ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ರಘುವಂಶದ ಅರಸರ ಅಸಾಧಾರಣಸಾಮರ್ಥ್ಯಗಳನ್ನು ವರ್ಣಿಸುತ್ತಾ, ಕಾಳಿದಾಸನು ಅವರ ಜನ್ಮಶುದ್ಧಿಯನ್ನೂ ನಿರಂತರೋದ್ಯಮಶೀಲತೆಯನ್ನೂ ಹೇಳಿ ಅವರ ರಾಜ್ಯವಿಸ್ತಾರ-ರಥಗತಿಸಾಮರ್ಥ್ಯಗಳನ್ನು ಹೇಳಿದ್ದಾನೆ.
ರಘು-ದಶರಥ ಮುಂತಾದ ಅರಸರಿಗೆ, ಇಂದ್ರನೊಂದಿಗಿನ ಸ್ನೇಹ-ಸೌಲಭ್ಯಗಳನ್ನು ಪುರಾಣಾನುಸಾರಿಯಾಗಿ ಚಿತ್ರಿಸಿ, ಇಂದ್ರನೆಡೆಯ ಪರ್ಯಂತ ಹೋಗಿಬರಲು ಅವರು ಶಕ್ತರಾಗಿದ್ದುದನ್ನು ಹೇಳುತ್ತಾನೆ. ದಶರಥನ ರಥವು ದಶದಿಶೆಗಳಲ್ಲೂ ಸಂಚರಿಸಬಲ್ಲ ರಥವಾಗಿತ್ತು.
ಅಗ್ನಿಯ ಉಪಾಸನೆಯನ್ನೂ ರಘುರಾಜರು ಮಾಡುತ್ತಿದ್ದವರೇ. ಅಗ್ನಿಗಳನ್ನು ಮೂರೆಂದೂ ಐದೆಂದೂ ಹೇಳುವುದುಂಟು. ಪ್ರಸಿದ್ಧವಾದ ಮೂರು ಅಗ್ನಿಗಳೆಂದರೆ ದಕ್ಷಿಣಾಗ್ನಿ, ಗಾರ್ಹಪತ್ಯ ಹಾಗೂ ಆಹವನೀಯ; ಇವುಗಳ ಜೊತೆಗೆ ಸಭ್ಯ ಹಾಗೂ ಆವಸಥ್ಯಗಳೆಂಬ ಅಗ್ನಿಗಳೂ ಸೇರಿ ಐದು.
ಅಗ್ನಿಯು ಸರ್ವದೇವತೆಗಳಿಗೂ ದೂತನಾದವನು. ಅಗ್ನಿಯಲ್ಲಿ ಸಮರ್ಪಣೆ ಮಾಡುವಾಗ, ಯಾವ ದೇವತೆಗೋಸ್ಕರವಾಗಿ ಆಹುತಿ ಕೊಡಲಾಗುತ್ತದೋ ಆ ದೇವತೆಗೇ ಆ ಹವಿಸ್ಸನ್ನು ಸಲ್ಲಿಸುವವನೆಂದರೆ ಅಗ್ನಿಯೇ. ಹೀಗೆ ದೇವತಾಪೂಜೆಯನ್ನು ಅಗ್ನಿದ್ವಾರಾ ಸಾಧಿಸುತ್ತಿದ್ದವರು ರಘುವಂಶದರಸರು. ಅಗ್ನಿಯಲ್ಲಿ ಮಾಡುವ ಹೋಮವಾದರೂ, ಅದಕ್ಕಾಗಿ ವಿಹಿತವಾದ ಶಾಸ್ತ್ರವಿಧಿಗಳನ್ನು ಅನುಸರಿಸಿಯೇ ಆಗತಕ್ಕದ್ದು. ವಿಧ್ಯುಕ್ತವಾದದ್ದನ್ನು ಮಾಡಿದರೆ ಮಾತ್ರವೇ ಫಲವು ಕೈಗೂಡುವುದು. ಎಂದೇ ಅಭಿಜ್ಞಾನಶಾಕುಂತಲದ ನಾಂದೀಶ್ಲೋಕದಲ್ಲೂ (ಮೊಟ್ಟಮೊದಲನೆಯ ಶ್ಲೋಕದಲ್ಲಿ) ಅಗ್ನಿಯನ್ನು "ವಹತಿ ವಿಧಿಹುತಂ" ಎಂದೇ ಹೇಳಿರುವುದು. ವಿಧ್ಯನುಸಾರವಾಗಿ ಯಾವುದನ್ನು ಹೋಮಿಸಲಾಗಿದೆಯೋ ಅದನ್ನಷ್ಟೇ ಅಗ್ನಿಯು ಒಯ್ಯುವುದು. "ಅವಿಧಿಹುತಂ ಭಸ್ಮೀಭವತಿ" ಎನ್ನುತ್ತಾರೆ. ವಿಧ್ಯನುಸಾರ ಮಾಡಿಲ್ಲದ ಆಹುತಿಯು ದೇವತೆಗಳನ್ನು ತಲುಪುವ ಬದಲು, ಬರೀ ಬೂದಿಯಷ್ಟೇ ಆಗುವುದು. ಅರ್ಥಾತ್ ಶ್ರಮವೆಲ್ಲ ತಗುಲಿದ್ದರೂ ಫಲವೇನೂ ದೊರೆಯದಂತಾಗುವುದು. ರಘುವಂಶದ ದೊರೆಗಳು ಯಾವುದೇ ನಿಷ್ಫಲವಾದ ಕಾರ್ಯಕ್ಕೆ ಕೈಹಾಕುವವರಲ್ಲ. ಅರ್ಥಾತ್, ಭಕ್ತಿಯೆಂಬುದು ಮುಖ್ಯವಾದರೂ, ಯಜ್ಞವಿಧಿಯನ್ನು ಯಥಾವತ್ತಾಗಿ ತಿಳಿದು ಮಾಡುವುದೇ ಸಾಫಲ್ಯವನ್ನು ಕೊಡುವಂತಹುದು. ಶ್ರದ್ಧೆಯಿಂದ ಮಾಡುವ ಯಾವುದೇ ಕಾರ್ಯದಲ್ಲಿ ಯಾವ ಲೋಪವೂ ಸಂಭವಿಸಬಾರದೆಂಬ ಕಾಳಜಿಯು ಆದ್ಯಂತವಾಗಿ ಸಹಜವಾಗಿ ಇದ್ದೇಇರುತ್ತದೆ.
ದೇವತೋಪಾಸನೆಯ ಹಾಗೆಯೇ ದಾನಮಾಡುವುದರಲ್ಲೂ ಎತ್ತಿದ ಕೈ ಎನಿಸುವವರಾಗಿದ್ದರು, ಈ ರಾಜರು. ಅರ್ಥಿಗಳು (ಎಂದರೆ ಬೇಡುವವರು) ಯಾವ ಕಾಮನೆಗಳನ್ನು (ಎಂದರೆ ಅಪೇಕ್ಷೆಗಳನ್ನು) ಇಟ್ಟುಕೊಂಡು ಬರುತ್ತಿದ್ದರೋ ಅದಕ್ಕೆ ಸಲ್ಲುವಂತೆ ದಾನವನ್ನು ಮಾಡುತ್ತಿದ್ದರು. ದೇಹಿ ಎಂದು ಬಂದವನಿಗೆ, ನಾಸ್ತಿ ಎಂದು ಕಳುಹಿಸುವ ಪ್ರಸಂಗವೊದಗಿಬರುತ್ತಿರಲಿಲ್ಲ.
ಮಲ್ಲಿನಾಥನು ತೋರಿಸುವಂತೆ, ಇದು ಅತಿಥಿಸತ್ಕಾರವನ್ನೇ ಸೂಚಿಸುವುದು. ಅತಿಥಿಗಳನ್ನು ದೇವರಂತೆ ಕಂಡ ಸಂಸ್ಕೃತಿ ನಮ್ಮದು: "ಅತಿಥಿದೇವೋ ಭವ" – ಎನ್ನುತ್ತದೆ, ತೈತ್ತಿರೀಯೋಪನಿಷತ್. ಅಗ್ನಿಯು ಸರ್ವದೇವತಾಮಯನೆನ್ನುವುದೂ ಉಂಟಷ್ಟೆ. ಅಗ್ನಿಯಂತೆ ಬರುವವನು ಅತಿಥಿ - ಎಂದು ಹೇಳುವ ಮಾತಿದೆ. "ಅಗ್ನಿರಿವ ಜ್ವಲನ್ನತಿಥಿರಭ್ಯಾಗಚ್ಛತಿ". ಹೀಗೆ ಯಜ್ಞಗಳನ್ನು ಯಥೋಕ್ತವಾಗಿಯೂ, ದಾನಗಳನ್ನು ಯಥೇಚ್ಛವಾಗಿಯೂ ಅನುಷ್ಠಿಸಿ, ಜನಗಳಿಗೊಂದು ಆದರ್ಶವನ್ನು ತಮ್ಮ ನಡತೆಯಿಂದಲೇ ತೋರಿಸುತ್ತಿದ್ದವರು ಇವರು.
ಯಜ್ಞ-ದಾನಗಳನ್ನು ಚೆನ್ನಾಗಿ ನೆರವೇರಿಸುವುದಲ್ಲದೆ, ತಮ್ಮ ರಾಜಕಾರ್ಯಕ್ಕೆ ಅಂಗಭೂತವಾಗಿ, ದಂಡವಿಧಾನವನ್ನೂ ಯುಕ್ತವಾಗಿಯೇ ಮಾಡುತ್ತಿದ್ದರು. ದಂಡವನ್ನು ವಿಧಿಸುವಾಗ, ಅಪರಾಧಕ್ಕೆ ಅನುಗುಣವಾಗಿಯೇ ವಿಧಿಸುತ್ತಿದ್ದರು: ಅಪರಾಧವೆಂತೋ ದಂಡವಂತು. ಸಣ್ಣ ಅಪರಾಧಕ್ಕೆ ಸಣ್ಣ ಶಿಕ್ಷೆ; ದೊಡ್ಡ ಅಪರಾಧಕ್ಕೆ ದೊಡ್ಡ ಶಿಕ್ಷೆ.
ದಂಡವನ್ನು ವಿಧಿಸುವ ಸಂದರ್ಭಗಳಲ್ಲಿ ಕೆಲವೊಮ್ಮೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗದಿರುವುದೂ, ತಪ್ಪೇ ಮಾಡಿಲ್ಲದವರಿಗೆ ಶಿಕ್ಷೆಯಾಗಿಬಿಡುವುದೂ ಉಂಟು! ಹಾಗೆಯೇ ಸಣ್ಣ ಅಪರಾಧಕ್ಕೆ ದೊಡ್ಡ ಶಿಕ್ಷೆಯೂ, ದೊಡ್ಡ ಅಪರಾಧಕ್ಕೆ ಸಣ್ಣ ಶಿಕ್ಷೆಯೂ ಆಗಿಬಿಡುವುದೂ ಉಂಟು! ಹೀಗಾದಲ್ಲಿ ರಾಜಾಪರಾಧವೇ ಏರ್ಪಟ್ಟಂತಾಗುತ್ತದೆ.
ಈ ಬಗೆಯ ದುಃಸ್ಥಿತಿಗಳಾವುವೂ ಬರದಂತೆ ರಘುರಾಜರು ಎಚ್ಚರವಹಿಸುತ್ತಿದ್ದರು. ಮನುವು ಎಚ್ಚರಿಸುತ್ತಾನೆ: ದಂಡನೆಗೆ ಯೋಗ್ಯರಾದವರನ್ನು ದಂಡಿಸದಿರುವ ರಾಜನೂ, ಹಾಗೆಯೇ ದಂಡಾರ್ಹರಾದವರನ್ನು ಶಿಕ್ಷಿಸದಿರುವ ರಾಜನೂ ಪಾಪಕ್ಕೆ ಭಾಗಿಯಾಗುವರು; ಹಾಗೂ ನರಕಕ್ಕೆ ಹೋಗುವರು.
ಅದಂಡ್ಯರ ದಂಡನೆ, ದಂಡ್ಯರ ಅದಂಡನೆಗಳು ಈಗ ಅದೆಷ್ಟು ಮಿತಿಮೀರಿದೆಯೆಂಬುದನ್ನು ದಿನಪತ್ರಿಕೆಗಳಲ್ಲಿ ದಿನದಿನವೂ ಕಾಣುತ್ತಲೇ ಇರುತ್ತೇವೆ. ಒಂದು "ಪ್ರಾಥಮಿಕ-ಮಾಹಿತಿ-ವರದಿ" ಸಹ ಇಲ್ಲದೆ ಜೈಲಿನಲ್ಲಿ ವರ್ಷಗಟ್ಟಲೆ ಕೈದಿಗಳಾಗಿ ಕೊಳೆಯಬೇಕಾದ ಪರಿಸ್ಥಿತಿಗಳು ಎಷ್ಟೋ ಮಂದಿಗೆ ಬಂದಿವೆ. ಇಂದಿನ ನ್ಯಾಯಾಧೀಶರುಗಳೇ ಪ್ರಶ್ನಾರ್ಹವಾದ ನಡತೆ-ರೀತಿ-ರಿವಾಜುಗಳನ್ನಿಟ್ಟುಕೊಂಡಿರುವುದು ಕಂಡುಬರುತ್ತಿದೆ. ತಪ್ಪಿಗೆ ಯುಕ್ತವೇ ಆದ ದಂಡವನ್ನು ರಾಜನು ಕೊಟ್ಟಲ್ಲಿ, ದಂಡಿತನಾದವನಲ್ಲೇ ಒಂದು ಶುದ್ಧಿಯೇರ್ಪಡುವುದನ್ನು ಶ್ರೀರಂಗಮಹಾಗುರುಗಳು ಸೂಚಿಸಿದ್ದರು.
ಯಜ್ಞ-ದಾನ-ರಾಜಕಾರ್ಯರಾಶಿಗಳೆಲ್ಲವೂ ಸರಿಯಾಗಿ ನಡೆಯಬೇಕೆಂದರೆ ರಾಜರ ದಿನಚರಿಯೇ ಉತ್ಕೃಷ್ಟವಾಗಿರಬೇಕಾಗುತ್ತದೆ. ಕೌಟಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ರಾಜನ ಆದರ್ಶದಿನಚರಿಯು ಹೇಗಿರಬೇಕೆಂಬುದರ ವಿವರಣಗಳನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. (ಚಾಣಕ್ಯನಿಗೆ ಮತ್ತೊಂದು ಹೆಸರು ಕೌಟಲ್ಯ ಎಂದು, ಕೌಟಿಲ್ಯ ಎಂದಲ್ಲ). ಚಿಕ್ಕಂದಿನಿಂದಲೇ ಅರಸುಕುವರರಿಗೆ ಉತ್ಕೃಷ್ಟವಾದ ಶಿಕ್ಷಣವೇ ದೊರೆಯುತ್ತಿತ್ತು.
ಕೆಲಸದ ಹೊರೆ ಹೆಚ್ಚಾಗಿಬಿಟ್ಟಿರುವ ಎಷ್ಟೋ ಮಂದಿ, ಶಿಸ್ತನ್ನು ಅದು ತಮಗಲ್ಲವೆಂದು ಕೈಬಿಡುವವರಾಗಿಬಿಡುತ್ತಾರೆ. ವಾಸ್ತವವಾಗಿ ಅದು ಹಾಗಿಲ್ಲ. ಆಗೊಮ್ಮೆ ಈಗೊಮ್ಮೆ ಭಂಗಬಂದರೂ, ವಿಶೇಷಕಾರ್ಯಗಳು ಕಡಿಮೆಯಾಗುತ್ತಲೇ ಮೊದಲಿನ ಶಿಸ್ತು ತಾನಾಗಿ ತೋರಿಕೊಳ್ಳಬೇಕು.
ಸೂಚನೆ : 23/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.