Sunday, February 6, 2022

ಶ್ರೀರಾಮನ ಗುಣಗಳು -43 ದೈವಪ್ರತಿಪಾದಕ - ಶ್ರೀರಾಮ (Sriramana Gunagalu - 43 Daivapratipadaka Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




'ದೈವ' ಎಂಬ ಅದೃಷ್ಟ-ನೋಡಲಾಗದ ವಿಷಯವನ್ನು ನಂಬಿ ಸಮಾಹಿತ ಮನಸ್ಕನಾಗಿರುವುದು ಒಂದು ಸಾಹಸವೇ ಸರಿ. ಏಕೆಂದರೆ ಕಣ್ಣಿಗೆ ಕಾಣುವುದಿಲ್ಲ, ಆದರೆ ಇದರಿಂದ ಹೊರತಾಗಿ ಯಾವ ಕಾರ್ಯವೂ ನಡೆಯುವುದಿಲ್ಲ. ನಮ್ಮ ಪ್ರತಿಯೊಂದು ಆಗು-ಹೋಗುಗಳಿಗೂ ಇದೇ ಕಾರಣ ಎಂದು ಪ್ರಬಲವಾಗಿ ನಂಬುತ್ತೇವೆ. ಇದಕ್ಕೆ ಶ್ರೀರಾಮನೂ ಹೊರತಾಗಿರಲಿಲ್ಲ. ಯಾವಾಗ ಶ್ರೀರಾಮನಿಗೆ ಅಯೋಧ್ಯೆಯನ್ನು ತ್ಯಜಿಸಿ ಅರಣ್ಯಕ್ಕೆ ಹೋಗಲು ತಂದೆಯಿಂದ ಅಪ್ಪಣೆ ಆಯಿತೋ, ಅದಕ್ಕೆ ಕಾರಣವೇನೆಂಬುದನ್ನು ಶ್ರೀರಾಮನು ಬಹಳ ವಿವರವಾಗಿ ಲಕ್ಷ್ಮಣನಿಗೆ ಹೇಳುತ್ತಾನೆ. ಇದರಿಂದ ಶ್ರೀರಾಮನು ಯಾವ ರೀತಿಯಾಗಿ ದೈವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಎಂಬುದು ಸ್ಫುಟವಾಗುತ್ತದೆ. 

'ದೈವ' ಎಂದರೇನು? ಈ ಪದಕ್ಕೆ ದಿಷ್ಟ, ಭಾಗಧೇಯ, ವಿಧಿ- ಇತ್ಯಾದಿ ಅರ್ಥಗಳಿವೆ. ಅಂದರೆ ನಾವು ಯಾವೆಲ್ಲ ಕರ್ಮವನ್ನು ಮಾಡುತ್ತೇವೋ ಅವೆಲ್ಲವೂ ಅಲ್ಲೇ, ಆಗಲೇ, ಫಲಿಸಬೇಕೆಂದಿಲ್ಲ. ಕೆಲವು ಕರ್ಮಗಳು ಫಲಿಸಬೇಕಾದರೆ ಇನ್ನೆಷ್ಟೋ ಕಾಲದ ಅವಶ್ಯಕತೆ ಇರುತ್ತದೆ. ಹಾಗೆಯೇ ಎಂದೋ ನಡೆದ ಕರ್ಮವು ಇನ್ನಾವಾಗಲೋ ಅದರ ಫಲವನ್ನು ಅನುಭವಿಸುವ ಕಾಲ ಬಂದಾಗ ಅದನ್ನು 'ದೈವ' ಎಂದು ಹೇಳುತ್ತಾರೆ. ನಮಗೆ ಕರ್ಮ ಯಾವಾಗ ಸಂಭವಿಸಿದೆ ಎಂಬುದರ ಅರಿವು ಇರುವುದಿಲ್ಲ. ಕರ್ಮವು ನಮ್ಮಲ್ಲಿ ಸಂಸ್ಕಾರರೂಪವಾಗಿ ಇದ್ದು ಪಕ್ವವಾದಾಗ ಫಲ ಕೊಡುತ್ತದೆ. ಇಂತಹ ಕರ್ಮವನ್ನೇ 'ದೈವ' ಎನ್ನಲಾಗುತ್ತದೆ. ಇದೇ"ಕರ್ಮಸಿದ್ಧಾಂತ'ದ ರಹಸ್ಯವೂ ಆಗಿದೆ. ಅಲ್ಲದೇ ಈ ಕರ್ಮಫಲವು ಕೆಲವೊಮ್ಮೆ ಜನ್ಮಾಂತರದಲ್ಲೂ ಘಟಿಸಬಹುದು. ಇಂತಹ ಕಡೆ ಸಾಮಾನ್ಯವ್ಯಕ್ತಿಯು ಆ ಕರ್ಮದ ಮರ್ಮವನ್ನು ತಿಳಿಯಲಾರದೇ ಹೋಗುತ್ತಾನೆ. ಮತ್ತು ತಾನು ಮಾಡಿರುವ ಕರ್ಮಕ್ಕೆ ಹೇಗೆ ಸುಖವನ್ನೋ ದುಃಖವನ್ನೋ ಅನುಭವಿಸುತ್ತಿದ್ದೇನೆ ಎಂಬುದನ್ನು ತಿಳಿಯದೆ, ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಈ ಎರಡು ಬಗೆಯ ಭಾವಾತಿರೇಕಕ್ಕೆ ತುತ್ತಾಗುತ್ತಾನೆ. ಆದರೆ ಯಾರು ಈ ದೈವವೆಂಬ ಕರ್ಮಫಲವನ್ನು ತಿಳಿಯುತ್ತಾನೋ ಅವನು ತಾನು ಅನುಭವಿಸುವ ಸುಖ ದುಃಖಗಳಿಗೆ ತಾನು ಮಾಡಿದ ಕರ್ಮವೇ ಕಾರಣ ಎಂದು ತಿಳಿದು ಶಾಂತಿಯನ್ನು ಪಡೆಯುತ್ತಾನೆ. ಇಲ್ಲಿ ಶ್ರೀರಾಮನೂ ಕೂಡ ಇಂತಹ ದೈವದ ವಿಷಯದಲ್ಲಿ ನಂಬಿಕೆ ಇಟ್ಟಿರುವನಾದ್ದರಿಂದ ಅಯೋಧ್ಯೆಯಿಂದ ಅರಣ್ಯಕ್ಕೆ ಹೋಗುವಾಗಲೂ ಸಮಚಿತ್ತನಾಗಿದ್ದ. ಇದಕ್ಕೆ ಶ್ರೀರಾಮನು ಕೊಡುವ ಸಮಾಜಾಯಿಷಿಯನ್ನು ನೋಡಿದರೆ ಅರ್ಥವಾಗುತ್ತದೆ.

"ಎಲೈ! ಲಕ್ಷ್ಮಣ ! – ಇಲ್ಲಿ ಬುದ್ಧಿಪೂರ್ವಕವಾಗಿ ಯಾವ ಕಾರ್ಯವೂ ನಡೆದಿಲ್ಲ. ವಿಧಾತನ ನಿಯಮವನ್ನು ಭಂಗ ಮಾಡಲು ನಾನು ಇಚ್ಛಿಸುವುದಿಲ್ಲ. ಏಕೆಂದರೆ ವಿಧಾತನೇ ನನ್ನನ್ನು ಅರಣ್ಯಕ್ಕೆ ಕಳುಹಿಹಸಲು ಕೈಕೇಯಿಯಾಗಿ, ಮಂಥೆರೆಯಿಂದ ಪ್ರೇರಿತನಾಗಿ ಬಂದರೆ ಆದನ್ನು ನಾನು ಹೇಗೆ ತಿರಸ್ಕರಿಸಲಿ? ಇದರಿಂದಲೇ ವಿಧಾತನಿಗೆ ಕೈಕೇಯನ್ನು ಸಂತೋಷಪಡಿಸಬೇಕೆಂದಿದ್ದರೆ ಅದನ್ನು ನಾನು ಹೇಗೆ ನಿಲ್ಲಿಸಲಿ? ಅಲ್ಲದೇ ಕೈಕೇಯಿಗೆ ನಮ್ಮಲ್ಲಿ ಯಾವ ಬಗೆಯ ತಾರತಮ್ಯವೂ ಇರಲಿಲ್ಲ. ಭರತನನ್ನು ಮತ್ತು ನಮ್ಮನ್ನು ಮಗನೆಂದೇ ತಿಳಿದವಳು ಆ ತಾಯಿಯಲ್ಲವೇ? ಇಂತಹ ತಾಯಿಯು ನನ್ನ ಮೇಲೆ ತಾಳಿರುವ ಕಠೋರ ಧೋರಣೆಗೆ ನಾನು ಇದನ್ನು ದೈವವೆಂದೇ ಪರಿಗಣಿಸದೇ ಮತ್ತಾವುದನ್ನು ನಾನು ಸಮರ್ಥಿಸುವುದಿಲ್ಲ" ಎನ್ನುತ್ತಾನೆ. ಇಂತಹ ಅನೇಕ ದೈವವನ್ನು ಸಮರ್ಥಿಸುವ ಮಾತನ್ನು ಹೇಳಿ ತಾನೊಬ್ಬ ದೈವಪ್ರತಿಪಾದಕ ಎಂಬುದನ್ನು ಶ್ರೀರಾಮನು ಪ್ರತಿಷ್ಠಾಪಿಸುತ್ತಾನೆ. 

ಸೂಚನೆ : 6/2/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.