Sunday, July 31, 2022

ಕಾಳಿದಾಸನ ಜೀವನದರ್ಶನ – 21ರಘುರಾಜರ ಜಾಗರ-ಸಂಯಮಗಳು (Kalidasana Jivanadarshana - 21 Raghurajara Jagara-samyamagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಶಿಸ್ತನ್ನು ಯಾರು ಚಿಕ್ಕಂದಿನಿಂದಲೂ ಪಾಲಿಸುತ್ತಲೇ ಬಂದಿರುವರೋ ಅವರು ಯಾವಾಗಲೋ ಕಾರ್ಯಭಾರವು ತೀವ್ರವಾಗಿಬಿಟ್ಟಾಗಲೂ ತಮ್ಮ ಶಿಸ್ತನ್ನು ಪೂರ್ತಿಯಾಗಿ ಕಡೆಗಾಣಿಸರು. ರಘುವಂಶದ ಅರಸರ ಶಿಸ್ತಿನ ಪರಿಪಾಲನೆಯನ್ನು ಕಾಳಿದಾಸನು ಒಂದು ಸುಂದರ ವಿಶೇಷಣದಿಂದ ಸೂಚಿಸಿದ್ದಾನೆ.

ಅವರು "ಯಥಾಕಾಲಕ್ಕೆ ಏಳುವವರಾಗಿದ್ದರು" ಎಂದು ವಿಶೇಷಿಸಿದ್ದಾನೆ. "ಬ್ರಾಹ್ಮ-ಸಮಯ"ದಲ್ಲಿ ಏಳಬೇಕೆಂಬುದನ್ನು ಮನುವೇ ಮೊದಲಾದ ಸ್ಮೃತಿಕಾರರು ಹೇಳಿದ್ದಾರೆ: "ಬ್ರಾಹ್ಮೇ ಮುಹೂರ್ತೇ ಬುದ್ಧ್ಯೇತ". ಬ್ರಾಹ್ಮಮುಹೂರ್ತದಲ್ಲಿ ನಮ್ಮ ಚೈತನ್ಯದಲ್ಲೇ ಒಂದು ಪ್ರಸನ್ನತೆಯು ಉಂಟಾಗುವುದನ್ನು ಕಾಳಿದಾಸನೇ ಒಂದು ಕಡೆ ತಿಳಿಸುತ್ತಾನೆ - ಅತಿಥಿಮಹಾರಾಜನ ಜನನಸಂದರ್ಭದಲ್ಲಿ. ಆಗ ಬುದ್ಧಿಪ್ರಕಾಶವು ಉಂಟಾಗುವುದೆಂದು ಕುಲ್ಲೂಕಭಟ್ಟನು ಹೇಳುತ್ತಾನೆ. ("ಬ್ರಾಹ್ಮೀಮುಹೂರ್ತ"ವೆನ್ನುವುದು ಅಸಾಧು-ಪ್ರಯೋಗ; "ಬ್ರಾಹ್ಮಮುಹೂರ್ತ"ವೆಂದೇ ಹೇಳಬೇಕು). ಮಾಡಬೇಕಾದ ಕಾರ್ಯವನ್ನು ಸರಿಯಾದ ಕಾಲದಲ್ಲಿಯೇ ಮಾಡಲು ಉದ್ಯುಕ್ತರಾಗುವ ಪ್ರಬೋಧ ಅಥವಾ ಎಚ್ಚರವು ಅವರಲ್ಲಿತ್ತು.

ಇದಲ್ಲದೆ, ಮತ್ತೂ ಒಂದರ್ಥದಲ್ಲಿ ಅವರು "ಸರಿಯಾದ ಕಾಲಕ್ಕೆ ಜಾಗರಿತರಾಗಿರುತ್ತಿದ್ದರು". ಇದು ರಾಜ್ಯವ್ಯವಸ್ಥೆಯ ವಿಷಯ, ದೇಶರಕ್ಷಣೆಯ ಸಮಾಚಾರ: ಅದಕ್ಕಾಗಿ ಸಮುಚಿತ-ಸಮಯದಲ್ಲಿಯೇ ಅವರು ಎಚ್ಚೆತ್ತುಕೊಳ್ಳುತ್ತಿದ್ದರು. ಏನು ಹಾಗೆಂದರೆ? ಶತ್ರುವು ದಂಡೆತ್ತಿ ಬಂದ ಮೇಲೇ ಶತ್ರುವಿನ ಆಗಮನವನ್ನು ತಿಳಿಯುವುದಲ್ಲ; ಶತ್ರುವು ಆಕ್ರಮಣ ಮಾಡಲು ಸಂಕಲ್ಪಿಸುತ್ತಿದ್ದಂತೆಯೇ ಅರಸನಿಗೆ ತನ್ನ ನಿಪುಣಗೂಢಚಾರರ ಮೂಲಕ ಸುದ್ದಿ ತಲುಪಿರಬೇಕು! ಅವರನ್ನೆದುರಿಸಲು ಆತನು ಸನ್ನದ್ಧನಾಗಿರಬೇಕು.

ಹೊರಗಣ ಶತ್ರುಗಳಾಗಲಿ, ರಾಜ್ಯದೊಳಗಣ ಶತ್ರುಗಳಾಗಲಿ, ಇನ್ನೂ ಚಿಗುರುವಷ್ಟರಲ್ಲೇ ಚಿವುಟಿಹಾಕುವಷ್ಟು ಚುರುಕಾಗಿದ್ದವರು, ರಘುವಂಶದ ರಾಜರು. ಶತ್ರುವಾಗಲಿ, ರೋಗವಾಗಲಿ, ಋಣವಾಗಲಿ – ಆರಂಭದೆಶೆಯಲ್ಲಿಯೇ, ಎಂದರೆ ಬೀಜಾವಸ್ಥೆಯಲ್ಲಿಯೇ, ಅದನ್ನು ಮುರುಟಿಹಾಕಬೇಕು. ಅದು ಹೆಮ್ಮರವಾಗಿ ಬೆಳೆದುಕೊಂಡಬಿಟ್ಟಮೇಲೆ ಅದನ್ನು ಕೆಡವುವುದು ಸುಲಭವಲ್ಲ. ಬೇರೂರಿಬಿಟ್ಟಿರುವ ಆತಂಕವಾದಿಗಳನ್ನು ಹತ್ತಿಕ್ಕಲು ಇಂದು ಅದೆಷ್ಟು ಶ್ರಮವಾಗುತ್ತಿದೆಯೆಂಬುದನ್ನು ನಾವೇ ಕಾಣುತ್ತಿದ್ದೇವೆಯಲ್ಲವೇ?

ಊರು ಸೂರೆ ಹೋದಮೇಲೆ ಕೋಟೆ ಬಾಗಿಲನ್ನು ಮುಚ್ಚುವುದಲ್ಲ; ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಳ್ಳುವುದಲ್ಲ; ಕಟ್ಟೆಚ್ಚರವಾಗಿರಬೇಕಾದಾಗ ವಿಶ್ರಾಂತಿ ಬಯಸುವುದಲ್ಲ: ಪ್ರಜಾಪಾಲನಕ್ಕೋಸ್ಕರವಾಗಿ, ಯಥಾಕಾಲಕ್ಕೆ ಪ್ರಬೋಧಗೊಂಡು, ರಾಜನಿಷ್ಠೆ-ರಾಜ್ಯನಿಷ್ಠೆಗಳಿಂದ ದೂರರಾದ ದ್ರೋಹಿಗಳನ್ನು ದಂಡಿಸಿ, ಹೇಗೆ ಅವರನ್ನು ಸರಿದಾರಿಗೆ ತರಬೇಕೆಂಬುದರ ಬಗ್ಗೆ ಸರ್ವದಾ ಜಾಗರೂಕರಾಗಿರುತ್ತಿದ್ದವರು ಅವರು. ಶಾಸನವು ಸರಿಯಾಗಿ ಕೆಲಸಮಾಡುತ್ತಿದ್ದರೆ ಜನರು ಉತ್ಪಥಗಾಮಿಗಳಾಗುವುದಿಲ್ಲ. ಸರಿಯಾದ ಪಥವನ್ನು ಬಿಟ್ಟು ದೂರಹೋಗುವವನು ಉತ್ಪಥಗಾಮಿ.

ಅಂತಹವರ ಬಗ್ಗೆ ರಾಜನಿಗಿರಬೇಕಾದ ಎಚ್ಚರದ ಬಗ್ಗೆ ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಕೊಟ್ಟಿದ್ದರು : "ವ್ಯಕ್ತಿಗಳಾರಾದರೂ ಶಾಸನದ ಚೌಕಟ್ಟಿನಿಂದ ಸಡಿಲಿಸಿಕೊಂಡು ದೂರಹೋಗಲು ಅವಕಾಶಕೊಡುವುದಾದರೆ, ಕ್ರಮೇಣ ಎಲ್ಲರೂ ಉತ್ಪಥಗಾಮಿಗಳೇ ಅಗಿ, ಯಾರ ಮೇಲೂ ರಾಜಶಾಸನವು ಕೆಲಸಮಾಡದೆ, ರಾಜ್ಯವು ಅರಾಜಕತೆಯ ಪ್ರಭಾವಕ್ಕೊಳಗಾಗಿ ನಾಶವೇ ಆದೀತು!" ಹೀಗೆ ಅಂತಃಶತ್ರು-ಬಹಿಃಶತ್ರುಗಳಿಬ್ಬರ ಬಗ್ಗೆಯೂ ಜಾಗರೂಕತೆಯು ಅರಸರಿಗೆ ಇರಬೇಕಾದದ್ದೇ.

ಹೀಗೆ ಶಯ್ಯೋತ್ಥಾನ ಹಾಗೂ ಶತ್ರುವಿಷಯಕ-ಜಾಗರೂಕತೆಗಳೆಂಬ ಎರಡೂ ಅರ್ಥಗಳಲ್ಲಿ ರಘುರಾಜರು "ಸಮಯಕ್ಕೆ ಸರಿಯಾಗಿ" ಜಾಗರಗೊಳ್ಳುವವರಾಗಿದ್ದರು: ಯಥಾಕಾಲಪ್ರಬೋಧಿನಾಂ.

ಅವರ ಅರ್ಥಸಂಗ್ರಹಣದ ಉದ್ದೇಶವೂ ವಿಶಿಷ್ಟವಾದದ್ದು. ಅದೇನಿದ್ದರೂ ತ್ಯಾಗಕ್ಕಾಗಿ. ತ್ಯಾಗವೆಂದರೇನು? ಸಂಪಾದಿಸಿದ್ದನ್ನು ಹೇಗೆಹೇಗೋ ವ್ಯಯ ಮಾಡುವುದಲ್ಲ. ಸತ್ಪಾತ್ರನಲ್ಲಿ ಸಂಪತ್ತನ್ನು ವಿನಿಯೋಗಮಾಡುವುದೇ ತ್ಯಾಗವೆನಿಸಿಕೊಳ್ಳುತ್ತದೆ. ರಾಜನ ಕೆಲಸಗಳೇ ನಾಲ್ಕು. ಈವರೆಗೆ ಗಳಿಸಿಲ್ಲದ್ದನ್ನು ಗಳಿಸುವುದು: ಇದನ್ನು ಅಲಬ್ಧ-ಲಾಭವೆನ್ನುತ್ತಾರೆ. ಗಳಿಸಿದ್ದನ್ನು ಉಳಿಸಿಕೊಳ್ಳುವುದು: ಇದನ್ನು ಲಬ್ಧ-ಪರಿಪಾಲನವೆನ್ನುತ್ತಾರೆ. ಉಳಿಸಿಕೊಂಡದ್ದನ್ನು ಬೆಳೆಸಿಕೊಳ್ಳುವುದು: ಇದನ್ನು ಪರಿಪಾಲಿತ-ಪರಿವರ್ಧನವೆನ್ನುತ್ತಾರೆ.  ಬೆಳೆಸಿಕೊಂಡದ್ದನ್ನು ಸತ್ಪಾತ್ರರಲ್ಲಿ ಹಂಚುವುದು: ಇದನ್ನು ತೀರ್ಥ-ಪ್ರತಿಪಾದನವೆನ್ನುತ್ತಾರೆ.

ಜನರಿಂದ ತೆಗೆದುಕೊಂಡ ತೆರಿಗೆಯ ಹಣವು ಸುಮ್ಮನೆ ಖಜಾನೆಯನ್ನು ತುಂಬಿಸಿಟ್ಟುಕೊಳ್ಳುವುದಕ್ಕಲ್ಲ; ಬೊಕ್ಕಸವೆಲ್ಲವೂ ತನಗೆ ಸೇರಿದ್ದೆಂಬ ಭಾವನೆಯಿಂದ ಅರಸನು ಸೊಕ್ಕುವುದಕ್ಕೂ ಅಲ್ಲ. ಅರ್ಥವು ಸತ್ಪಾತ್ರರಿಗೆ ವಿನಿಯೋಗವಾಗದಿದ್ದರೆ, ಅದನ್ನು ದುರುಪಯೋಗ ಮಾಡಿದಂತೆ. ಹೀಗಾಗಿ ಅವರ ಧನಾರ್ಜನೆ, ಅರ್ಥಾತ್ ಬೊಕ್ಕಸವನ್ನು ತುಂಬಿಸುವಿಕೆಯೇ, ಕೇವಲ ತ್ಯಾಗಕ್ಕಾಗಿ. ಅದೆಲ್ಲವೂ ತನ್ನ ಭೋಗಕ್ಕಾಗಿ ಎಂದು ಭಾವಿಸುವ ಭೋಗಶೀಲನಾದ ರಾಜನು, ಹಾಗೆ ಭಾವಿಸಿಕೊಂಡಂದೇ ಪತನಶೀಲನಾಗುತ್ತಾನೆ. ಆದರೆ ತ್ಯಾಗಶೀಲನು ಮತ್ತೂ ಅಭಿವೃದ್ಧಿಗೆ ಬರುತ್ತಾನೆ. ಹೀಗಾಗಿ ರಘುವಂಶದ ರಾಜರು ತಮ್ಮ ವೈಯಕ್ತಿಕಸ್ವಾರ್ಥವನ್ನು ಬದಿಗಿಟ್ಟು, ಜನಹಿತದತ್ತಲೇ ಗಮನವಿತ್ತರು. ಇದು ಅರ್ಥದ ಬಗೆಗಿನ ಅವರ ನಿಲುವು. ಕಾಳಿದಾಸನ ಮಾತುಗಳಲ್ಲಿ: ತ್ಯಾಗಾಯ ಸಂಭೃತಾರ್ಥಾನಾಮ್.

ಅವರ ಮಾತು ಹೇಗಿತ್ತು? - ಎಂಬುದನ್ನೂ ಕಾಳಿದಾಸನು ಸೂಚಿಸದೆ ಬಿಟಿಲ್ಲ. ಅವರು ಸತ್ಯಕ್ಕಾಗಿ ಮಿತಭಾಷಿಗಳಾದವರು - ಎಂದಿದ್ದಾನೆ. ಸಾಧಾರಣವಾಗಿಯೇ ಮಾತು ಮಿತವಾಗಿರುವುದು ಒಳ್ಳೆಯದೇ.

ಮಿತವಾದರೂ ಸಾರವತ್ತಾಗಿ ಮಾತನಾಡುವುದು ಸುಲಭವಲ್ಲ; ಆದರೆ ಅದುವೇ ವಾಗ್ಮಿತೆಯ ಲಕ್ಷಣ: ಮಿತಂ ಚ ಸಾರಂ ಚ ವಚೋ ಹಿ ವಾಗ್ಗ್ಮಿತಾ - ಎನ್ನುತ್ತಾರೆ. ಮಾತು ಹೆಚ್ಚಾದರೆ ಅನೇಕ ವೇಳೆ ತೊಂದರೆಯೇ. ಮಾತಿನಲ್ಲಿ ಸಂಯಮ ಬೇಕು. ಇಲ್ಲವಾದರೆ ಪ್ರಸಂಗದ ಔಚಿತ್ಯವನ್ನು ಮೀರಿ ಅಸಂಬದ್ಧವಾದ ಮಾತುಗಳು ಬಾಯಲ್ಲಿ ಬಂದಾವು. ಮಿತಿಮೀರಿ ಸಿರಿ ಸೇರಿದವರು ಬಡಬಡಿಸುವುದೂ ಉಂಟು.

ಅರಸರಿಗೆ ಈ ದುಡುಕು ಬರಬಾರದಲ್ಲವೇ?: ರಘುರಾಜರು ಸಂಯಮಿಗಳು.

ಸೂಚನೆ : 30/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.