Saturday, February 5, 2022

ನವವಿಧ ಭಕ್ತಿ - 14 ವಿವಿಧ ರೀತಿಯ ಆತ್ಮಸಮರ್ಪಣೆ (Navavidha Bhakti -14 Vividha Ritiya Atmasamarpane)


(ಪ್ರತಿಕ್ರಿಯಿಸಿರಿ lekhana@ayvm.in)ಆತ್ಮನಿವೇದನಂ - 1


ಭಕ್ತಿಯಲ್ಲಿ ಕೊನೆಯ ಘಟ್ಟ ಆತ್ಮನಿವೇದನ. ಅದು ಪರಮಭಕ್ತಿ. ಎಲ್ಲ ಹಂತಗಳನ್ನೂ ದಾಟಿ ತನ್ನ ಸರ್ವಸ್ವವನ್ನೂ-ಮನಸ್ಸು-ಬುದ್ಧಿ-ಹೃದಯ-ಆತ್ಮವನ್ನೇ ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ. ಅವನಲ್ಲದೇ ಇನ್ಯಾವ ವ್ಯವಹಾರಕ್ಕೂ ಮನಸ್ಸೊಪ್ಪುವುದಿಲ್ಲ. ಮನಸ್ಸಿನ ಸ್ಥಿತಿವಿಶೇಷವದು. ಅಂತಹ ಸ್ಥಿತಿ ಏರ್ಪಡುವುದು ಬಹುಕಷ್ಟ. ಆ ಸ್ಥಿತಿಯನ್ನು ಸಾಧಿಸಿದ ಕೆಲವು ಭಕ್ತಶ್ರೇಷ್ಠರ ಕಥೆಗಳನ್ನು ಕೇಳಿದಾಗ ಹೀಗೂ ಉಂಟೇ ಎಂದೆನಿಸಿದರೆ ಆಶ್ಚರ್ಯವೇನಿಲ್ಲ.


ಗೋದಾದೇವೀ 

ದಕ್ಷಿಣಭಾರತದಲ್ಲಿ ಪ್ರಸಿದ್ಧರಾದ ಹನ್ನೆರಡು ಆಳ್ವಾರರುಗಳಲ್ಲಿ ಒಬ್ಬಳು ಆಂಡಾಳ್. ಗೋದೆ  ಎಂಬುದು ಅವಳ ಜನ್ಮನಾಮ. ಪರಮಭಕ್ತೆ, ಆತ್ಮನಿವೇದನಕ್ಕೆ ಅತ್ಯಂತ ಪ್ರಸಿದ್ಧಳಾದವಳು. ಬಾಲ್ಯದಿಂದಲೇ ತನ್ನನ್ನು ಭಗವಂತನಿಗೆ ಸಮರ್ಪಿಸಿಕೊಂಡವಳು. ಶ್ರೀವಿಲ್ಲಿಪುತ್ತೂರ್ ಊರಿನ ಪ್ರಸಿದ್ಧವಾದ ವಟಪತ್ರಶಾಯಿಯ(ರಂಗನಾಥನ) ದೇವಸ್ಥಾನದಲ್ಲಿ ಕೈಂಕರ್ಯ ಮಾಡುತ್ತಿದ್ದವರು ಪೆರಿಯಾಳ್ವಾರ್. ಅವರಿಗೆ ದೇವಸ್ಥಾನದ ತುಳಸಿಮಂಟಪದ ಸಮೀಪದಲ್ಲಿ ಸಿಕ್ಕಿದ ಮಗುವೇ ಗೋದೆ. ಅದನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಾರೆ. ಮಗುವಿಗೆ ಬಾಲ್ಯದಿಂದಲೂ ಕೃಷ್ಣನ ಕಥೆಗಳ ಮೂಲಕ ಭಕ್ತಿರಸವನ್ನು ಉಣಬಡಿಸುತ್ತಾರೆ. ಪುಷ್ಪವನವನ್ನು ನಿರ್ಮಿಸಿ ವಟಪತ್ರಶಾಯಿಗೆ ಹಾರಸಮರ್ಪಣೆ ಮಾಡುವುದು ಅವರ ನಿತ್ಯಕೈಂಕರ್ಯವಾಗಿದ್ದಿತು. ಬಾಲಕಿ ಹೂಮಾಲೆಯನ್ನು ತಾನು ಧರಿಸಿ ಹಾಗೆಯೇ ಇಡುತ್ತಿದ್ದಳು. ಅದು ಹೊರಚೇಷ್ಟೆಯಾಗಿರದೇ ಅಂತರಂಗದ ಕೃಷ್ಣನಿಗೆ ಸಮರ್ಪಿಸಿ ಸಂತೋಷಪಡುವ ನಿತ್ಯವಿಧಿಯಾಗಿರುತ್ತಿದ್ದಿತು. ಒಂದು ದಿನ ಹಾರವನ್ನು ಭಗವಂತನಿಗೆ ಸಮರ್ಪಿಸುವಾಗ ಅದರಲ್ಲೊಂದು ಕೂದಲು ಕಂಡಿತು. ಎಂತಹ ಅಪಚಾರ! ಭಗವದರ್ಪಣೆಗೆ ಇದು ಯೋಗ್ಯವಲ್ಲ ಎಂದು ತಿರಸ್ಕರಿಸಿದರು. ಗೋದೆಯಿಂದಲೇ ಅಪಚಾರವಾಗಿರಬೇಕೆಂದು ಊಹಿಸಿ ವಿಚಾರಿಸಲು "ನಾನು ನಿತ್ಯವೂ ಹೀಗೆಯೇ ಮಾಡುತ್ತಿರುವೆನಪ್ಪಾ" ಎಂದು ಅತ್ಯಂತ ಮುಗ್ಧತೆಯಿಂದ ಉತ್ತರಿಸುತ್ತಾಳೆ ಬಾಲಕಿ! ಅಂದು ರಾತ್ರಿ ಕನಸ್ಸಿನಲ್ಲಿ ಭಗವಂತನು "ಗೋದೆಯು ಧರಿಸಿಟ್ಟ ಪುಷ್ಪಮಾಲಿಕೆಯೇ ನಮಗೆ ಪ್ರಿಯವಾದದ್ದು, ಆದನ್ನೇ ಸಮರ್ಪಿಸಿ" ಎಂದು ನುಡಿಯುತ್ತಾನೆ. ಇದನ್ನು ಕೇಳಿದಾಗ ಯಾವ ಭಾವದಲ್ಲಿ ಇವಳು ಸಮರ್ಪಣೆ ಮಾಡುತ್ತಿದ್ದಳೆಂಬುದು ಇವರಿಗೆ ಅರಿವಾಯಿತು. ಭಗವದಾಜ್ಞೆಯಂತೆಯೇ ಭಗವಂತನಿಗೆ ಪ್ರಿಯವಾದ ಆ ಹಾರವನ್ನೇ ಸಮರ್ಪಿಸುತ್ತಾರೆ. ಅಂದಿನಿಂದ 'ಶೂಡಿಕ್ಕೊಡುತ್ತ ನಾಚ್ಚಿಯಾರ್'(ತಾನು ಧರಿಸಿ ಸಮರ್ಪಿಸಿದ ದೇವಿ) ಎಂಬ ಬಿರುದಾಂಕಿತಳಾದಳು. ಎಲ್ಲವೂ ಭಗವಂತನಿಗಾಗಿ ಎಂಬ ಭಾವವೇ  ಸದಾಕಾಲವೂ ಅವಳಲ್ಲಿ ಉಕ್ಕಿಬರುತ್ತಿತ್ತು.  ಅಲಂಕಾರವೂ ಅವನ ಸಂತೋಷಕ್ಕೆಂದೇ ಭಾವಿಸುವ ಪರಿ ಇವಳದು. 


ಆತ್ಮನಿವೇದನಕ್ಕೆ ಮಾತ್ರವಲ್ಲದೆ ಕೀರ್ತನ-ಶ್ರವಣ-ಸ್ಮರಣ-ದಾಸ್ಯಭಕ್ತಿಗಳಿಗೂ ಉದಾಹರಣೆಯಾಗಿದ್ದವಳು ಗೋದಾದೇವೀ. ದಾಸ್ಯಭಕ್ತಿಯಲ್ಲಿ ಅವಳ ವಿಜ್ಞಾಪನೆ ಈ ರೀತಿಯದು: "ನೂರು ಕೊಡದಲ್ಲಿ ಬೆಣ್ಣೆಯನ್ನೂ ನೂರು ಕೊಡದಲ್ಲಿ ಅಕ್ಕಾರವಡಿಶಲ್(ಸಕ್ಕರೆಪೊಂಗಲ್) ಸಮರ್ಪಿಸುವೆನು. ಅದನ್ನು ನಿನ್ನ ಕಣ್ಣಿನಿಂದ ವೀಕ್ಷಿಸಿ ಪ್ರಸನ್ನನಾಗು. ಮತ್ತು ನನ್ನ ಹೃದಯದಲ್ಲಿ ನೀನು ಸೇರಿಕೊಂಡರೆ ನೂರನ್ನು ಸಾವಿರವಾಗಿ ಮಾಡಿಕೊಡುತ್ತೇನೆ; ನೀನು ನನ್ನ ಹೃದಯದಲ್ಲಿಯೇ ನೆಲೆಸಿಬಿಟ್ಟರೆ ನಿನ್ನ ದಾಸಿಯಾಗಿ ನನ್ನ ಆಯುಃಪರ್ಯಂತ ಕೈಂಕರ್ಯಮಾಡುವೆನು." ಅಂತರಂಗದಲ್ಲಿಯೇ ಪಾದಸೇವನ, ಪುಷ್ಪಮಾಲಿಕಾ ಅರ್ಚನೆ ಮುಂತಾಗಿ ನಾನಾ ಭಾವಗಳಲ್ಲಿ ಭಗವಂತನನ್ನು ಅರಾಧನೆ ಮಾಡಿದವಳು.


ತಿರುಪ್ಪಾಣಾಳ್ವಾರ್ 

ಹಾಗೆಯೇ ತಿರುಪ್ಪಾಣಾಳ್ವಾರ್ ಮತ್ತೊಬ್ಬ ಆಳ್ವಾರರು. ಇವರೂ ಅಯೋನಿಜರು. ಪಾಣರ್ ಕುಲದವರಿಂದ ಬೆಳೆಸಲ್ಪಟ್ಟವರು. (ವೀಣೆಯನ್ನು ನುಡಿಸಿ ಭಗವಂತನನ್ನು ಪೂಜಿಸುವ ಕುಲದವರೆಂಬ ಪ್ರಸಿದ್ಧಿ). ನಿತ್ಯವೂ ಶ್ರೀರಂಗದಲ್ಲಿ ದೇವಸ್ಥಾನದ ಎದುರುಗಡೆಯಲ್ಲಿ ಕಾವೇರಿತೀರದಲ್ಲಿ ವೀಣೆಯಂತಹ ವಾದ್ಯವನ್ನು ನುಡಿಸುತ್ತ ಭಗವಂತನಲ್ಲಿ ಮೈಮರೆತು ಗಾನಮಾಡುವುದನ್ನೇ ಕೈಂಕರ್ಯವಾಗಿಟ್ಟುಕೊಂಡಿದ್ದರು. ಆ ಕುಲದವರಿಗೆ ದೇವಾಲಯದ ಒಳಗಡೆ ಪ್ರವೇಶವಿರಲಿಲ್ಲವಾದ್ದರಿಂದ ಅಂತರಂಗದಲ್ಲೇ ರಂಗನಾಥನನ್ನು ಸ್ಮರಿಸುತ್ತ ಗಾನಮಾಡುತ್ತಿದ್ದರು. ಬ್ರಾಹ್ಮಣರಿಗೆ ದಾರಿಬಿಟ್ಟು ದೂರಸರಿದು ನಿಲ್ಲುವ ಆಗಿನ ಕಾಲದ ಸಂಪ್ರದಾಯವನ್ನು ಇವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ದೇವಾಲಯದ ಅರ್ಚಕರು ದೇವರ ಅಭಿಷೇಕಕ್ಕಾಗಿ ಕಾವೇರಿ-ನೀರಿಗಾಗಿ ಹೋಗುತ್ತಿರುವಾಗ ಪಾಣರ್ ದಾರಿಯಲ್ಲಿ ನಿಂತಿರುವುದನ್ನು ಕಂಡರು. ಇವರು ಕಣ್ಮುಚ್ಚಿ ಮೈಮರೆತು ಗಾನಮಾಡುತ್ತಿದ್ದುದರಿಂದ ಅರ್ಚಕರ ಆಗಮನದ ಪರಿವೆಯೇ ಆಗಲಿಲ್ಲ. ಕುಪಿತರಾದ ಅರ್ಚಕರು ಅವರನ್ನು ಎಚ್ಚರಗೊಳಿಸಲು ಒಂದು ಕಲ್ಲನ್ನು ಎಸೆಯಲಾಗಿ ಅದು ಪಾಣರ ಹಣೆಗೆ ತಾಗಿ ರಕ್ತ ಸುರಿಯತೊಡಗಿತು. ಎಚ್ಚರವಾದ ಪಾಣರ್ ಕ್ಷಮಾಯಾಚನೆ ಮಾಡಿದರು.  ಅಭಿಷೇಕಕ್ಕಾಗಿ ನೀರುತಂದ  ಅರ್ಚಕರಿಗೆ ಕಾದಿತ್ತು ಆಶ್ಚರ್ಯ! ಅಲ್ಲಿ ಭಗವಂತನ ವಿಗ್ರಹದ ಹಣೆಯಿಂದ ರಕ್ತಸುರಿಯುತ್ತಿರುವುದನ್ನು ಕಂಡು ಅರ್ಚಕರು ದಿಗ್ಭ್ರಾಂತರಾದರು. ಅರ್ಚಕರೂ ಶುದ್ಧಭಕ್ತರಾಗಿ ಪೂಜೆ ಮಾಡುವವರೇ. ಆದರೆ ಕೋಪದಲ್ಲಿ ನಡೆದ ದುರ್ಘಟನೆಯಿದು. ಆ ಏಟನ್ನು ಭಗವಂತ ತೆಗೆದುಕೊಂಡಿದ್ದಾನೆ.  ತನ್ನಿಂದಾದ ಅಪಚಾರಕ್ಕೆ ಭಗವಂತನಲ್ಲಿ ಬಹಳವಾಗಿ ಕ್ಷಮೆಬೇಡಿದರು. ರಾತ್ರಿ ಭಗವಂತನು ಕನಸ್ಸಿನಲ್ಲಿ ಕಾಣಿಸಿಕೊಂಡು "ನಿನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆ ಭಕ್ತನನ್ನು ನೀನೇ ನನ್ನ ಸನ್ನಿಧಿಗೆ ಕರೆದುಕೊಂಡು ಬರಬೇಕು" ಎಂದು ಆಜ್ಞೆ ಮಾಡಿದನಂತೆ. ಭಗವದ್ಭಾವದಲ್ಲಿ ಮುಳುಗಿದ್ದ ಪಾಣರನ್ನು ಎಚ್ಚರಗೊಳಿಸಿ "ನಿಮ್ಮನ್ನು ದೇವಸ್ಥಾನಕ್ಕೆ ಕರೆತರಬೇಕೆಂದು ಭಗವದಾಜ್ಞೆಯಾಗಿದೆ" ಎಂದೆಷ್ಟು ಹೇಳಿದಾಗಲೂ "ಈ ಅಪವಿತ್ರ ಪಾದಾಗಳಿಂದ ಪರಮಪವಿತ್ರ ದೇವಾಲಯವನ್ನು ಸ್ಪರ್ಶಿಸಲಾರೆ" ಎಂದು ಬರಲು ಒಪ್ಪದಿದ್ದ ಪಾಣರನ್ನು ಅರ್ಚಕರು ಎಳೆದು ತಮ್ಮ ಹೆಗಲಮೇಲೆ ಕುಳ್ಳಿರಿಸಿಕೊಂಡರು. "ಅಯ್ಯೋ! ಅಪಚಾರ, ಅಪಚಾರ" ಎಂದು ಕೂಗಿದರೂ "ಭಗವದಾಜ್ಞೆ" ಎನ್ನುತ್ತಲೇ ವಿಜೃಂಭಣೆಯಿಂದ ನಡೆದೇಬಿಟ್ಟರು ಅರ್ಚಕಮುನಿ. ಅಂದಿನಿಂದ ಪಾಣರ್ "ಮುನಿವಾಹನ"ರಾದರು.  ದೀರ್ಘಕಾಲದ ಹಂಬಲ ಪೂರ್ಣವಾಗುತ್ತದೆ ಎನ್ನುತ್ತಾ  ಪಾಣರ್ ಭಗವಂತನ ಮೂರ್ತಿಯನ್ನು ನೋಡಿ ಆನಂದಪರವಶರಾದರು. ರಂಗನಾಥಮೂರ್ತಿಯನ್ನು ಪಾದಾದಿಕೇಶಾಂತವಾಗಿ ವೀಕ್ಷಿಸುತ್ತಾ ಹತ್ತು ಪಾಶುರಗಳಿಂದ ಕೊಂಡಾಡುತ್ತಾರೆ. ಪಾದ-ಪೀತಾಂಬರ-ಅವನ ವಿಶಾಲವಕ್ಷಸ್ಥಳ-ಕಂಠ-ಅಧರ-ನೀಳಕಣ್ಣುಗಳು, ಹೀಗೆ ಅವನ ಇಡೀ ತಿರುಮೇನಿಯ ಸೊಬಗನ್ನು ವರ್ಣಿಸುತ್ತಾ "ಎಂತಹ ಸೌಂದರ್ಯ!" ಎಂದು ತನ್ಮಯತೆಯನ್ನು ಹೊಂದುತ್ತಾರೆ. ಬಾಹ್ಯವಾಗಿಯೂ ಅಂತರಂಗದಲ್ಲೂ ದರ್ಶನಮಾಡುತ್ತಾ "ಇಂತಹ ದರ್ಶನವಾದ ಮೇಲೆ ಈ ಕಣ್ಣುಗಳಿಂದ ಬೇರೆ ಏನನ್ನೂ ನೋಡುವುದಿಲ್ಲ" ಎಂದು ಪ್ರತಿಜ್ಞೆ ಮಾಡುತ್ತಿರುವಂತೆಯೇ ಭಗವಂತನು ಇವರನ್ನು ಪರಮವಾತ್ಸಲ್ಯದಿಂದ  "ತಿರುಪ್ಪಾಣಾಳ್ವಾರರೇ" ಎಂದು ಸಂಬೋಧಿಸಿದನಂತೆ. ದರ್ಶನಮಾಡುತ್ತಲೇ ಆಳ್ವಾರರು ಭಗವಂತನಲ್ಲಿ ಐಕ್ಯವಾದರು ಎನ್ನುವುದು ಐತಿಹ್ಯ. ಇವರ ವೃತ್ತಾಂತವು ಆತ್ಮನಿವೇದನಕ್ಕೆ ಉತ್ತಮ ಉದಾಹರಣೆಯಲ್ಲವೇ?

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/2/2022 ರಂದು ಪ್ರಕಟವಾಗಿದೆ.