Sunday, July 24, 2022

ಶ್ರೀ ರಾಮನ ಗುಣಗಳು - 64 ರಾಘವ - ಶ್ರೀರಾಮ (Sriramana Gunagalu - 64 Raghava - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಒಬ್ಬ ವ್ಯಕ್ತಿಗೆ ಹೆಸರು ಬರಲು ಅನೇಕ ಕಾರಣಗಳಿರುತ್ತವೆ. ಅವರವರ ವಂಶದಲ್ಲಿ ಪ್ರಖ್ಯಾತರಾದವರ ಹೆಸರಿನಲ್ಲೂ ಪ್ರಸಿದ್ಧಿ ಬರುವುದುಂಟು. ಶ್ರೀರಾಮನಿಗೂ 'ಕಾಕುತ್ಸ್ಥ', 'ರಾಘವ' ಇವೆಲ್ಲವೂ ಈ ಪ್ರಸಿದ್ಧ ವ್ಯಕ್ತಿಗಳಿಂದ ಕಾರಣದಿಂದ ಬಂದ ನಾಮಧೇಯ. 'ರಾಘವ' ಎಂಬ ಹೆಸರು ಬರಲು ಕಾರಣವೇನು? 

ಶ್ರೀರಾಮನ ವಂಶಕ್ಕೆ ಮೂಲ ಸೂರ್ಯ. ಇಲ್ಲಿ ಅನೇಕ ರಾಜಾಧಿರಾಜರು ಆಗಿಹೋಗಿದ್ದಾರೆ. ಅವರೆಲ್ಲರೂ ಅನೇಕ ಬಗೆಯಲ್ಲಿ ಪ್ರಸಿದ್ಧರೂ ಕೂಡ. ಆದರೆ ರಾಘವ ಎಂಬ ಹೆಸರನ್ನು ವಾಲ್ಮೀಕಿಗಳು ಅನೇಕ ಬಾರಿ ಉಚ್ಚರಿಸುತ್ತಾರೆ. ಇದಕ್ಕೆ ಕಾರಣವೇನಿರಬಹುದು? ಎಂಬುದು ವಿಚಾರಣೀಯ. 

ಸಂತತಿಯು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲು ಗಂಡು ಸಂತಾನ ಬೇಕೆ ಬೇಕು. ಹಾಗಾಗಿ ಮಾನವನಲ್ಲಿ ಗಂಡು ಸಂತತಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅಂದರೆ ಹೆಣ್ಣಿಗೆ ಪ್ರಾಧಾನ್ಯವಿಲ್ಲ ಎಂದರ್ಥವಲ್ಲ. ಹೆಣ್ಣುಹುಟ್ಟಿದರೆ ಅವಳನ್ನು ಬೇರೊಂದು ಮನೆಗೆ ಕಳುಹಿಸಿಕೊಡುತ್ತೇವೆ. ಅದು ಬೇರೊಂದು ವಂಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಆದರೆ ಒಂದು ಗಂಡು ಮಗು ಹುಟ್ಟಿದರೆ, ಬೇರೆ ಕುಲದಲ್ಲಿ ಹುಟ್ಟಿರುವ ಕನ್ಯೆಯನ್ನು ತಂದು ಇವನಿಗೆ ವಿವಾಹ ಮಾಡಿಸುತ್ತೇವೆ. ಅಲ್ಲಿ ಹುಟ್ಟುವ ಸಂತತಿಯು ಇದೇ ಕುಲದ ಮುಂದುವರಿಕೆ. ಆ ಕುಲಾಚಾರದ ಕರ್ತವ್ಯಗಳೆಲ್ಲವೂ ಗಂಡುಮಗುವಿಗೇ ಸೇರುತ್ತವೆ. ಇದು ಸಾಮಾನ್ಯವಾದ ವಿಷಯ. ಒಂದು ವೇಳೆ ಆ ವಂಶದಲ್ಲಿ ಗಂಡು ಮಗು ಹುಟ್ಟದಿದ್ದರೆ ಅಲ್ಲಿಗೆ ವಂಶವು ವಿಚ್ಛಿನ್ನವಾಗುತ್ತದೆ. ಕುಲಾಚಾರಗಳೆಲ್ಲವೂ ನಷ್ಟವಾದಂತೆ ಸರಿ. ಮತ್ತು ಗಂಡು ಮಗುವಿನ ಹಿಂದಿನ ತಲೆಮಾರಿನ ಶ್ರಾದ್ಧ ತರ್ಪಣಾದಿಗಳೂ ಲುಪ್ತವಾಗುತ್ತವೆ. ಇವೆಲ್ಲವೂ ಆ ವಂಶಕ್ಕೆ ಒಳಿತಲ್ಲ ಎಂಬುದು ಸನಾತನ ಭಾರತದ ಶ್ರದ್ಧೆಯೂ ಹೌದು.

ಇಂತಹ ವಂಶೋಚ್ಛೇದದ ಸಂದರ್ಭ ಬಂದಿತ್ತು. ಈ ಆತಂಕ  ರಘು ಎಂಬ ರಾಜಕುಮಾರನ ಜನನದಿಂದ  ದೂರವಾಯಿತು. ಮತ್ತು ರಘುವಿನ ಜನನಕ್ಕೆ ವಿಶೇಷತೆ ಇದೆ. ಬಹಳ ಪ್ರಯತ್ನಸಾಧ್ಯವಾದದ್ದು ಅವನ ಜನನ. ಹಾಗಾಗಿ ಇವನೊಬ್ಬ ಪ್ರಸಿದ್ಧ ರಾಜನಾದ. 

ದಿಲೀಪಮಹಾರಾಜನಿಗೆ ತುಂಬಾ ವರ್ಷದಿಂದ ಮಕ್ಕಳಿರಲಿಲ್ಲ. ಅದಕ್ಕೆ ಕಾರಣವೇನು? ಎಂದು ಗುರು ವಸಿಷ್ಠರನ್ನು ಕೇಳಿದಾಗ, ಕಾಮಧೇನುವಿನ ಶಾಪ ಎಂದು ತಿಳಿಯಿತು.  ಆ ಶಾಪದ ಪರಿಹಾರಕ್ಕಾಗಿ ಅವಳ ಮಗಳಾದ ನಂದಿನಿಯನ್ನು ಸೇವೆ ಮಾಡಿದನು. ಯಾವರೀತಿಯಾಗಿ ತಪಸ್ಸಿನ ರೂಪದಲ್ಲಿ ಅವಳ ಅನುಗ್ರಹವನ್ನು ಪಡೆದ ದೀಲೀಪಮಹಾರಾಜ ಎಂಬುದನ್ನು ಕವಿ ಕಾಳಿದಾಸನು ಒಂದು ಸರ್ಗದಲ್ಲಿ ವಿವರವಾಗಿ ತಿಳಿಸಿದ್ದಾನೆ. ಕಾಳಿದಾಸಮಹಾಕಾವ್ಯಕ್ಕೆ 'ರಘುವಂಶ' ಎಂದೇ ಹೆಸರಿದೆ. ಇದೇ ಕಾವ್ಯದಲ್ಲಿ ಶ್ರೀರಾಮನ ಚರಿತವೂ ವರ್ಣಿತವಾಗಿದೆ. ಆದರೂ ಇದಕ್ಕೆ ರಘುವಂಶ ಎಂಬ ಹೆಸರಿದೆ. ಇದೇ ಸಾಕು ರಘುವಿನ ಮಹತಿಗೆ ಪ್ರಮಾಣ. ಇಲ್ಲಿ ನಂದಿನಿದೇವಿಯ ಪರೀಕ್ಷೆಯಲ್ಲಿ ದಿಲೀಪ ಉತ್ತೀರ್ಣನಾಗುತ್ತಾನೆ. ನಂದಿನಿಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಕೊಡಲೂ ಸಿದ್ಧನಾದ. ಕೊನೆಯಲ್ಲಿ ನಂದಿನಿಯು ದಿಲೀಪಮಹಾರಾಜನಿಗೆ ಪುತ್ರರತ್ನವನ್ನು ಅನುಗ್ರಹಿಸಿದಳು. ಸುದಕ್ಷಿಣಾದೇವಿ ಮತ್ತು ದಿಲೀಪರ ಮಗನಾಗಿ ರಘುವಿನ ಜನನವಾಯಿತು. ಇವನೊಬ್ಬ ಪ್ರಜಾರಂಜಕನಾದ ರಾಜನಾಗಿದ್ದ. ಅನೇಕ ಅಶ್ವಮೇಧಯಾಗವನ್ನು ಮಾಡಿದ ಚಕ್ರವತಿಯಾಗಿದ್ದ. ಮತ್ತು ಹೇಗೆ ರಘುವಿನ ಜನನ ಸಮಯದಲ್ಲಿ ಅನೇಕವರ್ಷಗಳ ಪರ್ಯಂತ ಸಂತತಿಯು ಇಲ್ಲದೇ ಪರಿತಾಪ ಉಂಟಾಗಿತ್ತೋ, ಅದೇ ರೀತಿಯಾದ ಸಂತಾಪ ಶ್ರೀರಾಮನ ಜನನಸಮಯದಲ್ಲೂ ಉಂಟಾಗಿತ್ತು. ಉಭಯತ್ರ ವಂಶಚ್ಛೇದದ ಆತಂಕ ಸಮಾನವಾಗಿತ್ತು. ರಘುಮಹಾರಾಜ ಮತ್ತು ಶ್ರೀರಾಮನಿಗೆ ಈ ಬಗೆಯ ಸಾಮಾನ್ಯ ಲಕ್ಷಣವಿರುವುದರಿಂದ ಶ್ರೀರಾಮನಿಗೆ 'ರಾಘವ' (ರಘೋಃ ಅಪತ್ಯಂ ಪುಮಾನ್) -ರಘುವಂಶ ಜಾತ ಎಂಬ ನಾಮಾಂಕಿತವಿತ್ತು.

ಸೂಚನೆ :24/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.