Friday, July 8, 2022

ಅಷ್ಟಾಕ್ಷರೀ​ -14 ಯೋಗಃ ಕರ್ಮಸು ಕೌಶಲಮ್ (Astakshara Darshana 14 Yogah Karmasu Kaushalam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಮಾಡುವ ಕೆಲಸವನ್ನು ಕುಶಲತೆಯಿಂದ ಮಾಡಿದರೆ ಅದೇ ಯೋಗ - ಎಂಬುದಾಗಿ ಗೀತೆಯ ಮಾತುಂಟು: "ಯೋಗಃ ಕರ್ಮಸು ಕೌಶಲಮ್". ಅನೇಕರು ಇದನ್ನು ಹೇಳುತ್ತಾರಾದರೂ, ಕೌಶಲವೆಂದರೆ ಏನು? – ಎಂಬುದು ವಿಚಾರಣೀಯ.


ಅದೇನು ಕಷ್ಟ? ಚಮ್ಮಾರನ ವಿಷಯವನ್ನೇ ತೆಗೆದುಕೊಳ್ಳಿ. ಆತ ಚಪ್ಪಲಿಯನ್ನು ತುಂಬ ಚೆನ್ನಾಗಿ ಹೊಲೆಯುತ್ತಾನೆನ್ನಿ. ಅಲ್ಲಿ ಆತನಿಗೆ ಕುಶಲತೆಯಿದೆಯೆಂದಾಯಿತು. ಹೀಗೆ ಚಪ್ಪಲಿಯನ್ನು ಚೆನ್ನಾಗಿ ಹೊಲೆಯುವವನನ್ನು ಯೋಗಿಯೆನ್ನೋಣ; 'ನೇಗಿಲಯೋಗಿ' ಎಂದಿಲ್ಲವೇ?

ನಮಗೆಲ್ಲ ಆಹಾರ ಬೇಕೇಬೇಕು. ಉತ್ತು ಬಿತ್ತು ಧಾನ್ಯವನ್ನು ಚೆನ್ನಾಗಿ ಬೆಳೆಯುವುದರಲ್ಲಿ ಕೌಶಲವುಳ್ಳವನಾದ್ದರಿಂದ ಆತನು ಯೋಗಿ. ಅದೇನು ಕಣ್ಣುಮುಚ್ಚಿ ಮೂಗು ಹಿಡಿದು ಕುಳಿತುಕೊಳ್ಳುವವರು ಮಾತ್ರ ಯೋಗಿಗಳೋ? - ಎಂದು ಮೂದಲಿಸುವವರೂ ಇರಬಹುದು.


ರೈತ, ಕೂಲಿ, ಕುಂಬಾರ, ನೌಕರರಿಂದ ಹಿಡಿದು ಬೋಧಕ, ವಿಜ್ಞಾನಿ, ವ್ಯಾಪಾರಿ, ಸೈನಿಕರ ಪರ್ಯಂತ ಎಲ್ಲರ ಸೇವೆಯೂ ಸಮಾಜಕ್ಕೆ ಬೇಕಾದದ್ದೇ. ಅದಕ್ಕಾಗಿ ಅವರನ್ನೆಲ್ಲ ಮಡಕೆಯೋಗಿ, ಸೌಟುಯೋಗಿ, ತಕ್ಕಡಿಯೋಗಿ, ಗನ್-ಯೋಗಿ ಎಂದು ಮುಂತಾಗಿ ಹೇಳಿಬಿಡುವುದು ಚೆನ್ನಾದೀತೇ?

 

ಯೋಗವೆಂಬುದು ಒಂದು ಪಾರಿಭಾಷಿಕಪದ. ಪಾರಿಭಾಷಿಕಪದಗಳಿಗೆ ನಿರ್ದಿಷ್ಟಾರ್ಥದಲ್ಲಿ ಬಳಕೆಯುಂಟು. ಅವನ್ನು ಹೇಗೆಂದರೆ ಹಾಗೆ ಎಳೆದಾಡಲು ಬರುವುದಿಲ್ಲ. (ತಮಾಷೆಗೋ ಕಾವ್ಯಮಯವಾಗಿಯೋ ಹೇಳುವುದು ಬೇರೆ.)

 

ಅದಿರಲಿ. ಅದಕ್ಕಿಂತಲೂ ಘೋರವೆಂದರೆ, ಷೂಪಾಲಿಶ್ ಮಾಡುವವ, ಆ ಕೆಲಸವನ್ನೇ ಚೆನ್ನಾಗಿ ಮಾಡಿಬಿಟ್ಟರೆ, ಕುಶಲತೆಯಿಂದ ಮಾಡಿಬಿಟ್ಟರೆ, ಭಗವಂತನನ್ನು ಕಾಣಬಲ್ಲನು, ಸಾಕ್ಷಾತ್ಕಾರವನ್ನು ಪಡೆಯಬಲ್ಲನು - ಎಂದು ಹೇಳುವವರೂ ಇಲ್ಲದಿಲ್ಲ. ವಿಜ್ಞಾನಕ್ಷೇತ್ರದಲ್ಲಿ ಉತ್ಕಟ ಶ್ರದ್ಧಾಸಕ್ತಿಗಳಿಂದಲೂ ಕುಶಲತೆಯಿಂದಲೂ ಹಗಲಿರುಳು ಕೆಲಸಮಾಡುವ ವಿಜ್ಞಾನಿಗಳು ನಮ್ಮ ದೇಶದಲ್ಲೂ ವಿದೇಶಗಳಲ್ಲೂ ಅಲ್ಲಲ್ಲಿ ದೊರಕುವವರೇ. ಅವರ ಕುಶಲತೆಯನ್ನು ಮೆಚ್ಚಿ ಗುರುತಿಸಿರುವ ಅಂತಾರಾಷ್ಟ್ರಿಯ ಸಂಸ್ಥೆಗಳುಂಟು. ಅವರಲ್ಲಿ ಯಾರಲ್ಲಾದರೂ ಯೋಗಿಯ ಲಕ್ಷಣಗಳು ಕಂಡುಬಂದಿವೆಯೇ? ಯೋಗಿಗಳಿಗಾಗುವ ಅನುಭವಗಳು ಮೂಡಿವೆಯೇ? - ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ಒಟ್ಟಿನಲ್ಲಿ, ಕುಶಲತೆಯುಳ್ಳವನನ್ನು ಕುಶಲನೆನ್ನಬಹುದೇ ವಿನಾ ಯೋಗಿಯೆನ್ನಲಾಗದು.


ಹಾಗಾದರೆ ಗೀತೆಯ ಮಾತಿನ ಅರ್ಥವೇನು, ನೋಡೋಣ. ಲೌಕಿಕವಾದ ಆಸೆ-ಅಪೇಕ್ಷೆಗಳಿಗೆ ಬಲಿಯಾಗಿ ನಾನಾಕರ್ಮಗಳನ್ನು ಮಾಡುವವರು ನಾವೆಲ್ಲಾ. ಎಲ್ಲರ ಕಣ್ಣೂ ಹಣ್ಣಿನ ಮೇಲೆಯೇ: ಫಲಾಪೇಕ್ಷೆ ಯಾರಿಗಿಲ್ಲ? ಕೆಲಸವನ್ನು ಆರಂಭಿಸುವ ಮೊದಲು ಅದಕ್ಕೊಂದು ಯೋಜನೆ ಹಾಕಿಕೊಳುವ ಕ್ಷಣದಿಂದ ಕೆಲಸಮುಗಿಸುವ ಪರ್ಯಂತವೂ, ಅದರ ಫಲಪ್ರಾಪ್ತಿಯ ಪರ್ಯಂತವೂ, ಅದರದ್ದೇ 'ಒಂದೇ ಧ್ಯಾನ'ವಾಗಿರುತ್ತದೆ.


ಆದರೆ ಕೆಲವರು ಹಾಗಲ್ಲ. ಅವರೂ ಸತತವಾಗಿ ಕೆಲಸ-ಕಾರ್ಯಗಳನ್ನು ಮಾಡುತ್ತಿರುವವರೇ. ವಾಸ್ತವವಾಗಿ, ಏನೂ ಕೆಲಸವನ್ನೂ ಮಾಡದೆಯೇ ಸುಮ್ಮನಾರು ಕುಳಿತಾರು? ಸುಮ್ಮನಾರು ಕುಳಿತಿರಬಲ್ಲರು?: ಒಂದು ಕ್ಷಣವೂ ಹಾಗಿರುವುದು ಸಾಧ್ಯವಿಲ್ಲ. (ನಿದ್ರಾವಸ್ಥೆಯ ವಿಚಾರ ಇಲ್ಲಿ ಬೇಡ). ಹಾಗೆಂದೇ ಗೀತೆಯೂ ಹೇಳುವುದಲ್ಲವೇ?


ಆದರೆ ಎರಡು ಅಂಶಗಳಲ್ಲಿ ಅವರು ಬೇರೆಯವರಂತಲ್ಲ. ಮೊದಲನೆಯದು ಕೆಲಸದ ಆಯ್ಕೆ. ಧರ್ಮಸಂಮತವಾದ ಕೆಲಸಗಳಲ್ಲೇ ತಮ್ಮನ್ನು ತೊಡಗಿಸಿಕೊಳ್ಳುವುದು ಒಂದು. ಎರಡನೆಯದು, ಮಾಡುವ ಕೆಲಸವನ್ನೇ ಶ್ರದ್ಧೆಯಿಂದಲೇ ಸಮರ್ಥವಾಗಿಯೇ ಮಾಡಿದರೂ, ಅಂಟಿಲ್ಲದಂತೆ ಮಾಡುವುದು: ಸಮತ್ವದಿಂದ ಮಾಡುವುದು; ಪಾಪಲೇಪವಾಗದಂತೆ ಮಾಡುವುದಷ್ಟೇ ಅಲ್ಲ, ಪುಣ್ಯಲೇಪವೂ ಆಗದಂತೆ ಮಾಡುವುದು! ಏಕೆಂದರೆ ಪಾಪವೆಂಬುದು ಹೇಗೆ ಬಂಧನವೋ ಪುಣ್ಯವೂ ಹಾಗೆಯೇ !: ಮೊದಲನೆಯದು ಕಬ್ಬಿಣದ ಸರಪಣಿಯಿಂದ ಮಾಡಿದ ಬೇಡಿ; ಎರಡನೆಯದು ಚಿನ್ನದ ಸರಪಣಿಯಿಂದಾಗಿರುವ ಬೇಡಿ. ಎರಡೂ ಬಂಧಕಾರಕಗಳೇ.


ಬೇಡಿಗಳು ಬೇಡವೆನ್ನುವವರು ಮಾಡುವ ಕರ್ಮದ ಪ್ರಕಾರವೇ ಬೇರೆ. ಮಾಡುವುದೆಲ್ಲವನ್ನೂ ಯಜ್ಞಬುದ್ಧಿಯಿಂದ ಮಾಡದಿದ್ದಲ್ಲಿ, ಮಾಡಿದ್ದೆಲ್ಲಾ ಬಂಧಕವೇ. ಮಾಡುವುದನ್ನೇ ಯಜ್ಞಾರ್ಥವಾಗಿ ಮಾಡಿದಲ್ಲಿ ಅದು ಬಂಧಕ್ಕೆ ಕಾರಣವಾಗುವುದಿಲ್ಲವೆಂಬುದಷ್ಟೇ ಅಲ್ಲ, ಅದು ಮೋಚಕವೇ ಆದೀತು. (ಮೋಚಕವೆಂದರೆ ಬಿಡುಗಡೆಯನ್ನು ಉಂಟುಮಾಡುವಂತಹುದು). ಯಜ್ಞಾರ್ಥವಾಗಿ ಮಾಡುವವರ ಆರಂಭದ ಸಂಕಲ್ಪವೇ ಬೇರೆಯಾಗಿರುವುದು. ಈ ಬಗ್ಗೆ ಗೀತೆಯ ಸಂನಿವೇಶವೂ ಪರಿಶೀಲನೀಯವೇ ಸರಿ.


ಅರ್ಜುನನು ಯುದ್ಧಾರಂಭದಲ್ಲಿಯೇ ಎಡವಿದುದನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು. "ಧರ್ಮಸ್ಥಾಪನೆಗಾಗಿ ಯುದ್ಧಮಾಡಯ್ಯಾ ಎಂದರೆ ಅರ್ಜುನನು ಕ್ಷೋಭೆಗೊಂಡುದೇಕೆ? ತನಗೋಸ್ಕರ ರಾಜ್ಯಪ್ರಾಪ್ತಿಗಾಗಿ ಯುದ್ಧಮಾಡಬೇಕೆಂದು ಹೊರಟಾಗ!"

 

ವಿವರಿಸುವುದಾದರೆ, ರಾಜ್ಯವನ್ನಾಳುವುದೆಂದರೂ "ರಾಜ್ಯಸುಖಲೋಭ"ವೆಂದು ಭಾವಿಸಿಕೊಂಡಾಗ. "ಸೋಲೋ ಗೆಲುವೋ, ಧರ್ಮವನ್ನುಳಿಸುವುದಕ್ಕೋಸ್ಕರವಾಗಿ ಶರೀರತ್ಯಾಗಮಾಡಲೂ ನಾ ಸಿದ್ಧ" - ಎಂದು ಹೊರಡಬೇಕಾದವನು, "ನಾನು ಯುದ್ಧ ಮಾಡೆ; ಅಯ್ಯೋ ಇವರೆಲ್ಲಾ ನಮ್ಮವರೇ ಆಯಿತಲ್ಲಾ!" ಎಂಬ ಅಹಂಕಾರ-ಮಮಕಾರಗಳಿಂದ ಹಲುಬಿದ. "ತಾನು, ತನಗಾಗಿ", "ಗೆದ್ದಾಗ ದಕ್ಕುವ ರಾಜ್ಯವು ಭೋಗಕ್ಕಾಗಿ" – ಎಂಬಿವೆಲ್ಲಾ ಸೇರಿ, ಲೋಭ-ಮೋಹಗಳ (ರಜಸ್ತಮಸ್ಸುಗಳ) ಬೀಡಾಯಿತು, ಅವನ ಮನಸ್ಸು.

 

ಕರ್ಮವನ್ನು ಧರ್ಮಕ್ಕೆಂದು, ಫಲವನ್ನು ಭಗವಂತನಿಗೆಂದು ಅರ್ಪಿಸದಾದಲ್ಲಿ, ಮಾಡಿದ್ದೆಲ್ಲಾ ಬಂಧನವೇ. ಯುದ್ಧವೆಂಬ "ಘೋರ"ಕರ್ಮವನ್ನೂ ಯಜ್ಞದಂತಾಗಿಸುವ ಕುಶಲತೆಯನ್ನು ಬೋಧಿಸಿದವನು ಯೋಗೇಶ್ವರ. ಕರ್ಮದಲ್ಲಿಯ ಈ ಪರಿಯ ಕುಶಲತೆಯೇ ಯೋಗವೆನಿಸುವುದು.

ಸೂಚನೆ: 03/07/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.