Sunday, July 17, 2022

ಮಹರ್ಷಿ ಭಾರತ ಭಾಗ 6 ಸಂಸ್ಕಾರಗಳು (Maharsi Bharata Bhaga -6 Samskaragalu)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

 


 ನಮ್ಮ ಜೀವನವು ಕೇವಲ ಪಶು ಜೀವನವಾಗದೇ ಪಶುಪತಿಯ ಆಶಯದಂತೆ ಆಗಲು ನಮ್ಮ ಜೀವಿತದ್ದುದ್ದಕ್ಕೂ ಪರಮಾರ್ಥವನ್ನು ನೆನಪಿಸುವ, ಅದನ್ನೇ ಬೆಳೆಸಿ ಅರಳಿಸಲು ಸಹಾಯಕವಾದ ಸಂಸ್ಕಾರಗಳನ್ನು ತಂದ ದೇಶ ನಮ್ಮದು. ಗರ್ಭಾಧಾನದಿಂದ ಮೊದಲ್ಗೊಂಡು ಅಂತ್ಯೇಷ್ಟಿಯ ವರೆಗಿನ ಎಲ್ಲ ಸಂಸ್ಕಾರಗಳೂ ನಮ್ಮನ್ನು ಜೀವನದ ಮೂಲಕ್ಕೆ ಬೆಸೆಯುವ ಉಪಾಯಗಳಾಗಿವೆ. ಮಾನವ ಶರೀರವನ್ನು ಹೊತ್ತುಬಂದಮೇಲೆ ಅದರ ಪೂರ್ಣ ಪ್ರಯೋಜನವನ್ನು ಪಡೆದು ಯೋಗ-ಭೋಗಗಳೆರಡನ್ನೂ ಅನುಭವಿಸಿ ಸುಖಿಸುವ ಸೋಪಾನವಾಗಿ ಸಂಸ್ಕಾರಗಳನ್ನು ತಂದುಕೊಟ್ಟಿದ್ದಾರೆ. ನಿಸರ್ಗ ಸಹಜವಾಗಿ ನಮ್ಮ ಶರೀರ-ಮನಸ್ಸುಗಳ ಮೇಲೆ ಅಂಟುವ ಹಾಗೂ ನಾವು ನಮ್ಮ ಕರ್ಮಗಳಿಂದ ಅಂಟಿಸಿಕೊಳ್ಳುವ ಕೊಳೆಗಳೆಲ್ಲವನ್ನೂ ತೊಳೆದು ಹಾಕಿ ನಮ್ಮನ್ನು ನಮ್ಮ ಸ್ವ-ಸ್ವರೂಪದಲ್ಲಿಡುವ ಉಪಾಯ ಎಲ್ಲಾ ಭಾರತೀಯ ಸಂಸ್ಕಾರಗಳಲ್ಲೂ ತಂದಿರುವುದೂ ಸಹ ಈ ದೇಶದ ಹಿರಿಮೆಯೇ.

 

ವೇದೋಪನಿಷತ್ತುಗಳು

ಜಗತ್ತನ್ನು ಆಳುವ ಪರಮ ಚೈತನ್ಯದ ಮತ್ತು ಅದರ ವಿಸ್ತಾರವಾದ ಇಡೀ ಸೃಷ್ಟಿಯ ಬಗ್ಗೆ ಅಂತರ್ವಾಣಿಯಾಗಿ, ಅಪೌರುಷೇಯವಾಗಿ ಜ್ಞಾನಿಗಳ ಹೃದಯದಲ್ಲಿ ಮೊಳಗಿದ ವೇದ-ಉಪನಿಷತ್ತುಗಳ ತವರು ಈ ದೇಶ. ಈ ಸೃಷ್ಟಿಯ ರಹಸ್ಯವೇನು? ಇಲ್ಲಿ ಹೇಗೆ ಬಾಳಿದರೆ ಜೀವನದ ಪರಮಾನಂದ ಪ್ರಾಪ್ತವಾಗುತ್ತದೆ ಎಂಬ ಬಗ್ಗೆ ಬ್ರಹ್ಮಜ್ಞರ ಹೃದಯದಲ್ಲಿ ಸ್ಫುರಿಸಿದ ಸಹಜ ಜ್ಞಾನರಾಶಿಯೇ ವೇದಗಳು. ಅವು ಸಂಹಿತಾ,ಬ್ರಾಹ್ಮಣ,ಆರಣ್ಯಕ ಮತ್ತು ಉಪನಿಷತ್ತು ಎಂಬ ವಿಭಾಗಗಳನ್ನು ಹೊಂದಿ ನಮ್ಮೆಲ್ಲರ ಜೀವನಗಳ ಕೈದೀವಿಗೆಯಾಗಿವೆ. ಸಂಹಿತಾ ಭಾಗದಲ್ಲಿ ನಮ್ಮೊಳಗೇ, ಮತ್ತು ಬ್ರಹ್ಮಾಂಡದಲ್ಲಿ  ಸೂಕ್ಷ್ಮವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿರುವ ದೇವತೆಗಳ ಸ್ತುತಿ-.ಅದರಿಂದ ಮನದ ಕ್ಲೇಶಗಳನ್ನೆಲ್ಲ ಕಳೆದು ನಮ್ಮ ಪ್ರಕೃತಿಯನ್ನು ಶುದ್ಧವಾಗಿಸುವ ಸಹಜ ಉಪಾಯ. ಬ್ರಾಹ್ಮಣ ಭಾಗದಲ್ಲಿ ಯಜ್ಞಗಳನ್ನು ಆಚರಿಸುವ ಬಗೆ- ಹೇಗೆ ನಮ್ಮ ಜೀವನದ ಆಚರಣೆಗಳನ್ನು ಯಜ್ಞಮಯವಾಗಿ ಇಟ್ಟುಕೊಂಡು ಮಹಾ ಧ್ಯೇಯದ ಕಡೆಗೆ ಹೆಜ್ಜೆಹಾಕಬೇಕೆಂಬುದರ ವಿವರಗಳು. ಮುಂದೆ ಆರಣ್ಯಕದಲ್ಲಿ ಜೀವನ ಮೂಲದ ಚಿಂತನೆ. ಉಪನಿಷತ್ತುಗಳಲ್ಲಿ ನೇರವಾಗಿ ಒಳಬೆಳಗುವ ಬ್ರಹ್ಮವಸ್ತುವಿನ ಅನುಭವದ ವಿಷಯಗಳು. ಹೆಜ್ಜೆ ಹೆಜ್ಜೆಯಾಗಿ ಮಾನವನು ತನ್ನ ನೆಮ್ಮದಿಯ ತಾಣವನ್ನು ಏರಿ ಸುಖಿಸುವ ಜೀವನ ಮಾರ್ಗದರ್ಶಿಗಳಾಗಿ ಪ್ರಕಾಶಗೊಂಡ ಜ್ಞಾನಗಂಗೆಯೇ ವೇದಗಳು. ಅಂತಹ ವೇದಗಳ ನೆಲೆಮನೆ ನಮ್ಮ ಭಾರತ.

ಸೂಚನೆ : 16/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.