Thursday, February 24, 2022

ವಿಶ್ವಶಾಂತಿಗಾಗಿ ನಾವು ಬದಲಾಗೋಣ (Vishvashaanthigaagi naavu badalaagona)


ಲೇಖಕರು : ಶ್ರೀ ರಾಜಗೋಪಾಲನ್. 
ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in
ಮನುಷ್ಯ ಕೆಲವು ಶತಮಾನಗಳ ಹಿಂದೆ ಇದ್ದಂತೆ ಈಗ ಜೀವನ ನಡೆಸುತ್ತಿಲ್ಲ. ಎಷ್ಟೋ ಸುಸಂಸ್ಕೃತನಾಗಿದ್ದಾನೆ. ಆದರೆ ಹೀಗಾದದ್ದು ಏಕಾಏಕಿ ಅಲ್ಲ. ಜೀವನದ ಸಾಕಷ್ಟು ಅನುಭವಗಳು ಕಾಲಕ್ರಮೇಣ ಅವನನ್ನು ಮಾರ್ಪಡಿಸಿವೆ. ಸಮಾಜ ತನ್ನದೇ ಆದ ಕಟ್ಟಳೆಗಳನ್ನು ನಿರ್ಮಿಸಿಕೊಂಡಿದೆ. ಇವುಗಳ ಹಿಂದಿನ ಉದ್ದೇಶ ಎಲ್ಲರೂ ಶಾಂತಿಯುತವಾಗಿ ಬದುಕಬೇಕೆಂಬುದೇ ಆಗಿದೆ. ನಾವು ಚೆನ್ನಾಗಿರಬೇಕಾದರೆ, ಹೇಗಿರಬೇಕು ಎಂಬುದನ್ನು ನಾನಾ ಧರ್ಮಗುರುಗಳು ತಮ್ಮ ಸಂದೇಶಗಳ ಮೂಲಕ ಸಾರಿ ಹೋಗಿದ್ದಾರೆ. ಕೆಲವರು ಧರ್ಮಸಂದೇಶಗಳನ್ನು ಸಾರುವ ಕಥೆಗಳನ್ನೂ ಹೇಳಿ ಹೋಗಿದ್ದಾರೆ.


 ನಮ್ಮ ದೇಶದ ಪುರಾಣೇತಿಹಾಸಗಳು ಧರ್ಮಕ್ಕಾಗಿ ಕಟ್ಟುಬಿದ್ದು ಜೀವನ ನಡೆಸಬೇಕೆಂಬ ಸಂದೇಶವನ್ನು ಸಾರುವಂತೆ ಬಹುಶಃ ವಿಶ್ವದ ಬೇರಾವ ಧರ್ಮಗ್ರಂಥಗಳೂ ಸಾರಿಲ್ಲ. ಆದರೆ ನಮ್ಮ ಗ್ರಂಥಗಳಲ್ಲಿನ ಧರ್ಮಸೂಕ್ಷ್ಮತೆಗಳನ್ನು ಅರಿಯದೆ ಹೋದ ಅಜ್ಞಾನಿಗಳಿಂದಲೂ, ಭಾರತದ ಮೇಲೆ ಆಕ್ರಮಣ ಮಾಡಿದ್ದಲ್ಲದೆ, ಇಲ್ಲಿನ ಸೈದ್ಧಾಂತಿಕ ನಿಲುವುಗಳನ್ನು ಕಪಟದಿಂದ ಕೊನೆಗೊಳಿಸಲೆತ್ನಿಸಿದ ಪರಕೀಯರಿಂದ, ಹಾಗೂ ಅವರ ಮಾನಸಪುತ್ರರಾದ ಸ್ವದೇಶೀಯರಿಂದಲೂ ಅಲ್ಲಲ್ಲಿ ಅಪಪ್ರಚಾರ ನಡೆದಿದೆಯಷ್ಟೆ. 


ದೇವರ/ವೇದಗಳ ಪ್ರಾಮಾಣ್ಯವನ್ನು ಒಪ್ಪದ ಚಾರ್ವಾಕರನ್ನು ರಾಜಾಶ್ರಯವೇ ದೊರಕಿದ್ದರೂ, ಯಾವ ಆಚಾರ್ಯರೂ ಕೊಲ್ಲಿಸಲೆಣಿಸಿಲ್ಲ. ದರ್ಶನಗಳಲ್ಲಿ ಚಾರ್ವಾಕದರ್ಶನಕ್ಕೂ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ದೇಶದಲ್ಲೇ ಇರುವ ಮತೀಯ ಸಂಘರ್ಷಗಳಿಂದ ಆಗೊಮ್ಮೆ ಈಗೊಮ್ಮೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ನಮ್ಮ ಆರ್ಷಗ್ರಂಥಗಳು ಅಂತಹ ಗಲಭೆಗಳಿಗೆ ಪ್ರಚೋದನೆ ನೀಡಿಲ್ಲ. "ರುದ್ರ ಮತ್ತು ನಾರಾಯಣರೆಂಬುದಾಗಿ ಒಂದೇ ತತ್ತ್ವವು ಎರಡಾಗಿ ಇದೆ" ಎಂದೇ ವ್ಯಾಸರು ಉದ್ಘೋಷಿಸುತ್ತಾರೆ. ಋಷಿಹೃದಯವನ್ನರಿಯದ ಅಲ್ಪಮತಿಗಳಷ್ಟೆ ಇಂತಹ ಸಂಘರ್ಷಗಳಿಗೆ ಕಾರಣರಷ್ಟೆ. ವಿಶ್ವದ ಎಷ್ಟೋ ಭಾಗಗಳಲ್ಲಿ, ಹಿಂದಿನಿಂದಲೂ ತಮ್ಮ ಮತವೇ ಶ್ರೇಷ್ಠವೆಂದೂ ಆ ಕಾರಣದಿಂದ ಉಳಿದ ಮತಾವಲಂಬಿಗಳನ್ನು ನಾಶಪಡಿಸಬೇಕೆಂದೂ ಹೊಡೆದಾಡುವವರು ಕಾಣಸಿಗುತ್ತಾರೆ. ಒಂದು ಕಾಲದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಹಿಂದೂಧರ್ಮವು ಅಥವಾ ಅದರ ಶಾಖೆಯಾದ ಬೌದ್ಧಧರ್ಮವು ಯಾರನ್ನೂ ಬೆದರಿಸಿ ಪ್ರಸಾರ ಮಾಡಲಿಲ್ಲವೆಂಬುದು ಭಾರತದ ಹೆಗ್ಗಳಿಕೆ.


ಶಾಂತಿಯುತವಾಗಿ ಜೀವಿಸಬೇಕಾದುದು ಸರಿಯಾದರೂ, ಧರ್ಮರಕ್ಷಣೆಗಾಗಿ ಯುದ್ಧ ಮಾಡುವುದೂ ಯುಕ್ತವೇ ಆಗಿದೆ ಎಂಬುದು ಸನಾತನಿಗಳ ಮತ. ಪ್ರಸಿದ್ಧವಾದ ಮಹಾಭಾರತದ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಹುಟ್ಟುಕುರುಡನಾದ ಧೃತರಾಷ್ಟ್ರ ತನ್ನ ಮಕ್ಕಳ ವಿಚಾರದಲ್ಲಿ ಕುರುಡುಪ್ರೀತಿಯನ್ನು ಬೆಳೆಸಿಕೊಳ್ಳುತ್ತಾನೆ. ಆನುವಂಶಿಕವಾದ ಧರ್ಮಪ್ರಜ್ಞೆ ಅವನಲ್ಲಿ ಆಗಾಗ ಆಡಿದರೂ ಪುತ್ರವ್ಯಾಮೋಹವೇ ಮುಂಚೂಣಿಗೆ ಬರುತ್ತದೆ. ಪುತ್ರಪ್ರೇಮ ತಪ್ಪಲ್ಲ; ಪುತ್ರವ್ಯಾಮೋಹ ತಪ್ಪು. ಆತ ತನ್ನ ತಮ್ಮ, ಪಾಂಡುವಿನ ಮಕ್ಕಳೇ ಆದ ಪಾಂಡವರನ್ನೂ ತನ್ನ ಮಕ್ಕಳಂತೆಯೇ ಭಾವಿಸಬೇಕಿತ್ತು. ಆದರೆ, ಪಾಂಡವರ ನಾಶದ ಸೋಪಾನಗಳನ್ನು ಹತ್ತಿಕೊಂಡೇ ಕೌರವರು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾನೆ. ಕೌರವರೊಡನೆ ಶ್ರೀಕೃಷ್ಣನು ಸಂಧಾನಕ್ಕೆಂದು ಬಂದಾಗ, ಕೊನೆಗೆ, ಪಾಂಡವರಿಗೆ ಐದು ಗ್ರಾಮಗಳನ್ನಾದರೂ ಕೊಡು ಎಂದಾಗ, ದುರ್ಯೋಧನನು ಸಮ್ಮತಿಸಲಿಲ್ಲ. ಧೃತರಾಷ್ಟ್ರನು ದುರ್ಯೋಧನನ ನಡೆಗೆ ಪ್ರತಿರೋಧವನ್ನೇ ವ್ಯಕ್ತಪಡಿಸಲಿಲ್ಲ. "ಕೌರವರ ಈ ನಡೆ  ಅಧರ್ಮ; ಆದ್ದರಿಂದ ಇದನ್ನು ಖಂಡಿಸಬೇಕಾದದ್ದು ಧರ್ಮ; ಇಂತಹ ಧರ್ಮಕ್ಕಾಗಿ ನೀವು ಯುದ್ಧ ಮಾಡಿ" ಎಂದು ಧರ್ಮಪ್ರಭುವಾದ  ಶ್ರೀಕೃಷ್ಣನೇ ಪಾಂಡವರನ್ನು ಪ್ರೋತ್ಸಾಹಿಸುತ್ತಾನೆ.  ಪರಶುರಾಮನು ದುಷ್ಟರಾದ ಕ್ಷತ್ರಿಯರನ್ನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಸಂಹರಿಸಿದನೆಂದು ಪುರಾಣದ ಕಥೆ ತಿಳಿಸುತ್ತದೆ. ಇಲ್ಲಿಯೂ ದಶರಥನಂತಹ ಧಾರ್ಮಿಕ ಕ್ಷತ್ರಿಯರ ತಂಟೆಗೆ ಪರಶುರಾಮನು ಹೋದವನಲ್ಲ; ಭೀಷ್ಮರಂತಹ ಸದ್ಧರ್ಮೀ ಕ್ಷತ್ರಿಯರಿಗೆ ಆತ ಗುರುವೇ ಹೌದು. ಹಿಂಸೆಯ ಉದ್ದೇಶ, ಅಧರ್ಮವಾಗಿರಬಾರದೆಂಬುದೇ ಭಾರತೀಯ ಸನಾತನಿಗಳ ಮತ. ಬೇರೆಯವರು ಏನೇ ತಪ್ಪು ಮಾಡಿದರೂ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕೆನ್ನುವುದೇ ಧರ್ಮವೆಂದಾದಲ್ಲಿ ಶರೀರದಲ್ಲಿಯೇ ಸಹಜವಾಗಿ ಉತ್ಪನ್ನವಾಗುವ ರೋಗರುಜಿನಗಳೂ ನಮ್ಮೊಡನೆ ಸಹಬಾಳ್ವೆ ನಡೆಸಲು ಒಪ್ಪಿಕೊಳ್ಳಬೇಕಾದೀತು! ಕ್ಷಮೆ, ಅಹಿಂಸೆ ಇವುಗಳು ಉದಾತ್ತಗುಣಗಳೇ ಹೌದಾದರೂ, ಇವುಗಳ ಅಕಾಲಾಚರಣೆಯಿಂದ ಅಧರ್ಮವು ತಲೆಯೆತ್ತುವುದಾದಲ್ಲಿ ಹಿಂಸೆಯೂ ಅನಿವಾರ್ಯವೇ. ನಮ್ಮ ದೇಹದ ಒಂದು ಭಾಗವೇ  ಕೊಳೆತರೆ ಅದು ಇಡಿಯ ಶರೀರವನ್ನೇ ವ್ಯಾಪಿಸಿ ತೊಂದರೆಗೈಯುವ ಭಯವಿದ್ದಾಗ, ಶರೀರದ ಸಮಗ್ರ ಹಿತದೃಷ್ಟಿಯಿಂದ, ಕೊಳೆತ ಅಂಗವನ್ನೇ ನಿರ್ದಾಕ್ಷಿಣ್ಯವಾಗಿ ಕೊಯ್ದು ಹಾಕುವ ಶಸ್ತ್ರಚಿಕಿತ್ಸಕನ ನಡೆಯಂತೆ, ಅಧರ್ಮನಾಶಕ್ಕೆ ಶಸ್ತ್ರಾಸ್ತ್ರಚಿಕಿತ್ಸೆಯೂ ಅನಿವಾರ್ಯವಾಗಬಹುದು. ಹೀಗೆ ಭಾರತೀಯ ಇತಿಹಾಸ ಪುರಾಣಗಳಲ್ಲಿ ಧರ್ಮಕ್ಕಾಗಿ ಹೋರಾಡಿದವರ ನಾನಾ ದೃಷ್ಟಾಂತಗಳು ಕಾಣಸಿಗುತ್ತವೆ.  "ಕಣ್ಣಿನಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಜ್ಞಾನಕ್ಕೆ ಪ್ರತಿಬಂಧಕವಾದುದನ್ನು ಗೆಲ್ಲಲು ಹೋರಾಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. 


ಆದರೆ ಹಿಂಸೆಯ ಬಗ್ಗೆ ಸರಿಯಾದ ಅರಿವಿಲ್ಲದಿರುವುದು ಎಷ್ಟೋ ಅನರ್ಥಗಳಿಗೆ ಕಾರಣವಾಯಿತು. ಅಂತಹದೊಂದು ಅನರ್ಥ ಭಾರತದ ಮೇಲಿನ ಪರಾಕ್ರಮಣ.  ಶಾಂತಿಪ್ರಿಯತೆ, ಅಹಿಂಸಾಪಾಲನೆಗಳು ಅತಿರೇಕಕ್ಕೆ ಹೋಗಿ ಹಿಂಸೆಯೇ ಕೂಡದು ಎಂಬ ಮೂರ್ಖತನವೊಂದೆಡೆಯಾದರೆ, ದೇವರು ಹೇಗೋ ನೋಡಿಕೊಳ್ಳುತ್ತಾನೆ ಎಂಬ ಮೌಢ್ಯ ಮತ್ತು ಅನೈಕಮತ್ಯ ಮತ್ತೊಂದೆಡೆ. ಯಾವುದೇ ಕಾರಣಕ್ಕಾದರೂ ಅಹಿಂಸೆಯೇ ಕೂಡದೆಂದಾಗಿದ್ದರೆ ರಾಮನೇಕೆ ರಾವಣಾದಿಗಳನ್ನು ಸಂಹಾರ ಮಾಡಬೇಕಿತ್ತು? ಕೃಷ್ಣನೇಕೆ ಕಂಸಾದಿಗಳನ್ನು ಕೊಲ್ಲಬೇಕಿತ್ತು? ತನ್ನನ್ನೇಕೆ ರಾಮ ಕೊಲ್ಲಲೆಣಿಸಿದ್ದು ಎಂಬ ವಾಲಿಯ ಪ್ರಶ್ನೆಗೆ, ವಾಲಿಯ ನಡೆ  ಅಧರ್ಮಯುಕ್ತವಾಗಿತ್ತೆಂದು ವಿವರಿಸಿ, ಅವನು ವಧಾರ್ಹನಾದನೆಂಬ ರಾಮನ ಮಾತುಗಳನ್ನು ವಾಲಿಯೂ ಒಪ್ಪುತ್ತಾನೆ!


ಇಂದು ವಿಶ್ವದಲ್ಲಿ ಆಗುತ್ತಿರುವ ಎಷ್ಟೋ ಮತೀಯ ಹಿಂಸೆಗಳಿಗೆ ಕಾರಣ ಮತಾನುಯಾಯಿಗಳಲ್ಲ; ಮತಾಂಧರು. ಇಂತಹ ಮತಾಂಧತೆಯನ್ನು ಸುಸಂಸ್ಕೃತರೆಲ್ಲರೂ ಖಂಡಿಸಬೇಕು. ನಿಷ್ಕಾರಣವಾಗಿ ನಮ್ಮ ದೇಶದ ಮೇಲೆ ಆಕ್ರಮಣವನ್ನು ಮಾಡುವ ಶತ್ರುಗಳನ್ನು ನಿಷ್ಕರುಣೆಯಿಂದ ಕೊಲ್ಲುವುದು ನ್ಯಾಯವೇ ಆಗಿದೆ. ಆದರೆ, "ನಮ್ಮ ಮತಧರ್ಮದ ಚಿಂತನೆಗೆ ಅನುಸಾರವಾಗಿಯೇ ನೀವು ಜೀವನಕ್ರಮವನ್ನು ರೂಪಿಸಿಕೊಳ್ಳಬೇಕು; ಇಲ್ಲದಿದ್ದರೆ ನೀವು ವಧಾರ್ಹರು" ಎಂದು ಹೇಳುವುದು ಯಾವ ನ್ಯಾಯ? ಹಾಗೊಮ್ಮೆ ಯಾವುದಾದರೂ ಒಂದು ಮತಧರ್ಮವು ಹೇಳುತ್ತಿದ್ದರೂ, ಇಂದಿನ ಸುಸಂಸ್ಕೃತ ಸಮಾಜ ಅದರ ಬಗ್ಗೆ ಮರುಚಿಂತನೆ ನಡೆಸಿ, ಜನರು ನೆಮ್ಮದಿಯಿಂದ ಸಹಬಾಳ್ವೆ ನಡೆಸಲು ಅನುಕೂಲವಾಗುವಂತೆ ಮತೀಯ ನಿಯಮಗಳನ್ನು ಪರಿಷ್ಕರಿಸಬೇಕು. 


ಎಲ್ಲರೂ ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಹಕ್ಕಾಗುವುದಾದಲ್ಲಿ, ನೆಮ್ಮದಿಗೆ ಭಂಗ ತರುವ ಶಿಕ್ಷಣವನ್ನು ಕೊಡುವವರನ್ನು ಶಿಕ್ಷಾರ್ಹರನ್ನಾಗಿ ಮಾಡುವುದು ಕರ್ತವ್ಯವೇ ಆಗುತ್ತದೆ. ಇಂದು ಭಾರತದಲ್ಲಿ ಪ್ರಚಲಿತವಿರುವ ಪ್ರತಿ ಮತಧರ್ಮಗಳ ಪುಸ್ತಕಗಳನ್ನು ಗಮನವಿಟ್ಟು ನೋಡಿ, ರಾಷ್ಟ್ರಪ್ರೇಮಕ್ಕೆ ವಿರೋಧವಾದ, ಸರ್ವಶಾಂತಿಗೆ ಪೂರಕವಲ್ಲದ, ಭಾರತದ ಮುಖ್ಯವಾಹಿನಿಗೆ ಸಲ್ಲದ ಮಾತುಗಳನ್ನು ಹುಡುಕಿ, ಹೆಕ್ಕಿ, ಹೊಸಕಿ, ಹೊರಹಾಕಬೇಕು. ಭಾರತದಲ್ಲಿ ಸಿಗುವ ಸುಖಸವಲತ್ತು ಬೇಕೆನಿಸುವವರಿಗೆ, ಭಾರತೀಯರೆಲ್ಲರ ಶಾಂತಿಗಿಂತ, ಇಲ್ಲಿನ ಸಂವಿಧಾನಕ್ಕಿಂತ ತಮ್ಮ ಮತಧರ್ಮದ ವಕ್ತಾರರ ಆದೇಶ ನಿರ್ದೇಶಗಳು ಸರ್ವೋಚ್ಚವೆನಿಸಿದರೆ ಅದು ಖಂಡನಾರ್ಹ. ನಮ್ಮ ದೇಶದಲ್ಲಿ ಕೆಲವೆಡೆ ಚಾಲ್ತಿಯಲ್ಲಿದ್ದ, ಕೆಲವು ಇವತ್ತಿನ ದೇಶಕಾಲಗಳಿಗೆ ಹೊಂದದ, ಪದ್ಧತಿಗಳನ್ನು ಇಂದು ತೆಗೆದುಹಾಕಲಾಗಿದೆಯಷ್ಟೆ. ಉದಾಹರಣೆಗೆ, ಇಂದು ಸಹಗಮನ ಪದ್ಧತಿ ಸಂಪೂರ್ಣ ಮರೆಯಾಗಿದೆ. ಬಾಲ್ಯವಿವಾಹ ಪದ್ಧತಿ, ಒಂದೊಂದೆಡೆ ಕಂಡುಬಂದರೂ ಕಾನೂನುಬಾಹಿರವಾಗಿದೆ. ಇನ್ನೂ ಎಷ್ಟೋ ಅಮಾನವೀಯ ಪದ್ಧತಿಗಳ ರದ್ದತಿಗೆ ಹೋರಾಟಗಳು ನಡೆಯುತ್ತಿವೆ.


ಸರ್ವಶಾಂತಿಯ ಗುರಿಯನ್ನು ಸಾಧಿಸಲು ಭಾರತದ ಋಷಿಗಳ ಘೋಷವಾಕ್ಯಗಳು ಸಾರ್ವಕಾಲಿಕ ಹಿತನುಡಿಗಳೇ ಸರಿ.  " ಸರ್ವೇ ಚ ಸುಖಿನಃ ಸಂತುI ಸರ್ವೇ ಸಂತು ನಿರಾಮಯಾಃI ಸರ್ವೇ ಭದ್ರಾಣಿ ಪಶ್ಯಂತು Iಮಾ ಕಶ್ಚಿತ್ ದುಃಖಭಾಗ್ಭವೇತ್II"(ಎಲ್ಲರೂ ಸುಖಿಗಳಾಗಲಿ, ಎಲ್ಲರೂ ರೋಗರಹಿತರಾಗಿರಲಿ, ಎಲ್ಲರೂ ಮಂಗಳವಾದದ್ದನ್ನೇ ನೋಡುವಂತಾಗಲಿ, ಯಾರೂ ದುಃಖಭಾಗಿಗಳಾಗುವುದು ಬೇಡ) "ಲೋಕಾಃ ಸಮಸ್ತಾಃ ಸುಖಿನೋ ಭವಂತು" (ಎಲ್ಲ ಲೋಕಗಳೂ ಸುಖವಾಗಿರಲಿ) ಎಂಬ ಋಷಿಗಳ ಆಶಂಸನೆಯು ವಿಶ್ವದ ಘೋಷವಾಕ್ಯವಾಗಿ, ಅದರ ಅನುಷ್ಠಾನಕ್ಕಾಗಿ ವಿಶ್ವಮಾನವರೆಲ್ಲರೂ ಶ್ರಮಿಸುವುದಾದಲ್ಲಿ, ಇಡೀ ಜಗತ್ತೇ ಶಾಂತಿ, ನೆಮ್ಮದಿಗಳಿಂದ ನಲಿದೀತು!

ಸೂಚನೆ: 24/02/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.