ಲೇಖಕಿ: ಸೌಮ್ಯಾ ಪ್ರದೀಪ್
ಪರಮೇಶ್ವರನನ್ನೇ ವಿವಾಹವಾಗಬೇಕೆಂಬ ಸಂಕಲ್ಪದಿಂದ ತಪೋಮಗ್ನಳಾಗಿರುವ ಪಾರ್ವತಿಯನ್ನು ಪರೀಕ್ಷಿಸಿ ಅವಳ ಅಚಲ ನಿರ್ಧಾರಕ್ಕೆ ಮೆಚ್ಚಿ ಪರಶಿವನು ಪಾರ್ವತಿಯನ್ನು ವರಿಸಲು ಸಿದ್ಧನಾದ. ಆಗ ಸಂತಸ ಹಾಗೂ ಲಜ್ಜೆಯಿಂದ ಕೂಡಿದ ಪಾರ್ವತಿಯು ಪರಶಿವನನ್ನು ಕುರಿತು ತನ್ನ ತಂದೆಯ ಬಳಿ ಕನ್ಯಾರ್ಥಿಯಾಗಿ ಬರಬೇಕೆಂದು ಸಖಿಯ ಮೂಲಕ ತಿಳಿಸುತ್ತಾಳೆ. ಅಂತೆಯೇ, ಪರಶಿವನೂ ಕೂಡ ಅರುಂಧತಿ ಹಾಗೂ ಸಪ್ತರ್ಷಿಗಳನ್ನು ಮುಂದೆ ಮಾಡಿಕೊಂಡು ಹಿಮವಂತನ ಬಳಿಗೆ ಬಂದು ಕನ್ಯೆಯನ್ನು ಯಾಚಿಸಿ ಶುಭ ಮಹೂರ್ತದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗುತ್ತಾನೆ. ಜಗದಾದಿ ದಂಪತಿಗಳಾದ ಪಾರ್ವತೀ- ಪರಮೇಶ್ವರರ ವಿವಾಹಕ್ಕೆ ಈ ಎಲ್ಲಾ ನಿಯಮಗಳು ಅನಪೇಕ್ಷಣೀಯವಾದರೂ ಲೋಕ ಶಿಕ್ಷಣಕ್ಕಾಗಿ ಆದರ್ಶ ವಿವಾಹ ಸಂಪನ್ನವಾಗುತ್ತದೆ.
ವಿವಾಹವೆನ್ನುವುದು ಮಹರ್ಷಿಗಳಿಂದ ಮನುಕುಲಕ್ಕೆ ನೀಡಲ್ಪಟ್ಟ ಸಂಸ್ಕಾರಗಳಲ್ಲಿ ಒಂದಾಗಿದ್ದು ಗಂಡು ಹಾಗೂ ಹೆಣ್ಣಿಗೆ ವಿಧಿಸಲ್ಪಟ್ಟ ವಿಶೇಷ ಪದ್ಧತಿಯಾಗಿದೆ.
"ಹೆಣ್ಣು ಗಂಡು ಕೂರಿಸಿ ಮಾಡುವ ಪದ್ದತಿಯನ್ನೇ ನೋಡಿದಾಗ ಇದು ನಮ್ಮಲ್ಲೂ ಇದೆ. ಪರದೇಶದಲ್ಲೂ ಇದೆ, ಆದರೆ ಅದನ್ನು ನಾವು ಇಲ್ಲಿ ಕರೆಯುವುದು ವಿವಾಹವೆಂದು. ಇತರ ದೇಶಗಳಲ್ಲಿ ಈ ರೀತಿ ಕರೆಯಲಾರರು, ಅವರಲ್ಲಿ ಕರೆಯುವ ವೆಡ್ಡಿಂಗ್ (wedding) ಗೂ ಈ ವಿವಾಹಕ್ಕೂ ಯಾವ ಸಂಬಂಧವೂ ಇಲ್ಲ. ಅದು ಕೇವಲ ಭೌತಿಕದೃಷ್ಟಿಯಿಂದ ಕೂಡಿಸುವ ಒಂದು ಕೆಲಸ, ಆದರೆ ಇಲ್ಲಿನ 'ವಿವಾಹ' ಪದವೇ ವಿಶೇಷದೃಷ್ಟಿಯಿಂದ ತಂದುಕೊಳ್ಳುವುದು ಎಂಬ ಅರ್ಥವನ್ನು ಕೊಡುತ್ತಿದೆ " ಎಂಬುದಾಗಿ ಶ್ರೀರಂಗ ಮಹಾಗುರುಗಳು ವಿವಾಹ ಸಂಸ್ಕಾರದ ವಿಶಿಷ್ಟತೆಯನ್ನು ತಿಳಿಯಪಡಿಸಿದ್ದಾರೆ.
ವಿವಾಹ ಪದ್ಧತಿಯಲ್ಲಿ ಪ್ರಮುಖವಾಗಿ ಬ್ರಾಹ್ಮ, ದೈವ,ಆರ್ಷ,ಪ್ರಾಜಾಪತ್ಯ, ಆಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬುದಾಗಿ ಎಂಟು ವಿಧಗಳು. ಇವುಗಳಲ್ಲಿ, ಬ್ರಾಹ್ಮವಿವಾಹ ಪದ್ಧತಿ ಎಂಬುದು ಅತ್ಯಂತ ಶ್ರೇಷ್ಠವಾದುದು ಹಾಗೂ ಆದರ್ಶವಾದುದು. ಈ ವಿವಾಹ ಪದ್ಧತಿಯಲ್ಲಿ ಬರುವ ವಿಧಿವಿಧಾನಗಳೆಲ್ಲವೂ ಪರಬ್ರಹ್ಮನ ಆಶಯಕ್ಕೆ ಅನುಗುಣವಾಗಿಯೇ ನಡೆಯುತ್ತವೆ. ಪರಬ್ರಹ್ಮನ ಆಶಯ ಏನಪ್ಪಾ ಎಂದರೆ ಈ ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳೂ ಪರಬ್ರಹ್ಮನಿಂದಲೇ ವಿಕಾಸವಾಗಿ ಪ್ರಕೃತಿಗೆ ಬಂದಿರುವುದು; ಸೃಷ್ಟಿಯಲ್ಲಿ ತಮ್ಮೆಲ್ಲಾ ಕರ್ತವ್ಯಗಳನ್ನು ಪೂರೈಸಿ ಮತ್ತೆ ಹೋಗಿ ಪರಬ್ರಹ್ಮನಲ್ಲಿಯೇ ನೆಲೆನಿಂತಾಗ ಜೀವನ ಪೂರ್ಣವಾಗುವುದು; ಇದು ಜೀವಿಯ ಅಂತಿಮ ಹಾಗೂ ಮಹಾಧ್ಯೇಯವೂ ಆಗಿದೆ. ಈ ಬ್ರಾಹ್ಮ ವಿವಾಹ ಪದ್ಧತಿಯಲ್ಲಿ ಬರುವ ಕಾಶಿಯಾತ್ರೆ,ಕನ್ಯಾದಾನ,ಪಾಣಿಗ್ರಹಣ ಇತ್ಯಾದಿ ಎಲ್ಲಾ ವಿಧಿವಿಧಾನಗಳು ಈ ಅಂಶವನ್ನೇ ಸ್ಮರಣೆಗೆ ತರುವಂತೆ ಇರುತ್ತವೆ.
ಗುರುಕುಲದಲ್ಲಿ ಬ್ರಹ್ಮಚರ್ಯಾಶ್ರಮವನ್ನು ಪಾಲಿಸಿ, ಸ್ನಾತಕನಾಗಿ ಗುರುವಿನ ಅನುಜ್ಞೆಯ ಮೇರೆಗೆ ಸಾಲoಕೃತ ಕನ್ಯೆಯೊಂದಿಗೆ ಗುರುಹಿರಿಯರ ಸಮಕ್ಷಮದಲ್ಲಿ ವಿವಾಹ ಸಂಸ್ಕಾರವನ್ನು ಪಡೆದು ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಧರ್ಮ ಅರ್ಥ ಕಾಮಗಳೆಂಬ ಮೂರು ಪುರುಷಾರ್ಥಗಳನ್ನು ತನ್ನ ಪತ್ನಿಯ ಸಹಭಾಗಿತ್ವದಲ್ಲಿ ಅನುಭವಿಸಿ ಅಂತಿಮ ಪುರುಷಾರ್ಥವಾದ ಜೀವನದ ಮಹಾಧ್ಯೇಯವಾದ ಮೋಕ್ಷವನ್ನು ತಾನೂ ಹೊಂದಿ, ಗುರುವಿನ ಸ್ಥಾನದಲ್ಲಿದ್ದುಕೊಂಡು ಪತ್ನಿಯನ್ನೂ ಆ ಮಾರ್ಗದಲ್ಲಿ ಕೊಂಡೊಯ್ಯುವುದೇ ಈ ಸಂಸ್ಕಾರದ ಉದ್ದೇಶವಾಗಿದೆ. ವಧೂ ಹಾಗೂ ವರರ ಹೆಸರುಗಳು ಏನೇ ಇದ್ದರೂ, ಅಂದಿನ ಶುಭ ಮಹೂರ್ತದಲ್ಲಿ, ವಧುವನ್ನು ಲಕ್ಷ್ಮೀ ಅಥವಾ ಪಾರ್ವತೀ ರೂಪಳೆಂದೂ, ವರನನ್ನು ನಾರಾಯಣ ಅಥವಾ ಪರಮೇಶ್ವರ ರೂಪನೆಂದೂ ಭಾವಿಸಿ ಜಗದಾದಿ ದಂಪತಿಗಳ ಸ್ಮರಣೆಯೊಂದಿಗೇ ವಿವಾಹ ಮಂಗಳವು ನಡೆಯುತ್ತದೆ. ಪರಮಾತ್ಮನ ಪ್ರತೀಕವಾದ ಅಗ್ನಿಯನ್ನು ಪ್ರದಕ್ಷಿಣೆ ಮಾಡುವಾಗ "ಹೇ ಭಗವಂತ, ನಿನ್ನಿಂದಲೇ ಆರಂಭವಾದ ನಮ್ಮ ಜೀವನ ನಿನ್ನ ಸಂಕಲ್ಪಕ್ಕನುಗುಣವಾಗಿ ಪ್ರಕೃತಿಯಲ್ಲಿ ಸಂಚರಿಸಿ ಮತ್ತೆ ನಿನ್ನನ್ನೇ ಬಂದು ಸೇರುವಂತಾಗಲಿ" ಎಂಬುದನ್ನು ಜ್ಞಾಪಿಸುತ್ತದೆ.
ಭಾರತೀಯ ದೃಷ್ಟಿಯಲ್ಲಿ ವಿವಾಹದ ಉದ್ದೇಶ, ಸತ್ಸಂತಾನವನ್ನು ಪಡೆದು ಅದರ ಪಾಲನೆಯೊಂದಿಗೆ ಬ್ರಹ್ಮಚರ್ಯಾದಿ ಎಲ್ಲಾ ಆಶ್ರಮಗಳಿಗೂ ಆಶ್ರಯದಾತವಾಗಿರುವ ಗೃಹಸ್ಥಾಶ್ರಮದ ಕರ್ತವ್ಯಗಳನ್ನು ದಂಪತಿಗಳಿಬ್ಬರೂ ಒಮ್ಮನಸ್ಸಿನಿಂದ ನಿರ್ವಹಿಸುತ್ತಾ ಮಹಾಧ್ಯೇಯದತ್ತ ಪಯಣಿಸುವುದು.
ಪಾರ್ವತಿಯು ಪರಮೇಶ್ವರನ ಅರ್ಧ ದೇಹವನ್ನು ಹೊಂದಿ, ಲಕ್ಷ್ಮಿಯು ನಾರಾಯಣನ ಹೃದಯವನ್ನಲಂಕರಿಸಿ ಅವರಲ್ಲಿ ಒಂದಾದಂತೆ,ಪ್ರಕೃತಿಯಲ್ಲಿರುವ ಜೀವಿಗಳಿಗೆ ಪರಮಪುರುಷನಲ್ಲಿ ಒಂದಾಗಲು ದಾರಿದೀಪವಾಗಿದೆ ಈ ಸಂಸ್ಕಾರ."ಇದು ಕೇವಲ ಹೆಣ್ಣು ಗಂಡು ಕೂಡಿಸುವುದಲ್ಲಪ್ಪ; ದಿವಿ ಭುವಿಗಳನ್ನೇ ಕೂಡಿಸುವ ಕೆಲಸವಾಗಿದೆ " ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.