ಲೇಖಕರು: ಮೋಹನ ರಾಘವನ್.
ಹಣೆಯಲ್ಲಿ ಧರಿಸುವ ತಿಲಕ, ಕುಂಕುಮ, ಭಸ್ಮ, ಚಂದನ ಇತ್ಯಾದಿ ಲಾಂಛನಗಳು ಅಲಂಕಾರಗಳ ಮುಖ್ಯವಾದ ಭಾಗ. ಇವು ಕೆಲವೊಮ್ಮೆ ಕುಚೋದ್ಯಕ್ಕೂ ವಿಷಯವಾದರೂ ಇದರ ಹಿಂದಿನ ಗೂಢವೂ ಗಾಢವೂ ಆದ ತತ್ತ್ವ ಮನಸ್ಸಿಗೆ ಬಂದಾಗ ಕುಚೋದ್ಯವು ಕರಗಿ ಗೌರವಕ್ಕೆ ಎಡೆಯಾಗುವುದೆಂದು ಭಾವಿಸುತ್ತೇವೆ.
ಕುಂಕುಮವನ್ನು ಕುರಿತು ವಿಮರ್ಶಕರೊಬ್ಬರು "ಬ್ಯೂಟಿ ಸ್ಪಾಟ್" ಎಂದು ಕರೆದಿರುವುದನ್ನು ಶ್ರೀರಂಗಮಹಾಗುರುಗಳಿಗೆ ವಿಜ್ಞಾಪಿಸಿದಾಗ, ಅವರು 'ನಾನು ಅದನ್ನು "ಜ್ಯೋತಿಯ ಸ್ಪಾಟ್" ಎಂದು ಕರೆಯುತ್ತೇನಪ್ಪ' ಎಂದು ಉದ್ಗರಿಸಿದ್ದರು. ಋಷಿಗಳು ಅಂತರಂಗದ ಯೋಗಮಾರ್ಗದಲ್ಲಿ ಸಾಗುವಾಗ, ನಾನಾ ಸ್ಥಾನಗಳಲ್ಲಿ ನಾನಾ ಆಕಾರಗಳಲ್ಲಿ ಬೆಳಗುವ ಜ್ಯೋತಿಯನ್ನು ಕಾಣುತ್ತಾರೆ. ಅಂತಹ ಜ್ಯೋತಿರ್ದರ್ಶನದ ಸ್ಥಾನಗಳಲ್ಲಿ ಲಲಾಟವು ಪ್ರಮುಖವಾದ ಸ್ಥಾನ. ಯೋಗಕ್ಕೆ ಆಯತನವಾದ ಈ ಶರೀರದಲ್ಲಿ ಭ್ರೂಮಧ್ಯದಿಂದ ಕೆಳಗಿನ ಭಾಗವು ಪ್ರಕೃತಿ, ಅಲ್ಲಿಂದ ಮೇಲಿನದು ಭಾಗ ಪುರುಷ ಭಾಗವೆಂಬುದು ಯೋಗಿಗಮ್ಯ ಸತ್ಯ. ಭ್ರೂಯುಗವು ಪ್ರಕೃತಿ-ಪುರುಷಭಾಗಗಳ ಮಧ್ಯರೇಖೆಯಾಗಿದೆ. ಈ ಭ್ರೂಮಧ್ಯದಲ್ಲಿ ಬಿಂದುರೂಪದ ಜ್ಯೋತಿಯನ್ನು ಯೋಗಿಗಳು ಒಳಗೆ ಕಾಣುತ್ತಾರೆ. ಬಿಂದುವಿನಿಂದ ಶರೀರದಲ್ಲಿನ ನಾನಾ ದೇವತಾ ಶಕ್ತಿಗಳ ಸೃಷ್ಟಿಯನ್ನೂ ಕಾಣುತ್ತಾರೆ. ಅಷ್ಟುಮಾತ್ರವಲ್ಲದೆ, ಈ ಬಿಂದುವಿನೊಳಗೆ ಸೂಕ್ಷ್ಮರೂಪದಲ್ಲಿ ಜೀವಾತ್ಮನನ್ನು ಜ್ಯೋತೀ ರೂಪದಲ್ಲಿ ಕಾಣುತ್ತಾರೆ.
ಹೊರಗಡೆಯಿಂದ ಪ್ರಕೃತಿಸ್ವರೂಪಿಣಿಯಾಗಿ ಮಕ್ಕಳನ್ನು ಹೆತ್ತು ಪೋಷಿಸುವ ಸ್ತ್ರೀ, ಒಳಗಿನ ಆ ಸೃಷ್ಟಿಮೂಲ ಬಿಂದುವನ್ನು ಹೊರಗಡೆಯೂ ಅದೇ ಭ್ರೂಮಧ್ಯಸ್ಥಾನದಲ್ಲಿ ಅಥವಾ ಸ್ವಲ್ಪ ಮೇಲುಗಡೆ ಧರಿಸುತ್ತಾಳೆ. ಪುರುಷರೂ ಜೀವಾತ್ಮನ ಗುರುತಾಗಿ ಒಂದು ದೀಪಶಿಖೆಯ ಆಕಾರದಲ್ಲಿ, ತಿಲಕಾಕಾರದಲ್ಲಿ ಪುಂಡ್ರವನ್ನು ಧರಿಸುತ್ತಾರೆ. ಸ್ತ್ರೀಯರೂ ವಯೋಮಾನಕ್ಕೆ ತಕ್ಕಂತೆ ತಮ್ಮ ಸೃಷ್ಟಿಕಾರ್ಯದ ಹೊಣೆಯನ್ನು ಪೂರೈಸಿದ ನಂತರ ವೈರಾಗ್ಯವನ್ನು ಅವಲಂಬಿಸಿದಾಗ ತಿಲಕಾಕಾರದ ಬೊಟ್ಟನ್ನು ಲಲಾಟದಲ್ಲಿ ಧರಿಸುತ್ತಾರೆ.
ಪುರುಷರು ಧರಿಸುವ ಊರ್ಧ್ವಪುಂಡ್ರವು ಇಬ್ಬಗೆ, ನಾಮ ಎಂದು ಪಾರಿಭಾಷಿಕವಾಗಿ ಕರೆಯಲ್ಪಡುವ ಊರ್ಧ್ವಪುಂಡ್ರ, ಭಸ್ಮ-ವಿಭೂತಿ ಎಂದು ಕರೆಯಲ್ಪಡುವ ತಿರ್ಯಕ್ ಪುಂಡ್ರ ಅಥವಾ ತ್ರಿಪುಂಡ್ರ. ಇವೆರಡೂ ಕೇವಲ ಹಣೆಯಲ್ಲಿ ಮಾತ್ರವಲ್ಲದೆ ಶರೀರದ ನಾನಾ ಸ್ಥಾನಗಳಲ್ಲಿ ಧರಿಸುವ ವಾಡಿಕೆ ಇದೆ. ಊರ್ಧವಪುಂಡ್ರದಲ್ಲಿ ಉದ್ದವಾದ ಮೂರು ರೇಖೆಗಳು. ಎಡ ಬಲದಲ್ಲಿ ಬಿಳಿಯಮೃತ್ತಿಕೆಯಿಂದ ಮಾಡಿರುವ ರೇಖೆಗಳು. ಮಧ್ಯದಲ್ಲಿ ಹರಿಶಿನ,ಕುಂಕುಮ,ತುಳಸಿ,ಅಕ್ಕಿಹಿಟ್ಟು ಮುಂತಾದ ದ್ರವ್ಯಗಳಿಂದ ತಯಾರಿಸಲ್ಪಟ್ಟ ಕೆಂಪು ಬಣ್ಣದ ರುಜುವಾದ ರೇಖೆ. ಹಳದಿ ಅಥವಾ ಗೋಪಿಚಂದನದಿಂದಲೂ ಧರಿಸುವುದುಂಟು. ಮಧ್ಯರೇಖೆಯು ಸುಷುಮ್ನಾನಾಡಿಯಲ್ಲಿ ಬೆಳಗುವ ಜ್ಯೋತಿಯನ್ನೂ, ಎಡಬಲದಲ್ಲಿ ಪಕ್ಕದ ಇಡಾ-ಪಿಂಗಳಾ ನಾಡಿಗಳನ್ನೂ ಸೂಚಿಸುತ್ತದೆ. ಈ ಜ್ಯೋತಿಯ ದರ್ಶನ ಜ್ಞಾನಿಯು, ಹೃದಯ, ನಾಭಿಯ ಮೇಲುಗಡೆ, ಕಂಠ, ಭುಜಗಳು, ಬೆನ್ನು ಕತ್ತು ಮತ್ತು ಬ್ರಹ್ಮರಂಧ್ರಸ್ಥಾನದಲ್ಲ್ಲೂ ಕಾಣುತ್ತಾನೆ. ಅದರ ಸ್ಮರಣೆಯಲ್ಲಿ ಆಯಾ ಜಾಗದಲ್ಲಿ ಆಯಾ ಗಾತ್ರದಲ್ಲಿ ಇಟ್ಟುಕೊಳ್ಳುತ್ತಾನೆ.
ವಿಭೂತಿ-ಭಸ್ಮ ಎಂಬುದು ಭಸ್ಮದಿಂದ ಮಾಡಿದ ಮೂರು ಅಡ್ಡ ರೇಖೆಗಳ ರೂಪದಲ್ಲಿ ಹಣೆಯಲ್ಲಿ ವಿರಾಜಿಸುವ ಪುಂಡ್ರವಿದು. ತನ್ಮಧ್ಯದಲ್ಲಿ ಒಂದು ಊರ್ಧ್ವಪುಂಡ್ರವನ್ನೂ ಧರಿಸುವುದುಂಟು. ಸೃಷ್ಟಿಯಲ್ಲಿರುವುದೆಲ್ಲವೂ ಮೂರು-ಮೂರಾಗಿದೆ; ಮೂರು ಗುಣಗಳು (ಸತ್ತ್ವ-ರಜಸ್-ತಮಸ್), ದೋಷಗಳು(ವಾತ-ಪಿತ್ತ-ಶ್ಲೇಷ್ಮ), ಲೋಕಗಳು(ಭೂ:-ಭುವ:-ಸುವ:), ತ್ರಿಮೂರ್ತಿಗಳು, ವೇದಗಳು(ಋಗ್-ಯಜುಸ್-ಸಾಮ), ಪ್ರಣವದ ಮಾತ್ರೆಗಳು(ಅ -ಉ-ಮ). ಇವನ್ನು ನಾವೆಲ್ಲಾ ಧರಿಸಿದ್ದೇವೆ, ಅಷ್ಟು ಮಾತ್ರವಲ್ಲದೇ ಇವೆಲ್ಲದರ ಪ್ರೇರಕ ಶಕ್ತಿಯಾಗಿದ್ದು ಎಲ್ಲವನ್ನೂ ಭಸ್ಮರೂಪದಲ್ಲಿ ತನ್ನಲ್ಲಿ ಲಯಗೊಳಿಸಿಕೊಳ್ಳುವ ಪರಾತ್ಪರ ವಸ್ತುವನ್ನು ಸೂಚಿಸುತ್ತದೆ ಭಸ್ಮ- ತ್ರಿಪುಂಡ್ರ.
ಶ್ರೀರಂಗಮಹಾಗುರುಗಳು ಧ್ಯಾನಮಗ್ನರಾದ ತಮ್ಮ ಶಿಷ್ಯರ ಶರೀರದಲ್ಲಿ, ಯೋಗದೆಶೆಯಲ್ಲಿ ಇಬ್ಬಗೆಯ ಪುಂಡ್ರಗಳ ಗುರುತು ಸಹಜವಾಗಿ ಮೂಡಿಬರುತ್ತಿರುವುದನ್ನು ತೋರಿಸಿ, ಈ ಪುಂಡ್ರಗಳ ಯೌಗಿಕ ಸ್ವರೂಪವನ್ನು ಪ್ರತಿಪಾದಿಸಿದ್ದರು.
(ಮುಂದುವರಿಯುವುದು)
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 12/2/2022 ರಂದು ಪ್ರಕಟವಾಗಿದೆ.