ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
"ಏಯ್, ಚೇಷ್ಟೆ ಮಾಡಬೇಡ" ಎಂದು ಮಕ್ಕಳನ್ನು ಕೆಲವೊಮ್ಮೆ ಗದರಿಸುವುದುಂಟು. ಯಾವ ಕೆಲಸದಿಂದ ಏನೊಂದೂ ಒಳ್ಳೆಯ ಪ್ರಯೋಜನವಿಲ್ಲವೋ, ಅಂತಹ ವ್ಯರ್ಥವಾದ ಕ್ರಿಯೆಯನ್ನು "ಚೇಷ್ಟೆ"ಯೆನ್ನುತ್ತೇವೆ. ಸಾಫಲ್ಯವೆಂಬುದಿಲ್ಲದ, ಚಾಪಲ್ಯಮಾತ್ರದಿಂದ ಪ್ರೇರಿತವಾದ, ಕ್ರಿಯೆಗೆ ಚೇಷ್ಟೆಯೆಂದು ಹೇಳುವುದು ಕನ್ನಡದಲ್ಲಿ ರೂಢ.
ಆದರೆ ಸಂಸ್ಕೃತದಲ್ಲಿ ಹಾಗಲ್ಲ; ಯಾವುದೇ ಕ್ರಿಯೆಯನ್ನೂ ಚೇಷ್ಟೆಯೆನ್ನಬಹುದು. ಶರೀರವೆಂಬುದಿದ್ದರೆ ಕ್ರಿಯೆ; ಇಲ್ಲದಿದ್ದಲ್ಲಿ ಕ್ರಿಯೆಯೆಲ್ಲಿ? ಎಂದೇ, "ಚೇಷ್ಟಾಶ್ರಯಂ ಶರೀರಮ್" ಎಂದು ಶರೀರದ ಲಕ್ಷಣ. ಇನ್ನೂ ಪರಿಷ್ಕೃತಲಕ್ಷಣವನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು: ಹಿತಕ್ಕೂ ಅಹಿತಕ್ಕೂ ಇದು ಬಳಕೆಯಾಗಬಹುದೆಂಬ ಅಲ್ಲಿನೊಂದಂಶವು ಇಲ್ಲಿ ಉಲ್ಲೇಖ್ಯ. (ಸಂಸ್ಕೃತದಲ್ಲಿ'ವ್ಯಾಪಾರ'ವೆಂಬ ಪದಕ್ಕೂ ಕೆಲಸವೆಂಬರ್ಥವುಂಟು: ಉದಾಹರಣೆಗೆ, ಇಂದ್ರಿಯಗಳು ಮಾಡುವ ಕೆಲಸವು 'ಇಂದ್ರಿಯವ್ಯಾಪಾರ'; ಕನ್ನಡದ ವ್ಯಾಪಾರಕ್ಕೆ ಅನ್ಯಾರ್ಥ.)
ಏನೂ ಕೆಲಸ ಮಾಡದೆ ಒಂದು ಕ್ಷಣವಾದರೂ ನಾವಿರುವೆವೇ? ಏನೋ ಕೈಕಾಲಾಡಿಸುತ್ತಿರುವುದು ಸದಾ ಇದ್ದೇ ಇರುತ್ತದೆ. ಮಾತೂ ಕ್ರಿಯೆಯೇ (ಇದನ್ನು ವಾಗ್-ವ್ಯಾಪಾರವೆನ್ನುತ್ತಾರೆ)! 'ಸುಮ್ಮನೆ ಕುಳಿತುಕೋ' ಎಂದಾಗ ಮೈಯಾಡದೆ ಮಾತಿಲ್ಲದೆ ಇರಬಹುದು; ಆದರೆ ಮನೋವ್ಯಾಪಾರವಿದ್ದೇ ಇರುತ್ತದಲ್ಲವೇ? ಹೀಗೆ ಕಾಯ-ವಾಕ್-ಮನಸ್ - ಎಂಬ ಮೂರು ಸ್ತರಗಳಲ್ಲಿ ನಮ್ಮ ಕ್ರಿಯೆಗಳು/ಚಟುವಟಿಕೆಗಳು ಏನಾದರೊಂದು ನಡೆಯುತ್ತಲೇ ಇರುತ್ತವೆ.
'ಕ್ರಿಯೆ'ಯೆಂಬುದು ವಾಸ್ತವವಾಗಿ ಮೂರನೆಯ ಹೆಜ್ಜೆ. ಅದರ ಹಿಂದೆ ಎರಡು ಹೆಜ್ಜೆಗಳುಂಟು: ಕ್ರಿಯೆಯ ಹಿಂದೆ 'ಇಚ್ಛೆ'ಯೂ, ಅದಕ್ಕೂ ಹಿಂದೆ 'ಜ್ಞಾನ'ವೂ ಕೆಲಸ ಮಾಡುತ್ತವೆ. ನಮ್ಮ ಜ್ಞಾನವು ಸರಿಯಾಗಿದ್ದಲ್ಲಿ ಸರಿಯಾದ ಇಚ್ಛೆಯೂ, ಅದು ಸರಿಯಾಗಿದ್ದಲ್ಲಿ ಸರಿಯಾದ ಕ್ರಿಯೆಯೂ ಏರ್ಪಡುವುವು. ಹೀಗೆ ಜ್ಞಾನ-ಇಚ್ಛೆ-ಕ್ರಿಯೆ(=ಅರಿವು-ಬಯಕೆ-ಕೆಲಸ)ಗಳೆಂಬ ಮೂರು ಹೆಜ್ಜೆಗಳು ಎಲ್ಲೆಡೆ ಇರತಕ್ಕವೇ.
"ಇದು ಸುಖ" ಎಂಬುದರ ಜ್ಞಾನವು ಮೂಡುತ್ತಲೇ, ಅದನ್ನು ಪಡೆಯಬೇಕೆಂಬ ಇಚ್ಛೆಯು ನಮ್ಮಲ್ಲಿ ಮೂಡುವುದು; ಆ ಆಸೆಯ ಈಡೇರಿಕೆಗಾಗಿ ಕ್ರಿಯೆಯು ಆರಂಭವಾಗುವುದು. ಮತ್ತೊಬ್ಬರ ಸೊತ್ತನ್ನು ಕದಿಯುವುದು ದೋಷವಲ್ಲವೇ? ಆದರೆ, ದೋಷವಿಲ್ಲವೆಂಬ ಮತಿ ಕೆಲವರದು! ಹಾಗಿರುವವರು ಆ ಸೊತ್ತನ್ನು ಬಯಸಿ ಕದಿಯಲೆಳಸಿದರೆ ಆಶ್ಚರ್ಯವೇನು? ಇದಕ್ಕೆ ಬದಲಾಗಿ, ಕದಿಯುವುದು ಅಧರ್ಮವೆಂದೂ, ಅಧರ್ಮವು ಬೀಳಿಸುವಂತಹುದೆಂದೂ, ಧರ್ಮವೊಂದೇ ರಕ್ಷಿಸುವಂತಹುದೆಂದೂ ದೃಢವಾಗಿ ಅರಿತಿರುವವನ ವರ್ತನೆಯೇ ಬೇರೆ: ಜೀವನವು ಸಂಪನ್ನವಾಗಬೇಕು, ಆದರೆ ಅಧರ್ಮವು ನಡೆಯಬಾರದು – ಎಂಬರಿವಿಗನುಗುಣವಾಗಿ ವರ್ತಿಸಬೇಕೆಂದು ಬಯಸುವವನ ನಡತೆಯು ಉನ್ನತವಾದದ್ದು.
ಈ ಮೂರು ಹೆಜ್ಜೆಗಳನ್ನು ಹೀಗೂ ಕಂಡುಕೊಳ್ಳಬಹುದು. ಮೊದಲು "ಪ್ರಜ್ಞೆ": ಎಂದರೆ ನನ್ನ ಜೀವನವು ಧರ್ಮ್ಯವಾಗಿರಬೇಕು (ಅರ್ಥಾತ್ ಅಧರ್ಮಕ್ಕೆ ಆಸ್ಪದವಾಗಬಾರದು) ಎಂಬುದರ ಬಗ್ಗೆ ಅರಿವು, ಜಾಗರೂಕಮತಿ. ಆಮೇಲೆ "ಆಗಮ": ಎಂದರೆ, ತನ್ನ ಸ್ಥಾನಮಾನಸಾಮರ್ಥ್ಯಗಳಿಗೆ ಅನುಗುಣವಾದ ವಿದ್ಯಾರ್ಜನೆ. ಕೊನೆಯದಾಗಿ "ಆರಂಭ": ಎಂದರೆ ಅಂತಹ ವಿದ್ಯೆಯಿಂದ ಪ್ರೇರಿತವಾದ ಪ್ರಯತ್ನಗಳು, ಕಾರ್ಯಕಸುಬುಗಳು. ಹೀಗೆ ಈ ಮೂರೂ ಪರಸ್ಪರ ಸಂಬದ್ಧವಾದವು. ಹಿಂದುಹಿಂದಿನದು ಮುಂದುಮುಂದಿನದಕ್ಕೆ ಪೋಷಕ: ಕ್ರಿಯೆಯು ಇಚ್ಛಾಧೀನ; ಇಚ್ಛೆಯು ಜ್ಞಾನಾಧೀನ.
ಈ ಮೂರರ ಸಮನ್ವಯವನ್ನು ಕಾಳಿದಾಸನು ತೋರಿಸಿಕೊಡುತ್ತಾನೆ, ತನ್ನ ರಘುವಂಶದಲ್ಲಿ. ಪ್ರಜ್ಞೆ-ಆಗಮ-ಆರಂಭಗಳು ದಿಲೀಪಮಹಾರಾಜನಿಗೆ ಕೈಗೂಡಿದ್ದವು: ಪ್ರಜ್ಞಾನುಗುಣವಾದ ಆಗಮಗಳೂ ಆಗಮಾನುಸಾರಿಯಾದ ಆರಂಭಗಳೂ ಅವನಲ್ಲಿದ್ದವು. (ಇಲ್ಲಿ ಆಗಮವೆಂದರೆ ಶಾಸ್ತ್ರಗಳ ಪರಿಚಯವೆಂದು ವ್ಯಾಖ್ಯಾಕಾರರ ವಿವರಣೆ). ಒಬ್ಬ ರಾಜಕುಮಾರನಿಗೆ ಅದೆಷ್ಟು ವಿದ್ಯೆಗಳು ತಿಳಿದಿರಬೇಕೆಂಬುದನ್ನು ಕೌಟಲೀಯಾರ್ಥಶಾಸ್ತ್ರದಲ್ಲೂ, ಬಾಣಭಟ್ಟನ ಕಾದಂಬರಿಯಲ್ಲೂ ಕಾಣಬಹುದು. ಆಳುವವರು ಸುಶಿಕ್ಷಿತರಾಗಿಲ್ಲದಿದ್ದರೆ ಪ್ರಜೆಗಳು ಅಳುವವರಾಗಬೇಕಾಗುತ್ತದೆಯಷ್ಟೆ? ವಿಶೇಷವಾಗಿ ರಾಜನೀತಿವಿದ್ಯೆಯನ್ನೂ, ಅದಕ್ಕೆ ಅಂಗಭೂತವಾದ (ಶಸ್ತ್ರಪ್ರಯೋಗಾದಿ) ಅನೇಕವಿದ್ಯೆಗಳನ್ನೂ ಅರಸನಾಗತಕ್ಕವನು ಅರಿತಿರಬೇಕಾದದ್ದು ಅಂದು ಅವಶ್ಯವೇ ಆಗಿತ್ತು.
ಆ ಮಟ್ಟದ ವಿದ್ಯಾರ್ಜನೆಯಾಯಿತೆಂದರೆ, ತದನುಸಾರವಾಗಿ ಆತ್ಮೋನ್ನತಿ-ಜನೋನ್ನತಿಕಾರಕಗಳಾದ ಕಾರ್ಯಗಳನ್ನು ಅನ್ವೇಷಿಸಲೂ ಅನುಷ್ಠಿಸಲೂ ಸಿದ್ಧತೆಯಾಯಿತೆಂದೇ. ಗಳಿಸಿದ ಇಂತಹ ವಿದ್ಯೆಯು ಹಳಸಲಾಗದಂತೆ ಬಳಸಿಕೊಳ್ಳು(ತ್ತಿರು)ವ ಪ್ರವಣತೆಯು ಇರಬೇಕಾದುದೂ ಮುಖ್ಯವೇ.
ಇಲ್ಲಿ ಹೇಳಿರುವ ಪ್ರಜ್ಞೆ(ಅರಿವು)-ಆಗಮ(ವಿದ್ಯೆ)-ಆರಂಭ(ಕರ್ಮ)ಗಳಲ್ಲಿ ವಿದ್ಯೆಯು ಕೇಂದ್ರಸ್ಥಾನದಲ್ಲಿರುವುದನ್ನು ಗಮನಿಸಬೇಕು. ಇದಲ್ಲದೆ, ಪ್ರಜ್ಞೆಗೂ ಹಿಂದಿನ ಪೂರ್ವಾಂಶವೊಂದನ್ನೂ, ಆರಂಭಕ್ಕೂ ನಂತರದ ಉತ್ತರಾಂಶವೊಂದನ್ನೂ ಕವಿಯು ಕೊಟ್ಟಿದ್ದಾನೆ, ಅದೇ ಪ್ರಸಂಗದಲ್ಲಿ.
ತನ್ನ 'ಆಕಾರ'ಕ್ಕನುಗುಣವಾದ ಪ್ರಜ್ಞೆಯನ್ನು ರಾಜನು ಹೊಂದಿದ್ದನೆಂಬುದು ಮೊದಲನೆಯದು; ಆರಂಭಕ್ಕೆ ತಕ್ಕ 'ಉದಯ'ವೆನ್ನುವುದು ಕೊನೆಯದು. ಏನು ಹಾಗೆಂದರೆ? ದಿಲೀಪನದು ಉನ್ನತವಾದ ವ್ಯಕ್ತಿತ್ವ: ಎತ್ತರದ ಆಳು; ತನ್ನ ಆ ಭವ್ಯಾಕಾರಕ್ಕೆ ಅನುಗುಣವಾದ ಭವ್ಯಪ್ರಜ್ಞೆ; ಅರಿವಿನಲ್ಲೂ ಹಿರಿತನ, ಪ್ರಕೃಷ್ಟವಾದ ಪ್ರಜ್ಞೆ. ಇನ್ನು ಕೊನೆಯದಾದ 'ಉದಯ'ವೆಂದರೆ ಕಾರ್ಯಸಿದ್ಧಿ. ಸದ್ವಿದ್ಯಾಬಲದಿಂದ ಮಾಡಿದ ಕಾರ್ಯಕ್ಕೆ ಸಿದ್ಧಿ ಸಿದ್ಧವಾದದ್ದೇ.
ಒಟ್ಟಿನಲ್ಲಿ ಐದು ಅಂಶಗಳು: ಮೇರುಸದೃಶವಾದ ಆಕಾರ; ಅದಕ್ಕೆ ತಕ್ಕ ಉದಾತ್ತಪ್ರಜ್ಞೆ; ಅದಕ್ಕೆ ಸಲ್ಲುವ ವಿದ್ಯಾರ್ಜನೆ; ಅದಕ್ಕೆ ಹೊಂದುವ ಕಾರ್ಯದ ಆಯ್ಕೆ-ಸಾಧನೆಗಳು; ಹಾಗೂ ಕೊನೆಯಲ್ಲಿ ಕಾರ್ಯದ ಸಫಲತೆ-ಸುಫಲತೆಗಳು.
ಹೀಗೂ, ವಿದ್ಯೆಯಿರುವುದು ಕೇಂದ್ರಸ್ಥಾನದಲ್ಲಿಯೇ. ಸೋಪಾನಕ್ರಮದಲ್ಲಿ ವಿದ್ಯೆಯ ಹಿಂದುಮುಂದುಗಳನ್ನು ಕವಿ ಕಾಣಿಸಿರುವ ಬಗೆ ಅನ್ಯಾದೃಶವಲ್ಲವೇ?
ಸೂಚನೆ : 02/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.