Sunday, February 6, 2022

ಅಷ್ಟಾಕ್ಷರ ದರ್ಶನ -5 ಗೃಹಿಣೀ ಗೃಹಮುಚ್ಯತೇ (Astakshara Darshana -5 Gruhinee gruhamuchyathe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)"ಗೃಹಿಣಿಯನ್ನೇ ಗೃಹವೆನ್ನುವುದು" - ಎಂಬೀ ನುಡಿಮುತ್ತು ಮಹಾಭಾರತದಲ್ಲಿಯೂ ಪಂಚತಂತ್ರದಲ್ಲಿಯೂ ಇದೆ. ಪಂಚತಂತ್ರದಲ್ಲಿ ಎರಡು ಬಾರಿಯಿದೆ! : "ಗೃಹಿಣೀ ಗೃಹಮುಚ್ಯತೇ" ಗೋಡೆ-ಕುರ್ಚಿ ಮುಂತಾದುವುಗಳ ರಾಶಿಯನ್ನೇ ಮನೆಯೆನ್ನುವರೇ? ಮನೆಯಲ್ಲೊಬ್ಬಳು ಗೃಹಿಣಿಯೆಂಬುವವಳಿಲ್ಲದ್ದರೆ ಮನೆಯು ಕಾಡೇ - ಎಂದು ಹೇಳುವ ಮಾತುಗಳುಂಟು. ಮನೆಯ ಶೋಭೆಯೇ ಗೃಹಿಣಿ.

ವಿವಾಹಪೂರ್ವಕಾಲದಲ್ಲಿ ಕೇವಲ "ಯುವತಿ"ಯೆಂದಷ್ಟೇ ಕರೆಸಿಕೊಂಡವಳು, ವಿವಾಹೋತ್ತರಕಾಲದಲ್ಲಿ "ಗೃಹಿಣೀ" - ಎನಿಸಿಕೊಳ್ಳುತ್ತಾಳೆ - ಎಂಬುದು ಕಾಳಿದಾಸನ ಶಾಕುಂತಲನಾಟಕದ ಮಾತು. ಸಾಕುಮಗಳಾದ ಶಕುಂತಲೆಯನ್ನು ಪತಿಗೃಹಕ್ಕೆ ಕಳುಹಿಸಿಕೊಡುವಾಗ ಕಣ್ವಮಹರ್ಷಿಗಳು ಕೆಲವು ಹಿತವಚನಗಳನ್ನು ಹೇಳುತ್ತಾರೆ. ಹೇಗಿದ್ದಲ್ಲಿ ಅವಳು "ಗೃಹಿಣೀ"? ಹೇಗಿದ್ದರಲ್ಲ? - ಎಂಬುದನ್ನು ಸ್ಮರಣೀಯಸೂಕ್ತಿಗಳಿಂದ ಸೂಚಿಸುತ್ತಾರೆ. ಗೃಹಿಣಿಯೆಂಬುದು ಹಿರಿದಾದ ಒಂದು ಸ್ಥಾನ. ಗೃಹಿಣಿಯೆಂದು ಕರೆಸಿಕೊಳ್ಳಲು ಅನರ್ಹಳಾದಲ್ಲಿ,, ಅಂತಹವಳು 'ಕುಲಕ್ಕೇ ಆಧಿ'ಯಾಗುವಳು - ಎನ್ನುತ್ತಾರೆ. (ಶರೀರವನ್ನು ಬಾಧಿಸುವ ರೋಗವು "ವ್ಯಾಧಿ"ಯಾದರೆ) ಮನಸ್ಸನ್ನು ಪೀಡಿಸುವ ರೋಗವು "ಆಧಿ". ಅಂತಹವಳಿಂದ ಅದೆಷ್ಟು ಮಂದಿಗೆ ಕ್ಲೇಶವೋ ಹೇಳಲಾಗದು.

ವಿವಾಹವನ್ನು ಮಾಡಿಕೊಂಡವನು "ಗೃಹೀ"; ಅವನಿಗೇನು ಕಡಿಮೆ ಜವಾಬ್ದಾರಿಗಳಿಲ್ಲ. ಅವನ ಜೊತೆಗಾರ್ತಿಯಾದ ಗೃಹಿಣಿಗೆ ತೋರಿಸಿರುವ ಸ್ಥಾನವೆಂತಹುದು?: ಅತ್ತೆ-ಮಾವಂದಿರ ಮೇಲೂ ನೀನು ಸಮ್ರಾಜ್ಞಿ(ಅರಸಿ)ಯಾಗಿರು! - ಎಂದೇ ವೇದಮಂತ್ರಗಳಲ್ಲಿಯ ಆಶೀರ್ವಾದ. ಅದೇನು ಬರೀ ಬಾಯಿಮಾತಿಗೇ? ತೋರಿಕೆಗೇ? ಅದರ ಆಶಯವನ್ನರಿತು ಆಚರಿಸಬೇಕಷ್ಟೆ?

ಗೃಹಿಣಿಯೇ ಗೃಹ ಹೇಗಾದಾಳು? ಹಲವು ಬಗೆಗಳಲ್ಲಿ: ಮನೆಯು ಚೆನ್ನಾಗಿ ನಡೆದುಕೊಂಡು ಹೋಗಬೇಕೆಂದರೆ ಅವಳ ಪಾತ್ರವೇ ಬಹಳ ಮುಖ್ಯವಾಗುತ್ತದೆ. ಇನ್ನು ದೇಶಕ್ಕೆ "ಆಸ್ತಿ"ಮಾಡುವಲ್ಲಂತೂ ಅವಳದ್ದೇ ಹಿರಿದಾದ ಪಾತ್ರ. ಏಕೆ? ದೇಶದ ದೊಡ್ಡ ಆಸ್ತಿಯೆಂದರೆ ಸತ್ಪ್ರಜೆಗಳೇ ಸರಿ; ಬರೀ ಪ್ರಜೆಗಳಲ್ಲ.

ಜನಿಸುವ ಶಿಶುವಿಗೆ ತಾಯಿಯ ಗರ್ಭವೇ, ಮೊದಲ ಮನೆ. ಜೀವಕಾರುಣ್ಯವೆಂಬುದು ತಾಯಿಯಲ್ಲೇ ಸಹಜವಾಗಿ ಉಕ್ಕುವುದು; ಶಿಶುವಿಗೆ ಅದೆಷ್ಟು ಪೋಷಕವೂ ಕೋಮಲವೂ ಆದ ಶಯ್ಯೆಯನ್ನು ಗರ್ಭದಲ್ಲಿ ಪ್ರಕೃತಿಯೇ ಸೃಷ್ಟಿಸಿಟ್ಟಿದೆ! ಜನಿಸುವ ಶಿಶುವಿಗೆ ತಾಯಿಯೇ ಮೊದಲ ಮನೆ; ಜನಿಸಿದ ಮಗುವಿಗೆ ತಾಯಿಯೇ ಮೊದಲ ಗುರು! 'ತಾಯಿ'ಯೆಂಬುದೂ ಸಂಸ್ಕೃತಪದವೇ. "ತಾಯೃ ಸಂತಾನ-ಪಾಲನಯೋಃ" ಎಂದು ಧಾತುಪಾಠವೇ ಇರುವುದನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು.

ಸಾಂಖ್ಯದರ್ಶನದಲ್ಲಿ ಪ್ರಕೃತಿ-ಪುರುಷ ಎಂಬ ಎರಡು ಪದಗಳನ್ನು ವಿಶೇಷಾರ್ಥದಲ್ಲಿ ಬಳಸುತ್ತಾರೆ. ಪುರುಷ ಎನ್ನುವುದು ಚೈತನ್ಯ; ಪ್ರಕೃತಿ ಎನ್ನುವುದು ಅದಕ್ಕೆ ಆಸರೆ. ಎಲ್ಲ ಜೀವಿಗಳೂ ಪುರುಷರೇ. ಧರ್ಮ-ಅರ್ಥ-ಕಾಮ-ಮೋಕ್ಷಗಳಿಗೆ 'ಪುರುಷಾರ್ಥ'ವೆಂಬ ಹೆಸರಿದೆ. ಸ್ತ್ರೀಯರಿಗೆ ಅವೇನು ಬೇಡವೆಂದೇ?: ಎಂದೇ, "ಜೀವ" ಎಂಬ ಅರ್ಥದಲ್ಲಿ ಸ್ತ್ರೀಯರೂ 'ಪುರುಷ'ರೇ.

ಬರೀ ಚೈತನ್ಯವು ಕೆಲಸ ಮಾಡಲಾಗದಲ್ಲವೇ? ಅದಕ್ಕೊಂದು ಆಧಾರ ಬೇಕು, ಆಕಾರ ಬೇಕು. ಚೈತನ್ಯವು ಹೀಗೆ 'ಮೈತಾಳಿ'ದಾಗಲೇ ಮುಂದಕ್ಕೆ ವ್ಯವಹಾರ. ಮೈಯನ್ನು ತಾಳುವುದೇ, 'ಮೂರ್ತಿ'ಯನ್ನು ಸ್ವೀಕರಿಸುವುದು;  ಹೀಗೆ 'ಮೂರ್ತ'ವಾಗುವುದೇ ಹುಟ್ಟುವುದೆಂಬುದೂ.

ಹಿರಿಯರ ವಿಷಯದಲ್ಲಿ ಉಕ್ಕುವ ಗೌರವ-ಪ್ರೀತಿಗಳ ಮಧುರಮೇಳನವೇ ಭಕ್ತಿಯೆನಿಸಿಕೊಳ್ಳುವುದು. ಪ್ರೀತಿಯ ಪುತ್ಥಳಿಯಾದ ಶಿಶುವನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭವಾದರೆ, ಉಕ್ಕುವ ಭಕ್ತಿಯಿಂದ ಭಗವಂತನನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭಗುಡಿಯೆನಿಸುತ್ತದೆ. "ಕುಟಿ"ಯೆಂದರೆ ಮನೆಯೇ; ಕುಟಿಯೇ "ಗುಡಿ"ಯಾಗಿದೆ.

ಹೀಗಾಗಿ ಮೈತಾಳುವುದೆಂದರೆ "ಮನೆ"ಯೊಂದರಲ್ಲಿ ವಾಸಮಾಡುವುದೆಂದೇ!: ದೇಹವೇ ಮೊದಲ ಗೇಹ. ಮುಂದಕ್ಕೆ ಬೇರೆ ವಾಸಸ್ಥಾನಗಳೂ ಉಂಟು. ನಮ್ಮ'ವಸತಿ'ಯಾದ ಊರೇ ನನ್ನ ಮನೆ; ಭಾರತವೇ ನನ್ನ ಮಾತೃಭೂಮಿ; ವೇದವಂತೂ  'ಪೃಥ್ವೀ ಮಾತಾ'- ಇಡೀ ಭೂಮಿಯೇ ತನ್ನ ತಾಯಿ – ಎನ್ನುತ್ತದೆ: ಇದಿಷ್ಟೂ ಹೊರನೋಟದ ಮನೆಗಳು. ಇನ್ನು ಒಳನೋಟದವು: ಶರೀರವು ಗೃಹ; ಅದಕ್ಕೂ ಹಿಂದಿರುವ ಮನಸ್ಸು ಗೃಹವಲ್ಲವೇ?; ಸಾಂಖ್ಯವು ಹೇಳುವ ಬುದ್ಧಿ-ಅಹಂಕಾರಗಳೂ, ಇವಕ್ಕೂ ಮೂಲವೆನಿಸುವ ಪ್ರಕೃತಿತತ್ತ್ವವೂ ಮನೆಯೇ.

ಪ್ರಕೃತಿಯ ಮೂರ್ತರೂಪವೇ ಆಗಿರುವ ಗೃಹಿಣಿಯೇ ಅತ್ಯಂತ ಮುಖ್ಯವೆನಿಸುವ ಗೃಹ. ಬೇರೆಲ್ಲೂ ದೊರೆಯದ ತುಷ್ಟಿ-ಪುಷ್ಟಿಗಳು ಮನೆಯಲ್ಲಿ ದೊರೆಯುತ್ತದೆ. ಮತ್ತೆಲ್ಲೂ ದಕ್ಕದ ನೆಚ್ಚಿಕೆ-ನೆಮ್ಮದಿಗಳು, ಪಾಲನೆ-ಪೋಷಣೆಗಳು ಗೃಹಿಣಿಯಿಂದ ಲಭ್ಯವಾಗುವುವು.

ಕಡುಬಡತನದಿಂದಾಗಿ ಮರದ ಬುಡದಲ್ಲಿ ವಾಸಮಾಡಬೇಕಾಗಿ ಬಂದರೂ, ಮನಸಾರೆ ಪ್ರೀತಿಸುವ ಮಡದಿಯೊಡನಿದ್ದಲ್ಲಿ, ಮರದ ಬುಡವೂ ಸದನವೇ - ಎನ್ನುತ್ತದೆ ಸುಭಾಷಿತ. ಗೃಹವಸ್ತು-ಗೃಹಕೃತ್ಯಗಳೆಲ್ಲಕ್ಕೂ ಸೇರಿ ಒಟ್ಟಿನ ಹೆಸರು 'ಗೃಹ'. ಅವೆಲ್ಲವನ್ನೂ ಅಚ್ಚುಕಟ್ಟಾಗಿ ಅಣಿಮಾಡುವವಳೇ ಗೃಹಿಣಿ.

ಒಡತಿಯಿಲ್ಲದ ಬೀಡು ಕಾಡಿಗಿಂತಲೂ ಕೇಡು - ಎಂಬುದು ಹಿಂದೆಷ್ಟೋ ಮುಂದೂ ಅಷ್ಟೇ ಸತ್ಯ - ಪತಿಪತ್ನಿಯರು ತಮ್ಮ ತಮ್ಮ ಪಾತ್ರಗಳನ್ನು ಯಥಾವತ್ತಾಗಿ ಅರಿತು ನಡೆಸಿಕೊಂಡಲ್ಲಿ!

ಸೂಚನೆ: 6/2/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.