Sunday, July 17, 2022

ಕಾಳಿದಾಸನ ಜೀವನದರ್ಶನ – 19 ಕಾಳಿದಾಸನು ಕಾಣಿಸುವ ಆಳ್ವಿಕೆ (Kalidasana Jivanadarshana - 19 Kalidasanu Kanisuva Alvike)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 

ಎಲ್ಲರ ನಡೆ-ನುಡಿ-ಯೋಚನೆಗಳೂ ಅವರಿಗೆ ಲಬ್ಧವಾದ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ಸಂಸ್ಕಾರಗಳು ಎರಡು ಬಗೆ: ಹಿಂದಿನ ಜನ್ಮಗಳ ಸಂಸ್ಕಾರಗಳು ನಮ್ಮ 'ವಾಸನೆ'ಗಳನ್ನು ನಿರ್ಮಿಸುವುವು; ಜನ್ಮದ ಶಿಕ್ಷಣ ಹಾಗೂ ಅನುಭವಗಳು ಜನ್ಮದ ಸಂಸ್ಕಾರಗಳನ್ನು ರೂಪಿಸುವುವು. ಮೊದಲನೆಯವು ಪ್ರತ್ಯಕ್ಷವಲ್ಲ, ಊಹ್ಯ. ಎರಡನೆಯದು ಪ್ರತ್ಯಕ್ಷ, ವೇದ್ಯ.

ದೇಶವನ್ನು ಆಳುವವನ ಜವಾಬ್ದಾರಿ ಬಹಳ ಹಿರಿದಾದುದಲ್ಲವೇ? ಎಂದೇ, ರಾಜನಿಗೆ ದೊರಕತಕ್ಕ ಶಿಕ್ಷಣದ ಪಾತ್ರವು ಆತನ ಚಿಂತನೆ-ವರ್ತನೆ-ಆಳ್ವಿಕೆಗಳಲ್ಲಿ ಹಿರಿದಾದುದೇ. ರಾಜರ ರೀತಿ-ನೀತಿಗಳನ್ನು ಬಣ್ಣಿಸುತ್ತದೆ, ಕಾಳಿದಾಸನ ರಘುವಂಶ. ಆ ಕಾವ್ಯದಲ್ಲಿ, ರಾಜಕೀಯವಾಗಿಯೂ ಏಕಾಧಿಪತ್ಯಕ್ಕೆ ಒಳಪಡುವ ಅಖಂಡಭಾರತದ ಭವ್ಯಚಿತ್ರವೇ ನಮ್ಮ ಕಣ್ಣ ಮುಂದೆ ಬರುತ್ತದೆ – ರಘುರಾಜನು ಸಾಧಿಸುವ ದಿಗ್ವಿಜಯಪ್ರಸಂಗದಲ್ಲಿ.  ಅದು ಮುಗಿಯುತ್ತಲೇ ವಿಶ್ವಜಿತ್ ಎಂಬ ಯಾಗವನ್ನೂ ಆತ ನೆರವೇರಿಸಿದ್ದಾನೆ.

ಯಾಗವನ್ನು ರಘುವು ಹೀಗೆ ಮುಗಿಸುತ್ತಿದ್ದಂತೆ, ಹಾಗೆ ಬರುವಂತಹ ವಿದ್ಯಾಸಂಪನ್ನನಾದ ಕೌತ್ಸ, ಹಾಗೂ ಅವರಿಬ್ಬರ ಲೋಕೋತ್ತರ-ವರ್ತನೆಗಳುಇವನ್ನೆಲ್ಲಾ ಈ ಹಿಂದೆ ಅವಲೋಕಿಸಿದ್ದಾಗಿದೆ. 

ರಘುವಂತೂ ಅಪ್ರತಿಮನೇ ಸರಿ : ಇದೇ ವಂಶದಲ್ಲಿ ಮುಂದೆ ರಾಮನು ಜನಿಸಿದರೂ ವಂಶಕ್ಕೆ "ರಾಮವಂಶ"ವೆಂಬ ಹೆಸರು ಬರಲಿಲ್ಲ; ರಘುವಂಶವೆಂಬ ಹೆಸರೇ ನಿಲ್ಲುವಂತಾಯಿತು! 'ರಾಘವ'ನೆಂದರೆ ರಘುವಂಶದವನೆಂದೇ. ವಾಲ್ಮೀಕಿಗಳೂ ರಘುವಂಶವೆಂದಿರುವವರೇ. (ಸೂರ್ಯವಂಶ, ಮನುವಂಶ, ಇಕ್ಷ್ವಾಕುವಂಶ, ಕಾಕುತ್ಸ್ಥವಂಶ - ಎಂಬೆಲ್ಲ ಹೆಸರುಗಳೂ ಇದೇ ವಂಶಕ್ಕೇ ಸಲ್ಲುವುವು;) ಆದರೂ, ಕಾಳಿದಾಸನು ತನ್ನ ಕಾವ್ಯಕ್ಕೇ ಇದೇ ಅಭಿಧಾನವನ್ನೇ ಬಳಸಿದನು! (ಅಭಿಧಾನವೆಂದರೆ ಹೆಸರು):"ರಘೂಣಾಮ್ ಅನ್ವಯಂ ವಕ್ಷ್ಯೇ" ಎಂದೇ ಕವಿಯು ಆರಂಭದಲ್ಲೇ ಹೇಳಿಕೊಂಡಿರುವುದು.

ಎಂತಹ ಅರಸರು, ರಘುವಂಶದವರು? – ಎಂಬುದರ ಬಗ್ಗೆ ಒಂದು ಪಕ್ಷಿನೋಟವನ್ನು ನಾಲ್ಕೇ ಶ್ಲೋಕಗಳಲ್ಲಿ ಕವಿ ಒದಗಿಸಿದ್ದಾನೆ, ಕವಿ. ಒಂದೊಂದು ಶ್ಲೋಕದ ಒಂದೊಂದು ಪಾದದಲ್ಲಿ ವಂಶದ ಅಭಿನಂದ್ಯವಾದ ಒಂದೊಂದು ಗುಣವಿಶೇಷ: ಹೀಗೆ ಹದಿನಾರು ಲಕ್ಷಣಗಳು. ಅವು ಕುಲದ ಬಹುತೇಕ ಅರಸರಿಗೆ ಅನ್ವಯಿಸತಕ್ಕವೇ. ಅಪವಾದಗಳೇ ಇಲ್ಲವೆಂದಲ್ಲ.

ಮೊಟ್ಟಮೊದಲ ಲಕ್ಷಣವಾವುದು? ರಘುವಂಶದ ರಾಜರು "ಆಜನ್ಮಶುದ್ಧರು" ಎಂಬುದು. ಹುಟ್ಟೆಂಬುದು ಎಲ್ಲವನ್ನೂ ತೀರ್ಮಾನಮಾಡುವುದಿಲ್ಲವೆಂಬುದು ಎಷ್ಟು ದಿಟವೋ, ಹುಟ್ಟಿನ ಪಾತ್ರವು ಸೊನ್ನೆಯಲ್ಲವೆಂಬುದೂ ಅಷ್ಟೇ ದಿಟವೇ. (ಇಂದಿನ ರಾಜಕೀಯ-ಸಂನಿವೇಶದಲ್ಲಿ ವಂಶಪಾರಂಪರ್ಯದ ಆಳ್ವಿಕೆಯೆಂಬುದಕ್ಕೆ ಕೆಟ್ಟ ಹೆಸರು ಬಂದಿರುವುದೇನೋ ನಿಜವೇ; ಇಂದೇನು, ಅಷ್ಟೊಂದು ಉತ್ಕೃಷ್ಟವಾದ ವಂಶವೇ ಆಗಿದ್ದರೂ ರಘುವಂಶದಲ್ಲೇ ಅಗ್ನಿವರ್ಣನೆಂಬ ರಾಜನು "ಕುಲಗೆಟ್ಟು" ಹೋಗಿದ್ದುದನ್ನು ತನ್ನ ಕಾವ್ಯದ ಕೊನೆಯ ಸರ್ಗದಲ್ಲಿ ಸ್ವತಃ ಕಾಳಿದಾಸನೇ ಚಿತ್ರಿಸಿದ್ದಾನೆ.) 

ಶ್ರೇಷ್ಠವಂಶವೊಂದರಲ್ಲಿ ಜನಿಸದೆಯೂ ಅದ್ಭುತಸಾಮರ್ಥ್ಯವನ್ನು ಹೊಂದಿರುವವರು ಆಗೊಮ್ಮೆ ಈಗೊಮ್ಮೆ ಸಂಭವಿಸುವುದು ಉಂಟೆಂಬುದೂ ದಿಟವೇ. ಆದರೂ, ವಂಶಶುದ್ಧಿಯೆಂಬುದರ ವಿಶಿಷ್ಟತೆಯೆಷ್ಟೆಂಬುದನ್ನು ಅರಿತು, ಅಭ್ಯಸಿಸಿ, ಅದಕ್ಕೆ ಸಲ್ಲತಕ್ಕ ತಕ್ಕ ಸ್ಥಾನ-ಪಾತ್ರಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಭಾರತೀಯರಂತೆ ಮತ್ತಾರೂ ಮಾಡಿಲ್ಲವೆಂದೇ ಹೇಳಬಹುದು: ಇದರ ಸ್ಪಷ್ಟನಿರೂಪಣೆಗಳು ಧರ್ಮಶಾಸ್ತ್ರ-ಅರ್ಥಶಾಸ್ತ್ರಗ್ರಂಥಗಳಲ್ಲಿ ಮೂಡಿಬಂದಿವೆ. ಕವಿಯು ಅದನ್ನರಿತವನಾದ್ದರಿಂದಲೇ, "-ಜನ್ಮ-ಶುದ್ಧ" - ಎಂದರೆ "ಹುಟ್ಟಾ ಶುದ್ಧ" ಎನಿಸಿಕೊಳ್ಳುವ ವಂಶದಲ್ಲಿ ಜನಿಸಿದವರೆಂದು ರಘುವಂಶದ ಅರಸರನ್ನು ಚಿತ್ರಿಸುತ್ತಾನೆ.

ಎಂತಹ ಶುದ್ಧಪರಂಪರೆಯಲ್ಲೂ ಆಗೊಮ್ಮೆ ಈಗೊಮ್ಮೆ ಏನೋ ಅಶುದ್ಧಿ ಏರ್ಪಡುವುದು ಅಸ್ವಾಭಾವಿಕವೇನಲ್ಲ. ಆದರೆ ಕಾರಣಕ್ಕೆ ಅಪವಾದವನ್ನೇ ಅಟ್ಟಕ್ಕೇರಿಸುವುದು ಜಾಣತನವೆನಿಸದು. ( ಲಿಂಗವ್ಯವಸ್ಥೆ ಮುಂತಾದುವುಗಳನ್ನು ಕುರಿತಾಗಿ ಈಚೀಚೆಗೆ ನಡೆಯುತ್ತಿರುವ ಚರ್ಚೆಗಳಲ್ಲಿಯೂ, 'ಅಪವಾದಗಳಿಗೇ ಪಟ್ಟ'ಕಟ್ಟುವಂತಾಗುತ್ತಿರುವುದು ಭವಿಷ್ಯದ ಬಗ್ಗೆ ಚಿಂತೆಗೀಡುಮಾಡುವಂತಹುದೇ; ಆ ಬಗ್ಗೆ  ವಿಚಾರಣವು ಇಲ್ಲಿಅಪ್ರಕೃತ.)

"ಹುಟ್ಟನ್ನಲ್ಲ, ಸಾಧನೆಯನ್ನು ನೋಡಿ" – ಎಂದೆನ್ನುವವರುಂಟಲ್ಲವೇ? ರಘುವಂಶದ ರಾಜರು ಹಾಗೂ ಸೈ ಎನಿಸಿಕೊಂಡವರೇ; ಹುಟ್ಟನ್ನೇ ಹೆಚ್ಚೆಂದು ಕೊಚ್ಚಿಕೊಂಡು ಉದ್ಯಮವನ್ನು ಉದಾಸೀನಮಾಡಿದವರಲ್ಲ. ಎಂದೇ, ಆ ವಂಶದ ಎರಡನೆಯ ಲಕ್ಷಣವೇ ಅವರು "ಆಫಲೋದಯ-ಕರ್ಮ"ರು ಎಂಬುದು.   ಹಾಗೆಂದರೇನು?: ಕೆಲಸವೊಂದನ್ನು ಕೈಗೆ ತೆಗೆದುಕೊಂಡರೆ, ಅದರ ಫಲವು ದೊರೆಯುವ ತನಕ ತಮ್ಮ ಪ್ರಯತ್ನವನ್ನು ನಿಲ್ಲಿಸದವರು, ಎಂದು. ಪಟ್ಟುಹಿಡಿದು ಕೆಲಸ ಮಾಡಿ, ಅದು ಗಟ್ಟಿಯಾಗುವ ತನಕ ಜಗ್ಗದ ಕರ್ಮಠರು ಅವರು; ಅಡ್ಡಿಗಳು ಅಡ್ಡಬಂದವೆಂದು ಉತ್ಸಾಹ ಕುಂದದವರವರು: ವಿಫಲತೆಗೆ ಆಸ್ಪದವೀಯದ ಸಫಲತೆಯ ಸಾಧಕರವರು. ಎಷ್ಟಾದರೂ "ಭಗೀರಥ-ಪ್ರಯತ್ನ"ವೆಂಬುದು ವಂಶದವರದ್ದೇ ಅಲ್ಲವೇ?! ಒಟ್ಟಿನಲ್ಲಿ ಸಾಧನೆಯಲ್ಲಿ ಎರಡೂ ಮೇಳೈಸುತ್ತವೆ - ಜನ್ಮಸಿದ್ಧವಾದ ಅಂಶ, ವಿದ್ಯಾಲಬ್ಧವಾದ ಅಂಶ. 

ಈ ಆ-ಜನ್ಮ ಆ-ಫಲವಾದ ಅಂಶಗಳಿಂದಾದ ಅವರ ಸಾಧನೆಯೇ ಮೂರನೆಯ ಲಕ್ಷಣ : ಅವರ ರಾಜ್ಯವು ಸಮುದ್ರ-ಪರ್ಯಂತವಾದದ್ದು. (ಇಂದು ನಾವು ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ – ಎಂಬುದಾಗಿ ಯಾವುವನ್ನು ಕರೆಯುವೆವೋ, ಅವಕ್ಕೆ "ರತ್ನಾಕರ" – "ಮಹೋದಧಿ"ಗಳೆಂಬ ಹೆಸರುಗಳು ಹಿಂದಿದ್ದುದನ್ನು ಮರೆಯಬಾರದೆಂದು ಶ್ರೀರಂಗಮಹಾಗುರುಗಳು ತಾವು ಬರೆಸಿದ ಭಾರತದ ಭೂಪಟದ ಚಿತ್ರದಲ್ಲಿ ಗುರುತುಹಾಕಿಸಿದ್ದಾರೆ;) ಉತ್ತರಕ್ಕಂತೂ ಹಿಮಾಲಯದ ಚಾಚಿನಾಚೆಗೂ ವ್ಯಾಪ್ತಿ: ಅವರ ರಾಜ್ಯದ ಅಪಾರವಿಸ್ತಾರವಷ್ಟು! (ಮರೆಯದಿರಿ: ಭಾರತವೆಂಬುದು ಬ್ರಿಟಿಷರ ಕೊಡುಗೆಯಲ್ಲ). ಮುಂದೆ ಅವರಿನ್ನಿತರ ಸಾಧನೆಗಳೂ ಅವಲೋಕನೀಯವಾದುವೇ.

ಸೂಚನೆ : 17/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.