Sunday, July 17, 2022

ಶ್ರೀ ರಾಮನ ಗುಣಗಳು - 63 ಅಯೋಧ್ಯಾಧಿಪ - ಶ್ರೀರಾಮ (Sriramana Gunagalu -63 Avatari - Sriramana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀರಾಮನು 'ಅಯೋಧ್ಯೆ' ಎಂಬ ನಗರದಲ್ಲಿ ದಶರಥನ ಮಗನಾಗಿ ಹುಟ್ಟಿದನು ಎಂಬಷ್ಟಕ್ಕೆ ಶ್ರೀರಾಮನಿಗೂ ದಶರಥನಿಗೂ ಸಂಬಂಧ ಸಹಜವಾದದ್ದೇ. ಮತ್ತು ದಶರಥನ ಆಳ್ವಿಕೆಯ ಅನಂತರದ ಕಾಲದಲ್ಲಿ ಉತ್ತರಾಧಿಕಾರಿಯಾಗಿ ಅಯೋಧ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲವಾ ಭರತಖಂಡವನ್ನು ಆಳಿದನು ಎಂಬ ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿಯೂ  'ಅಯೋಧ್ಯಾಧಿಪ' ಎಂಬ ಬಿರುದು  ಅವನಿಗೆ ಸಲ್ಲುತ್ತದೆ. ಆದರೆ ಇನ್ನೂ ಬೇರೆಯ ರೀತಿಯಲ್ಲಿ ಈ ವಿಶೇಷಣಕ್ಕೆ ಚರಿತಾರ್ಥವನ್ನು ಒದಗಿಸಬಹುದೆ? ಎಂಬುದು  ಇಲ್ಲಿ ಮನನೀಯ. 


ಶ್ರೀರಾಮನು ತಂದೆಯಾದ ದಶರಥನ ಆಜ್ಞೆಯಂತೆ ಕಾಡಿಗೆ ತೆರಳುವುದು ನಿಶ್ಚಯವಾಯಿತು. ಅದಕ್ಕೆ ಅವನ ಪರಿವಾರದವರೆಲ್ಲರ ಅಪ್ಪಣೆಯನ್ನು ಪಡೆದಿದ್ದಾಯಿತು. ಆದರೆ ಇಷ್ಟಕ್ಕೆ ಅವನಿಗೆ ಹೋಗಲು ಸಾಧ್ಯವಾಯಿತೇ? ಎಂದರೆ ಇಲ್ಲ. ಅವನಿಗೆ ಪ್ರಜೆಗಳೆಂದರೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಅಲ್ಲ ಅವರಿಗೂ ಶ್ರೀರಾಮನೆಂದರೆ ಮತ್ತೆಲ್ಲೂ ಕಾಣಲಾರದ ಮಮತೆ. ಈ ಹಿಂದಿನ ಎಲ್ಲಾ ರಾಜರ ಮೇಲಿನ ಪ್ರೀತಿಯನ್ನು ಒಟ್ಟಾಗಿ ಕಂಡರೆ ಅದು ಶ್ರೀರಾಮನಲ್ಲಿರುವ ಪ್ರೀತಿಗೆ ಸಮವಾದೀತೇನೋ!. ಆ ಮಟ್ಟಿಗೆ ಅಯೋಧ್ಯೆಪುರ ವಾಸಿಗಳಿಗೆ ರಾಮನಲ್ಲಿ ಪ್ರೇಮಭಾವವಿತ್ತು. ರಾಮನು ವನಕ್ಕೆ ಹೊರಟು ನಿಂತಾಗ ಜ್ಞಾನವೃದ್ಧರು ವಯೋವೃದ್ಧರೆಲ್ಲರೂ ಒಕ್ಕೊರಳಿನಿಂದ ಬಹಳ ಅಕ್ಕರೆಯ ನುಡಿಗಳನ್ನು ಆಡುತ್ತಾರೆ. "ಇದಕ್ಕೆ ಭಾಸಮಹಾಕವಿಯು 'ಪ್ರತಿಮಾನಾಟಕ' ಎಂಬ ನಾಟಕದಲ್ಲಿ "ನಾಯೋಧ್ಯಾ ವಿನಾ ಅಯೋಧ್ಯಾ ಸಾ ಅಯೋಧ್ಯಾ ಯತ್ರ ರಾಘವಃ" ರಾಘವನಿಲ್ಲದಿದ್ದರೆ ಅದು ಅಯೋಧ್ಯೆಯೇ ಅಲ್ಲ. ಮತ್ತು ರಾಘವ ಎಲ್ಲಿರುವನೋ ಅದು ತಾನೇ ಅಯೋಧ್ಯಾ." ಎಂದು ಹೇಳುತ್ತಾ ರಾಮನು ಕಾಡಿನಲ್ಲಿ ಇದ್ದರೂ ಅದೇ ಅಯೋಧ್ಯೆ. ರಾಮನು ನಿಜವಾದ ಅಯೋಧ್ಯೆ ಎಂಬ ಭೂಭಾಗದಲ್ಲಿ ಇದ್ದರೂ ಅದನ್ನು ಅಯೋಧ್ಯಾ ಎಂದು ಕರೆಯಲಾಗದು. ರಾಮನು ಎಲ್ಲಿರುವನ್ನೋ ಅದನ್ನೇ ಅಯೋಧ್ಯೆ ಎಂದು ತಿಳಿದು ಶ್ರೀರಾಮನ ಜೊತೆಗೆ ಅರಣ್ಯಕ್ಕೆ ಹೋಗಲು ಸಿದ್ಧರಾಗುತ್ತಾರೆ. ಇದು ಶ್ರೀರಾಮನು ಅಯೋಧ್ಯೆಯ ರಾಜ ಎಂಬುದಕ್ಕೆ ಇರುವ ಪ್ರಬಲವಾದ ಕಾರಣ. ಆದರೆ ಇಷ್ಟುಮಾತ್ರಕ್ಕೆ ಶ್ರೀರಾಮನನ್ನು ಅಯೋಧ್ಯಾಧಿಪ ಎಂದು  ಕರೆದರೆ ಸಾಲದು.

 

'ಅಯೋಧ್ಯೆ' ಎಂಬುದು ಏಳು ಮೋಕ್ಷಪುರಿಗಳಲ್ಲಿ ಒಂದು. ಅಯೋಧ್ಯಾ ಎಂದರೆ ಯುದ್ಧವನ್ನು ಮಾಡಲು ಅಸಾಧ್ಯವಾದ ಸ್ಥಾನ ಎಂದರ್ಥ. ಯಾವುದೇ ಶತ್ರುಗಳಿಗೂ ಆಕ್ರಮಣವನ್ನು ಮಾಡಲು ಅಸಾಧ್ಯವಾದ ಸ್ಥಾನ. ಶ್ರೀರಾಮನ ನಿಜವಾದ ಸ್ಥಾನದಲ್ಲಿ ಯಾವುದೇ ಶತ್ರುಗಳು ಇರುವುದಿಲ್ಲ. ಹಾಗಾಗಿ ಅಲ್ಲಿ ಯಾವುದೇ ಶತ್ರುಗಳಿಗೂ ಅವಕಾಶವಿಲ್ಲ. ರಾಮನಿರುವೆಡೆಯಲ್ಲಿ ಕಾಮ-ಕ್ರೋಧಾದಿ ಯಾವುದೇ ಅಂತಃಶತ್ರುಗಳಿಗೂ ಅವಕಾಶವಿರುವುದಿಲ್ಲ. ಯಾವಾಗ ಅಂತಃಶತ್ರುಗಳ ಕಾಟವಿರುವುದಿಲ್ಲವೊ ಅಲ್ಲಿ ಬಾಹ್ಯಶತ್ರುಗಳು ಇರಲಾರವು. ಇದ್ದರೂ ಜಯಿಸಲು ಸಾಧ್ಯವೆಂದೇ ಅರ್ಥ. ಈ ನೇರದಲ್ಲಿ ರಾಮನಿರುವೆಡೆಯಲ್ಲಿ ಅದಾವುದೇ ಭೀತಿಗೂ ಅವಕಾಶವಿಲ್ಲ. ಅಲ್ಲಿ ಇರುವುದು ಕೇವಲ ಆನಂದ ಮಾತ್ರ. ಆನಂದವಿಲ್ಲದೆ ಮತ್ತೇನೂ ಇರಲು  ಸಾಧ್ಯವೇ ಇಲ್ಲ. ಶ್ರೀರಾಮನು ಅಂತಹ ಯಾರಿಂದಲೂ ಆಕ್ರಮಿಸಲು ಅಸಾಧ್ಯವಾದ ಸ್ಥಾನದಲ್ಲಿ ಇರುವುದರಿಂದ ಅವನನ್ನು ಅಯೋಧ್ಯೆಯ ರಾಜ ಅಥವಾ ಅಯೋಧ್ಯಾಧಿಪ ಎಂದು ಹೇಳಿದರೆ ಅದು ನಿಜವಾಗಲೂ ಬಹು ಸಂಬದ್ಧವಾದ ವಿಶ್ಲೇಷಣೆಯೇ ಅದಂತಾಗುವುದು.


ಸೂಚನೆ : 17/07/2021 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.