Saturday, February 5, 2022

ವಸ್ತ್ರಾಭರಣ - 8 ಪೇಟ-ಶಿರಸ್ತ್ರಾಣ (Vastra Bharana - 8 Peta-Sirastrana)


ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಅಂತರೀಯ ಮತ್ತು ಉತ್ತರೀಯದ ಜೊತೆಯಲ್ಲಿ ಮೂರನೆಯ ವಸ್ತ್ರವೆಂದರೆ ತಲೆಯ ಸುತ್ತಲೂ ಕಟ್ಟುವ ಪೇಟ. ಭಾರತೀಯ ಶಿಲ್ಪಗಳನ್ನು ಗಮನಿಸಿದರೆ, ಅನಾದಿ ಕಾಲದಿಂದಲೂ ಶಿರಸ್ತ್ರಾಣವನ್ನು ಪೇಟಗಳ ರೂಪದಲ್ಲೋ, ರತ್ನಾಲಂಕೃತವಾದ ಕಿರೀಟಗಳಾಗಿಯೋ ಧರಿಸುವುದು ಕಂಡುಬರುತ್ತದೆ. ಮಳೆ-ಗಾಳಿ-ಬಿಸಿಲಿನಿಂದ ರಕ್ಷಿಸುವ ಕೆಲಸವೊಂದಾದರೆ, ಅಲಂಕಾರವಾಗಿ ಸೌಂದರ್ಯವನ್ನು ವರ್ಧಿಸುವುದು ಮತ್ತೊಂದು ಲಾಭ. ಆದರೆ ಇಲ್ಲಿ ಭಾರತೀಯ ಮಹರ್ಷಿಗಳ ಗೂಢವೂ ಗಾಢವೂ ಆದ ದೃಷ್ಟಿಯೊಂದಿದೆ.   


ಮುಬ್ಬಗೆಯ ವಸ್ತ್ರಗಳು ವೇದಗಳು ಕೊಂಡಾಡುವ ಮೂರು ಲೋಕಗಳನ್ನೂ ಜ್ಞಾಪಿಸುತ್ತದೆ. ಭೂಲೋಕ, ಭುವರ್ಲೋಕ ಮತ್ತು ಸುವರ್ಲೋಕಗಳೆಂಬ ಈ ಮೂರು ಲೋಕಗಳನ್ನು ಭುವಿ, ಅಂತರಿಕ್ಷ,  ದಿವಿ ಎಂದೂ ಪರಿಗಣಿಸುವುದುಂಟು. ಈ ಲೋಕಗಳು ಕೇವಲ ಹೊರಗಡೆಮಾತ್ರವಲ್ಲದೆ ನಮ್ಮೊಳಗೂ ಬೆಳಗುತ್ತವೆ. ಜ್ಞಾನಿಯಾದವನು ತನ್ನ ಒಳಗಡೆಯೂ ಈ ಲೋಕಗಳನ್ನು ಕಾಣುತ್ತಾನೆ. ಭುವಿಯಿಂದ ಪ್ರಾರಂಭಿಸಿ, ಪ್ರಾಣಗಳು ಊರ್ಧ್ವ ಮುಖವಾಗಿ ಹರಿದಾಗ ಅಂತರಿಕ್ಷವನ್ನು ದಾಟಿ ದಹರಾಕಾಶದಲ್ಲಿ ವಿಹರಿಸುತ್ತಾನೆ. ಕೊನೆಯಲ್ಲಿ, ಪ್ರಾಣರೂಪವಾದ ಕುಂಡಲೀಸರ್ಪವು ಶಿರಸ್ಥಾನದಲ್ಲಿನ ಸಹಸ್ರಾರಕಮಲಕ್ಕೆ ಹತ್ತಿದಾಗ, ದಿವಿಯಲ್ಲಿ ಬೆಳಗುವ ಪ್ರಕಾಶಮಾನವಾದ ಸೂರ್ಯರೂಪಿಯಾದ ಬೆಳಕನ್ನು ಕಾಣುತ್ತಾನೆ. ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು ಸಮಾಧಿಯ  ಈ ಪರಮಾತ್ಮಾನುಭವವನ್ನು ವರ್ಣಿಸುತ್ತಾ 'ಕೋಟಿ ಕೋಟಿ ಸೂರ್ಯಪ್ರಕಾಶವೆಂದೂ ಕರೆಯಬಹುದಪ್ಪಾ' , 'ಆದರೂ ಅವನು ಬೆಳದಿಂಗಳಂತೆ ತಂಪಾಗಿದ್ದಾನೆ' ಎಂದು ಅವರ ಅನುಭವವನ್ನು ಸಾರಿದ್ದಾರೆ. ದಿವಿಯಲ್ಲಿ ಬೆಳಗುವ ಪ್ರಧಾನ ಜ್ಯೋತಿಗಳು ಸೂರ್ಯ-ಚಂದ್ರರು. ಅವರಿಬ್ಬರೂ ಒಂದೆಡೆ ಸೇರಿಕೊಂಡಂತೆ ಭಾಸವಾಗುವಂತಹ ಈ ಅನುಭವವನ್ನು ಋಷಿಗಳು ಒಳ ದಹರಾಕಾಶದಲ್ಲಿ ಕಾಣುತ್ತಾರೆ. 


ನಮ್ಮ ಶರೀರವನ್ನೇ ಗಮನಿಸಿದರೆ, ನಾಭಿಯವರೆಗಿನ ಭಾಗ ಭುವಿಯೆಂದೂ, ಅಲ್ಲಿಂದ ಮೇಲ್ಭಾಗವನ್ನು (ಶಿರಸ್ಸಿನ ವರೆಗೆ) ಅಂತರಿಕ್ಷವೆಂದೂ, ಶಿರೋಭಾಗವನ್ನು ದಿವಿಯೆಂದೂ ಹೇಳುವುದುಂಟು. ನಾವು ಹಿಂದೆಯೇ ಗಮನಿಸಿದಂತೆ, ಭುವಿಯ ಸ್ಥಾನವನ್ನು ಅಲಂಕರಿಸುವ ಅಂತರೀಯವು ಮೂಲ ಮತ್ತು ಉದರಬಂಧಗಳನ್ನು ಭದ್ರಪಡಿಸಿ ಪ್ರಾಣಗಳನ್ನು ಒಳಮುಖವಾಗಿಸುತ್ತದೆ. ಅಂತರಿಕ್ಷದ ಸ್ಥಾನವನ್ನು ಅಲಂಕರಿಸುವ ಉತ್ತರೀಯವು ಪ್ರಾಣಗಳ ಪಥವನ್ನು ನೆನಪಿಸುತ್ತದೆ, ಅಂತರಂಗದಲ್ಲಿ ದರ್ಶಿಸಲು ಸಹಕರಿಸುತ್ತದೆ, ಸಂಚಾಲನವನ್ನೂ ಉಂಟುಮಾಡುತ್ತದೆ. ಹೀಗಿಯೇ, ದಿವಿಯ ಭಾಗವನ್ನು, ಅಂದರೆ ಶಿರಸ್ಸನ್ನು ಅಲಂಕರಿಸುವ ವಸ್ತ್ರ-ಆಭರಣಗಳು ದಹರಾಕಾಶದಲ್ಲಿ ಬೆಳಗುವ ಅನುಭವಗಳ ಅಭಿಜ್ಞಾನವಾಗಿಯೇ ಇರುತ್ತವೆ.         


ಸಹಸ್ರಾರ ಸ್ಥಾನದಲ್ಲಿ ಧರಿಸುವ ಕಿರೀಟಗಳು ಆಕಾಶವನ್ನು ಚುಂಬಿಸುವ ಶಿಖರದ ಆಕಾರದಲ್ಲಿರುತ್ತವೆ, ಪ್ರಭಾವಳಿಗಳಿಂದಲೂ ಕೂಡಿರುತ್ತವೆ. ವಜ್ರ-ವೈಢೂರ್ಯಗಳಿಂದ ಕಂಗೊಳಿಸುತ್ತ ಸೂರ್ಯ-ಚಂದ್ರರಂತೆ ಜಾಜ್ವಲ್ಯಮಾನವಾಗಿ ಕಂಗೊಳಿಸುತ್ತವೆ. ಇಂದೂ ಮದುವೆ-ಸಮಾರಂಭಗಳಲ್ಲಿ ಸ್ತ್ರೀಯರು ಶಿರಸ್ಸಿನ ಸ್ಥಾನದಲ್ಲಿ ಧರಿಸುವ ಅಲಂಕಾರಗಳಲ್ಲಿ, ಸೂರ್ಯ, ಚಂದ್ರ, ನಕ್ಷತ್ರಗಳು, (ಸಹಸ್ರಾರ) ಕಮಲ, (ಕುಂಡಲೀ)ನಾಗರ ಹೆಡೆ ಮುಂತಾದವುಗಳು ಕಂಡುಬರುತ್ತವೆ. ಕೃಷ್ಣನು ಧರಿಸುವ ನವಿಲುಗರಿಯ ಮಧ್ಯಭಾಗವನ್ನು ನೋಡಿದರೆ, ಒಂದರೊಳಗೊಂದು ಲೀನವಾಗುವ ವೃತ್ತಗಳು ಸೂರ್ಯ-ಚಂದ್ರ-ಅಗ್ನಿಗಳು ಒಂದರೊಳಗೊಂದು ಸೇರಿಕೊಂಡಂತೆ ಕಾಣುತ್ತವೆ. ಪೇಟ-ಕಿರೀಟ ಯಾವುದೇ ರೂಪದಲ್ಲಿರಲಿ, ಶಿರಸ್ತ್ರಾಣಗಳು ನೆತ್ತಿಯ ಸುತ್ತಲೂ ಬಿಗಿಯುತ್ತವೆ.  ಹಣೆಗೆ ಕಟ್ಟಿರುವ ಬಾಸಿಂಗವೂ ಅದೇ ಕೆಲಸವನ್ನು ಮಾಡುತ್ತದೆ. ಜೊತೆಗೆ ಬಾಸಿಂಗವು ವಿಶೇಷವಾಗಿ ಹಣೆಯ ಮಧ್ಯದಲ್ಲಿ, ಭ್ರೂಮಧ್ಯಸ್ಥಾನದಲ್ಲಿ ಒಂದು ಗಂಟಿನಂತೆ ಒತ್ತುವ ಕೆಲಸ ಮಾಡುತ್ತದೆ. ಇದು ಆಜ್ಞಾಚಕ್ರದ ಸ್ಥಾನ. ಈ ಚಕ್ರವು ಒಳಗಡೆಯಲ್ಲಿ  ಸಮಾಧಿಸಾಮ್ರಾಜ್ಯದ ಹೊಸಲಿನಂತಿದೆ. ಈ ಬಾಸಿಂಗವು ಚರಿತ್ರೆಯ ದೃಷ್ಟಿಯಿಂದಲೂ ಅತ್ಯಂತ ಪ್ರಾಚೀನವಾದ ಆಭರಣವೆಂದು ಕಂಡುಬರುತ್ತದೆ. ಸಿಂಧುಕಣಿವೆಯ ಶಿಲ್ಪಗಳಲ್ಲಿ ಕಂಡುಬರುತ್ತದೆ. ಅನಂತರದ ಮೌರ್ಯರ ಶಿಲ್ಪಗಳಲ್ಲಿ ಬಾಸಿಂಗವಾಗಿ, ಅಥವಾ ಹಣೆಯಲ್ಲಿ ಗಂಟು ಮಾಡುವ ಪೇಟದ ರೂಪದಲ್ಲಿ ಕಂಡುಬರುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಚಲಿತವಾಗಿದ್ದ ಈ ವಸ್ತ್ರ-ಅಲಂಕಾರ ವಿನ್ಯಾಸವಿಂದು ಭಾರತದ ಹೆಚ್ಚುವರಿ ಭಾಗಗಳಲ್ಲಿ ಲುಪ್ತವಾಗಿದ್ದರೂ ಕರ್ನಾಟಕ-ಆಂಧ್ರಗಳಲ್ಲಿ ಪ್ರಚಲಿತವಾಗಿರುವುದು ಗಮನೀಯ. ಹೀಗೆ ಒಳ ಬೆಳಕನ್ನು ನೆನಪಿಸಲು ತಂದ ಸಹಜಾಲಂಕಾರವಾಗಿ ಶಿರವೇಷವು ಇರುವುದನ್ನು ಗಮನಿಸಬೇಕು.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/2/2022 ರಂದು ಪ್ರಕಟವಾಗಿದೆ.