Sunday, July 31, 2022

ಅಷ್ಟಾಕ್ಷರೀ​ - 16 ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ (Astakshara Darshana 16 Tasmacchastram Pramanam Te)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 

 


ನಾವೆಲ್ಲ ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುವೆವು? - ಇವೆರಡೂ ಗೊತ್ತಿಲ್ಲದ ವಿಷಯಗಳು. ಕೋಟಿಗಟ್ಟಲೆ ಜನಗಳು ಇಂದು ಇದ್ದಾರೆ; ಹಿಂದೆಯೂ ಇದ್ದರು; ಮುಂದೆಯೂ ಇರುವರು: ಒಬ್ಬೊಬ್ಬರ ಚಿಂತನೆ ಒಂದೊಂದು ಬಗೆ. ಆದರೂ ಎಲ್ಲರಿಗೂ ಸಮಾನವಾದ ಎರಡು ಪ್ರಶ್ನೆಗಳನ್ನಿಟ್ಟರೆ ಸಮಾನವಾದ ಉತ್ತರವೇ ದೊರಕುವುದೋ ಏನೋ? "ಗೊತ್ತಿಲ್ಲ"! ಅಥವಾ, ಅರ್ಧತಮಾಷೆಯಾಗಿ, "ಅಮ್ಮನ ಹೊಟ್ಟೆಯಿಂದ ಹುಟ್ಟಿಬಂದೆ(ವಂತೆ); ಕಟ್ಟಕಡೆಗೆ ಚಟ್ಟಕಟ್ಟಿಸಿಕೊಂಡು ಸುಡುಗಾಡಿಗೆ ಸಾಗುವುದೇ ತಾನೆ? ಮತ್ತಿನ್ನೇನು?" ಎಂದೆಂದುಬಿಡುವರೋ ಏನೋ!

ನಾವೇನೂ ಪೂರ್ವಯೋಜನೆ (ಪ್ಲಾನ್) ಮಾಡಿಕೊಂಡು ಹುಟ್ಟಿಬರಲಿಲ್ಲ, ಸರಿಯೇ. ಆದರೆ ಇನ್ನು ಮುಂದಿನ ಜೀವನ ಸಾಗಬೇಕಾದುದೂ ಹಾಗೆಯೇ: ಪೂರ್ವಯೋಜನೆಯೇನೂ ಬೇಕಿಲ್ಲ – ಎಂದು ಯಾರೂ ಹೇಳರಾರೇನೋ! ಸದಾ ಏನನ್ನೂ ಮಾಡದೆಯಂತೂ ಯಾರೂ ಕೂರಲಾರರಷ್ಟೆ?

ಆದರೆ ಲಕ್ಷ್ಯವೇ ಸಿದ್ಧವಾಗದೆ, ಮಾಡುವುದೇನು? ಗಮ್ಯವೇ ತೀರ್ಮಾನವಾಗದೆ, ಗಮನವೆಂತು? ಹುಟ್ಟಿದ್ದಂತೂ ಆಗಿದೆ, ಸಾಯಲು ಹೇಗೂ ಮನಸ್ಸು ಬರದು; ಆಯಾಕ್ಷಣಕ್ಕೆ ತೋರಿಬರುತ್ತಿದ್ದಂತೆ ಏ(ನೇ)ನನ್ನೋ ಮಾಡುತ್ತಿರುವುದಷ್ಟೇ ನಮ್ಮ ಜಾಯಮಾನವಾಗಿರುವಂತಿದೆ.

ಒಂದರ್ಥದಲ್ಲಿ ಇದು ಹಾಗಿಲ್ಲವೆಂದೂ ಹೇಳಲು ಬರುತ್ತದೆ. ಏಕೆ? ನಮಗೆಲ್ಲರಿಗೂ ಚಿಕ್ಕ/ದೊಡ್ಡ ಲಕ್ಷ್ಯಗಳು ಹೊಳೆಯುತ್ತಲೇ ಇರುತ್ತವೆ. ಒಬ್ಬೊಬ್ಬರಿಗೊಂದೊಂದು. ಒಬ್ಬನೇ ವ್ಯಕ್ತಿಗೇ ಬಾಲ್ಯ-ಯೌವನ ಮುಂತಾದ ಅವಸ್ಥೆಗಳಲ್ಲಿ ಬೇರೆ ಬೇರೆ ಲಕ್ಷ್ಯಗಳಿರುವುವು. ನಮ್ಮಲ್ಲಿಯ ಆರೋಗ್ಯ-ಅನಾರೋಗ್ಯಗಳೆಂಬ ಅವಸ್ಥೆಗಳನ್ನನುಸರಿಸಿಕೊಂಡು ಲಕ್ಷ್ಯಗಳು ಬೇರೆಬೇರೆಯಾಗುವುದೂ ಉಂಟು.

ಒಂದಂತೂ ನಿಶ್ಚಯ. ಅದೆಷ್ಟೇ ಸಣ್ಣ ಗುರಿಯಾಗಿರಲಿ, ಗುರಿಯು ನಿಶ್ಚಯವಾಯಿತೋ, ಕಾರ್ಯದ ಪರಿಯೂ ನಿಶ್ಚಯವಾಗಲಾರಂಭಿಸುತ್ತದೆ. ಲಕ್ಷ್ಯಸಿದ್ಧಿಗಾಗಿ 'ಇದು ಬೇಕು, ಇದು ಬೇಡ'ಗಳು ಸ್ಪಷ್ಟವಾಗುತ್ತಾ ಬರುತ್ತವೆ. ಒಂದು ಕೆಲಸಕ್ಕಾಗಿ ನಾನಾ ಪುಡಿಗೆಲಸಗಳೂ ಬೇಕಾಗುವುದುಂಟು. ಪ್ರಧಾನಧ್ಯೇಯದ ಸಾಧನೆಗಾಗಿ ಅವಾಂತರಧ್ಯೇಯಗಳು (ಎಂದರೆ ಮೂಲಲಕ್ಷ್ಯಕ್ಕೆ ಉಪಕಾರಿಯಾಗಿಯೋ ಅಂಗಭೂತವಾಗಿಯೋ ಬರುವ ಉಪಧ್ಯೇಯಗಳು) ಸಹ ಗೋಚರವಾಗುತ್ತವೆ: ಇರುವ ಊರಿನಿಂದ ಮೈಸೂರಿಗೆ ಹೋಗುವುದು (ಪ್ರಧಾನ)ಧ್ಯೇಯವಾದರೆ, ಅದಕ್ಕಾಗಿ ರೈಲನ್ನು ಹತ್ತುವುದು ಅವಾಂತರಧ್ಯೇಯ; ಮತ್ತು ಅದಕ್ಕಾಗಿ ರೈಲ್ವೇಸ್ಟೇಷನ್ನನ್ನು ತಲುಪಲು ಬಸ್ಸು/ಆಟೋರಿಕ್ಷಾವೊಂದನ್ನು ಹುಡುಕಿಕೊಳ್ಳುವುದು ಅವಾಂತರಧ್ಯೇಯವಾಗುತ್ತದೆ. (ಸಂಸ್ಕೃತಪದವಾದ 'ಅವಾಂತರ'ಕ್ಕೆ ಕನ್ನಡದಲ್ಲಿ ಬೇರೆ ಅರ್ಥ).

ಹಸಿವಾಗಿದೆ, ಹೊಟ್ಟೆತುಂಬಿಸಿಕೊಳ್ಳಬೇಕು: ಅದು ಧ್ಯೇಯ. ಅದಕ್ಕಾಗಿ ಅಡಿಗೆ ಮಾಡಬೇಕು, ಅದಕ್ಕಾಗಿ ಪಾತ್ರೆ-ಪದಾರ್ಥಗಳು ಬೇಕು, ಅದಕ್ಕಾಗಿ ಮತ್ತೊಂದು, ಮಗದೊಂದು... ಎಂದು ಪಟ್ಟಿ ಬೆಳೆಯುತ್ತಹೋದರೂ ಅಲ್ಲೊಂದು ವ್ಯವಸ್ಥೆಯೇರ್ಪಡುತ್ತದೆ. "ಇದಿದನ್ನು ಮಾಡು"ಗಳ ಜೊತೆಗೆ "ಇದಿದನ್ನು ಮಾಡಬೇಡ"ಗಳೂ ಸಹಜವಾಗಿ ಸೇರಿಕೊಳ್ಳುತ್ತವೆ. ಒಂದು ಮಗುವನ್ನು ಬೆಳೆಸುವಲ್ಲಿ ಅದೆಷ್ಟು ('ಬೇಕು'ಗಳಿಗಿಂತ ಹೆಚ್ಚಾಗಿ) 'ಬೇಡ'ಗಳನ್ನು ಅಪ್ಪಅಮ್ಮಂದಿರು ಹೇಳಿರುತ್ತಾರೋ ಲೆಕ್ಕವಿಡಬಲ್ಲವರಾರು?

'ಹೀಗೆ ಮಾಡು' ಎಂದು ಹೇಳುವುದು 'ವಿಧಿ'; 'ಹೀಗೆ ಮಾಡಬೇಡ' ಎನ್ನುವುದು 'ನಿಷೇಧ'. ಯಾವುದೇ ಲಕ್ಶ್ಯಪ್ರಾಪ್ತಿಗಾಗಿ ಅವಶ್ಯಕರ್ತವ್ಯವಾದವು 'ವಿಧಿ'ಗಳು; ವರ್ಜ್ಯವಾದವು 'ನಿಷೇಧ'ಗಳು.

ಮಾಡಬೇಕಾದ್ದನ್ನು 'ಕಾರ್ಯ'ವೆಂದೂ, ಮಾಡಬಾರದ್ದನ್ನು 'ಅಕಾರ್ಯ'ವೆಂದೂ ಗೀತೆಯು ಹೇಳುವುದು; ಯಾವುದೇ ಲಕ್ಷ್ಯವನ್ನು ಸಾಧಿಸಲು ಹೀಗೆ ಕಾರ್ಯ-ಅಕಾರ್ಯಗಳ ಒಂದು ವ್ಯವಸ್ಥೆಯು ಅವಶ್ಯ. "ಕಾರ್ಯಾಕಾರ್ಯವ್ಯವಸ್ಥಿತಿ"ಯಿಲ್ಲದೆ, ಸುಮ್ಮನೆ ಮನಸ್ಸಿಗೆ ತೋಚಿದಂತೆಲ್ಲಾ, ಆಸೆ ಹುಟ್ಟಿಕೊಂಡೆಂತಲ್ಲಾ, ಮಾಡುವುದನ್ನೇ 'ಕಾಮಕಾರ' ಎನ್ನುವುದು.  (ಕಾಮವೆಂದರೆ ಅಪೇಕ್ಷೆ). ಇಂತಹುದನ್ನು ಮಾಡಬೇಕೆಂದು ಶಾಸ್ತ್ರವು ಹೇಳಿದಾಗ ಅದು 'ಶಾಸ್ತ್ರವಿಧಿ'/'ಶಾಸ್ತ್ರವಿಧಾನ'ವೆನಿಸುತ್ತದೆ. ಮಾಡೆಂದು ಶಾಸ್ತ್ರವು ಹೇಳಿರುವುದು 'ಶಾಸ್ತ್ರವಿಹಿತ'; ಹಾಗಿ(ಗ)ಲ್ಲದ್ದು 'ಅಶಾಸ್ತ್ರವಿಹಿತ'. ಇವಿಷ್ಟು ಪದಗಳನ್ನು ಗೀತೆಯು ಪಾರಿಭಾಷಿಕವಾಗಿ ಬಳಸಿದೆ.

ಗೀತೆಯು ಹೀಗೆ ಹೇಳುವುದು: "ಶಾಸ್ತ್ರವಿಧಿಯನ್ನು ಬಿಟ್ಟು ಯಾವನು ಕಾಮಕಾರದಿಂದ ವರ್ತಿಸುವನೋ ಅವನು ಸಿದ್ಧಿಯನ್ನು ಹೊಂದನು: ಆತನಿಗೆ ಸುಖವೂ ದಕ್ಕದು, ಪರಮಗತಿಯೂ ದೊರೆಯದು". ಶಾಸ್ತ್ರಕ್ಕಿಷ್ಟು ಸಾಮರ್ಥ್ಯವಿರುವುದು!

ಹಾಗಿದ್ದರೆ ಶಾಸ್ತ್ರವೆಂದರೇನು? ಎಂಬ ಪ್ರಶ್ನೆ ಏಳುವುದಷ್ಟೆ? ಶಾಸ್ತ್ರವೆನ್ನುವುದು "ಶಾಸನ", "ತ್ರಾಣನ" ಇವುಗಳಿಂದಾಗಿದೆ. ಶಾಸನವೆಂದರೆ ಅರಸನ ಅಪ್ಪಣೆಯಂತೆ: "ಇದನ್ನು ಮಾಡತಕ್ಕದ್ದು, ಇದನ್ನಲ್ಲ" ಎಂದು ಹೇಳುವ ವಾಕ್ಯ. ಅದಕ್ಕೊಂದು ಘನೋದ್ದೇಶವೂ ಇದೆ: ಅದೇ ತ್ರಾಣನ. ತ್ರಾಣನವೆಂದರೆ ಕಾಪಾಡುವುದು. ತ್ರಾಣನಕ್ಕಾಗಿ ಬಂದ ಶಾಸನಗಳೇ ಶಾಸ್ತ್ರಗಳು.

ಇದಕ್ಕೊಂದು ಸಣ್ಣ ಉದಾಹರಣೆಯನ್ನು ಕೊಡಬಹುದು. ವಾಹನಸಂಚಾರವು ಅಸ್ತವ್ಯಸ್ತವಾಗಬಾರದೆಂದು ಕೆಲವು ನಿಯಮಗಳಿರುತ್ತವೆ: ಅವು ಶಾಸನಗಳು; ಅವನ್ನು ಅನುಸರಿಸತಕ್ಕದ್ದು; ಅವನ್ನು ಉಲ್ಲಂಘಿಸುವ ಪ್ರವೃತ್ತಿಯುಳ್ಳವನು ಇಂದೋ ಮುಂದೋ ಯಾವುದೋ ಆಕಸ್ಮಿಕಕ್ಕೆ ಸಿಲುಕುವನೇ. ನಮ್ಮ ರಕ್ಷಣೆಗಾಗಿಯೇ ಬಂದಿರತಕ್ಕವು, ಆ ನಿಯಮಗಳು – ಎಂಬ ಅರಿವಿರಬೇಕು.

ಸಂಚಾರನಿಯಮಗಳು ಮನುಷ್ಯಕೃತವಾದವು. ಅವು ಕೆಲವೊಮ್ಮೆ ನಡೆಯಬಹುದು, ಕೆಲವೊಮ್ಮೆ ನಡೆಯದಿರಬಹುದು. ಅವಲ್ಲಿ ಬದಲಾವಣೆಗಳೂ ಆಗಬಹುದು ಆದರೆ ಪ್ರಕೃತಿಯಲ್ಲೇ ಕೆಲವು ನಿಯಮಗಳುಂಟು. ಅವು ಸ್ಥಾಯಿಯಾದವು. ಅವುಗಳನ್ನು ಅನುಸರಿಸಿದರೆ ನಮಗೆ ಕ್ಷೇಮ. ಇಲ್ಲವೋ ನಮಗೇ ಹಾನಿ.

"ಸೃಷ್ಟಿಯ ನಿಯಮಬದ್ಧವಾದ ನಡೆಯೇ ಶಾಸ್ತ್ರ" ಎಂಬುದಾಗಿ ಶ್ರೀರಂಗಮಹಾಗುರುಗಳು ನಿಜವಾದ ಶಾಸ್ತ್ರದ ಲಕ್ಷಣವನ್ನು ತಿಳಿಸಿದ್ದರು. ಹಾಗೆಯೇ ಸೃಷ್ಟಿಯ ನಿಯಮಾವಳಿಯನ್ನು ಯಾವುದು ಯಥಾವತ್ಥಾಗಿ ಗುರುತುಹಾಕಿಡುವುದೋ ಅಂತಹ ಗ್ರಂಥವೂ ಶಾಸ್ತ್ರವೆನಿಸುತ್ತದೆ. "ಶಾಸ್ತ್ರವೆಂದರೆ ಪುಸ್ತಕದತ್ತ ನೋಡಬೇಡಿ, ಸೃಷ್ಟಿಯತ್ತ ನೋಡಿ" – ಎಂದು ಎಚ್ಚರಿಸುತ್ತಿದ್ದರು!

ನಮಗೆ ಏನನ್ನು ಕಾಪಾಡಿಕೊಳ್ಳಬೇಕೆಂಬ ಮನಸ್ಸಾಗುವುದೋ, ಅದಕ್ಕೆ ಬೇಕಾದ ವಿಧಿನಿಷೇಧಗಳನ್ನು ನಾವೇ ಹಾಕಿಕೊಳ್ಳುತ್ತೇವೆ. ಕ್ರಿಕೆಟ್-ಪಂದ್ಯವನ್ನು ನೋಡಬೇಕೆಂದು ತೀರ್ಮಾನವಾಯಿತೋ, ಅನ್ಯಕಾರ್ಯಗಳು ಅದಕ್ಕಡ್ಡಿಬರದಂತೆ ವ್ಯವಸ್ಥೆಮಾಡಿಕೊಳ್ಳುವೆವಲ್ಲವೇ? ಕಾಪಾಡಿಕೊಳ್ಳಬೇಕಾದಂತಹವುಗಳಲ್ಲಿ ಯಾವುದು ಮುಖ್ಯ, ಯಾವುದಲ್ಲವೆಂಬ ವಿಭಾಗವು ಸ್ಪಷ್ಟವಾದಾಗ, ಅತ್ಯವಶ್ಯವಾದುದನ್ನು ಕಾಪಾಡಿಕೊಳ್ಳಲೇಬೇಕೆಂಬ ಎಚ್ಚರಿಕೆ ಮೂಡುತ್ತದೆ.

"ಆತ್ಮಲಾಭಾನ್ನಾಪರೋ ಲಾಭಃ": ತನ್ನನ್ನೇ ತಾನರಿಯುವುದೇ ಅತಿಮುಖ್ಯವಾದದ್ದು – ಎಂದಿವೆ ಶಾಸ್ತ್ರಗಳು. ಅಲ್ಲಿಗೆ ಮಿಕ್ಕೆಲ್ಲವೂ ಇದಕ್ಕೆ ಗೌಣವಾಗಿರಬೇಕು. ಪ್ರಧಾನಕ್ಕೆ ವಿರೋಧ ಬರದಂತಹ/ತೆಯೇ ಅಪ್ರಧಾನಗಳನ್ನಿಟ್ಟುಕೊಳ್ಳಬೇಕಲ್ಲವೇ?  

ಎಂದೇ, ಪರಕ್ಕೆ ವಿರೋಧಿಯಾಗದ ಇಹಜೀವನವಿರಬೇಕು. ಪ್ರಧಾನ-ಅಪ್ರಧಾನಗಳಿಗೆ ವಿರೋಧವೇರ್ಪಡದ ಜೀವನಕ್ರಮದ ಬಗೆಯನ್ನು ನಮ್ಮ ಶಾಸ್ತ್ರಗಳು ರೂಪಿಸಿವೆ. ಅಂತಹ ಶಾಸ್ತ್ರಗಳಿಂದ ನಮಗೆ ಇಹಪರಗಳೆರಡರಲ್ಲೂ ಲಾಭವುಂಟು. ಕೇವಲ ಕಾಮಕಾರದಿಂದ ವರ್ತಿಸುವವರಿಗೆ ಇಹಸುಖವಾಗಲಿ ಪರಗತಿಯಾಗಲಿ ದೊರೆಯದು. "ಎಂದೇ ಶಾಸ್ತ್ರ(ವೇ) ನಿನಗೆ ಪ್ರಮಾಣಭೂತವಾದದ್ದು" - 'ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ' ಎನ್ನುತ್ತಾನೆ ಶ್ರೀಕೃಷ್ಣ. ನಮಗಂತೂ ಆತನ ಮಾತೇ ಪ್ರಮಾಣ!: ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್.

ಸೂಚನೆ: 31/07/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.