Sunday, July 31, 2022

ಶ್ರೀ ರಾಮನ ಗುಣಗಳು - 65 ಆನಂದಮಯ - ಶ್ರೀರಾಮ (Sriramana Anandamaya - 65 Raghava - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)




'ಆನಂದಮಯತ್ವ' ಎಂಬುದು ಶ್ರೀ ರಾಮನ ಅತಿ ವಿಶಿಷ್ಟ ಗುಣಗಲ್ಲೊಂದು.ಈ ಗುಣ ಶ್ರೀರಾಮನಲ್ಲಿರುವುದು ಹೇಗೆ? ಆನಂದ ಎಂಬುದೂ ಒಂದು ಗುಣ. ಅದು ಸರ್ವಾತ್ಮನಾ ಇದ್ದರೆ ಅದುವೇ ಆನಂದಮಯ. ಶ್ರೀರಾಮನು ಪ್ರತಿಯೊಂದು ವಿಷಯದಲ್ಲೂ ಆನಂದವು ತುಂಬಿದವನಾಗಿದ್ದ. ಅವನಲ್ಲಿ ಎಲ್ಲೆಲ್ಲೂ ಆನಂದ ತುಂಬಿರುವುದರಿಂದ ಆನಂದದಾಯಕನೂ ಆಗಿದ್ದ. ಆನಂದದಾಯಕನು ಹೇಗೆ ಆಗಿದ್ದ? ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಈಗ ಆನಂದಮಯ ಶ್ರೀರಾಮ ಹೇಗೆ ಎಂಬುದನ್ನು ನೋಡೋಣ. 

ಆನಂದ ಎಂದರೆ ಅಸೀಮವಾದ ಸಂತೋಷ. ಒಬ್ಬ ವ್ಯಕ್ತಿಗೆ ಯಾವಾಗ ಪರಿಪೂರ್ಣ ಆನಂದ ಸಿಗಬಹುದು ಎಂಬುದನ್ನು ಆನಂದಮೀಮಾಂಸಾ ಎಂಬ ಪ್ರಕರಣದಲ್ಲಿ ತೈತ್ತಿರೀಯೋಪನಿಷತ್ತು ತಿಳಿಸುತ್ತದೆ.

"ಯುವಾ ಸ್ಯಾತ್ ಸಾಧುಯುವಾಧ್ಯಾಯಕಃ| ಆಶಿಷ್ಠೋ ದೃಢಿಷ್ಠೋ ಬಲಿಷ್ಠಃ| ತಸ್ಯೈಯಂ ಪೃಥಿವೀ ಸರ್ವಾ ವಿತ್ತಸ್ಯ ಪೂರ್ಣಾ ಸ್ಯಾತ್| ಸ ಏಕೋ ಮಾನುಷ ಆನಂದಃ|" ಎಂಬುದಾಗಿ. ಉಪನಿಷತ್ತು ಹೇಳುವಂತೆ ಆನಂದವು ಅನೇಕ ಸ್ತರಗಳಲ್ಲಿ ಗೋಚರಿಸುತ್ತದೆ. ಒಬ್ಬ ಬಲಿಷ್ಠನೂ, ಯುವಕನೂ, ಎಲ್ಲಾ ಬಗೆಯ ಸಂಪತ್ತನ್ನೂ ಹೊಂದಿ, ಇಡಿ ಭೂಮಂಡಲಕ್ಕೆ ಚಕ್ರವರ್ತಿಯಾದವನು ಯಾವ ಆನಂದವನ್ನು ಪಡೆಯುವನೋ ಆ ಆನಂದಕ್ಕೆ ಮಾನುಷಾನಂದ ಎಂದು ಕರೆಯಲಾಗಿದೆ ಉಪನಿಷತ್ತಿನಲ್ಲಿ. ಅದನ್ನು 'ಒಂದು' ಆನಂದ ಎಂದು ಪರಿಗಣಿಸಿದರೆ, ಇಂತಹ ಒಂದು ಆನಂದಕ್ಕೆ ಇಪ್ಪತ್ತು ಶೂನ್ಯವನ್ನು ಸೇರಿಸಿದರೆ ಯಾವ ಆನಂದದ ಪ್ರಮಾಣವಿದೆಯೋ ಅದಕ್ಕೆ 'ಬ್ರಹ್ಮಾನಂದ' ಎನ್ನುತ್ತಾರೆ. ಇವೆರಡರ ಮಧ್ಯದಲ್ಲಿ ದೇವ, ಇಂದ್ರ, ಬೃಹಸ್ಪತಿ, ಪ್ರಜಾಪತಿ ಹೀಗೆ ಹತ್ತು ಆನಂದದ ಸ್ತರಗಳನ್ನು ಹೇಳಲಾಗಿದೆ. ಒಂದು ಸ್ತರಕ್ಕೂ ಇನ್ನೊಂದು ಸ್ತರಕ್ಕೂ ನೂರು ನೂರು ಪಟ್ಟು ಆನಂದದ ತಾರತಮ್ಯವಿದೆ. ಈ ರೀತಿಯಲ್ಲಿ ವಿಚಾರಿಸಿದರೆ ಒಬ್ಬ ಮನುಷ್ಯನು ಆಚರಿಸುವ ಆನಂದಕ್ಕೆ ಕೋಟಿ ಕೋಟಿ ಪಾಲು ಹೆಚ್ಚಿನ ಆನಂದವೇ ಬ್ರಹ್ಮಾನಂದ. ಈ ಆನಂದವನ್ನೇ ಗರಿಷ್ಠವಾದ ಆನಂದ ಎನ್ನಲಾಗಿದೆ. ಇದಕ್ಕಾಗಿಯೇ ನಮ್ಮ ಋಷಿ-ಮಹರ್ಷಿಗಳು ತಪ್ಪಸ್ಸನ್ನಾಚರಿಸಿದರು. ಅದನ್ನೇ ಭಗವಂತನ ಸಾಕ್ಷಾತ್ಕಾರ ಎನ್ನುತ್ತಾರೆ. ಇದು ಶಾಶ್ವತವಾದುದು. ಇದರ ದೃಷ್ಟಿಯಿಂದ ಉಳಿದವುಗಳೆಲ್ಲವೂ ಕ್ಷಣಿಕ. ಇದನ್ನು ಪಡೆದವನೇ ಧನ್ಯ. ಇದನ್ನು ಪಡೆಯುವುದೇ ಮಾನವನ ಜೀವಿತದ ಮುಖ್ಯಗುರಿ. ಈ ಆನಂದದ ಸಾಕಾರ ಮೂರ್ತಿಯಾಗಿದ್ದ ಶ್ರೀರಾಮ. ಇದೇ ಶ್ರೀ ರಾಮನ ಆನಂದಮಯತ್ವ. ಇದನ್ನೇ 'ರಾಮ' ಎಂದು ಜ್ಞಾನಿಗಳು ಹೇಳಿದ್ದು. ಶ್ರೀರಾಮನು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಮೂರೂ ಸ್ತರಗಳಲ್ಲೂ ಆನಂದವನ್ನು ಕೊಡಬಲ್ಲ. ಯಾರಲ್ಲಿ ಪೂರಿಪೂರ್ಣವಾದ ಆನಂದವಿರುವುದೋ ಅವನು ಮಾತ್ರವೇ ಇನ್ನೊಬ್ಬರಲ್ಲಿ ಆನಂದವನ್ನು ಕೊಡಬಲ್ಲ. ಸಾಮಾನ್ಯಜನರಿಂದ ಹಿಡಿದು ಪಂಡಿತರವರೆಗೆ, ಬಾಲಕರಿಂದ ವೃದ್ಧರವರೆಗೆ ಎಲ್ಲರಲ್ಲೂ ಆನಂದವನ್ನು ತುಂಬುತ್ತಿದ್ದ. ರಾಮನಿದ್ದಲ್ಲಿ ಆನಂದ. ರಾಮನಿಲ್ಲದೆಡೆ ದುಃಖ. ಈ ರೀತಿ ರಾಮನು ಆನಂದದ ಮೂರ್ತಿಯಾಗಿದ್ದ.

ಸೂಚನೆ :31/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.