Saturday, July 9, 2022

ಕಾಳಿದಾಸನ ಜೀವನದರ್ಶನ – 18 ಸದ್ವಿದ್ಯೆಯು ಸಲ್ಲಿಸುವ ಸತ್ಫಲ ( Kalidasana Jivanadarshana -18 Sadvidyeyu Sallisuva Satphala)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 


ವಿದ್ಯೆಯನ್ನು ಕುರಿತಾಗಿ ಕಾಳಿದಾಸನ ನೋಟವು ಹೇಗಿದೆಯೆಂಬುದನ್ನು ಸುಮಾರು ಹನ್ನೆರಡು ಲೇಖನಗಳಲ್ಲಿ ಈವರೆಗೆ ಕಂಡೆವು. ಆತನ ರಘುವಂಶವು ಸೂರ್ಯವಂಶದ ರಾಜರನ್ನು ಕುರಿತಾದ ನಿರೂಪಣೆ. ಆತನ ನಾಟಕಗಳೆಲ್ಲವೂ ಅರಮನೆಯ ಪರಿಸರದ ಸುತ್ತ ಹೆಣೆದಿರುವ ಕಥೆಗಳೇ. ಎಂದೇ ವಿದ್ಯೆಯನ್ನು ಕುರಿತಾಗಿ ಬಂದಿರುವ ನೋಟಗಳೂ ಸುಮಾರಾಗಿ ಆ ಎಡೆಗಳಲ್ಲಿ ಸಲ್ಲುವ ವಿದ್ಯೆಗಳ ಹಿನ್ನೆಲೆಯಲ್ಲಿಯೇ. ರಾಜಕುಮಾರನಾದ ರಘುವಿಗೆ ಚೂಡಾಕರ್ಮವಾದ ಬಳಿಕ ಅಕ್ಷರಾಭ್ಯಾಸವು ("ಲಿಪಿಗ್ರಹಣ") ಆದುದನ್ನು ಕವಿಯು ರಘುವಂಶದಲ್ಲಿ ಉಲ್ಲೇಖಿಸಿದ್ದಾನಷ್ಟೆ. ಒಳ್ಳೆಯ ಕ್ಷತ್ರಿಯವಂಶದಲ್ಲಿ ಜನಿಸಿದ ರಘುವಿಗೆ ಉಪನಯನಾನಂತರ ವಿದ್ಯೆಗಳು ಅದೆಷ್ಟು ಚೆನ್ನಾಗಿ ಹತ್ತಿದವೆಂಬುದನ್ನೂ ಅಲ್ಲಿ ಹೇಳಿದೆ.

ಹಾಗೆಯೇ, ಒಬ್ಬ ರಾಜಕುಮಾರಿಗೆ ಹೇಳಿಕೊಡುವ ವಿದ್ಯೆಯನ್ನು ಕುರಿತಾಗಿಯೂ ಆತನ ನಾಟಕವೊಂದರಲ್ಲಿ ನಿರೂಪಣೆಯಿದೆ. ಮಾಳವಿಕೆಯು ರಾಜಕುಮಾರಿಯೆಂಬ ಗ್ರಹಿಕೆಯು ಮೊದಲಿರದಿದ್ದರೂ, ನಾಟ್ಯವಿದ್ಯಾರ್ಥಿನಿಯಾದ ಅವಳ ಬಗೆಗಿನ ವಾಸ್ತವಾಂಶದ ಅರಿವು ನಾಟಕದ ಕೊನೆಯಲ್ಲಿ ಮೂಡುತ್ತದೆ. ಅಂತೆಯೇ, ರಾಜಕುಮಾರಿಯಾಗಿ ಪಾರ್ವತಿಯು ವಿದ್ಯೆಗಳನ್ನು ಗ್ರಹಿಸಿದ ಬಗೆಯನ್ನು ಕುಮಾರಸಂಭವದಲ್ಲಿ ಚಿತ್ರಿಸಿದೆ.

ಯಾವುದಾದರೂ ಒಂದು ಗಿಡದ ಹೆಚ್ಚುಗಾರಿಕೆಯನ್ನು 'ಅಳೆಯ'ಬೇಕೆಂದರೆ, ಅದರ 'ಫಲ'ಗಳಿಂದಲೇ ಅಲ್ಲವೇ? ವಿದ್ಯೆಯ 'ಫಲ'ವನ್ನು ಅಳೆಯುವುದೆಂದರೆ, ವಿದ್ಯೆಯಿಂದ ಸಂಸ್ಕಾರ ಪಡೆದವನಲ್ಲಿ ಉಂಟಾದ ಪಕ್ವತೆಯೇನೆಂಬುದರತ್ತ ಗಮನ ಹರಿಸಬೇಕಾದುದು ಸ್ವಾಭಾವಿಕವೇ ಸರಿ.  ಇದಕ್ಕೆ ನಿದರ್ಶನವಾಗಿ, ರಘುವಂಶದ (ಐದನೆಯ ಸರ್ಗದಲ್ಲಿಯ) ಪ್ರಸಂಗವೊಂದನ್ನು ಶ್ರೀರಂಗಮಹಾಗುರುಗಳು ಕೊಂಡಾಡುತ್ತಿದ್ದರು; ಆ ಪ್ರಸಂಗವನ್ನಿಲ್ಲಿ ಸಂಕ್ಷೇಪವಾಗಿ  ಸ್ಮರಿಸಿದೆ.

ದಿಗ್ವಿಜಯವನ್ನು ಸಾಧಿಸಿ, ಅಪಾರವಾದ ಸಂಪತ್ತನ್ನು ಗಳಿಸಿ, ರಘುಮಹಾರಾಜನೀಗ 'ವಿಶ್ವಜಿದ್'ಯಜ್ಞವನ್ನು ನೆರವೇರಿಸಿದ್ದಾನೆ: ಈ ಯಜ್ಞದಲ್ಲಿ ದೇವತಾಪ್ರೀತಿಯನ್ನು ಸಂಪಾದಿಸುವುದರ ಜೊತೆಗೇ, ಐಶ್ವರ್ಯಸರ್ವಸ್ವವನ್ನೂ ದಾನಮಾಡುವುದಾಗುತ್ತದೆ! ಯಜ್ಞವು ಮುಗಿಯುವ ಹೊತ್ತಿಗೆ ಸರಿಯಾಗಿ, ವರತಂತು ಎಂಬ ಶ್ರೇಷ್ಠಗುರುಗಳೊಬ್ಬರ ಉತ್ತಮಶಿಷ್ಯನಾದ ಕೌತ್ಸನು ರಘುವಿನಲ್ಲಿಗೆ ಬಂದಿದ್ದಾನೆ. ವಿದ್ಯಾರ್ಜನೆಯನ್ನು ಮುಗಿಸಿಬಂದಿರುವ ಆತನ ಬಗ್ಗೆ ಅರಸನಿಗೂ ಅಪಾರ ಆದರ. ಆದರೆ ಸ್ವಾಗತಿಸಲು ತನ್ನ ಬಳಿ ಈಗುಳಿದಿರುವುದು ಬರೀ ಒಂದು ಮಣ್ಣಿನ ಮಡಕೆ ಮಾತ್ರವೆಂಬ ಪರಿಸ್ಥಿತಿ!

 "ಗುರುಗಳು ಕುಶಲರಾಗಿದ್ದಾರೆಯೇ? ನನ್ನಿಂದೇನಾಗಬೇಕು?" ಎಂದು ಅರಿಕೆಮಾಡಿಕೊಂಡಿದ್ದಾನೆ, ಮಹಾರಾಜ. ರಾಜನ ಖಜಾನೆಯೀಗ ಖಾಲಿಯಾಗಿದೆ – ಎಂಬುದು ಕೌತ್ಸನಿಗೂ ಗೋಚರವಾಗಿದೆ. "ರಾಜನೇ, ನಿನ್ನ ಸ್ಥಿತಿಯನ್ನು ನಾನರಿತಿರುವೆ. ಗುರುವಿಗಾಗಿ ದಕ್ಷಿಣೆಗೋಸ್ಕರವಾಗಿ ನಾ ಬಂದೆ; ಸರಿ, ಬೇರೆಲ್ಲಾದರೂ ಪ್ರಯತ್ನಿಸುವೆ" ಎಂದು ಹೇಳಿ ಕೌತ್ಸನು ಹೊರಡಲುದ್ಯುಕ್ತನಾದ.

ಗುರುವಿಗೆ ಕೊಡಬೇಕಾದ ದಕ್ಷಿಣೆಯೆಷ್ಟೆಂದು ಹೇಳೆಂದು ರಾಜನೂ ಬಲವಂತ ಮಾಡಿದ. ಅದಕ್ಕೆ ಕೌತ್ಸನು "ನನ್ನ ಶ್ರದ್ಧಾಭಕ್ತಿಗಳನ್ನು ಮೆಚ್ಚಿದ ಗುರುವು ನನ್ನಿಂದ ದಕ್ಷಿಣೆಯನ್ನೇನೂ ಅಪೇಕ್ಷಿಸಲಿಲ್ಲ; ಆದರೆ ನಾನೇ ಮೊಂಡುಹಿಡಿದುಬಿಟ್ಟೆ! ಅದಕ್ಕೆ ಕುಪಿತನಾದ ಗುರುವು, 'ನಾನುಪದೇಶಿಸಿದ ಚತುರ್ದಶ(೧೪) ವಿದ್ಯೆಗಳಿಗಾಗಿ, ಹದಿನಾಲ್ಕುಕೋಟಿ ಹಣವನ್ನು ತಾ!' ಎಂದುಬಿಟ್ಟ! ಇಷ್ಟನ್ನೀಗ ನೀ ಕೊಡಲಾದೀತೇ?!" ಎಂದ.

ಅದಕ್ಕೆ ರಘುವು "ಅಯ್ಯೋ! ಗುರುವಿಗೋಸ್ಕರವಾಗಿ 'ದೇಹಿ' ಎಂದು ಬಂದವನಿಗೆ 'ನಾಸ್ತಿ' ಎನ್ನಲೇ? ಎರಡು-ಮೂರು ದಿನಗಳಿಲ್ಲೇ ಉಳಿದುಕೋ, ಯತ್ನಿಸುವೆ" ಎಂದು ಹೇಳಿದ; ಅಷ್ಟು ಬೇಗನೆ ಅಷ್ಟು ಹಣವು ಬೇಕೆಂದರೆ, ಇನ್ನೇನು, ನಾಳೆ ಕುಬೇರನಿಗೇ ಮುತ್ತಿಗೆ ಹಾಕುವುದೆಂದು ತೀರ್ಮಾನಿಸಿಕೊಂಡ! ಆದರೆ ಬೆಳಗಾಗುವ ಹೊತ್ತಿಗೆ, ಅದೋ, ಕುಬೇರನೇ ಈತನ ಖಜಾನೆಯನ್ನು ತುಂಬಿಸಿದ್ದ!

"ಈಗ ಬಂದಿರುವ ಹಣವೆಲ್ಲವೂ ನಿನಗಾಗಿ" ಎಂದು ಈ ಶಿಷ್ಯನಿಗೆ ರಘು ಅರುಹಿದ; ಆದರೆ ಕೌತ್ಸನು ಮಾತ್ರ "ಗುರುವಿಗೆ ಕೊಡಬೇಕಾದುದಕ್ಕಿಂತ ಅಧಿಕವಾಗಿ ಒಂದು ಬಿಡಿಗಾಸನ್ನೂ ನಾ ಸ್ವೀಕರಿಸಲಾರೆ!" ಎಂದುಸುರಿದ!

ಗುರುದಕ್ಷಿಣೆಯನ್ನಲ್ಲದೆ ಇನ್ನೊಂದು ಕಾಸನ್ನೂ ಸ್ವೀಕರಿಸೆ" - ಎನ್ನುವೀ ಶಿಷ್ಯನು ಶ್ರೇಷ್ಠನೋ? "ಸತ್ಪಾತ್ರನಿಗಾಗಿಯೇ ಇದೆಲ್ಲವೂ – ಎನ್ನುತ್ತಾ, ಕೇಳಿದ್ದಕ್ಕಿಂತಲೂ ಹೆಚ್ಚು ದಾನ ಕೊಡಹೊರಟಾ ಅರಸನು ಶ್ರೇಷ್ಠನೋ? - ಎಂಬ ಪ್ರಶ್ನೆಗೆ ಉತ್ತರ ದೊರೆಯದೆ, ಅಯೋಧ್ಯೆಯ ಪ್ರಜೆಗಳ ಚಿತ್ತದಲ್ಲಿ ವಿಸ್ಮಯ-ಗೌರವ-ಸಂತೋಷಗಳು ಇಬ್ಬರ ಬಗ್ಗೆಯೂ ಉಕ್ಕಿದವಂತೆ!

ಹಣ-ಹಣ-ಹಣವೆಂದು ಹಪಹಪಿಸುತ್ತಾ ಹಣಕ್ಕಾಗಿ ಹಣಾಹಣಿ ಮಾಡಲೂ ಸಿದ್ಧವಾಗಿರುವ ಇಂದಿನ ಮಂದಿಗೆ, ನಿಃಸ್ಪೃಹರಾದ ಅಂತಹ ಗುರು, ಅಂತಹ ಶಿಷ್ಯ, ಅಂತಹ ರಾಜರುಗಳು ಊಹೆಗೂ ನಿಲುಕಲಾರರೇನೋ!

ಇಲ್ಲಿ ರಾಜನ ಔದಾರ್ಯವು ಹೆಚ್ಚೋ, ಶಿಷ್ಯನ ಸಂಯಮವು ಹೆಚ್ಚೋ ಹೇಳಬಲ್ಲವರಾರು?: ಲೋಭದ ಸೋಂಕೆಂಬುದೂ ಇಬ್ಬರಲ್ಲೂ ಇಲ್ಲವಲ್ಲ! ಇನ್ನೇನು ಗೃಹಸ್ಥಾಶ್ರಮವನ್ನು ಸ್ವೀಕರಿಸಲಿರುವ ಬ್ರಾಹ್ಮಣವಟುವಿನೊಬ್ಬನಲ್ಲಿ ಕಂಡುಬಂದಿರುವಂತೆ  ವಿದ್ಯೆಯು ಉಂಟುಮಾಡಿರುವ ಅಲೋಭ ಮೊದಲಾದ ಗುಣಗಳು ಮೂಡುವಂತಹ ಸಂಸ್ಕಾರ; ಹಾಗೆಯೇ, ಸತ್ಪಾತ್ರನಲ್ಲಿ ಸಂಪತ್ತಿನ ಸದ್ವಿನಿಯೋಗವಾಗಬೇಕೆಂಬ ಶ್ಲಾಘ್ಯವಾದ ಆಗ್ರಹವು ಮೂಡುವಂತೆ ರಾಜನೊಬ್ಬನಲ್ಲಾಗಿರುವ  ಸಂಸ್ಕಾರ - ಎಂಬಿವೆರಡೂ ವಿದ್ಯಾಫಲಗಳೇ! ಎರಡಕ್ಕೂ ಒಟ್ಟಿಗೇ ಕನ್ನಡಿಹಿಡಿಯುವ ಅದ್ಭುತಪ್ರಸಂಗವಿದು!

 ಇಂತಹ ಗುರು-ಶಿಷ್ಯರ, ಇಂತಹ ರಾಜ-ಪ್ರಜೆಗಳ, ಸ್ಫೂರ್ತಿಪ್ರದಕಥೆಗಳು ಇಂದಿನ ಶಿಕ್ಷಣದಲ್ಲಿ ಬೋಧಿತವಾಗಬೇಡವೇ?

ಸೂಚನೆ : 09/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.