ ಗೌರವಾದರಗಳಿಂದ ಕಾಣುತ್ತೀರೋ ಅಷ್ಟೇ ಗೌರವಾದರಗಳನ್ನು ಭರತನಲ್ಲೂ ನೀವು ಇಡಬೇಕು. "ಯಥಾ ಯಥಾ ದಾಶರಥಿಃ ಧರ್ಮ ಏವ ಸ್ಥಿತೋ ಅಭವತ್" ಎಂಬಂತೆ ರಾಮನು ಹೇಗೆಲ್ಲಾ ಧರ್ಮವನ್ನು ಆಶ್ರಯಿಸಿ ಎಷ್ಟೇ ಸಂತೈಸಿದರೂ ಪ್ರಜೆಗಳು ರಾಮನೇ ರಾಜನಾಗಬೇಕೆಂದು ಹಠಹಿಡಿದರು. ಪುರಜನರ ಪ್ರೀತಿ ಎಷ್ಟಿತ್ತು? ಎಂಬುದಕ್ಕೆ ಇನ್ನೊಂದು ಸಾಕ್ಷಿ ಯಾವುದೆಂದರೆ ರಾಮನನ್ನು ಹೊತ್ತೊಯ್ಯುವ ಕುದುರೆಗಳಿಗೆ ಜನರು ಹೇಳುವ ಮಾತುಗಳು.  "ಎಲೈ ಅಶ್ವಗಳೇ! ನೀವು ರಾಮನನ್ನು ಹೊತ್ತುಯ್ಯುತ್ತೀರಿ. ಆಗ ಅರಣ್ಯಕ್ಕೆ ಹೋಗದೇ ಪುನಃ ಅಯೋಧ್ಯೆಯ ಕಡೆಗೇ ಮುಖಮಾಡಿ. ಅವನಿಗೆ ಒಳ್ಳೆಯದಾಗುವ ರೀತಿಯಲ್ಲಿ ನಿಮ್ಮ ನಡಿಗೆ ಇರಲಿ. ಎಲ್ಲ ಪ್ರಾಣಿಗಳಿಗಿಂತಲೂ ನಿಮಗೆ ಶಬ್ದಗ್ರಹಣಶಕ್ತಿಯು ಅತಿಶಯವಾಗಿರುತ್ತದೆ. ಆದ್ದರಿಂದ ನಮ್ಮ ಪ್ರಾರ್ಥನೆ ನಿಮಗಲ್ಲದೆ ಇನ್ನಾರಿಗೆ ಕೇಳಲು ಸಾಧ್ಯ? " ಎಂದು. ನೋಡಿ ಶ್ರೀರಾಮನ ಜನಾನುರಾಗ ಎಂತಹ ಅದ್ಭುತವಾದದ್ದು ಅಲ್ಲವೇ?

ಸೂಚನೆ : 13/2/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.