Saturday, February 19, 2022

ವಸ್ತ್ರಾಭರಣ - 10 ಕೇಶಾಲಂಕಾರ (Vastra Bharana - 10 Kesaalankara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಅನಾದಿ ಕಾಲದಿಂದಲೂ ಕೇಶಗಳನ್ನು ಆಯಾ ಕಾಲದ ಫ್ಯಾಷನ್ಗೆ ತಕ್ಕಂತೆ ಅನೇಕ ವಿಧವಾಗಿ ಕಟ್ಟಿ, ಅಲಂಕರಿಸುವ ವಾಡಿಕೆಯಿದೆ. ನಮ್ಮ ದೇಶ ಮೊದಲುಗೊಂಡು ನಾನಾ ದೇಶಗಳಲ್ಲಿ ಕಾಲ, ದೇಶಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತಾ ಬಂದಿದೆ. ಆದರೆ ಅದರ ನಡುವೆ ನಮ್ಮ ದೇಶದಲ್ಲಿ ಯೋಗ, ಯೋಗಸಾಧನೆಯ ದೃಷ್ಟಿಯಿಂದ ಕೇಶಾಲಂಕಾರಕ್ಕೆ ಒಂದು ಹಾದಿಯನ್ನು ಹಾಕಿಕೊಟ್ಟಿರುವುದನ್ನು ಗಮನಿಸಬೇಕು. 


ಕೂದಲು ಸತ್ತ ಜೀವಕಣಗಳ ರಾಶಿ, ಆದ್ದರಿಂದಲೇ ಕತ್ತರಿಸಿದಾಗ ನೋವು ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ  ನಮ್ಮ ಮೈಯಲ್ಲಿ ರೋಮ-ರೋಮವೂ ಚರ್ಮದ ಕೆಳಗಿನ ನರಗಳಿಗೆ ಅಂಟಿಕೊಂಡಿದೆ. ಆದ್ದರಿಂದಲೇ ಎಳೆದರೆ, ನೋವು ಉಂಟಾಗುತ್ತದೆ. ಕೇಶರಾಶಿಯನ್ನು ನಾನಾ ವಿಧವಾಗಿ ವಿಭಜಿಸಿ,  ತಿರುಚಿ, ಕಟ್ಟಿ, ಇಳಿಯಬಿಟ್ಟು ಅನೇಕ ವಿನ್ಯಾಸಗಳನ್ನು ಮಾಡಿದಾಗ ಅದು ನಮ್ಮ ನರಗಳಮೂಲಕ ನಮ್ಮ ಮೇಲೆ ಪ್ರಭಾವವನ್ನು ಬೀರುತ್ತದೆ. ಹಿಂದೆಯೇ ಬಟ್ಟೆಗಳಿಂದ ಉಂಟಾಗುವ ಬಂಧಗಳ ಉಲ್ಲೇಖವನ್ನು ಮಾಡಿ್ದ್ದವು. ಅಂತೆಯೇ ಕೇಶರಾಶಿಯನ್ನು ಕಟ್ಟುವ ಕ್ರಮಗಳು ಸರಿಯಾಗಿ ಯೋಜಿಸಿದ್ದಲ್ಲಿ ಯೋಗ ಸಾಧನೆಗೆ ಅನುಕೂಲ ಮಾಡುವ ಶಕ್ತಿಯನ್ನು ಹೊಂದಿದೆ. 


ಕೇಶರಾಶಿಯನ್ನು  ಕಟ್ಟಿಡುವುದು ಯೋಗಸಾಧನೆಗೆ ಪೋಷಕ. ಆದ್ದರಿಂದಲೇ ಬದ್ಧಶಿಖಿಯಾಗಿ ಎಲ್ಲ ಕರ್ಮಗಳನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಸಾಮಾನ್ಯವಾಗಿ ತಲೆಯ ಹಿಂಭಾಗದಲ್ಲಿ ಕೂದಲನ್ನು ಸೇರಿಸಿ ಶಿಖೆಯನ್ನು ಕಟ್ಟುತ್ತಾರೆ. ಈ ವಿನ್ಯಾಸದಿಂದ ತಲೆಯಹಿಂಬದಿಯ ಮರ್ಮಸ್ಥಾನದ ರಕ್ಷಣೆಯಾಗುತ್ತದೆ. ತಲೆಯ ಶಿಖಾಸ್ಥಾನದಲ್ಲಿ  ಜ್ಞಾನಿಯು ತನ್ನೊಳಗೆ ಪರಮಾತ್ಮ ಜ್ಯೋತಿಯನ್ನು ದೀಪಶಿಖೆಯ ಆಕಾರದಲ್ಲಿ ಕಾಣುತ್ತಾನೆ. ಆ ಸ್ಮರಣೆಯಲ್ಲಿ ಹೊರಗಿನ ಈ ಶಿಖೆ. ಪುರುಷರು ಅಂಗುಷ್ಟಗಾತ್ರದ ಶಿಖೆಯನ್ನು ಧರಿಸುತ್ತಾರೆ. ಇನ್ನೂ ಪರಮ ವೈರಾಗ್ಯದಿಂದ ಕೂಡಿದ ಋಷಿಮುನಿಗಳು ಜಗತ್ತಿಗೆ ವಿಮುಖರಾಗಿ, ಕೇಶಭಾರವನ್ನು ಶಿರದ ಮೇಲೆ ಕಟ್ಟಿರುತ್ತಾರೆ.  ಆದರೆ, ಸ್ತ್ರೀಯರು ಪ್ರಕೃತಿಮಾತೆಯ ಪ್ರತಿನಿಧಿ. ಪರಮಾತ್ಮ ಶಕ್ತಿಯನ್ನು ಇಡೀ ವಿಶ್ವದಲ್ಲಿ ಬೆಳೆಸುವವಳು.  'ವಿಶ್ವ' ಎಂದು ಕರೆಯಲ್ಪಡುವ ಈ ಇಡೀ ಶರೀರವನ್ನೂ ವ್ಯಾಪಿಸಿ ಪೋಷಿಸುವ ಕೆಲಸ ಪ್ರಕೃತಿಮಾತೆಯದು. ಅದನ್ನು ಸೂಚಿಸುವಂತೆ ಸ್ತ್ರೀಯರು ಶಿಖೆಯನ್ನು ಜಡೆಯ ರೂಪದಲ್ಲಿ ಉದ್ದವಾಗಿ ಇಳಿಯಬಿಡುತ್ತಾರೆ. ಈ ಕ್ರಮವನ್ನು ನಿಸರ್ಗದ ಯೋಜನೆಯಲ್ಲಿಯೂ ಕಾಣಬಹುದು. ನಮ್ಮ ಮೆದುಳು ಶಿರಸ್ಸಿನ ಸ್ಥಾನವನ್ನು ಅಲಂಕರಿಸಿದೆ, ಬೆನ್ನುಹುರಿಯ ರೂಪದಲ್ಲಿ ಸೊಂಟದವರೆಗೂ ಇಳಿದುಬಂದಿದೆ. ಬೆನ್ನುಹುರಿಯ ಮೂಲಕ ಇಡೀ ಶರೀರವನ್ನು ವ್ಯಾಪಿಸುವ ನರಮಂಡಲವನ್ನು  ನಿಯಂತ್ರಿಸುತ್ತದೆ. ಸ್ತ್ರೀಯರು ಇಳಿಯಬಿಡುವ ಜಡೆಯೂ ಬೆನ್ನುಹುರಿಯ ಆಕಾರವನ್ನು ಹೊಂದಿ ಅದೇಸ್ಥಾನವನ್ನು ಅಲಂಕರಿಸಿದೆ. 


ಕೇಶಕ್ಕೆ ಅಲಂಕಾರವನ್ನು ಮಾಡುವ ಬಗೆಯನ್ನು ಗಮನಿಸಿದರೆ ಜಡೆಯನ್ನು ಹೆಣೆದುಕೊಳ್ಳುವುದೆ ಒಂದು ಅಲಂಕಾರ. ವಿಶೇಷವಾಗಿ ಸ್ತ್ರೀಯರಲ್ಲಿ. ಮೂರು ಕಾಲುಗಳಿಂದ ಕೂಡಿದ ಒಂದು ಜಡೆ ಸರ್ವೇ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಂಡುಬರುತ್ತದೆ. ಆದರೆ ನೋಡುಗರಿಗೆ ಎರಡೇ ಕಾಲುಗಳು ಇದ್ದಂತೆ ಕಂಡುಬರುತ್ತದೆ. ಇದು ಬೆನ್ನು ಹುರಿಯ ಮೂರು ನಾಡಿಗಳಂತೆ ಎಂದು ಶ್ರೀರಂಗಮಹಾಗುರುಗಳು ಸ್ಮರಿಸಿಕೊಂಡಿದ್ದರು. ಇಡಾ-ಪಿಂಗಲಗಳ ಜೊತೆಯಲ್ಲಿ ಸುಷುಮ್ನಾ ಗುಪ್ತವಾಗಿ ಹರಿಯುತ್ತದೆ. ಗಂಗೆ-ಯಮುನೆಗಳ ನಡುವೆ ಗುಪ್ತಗಾಮಿನಿಯಾದ ಸರಸ್ವತಿಯಂತೆ. ಆದರಿಂದಲೇ ಜಡೆಗೆ ತ್ರಿವೇಣಿ ಎಂದೂ ಹೆಸರು. ಈ ರೀತಿ ಹೆಣೆದಿರುವ ಜಡೆಯು, ಜ್ಞಾನಿಗಳಿಗೆ ಜಾಗೃತವಾದ ಕುಂಡಲಿನೀ ಸರ್ಪದ ಆಕಾರವನ್ನು ಜ್ಞಾಪಿಸುತ್ತದೆ. ಮೂಲಾಧಾರದಿಂದ ಎದ್ದು ಸುಷುಮ್ನಾನಾಡಿಯನ್ನು ಹಾದು, ಸಹಸ್ರಾರಕಮಲದಲ್ಲಿ  ಹೆಡೆಯನ್ನೆತ್ತಿ ಜ್ಞಾನಸಮಾಧಿಯ ಪ್ರತಿರೂಪದಂತೆ ಕಾಣುತ್ತದೆ. ಸಮಾಧಿಸ್ಥಾನದಲ್ಲಿನ ಬೆಳಕು, ಸೂರ್ಯ ಚಂದ್ರ ಅಗ್ನಿಗಳ ಸಮಾಗಮವೆಂದು ಹೇಳುತ್ತಾರೆ. ಅದರ ಸ್ಮರಣೆಯಲ್ಲಿಯೇ ಶಿರಸ್ಥಾನದಲ್ಲಿ ಸೂರ್ಯ-ಚಂದ್ರ-ಅಗ್ನಿ-ಕಮಲ ಮುಂತಾದ ಅಲಂಕಾರಗಳನ್ನು ಸ್ತ್ರೀಯರು ಧರಿಸುತ್ತಾರೆ. 


ಕೇಶಾಲಂಕಾರವನ್ನೂ ಯೋಗಸಾಧನೆಯ ನಿಟ್ಟಿನಲ್ಲಿ ಕಂಡರುಹಿದ ಮಹರ್ಷಿಗಳಿಗೆ ನಮೋನಮಃ 

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 19/2/2022 ರಂದು ಪ್ರಕಟವಾಗಿದೆ.