ಲೇಖಕರು; ಡಾ. ರಾಮಮೂರ್ತಿ ಟಿ. ವಿ
(ಪ್ರತಿಕ್ರಿಯಿಸಿರಿ lekhana@ayvm.in)
ಜೀವನದ ಜಟಿಲ ಪ್ರಶ್ನೆಗಳಿಗೆ ಉತ್ತರವೋ ಎಂಬಂತೆ ಉಪನಿಷತ್ತುಗಳಿಂದ ಸ್ಫೂರ್ತಿಗೊಂಡ ಕಥೆಯೊಂದು ಹೀಗಿದೆ- ಒಂದು ಆಶ್ರಮದ ಆಚಾರ್ಯರು ತಮ್ಮ ಹತ್ತು ಶಿಷ್ಯರನ್ನು ಹತ್ತಿರದ ಮಾಯಾಪುರಿ ಎಂಬ ಗ್ರಾಮಕ್ಕೆ ಕಳುಹಿಸಿದರು.ಶಿಷ್ಯರು ಹೊರಡುವಾಗ ನದಿಯೊಂದನ್ನು ಸುರಕ್ಷಿತವಾಗಿ ದಾಟಿದರು. ಹಿಂದಿರುಗುವಾಗ ಹವಾಮಾನ ಕೆಟ್ಟು ಪ್ರವಾಹ ಬಂತು. ಕಡೆಗೆ ಶಿಷ್ಯರು ಬಹಳ ಕಷ್ಟಪಟ್ಟು ದಡ ಸೇರಿದರು. ನಂತರ ಶಿಷ್ಯರ ಗುಂಪಿನ ನಾಯಕ, ಹೊರಟ ಹತ್ತು ಮಂದಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಗುಂಪಿನವರನ್ನೆಲ್ಲ ಎಣಿಸಿದ- ಒಂದು, ಎರಡು, ಮೂರು ....ಒಂಬತ್ತು. ಹತ್ತನೆಯವ ಇಲ್ಲ. ಎಂದು ಕಿರುಚಿದ. ಮತ್ತೊಮ್ಮೆ ಎಣಿಸಿದರೂ ನಾಯಕನಿಗೆ ಹತ್ತನೆಯವ ಸಿಗದೇ ಗಾಬರಿಗೊಂಡ. ಉಪನಾಯಕ ತಾನೂ ಎಣಿಸಿವುದಾಗಿ ಹೇಳಿ ಎಣಿಸಿದರೂ ಹತ್ತನೆಯವ ಸಿಗದಾಗ ಎಲ್ಲರೂ ಜೋರಾಗಿ ಅಳತೊಡಗಿದರು.
ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಂನ್ಯಾಸಿಯೊಬ್ಬನು ಅವರನ್ನು ವಿಚಾರಿಸಿದ. ಶಿಷ್ಯರು ಅವನಲ್ಲಿ ತಮ್ಮ ಹತ್ತು ಮಂದಿಯಲ್ಲೊಬ್ಬ ನದಿಯಲ್ಲಿ ಮುಳುಗಿಹೋದ ಕಾರಣ ಅಳುತ್ತಿದ್ದೇವೆ ಎಂದರು. ಅವರ ಅಜ್ಞಾನವನ್ನು ನೋಡಿ, ಬುದ್ಧಿವಂತನಾದ ಸಂನ್ಯಾಸಿಯು "ಚಿಂತಿಸಬೇಡಿ. ಹತ್ತನೆಯವ ಎಲ್ಲೂ ಹೋಗಿಲ್ಲ" ಎನ್ನಲು, ಶಿಷ್ಯರಿಗೆ ಸಂತೋಷವಾಗಿ, "ಎಲ್ಲಿ ದಯಮಾಡಿ ತೋರಿಸಿ "ಎಂದು ಪ್ರಾರ್ಥಿಸಿದರು.
ಸಂನ್ಯಾಸಿಯು ಎಲ್ಲರನ್ನೂ ಸಾಲಾಗಿ ನಿಲ್ಲಿಸಿ, ನಾಯಕನನ್ನು ಕರೆದು "ಬಾ ಇಲ್ಲಿ, ಈಗ ಎಣಿಸು" ಎಂದ. ನಾಯಕನು ಎಣಿಸುತ್ತಾ ಒಂದು, ಎರಡು, ಮೂರು ...ಒಂಬತ್ತು ಎಂದು ನಿಲ್ಲಿಸಿದ. ಆಗ ಸಂನ್ಯಾಸಿಯು ನಾಯಕನ ಬೆರಳನ್ನು ಹಿಡಿದು "ನೀನೇ ಹತ್ತನೆಯವ" "ತತ್ ತ್ವಂ ಅಸಿ" ಎಂದ. ಆಗ ಪ್ರತಿ ಶಿಷ್ಯನಿಗೂ ತನ್ನನ್ನು ತಾನೇ ಎಣಿಸಿಕೊಳ್ಳದಿರುವುದು ಅರಿವಾಯಿತು. ಎಲ್ಲರಿಗೂ ಆನಂದವುಂಟಾಗಿ ಸಂನ್ಯಾಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಜನರು ಮಾಯಾಪುರಿಯಲ್ಲಿ, ಅಷ್ಟಪಾಶಗಳಿಂದ ಉಂಟಾದ "ಅಜ್ಞಾನ"ದಿಂದಾಗಿ ಆತ್ಮಸ್ವರೂಪವನ್ನು ಸಂಪೂರ್ಣ ಮರೆತುಬಿಡುತ್ತಾರೆ. ಇದರಿಂದಾಗಿ ಎಣಿಕೆ ತಪ್ಪಾಗಿ, ಒಳಗಿರುವ "ಆತ್ಮ" ಕಾಣಿಸುವುದಿಲ್ಲ. ಇದು "ಆವರಣ"ದಿಂದಾಗಿ. ಹತ್ತನೆಯವ ನದಿಯಲ್ಲಿ ಮುಳುಗಿಹೋದನೆಂಬ ದುಃಖ, ಚಿಂತೆಗಳು ತಪ್ಪಾದ ನೋಟ. ಶ್ರೀರಂಗಮಹಾಗುರುಗಳ ವಾಣೀ ಎಚ್ಚರಿಸುತ್ತದೆ "ಸ್ವರೂಪ ಅರಿತರೆ ಬಾಳಾಟ ಅರಿಯದಿದ್ದರೆ ಗೋಳಾಟ. ಪ್ರಕೃತಿ ಕೆಟ್ಟಾಗ ಮನುಷ್ಯನು ಸಹಜವಾದ ನಿದ್ರೆಯನ್ನೇ ಕಳೆದುಕೊಳ್ಳುತ್ತಾನೆ. ಅಂತೆಯೇ ತುರೀಯದೆಶೆಯಲ್ಲಿರುವ ಸತ್ಯವನ್ನು, ಪ್ರಕೃತಿಯ ಕಂಡೀಷನ್ ಕೆಟ್ಟಾಗ, ಕಳೆದುಕೊಳ್ಳುತ್ತಾನೆ. ಅದಕ್ಕೆ ತಕ್ಕ ಡಾಕ್ಟರಿಂದ ಔಷಧಿ ತೆಗೆದುಕೊಳ್ಳಬೇಕು". ಈ ಕಥೆಯಲ್ಲಿ ಹತ್ತನೇಯನವನಿಗಾಗಿ ಪರಿತಪಿಸುವಾಗ, ದಾರಿ ತೋರಿಸುವವನು ಬಂದಂತೆ, ನಮ್ಮ ಜೀವನದಲ್ಲಿ ದಾರಿದೀಪ ತೋರಿಸುವನೇ ಗುರು. ಅಭಯವನ್ನು ನೀಡಿ ನಮ್ಮ ಬುದ್ಧಿಯನ್ನು ಪ್ರಚೋದಿಸಿ, ಪರೋಕ್ಷ ಜ್ಞಾನವನ್ನು ದಯಪಾಲಿಸುತ್ತಾನೆ. ಮುಂದೆ, ಕಾಲ ಪಕ್ವವಾದಾಗ, ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಸ್ಥಿತಿಗಳನ್ನು ಮೀರಿದ ತುರೀಯ(ನಾಲ್ಕನೆಯ)ವೆಂಬ ಸ್ಥಿತಿಯನ್ನು ಹೊಂದುವಂತೆ ಮಾಡುತ್ತಾನೆ. ಭುವಿಯಲ್ಲಿದ್ದರೂ ಎಲ್ಲಾ ಭವ ಬಂಧನದಿಂದ ಬಿಡುಗಡೆಯಾಗಿ ದುಃಖ ನಿವೃತ್ತಿಯಾಗಿ ಕಡೆಗೆ ಸಚ್ಚಿದಾನಂದ ದೊರಕುವಂತಾಗಲಿ; ಎಲ್ಲರೂ ಸಾಧನೆ ಮಾಡಿ ಅಂತಹ "ಆನಂದ ಸ್ಥಿತಿ" ಯನ್ನು ಹೊಂದೋಣವೆಂದು ಪ್ರಾರ್ಥಿಸೋಣ.