ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)
ಶ್ರೀರಾಮನು 'ಅವತಾರೀ' ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಅವತಾರದ ಎಲ್ಲಾ ಲಕ್ಷಣಗಳನ್ನು ಶ್ರೀರಾಮನಲ್ಲಿ ಕಾಣಲು ಸಾಧ್ಯ. ಆದ್ದರಿಂದ ಅವನನ್ನು 'ಅವತಾರಪುರುಷ' ಎನ್ನಬಹುದು.
'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!। ಅಭ್ಯುತ್ಥಾನಮ್ ಅಧರ್ಮಸ್ಯ ತದಾ ಆತ್ಮಾನಂ ಸೃಜಾಮ್ಯಹಮ್ ।।' ಎಂದು ಗೀತಾಚಾರ್ಯನಾದ ಶ್ರೀಕೃಷ್ಣನು ಹೇಳುವಂತೆ ಯಾವಾಗೆಲ್ಲ ಅಧರ್ಮಮವು ತನ್ನ ಮೆರೆತವನ್ನು ಕಾಣಿಸುವುದೋ ಆಗೆಲ್ಲ ಅದನ್ನು ದಮನ ಮಾಡಲು ಧರ್ಮದ ಅವತಾರ ಆವಶ್ಯವೆ. ಇಂತಹ ಸಂದರ್ಭಗಳಲ್ಲಿ ಅನೇಕ ಅವತಾರಗಳು ನಮ್ಮ ಭರತಖಂಡದಲ್ಲಿ ಸಂಭವಿಸಿವೆ. ಅವುಗಳಲ್ಲಿ ಮುಖ್ಯವಾದುದು ಶ್ರೀರಾಮಾವತಾರ.
ಅವತಾರ ಎಂದರೆ 'ಕೆಳಗೆ ಇಳಿದುಬರುವುದು' ಎಂಬ ಅರ್ಥವನ್ನು ಶ್ರೀರಂಗಮಹಾಗುರುಗಳು ಹೇಳುತ್ತಿರುವುದನ್ನು ಒಮ್ಮೆ ಸ್ಮರಿಸಿಕೊಳ್ಳಬೇಕು. ಇಳಿದು ಬರುವುದಕ್ಕೂ ಕೆಳಗೆ ಬೀಳುವುದಕ್ಕೂ ವ್ಯತ್ಯಾಸ ಇದೆ. ಎರಡೂ ಕಡೆ ಕೆಳಕ್ಕೆ ಬರುವುದೇ. ಆದರೂ ಬಿದ್ದವನು ತನ್ನ ತನವನ್ನು ಕಳೆದುಕೊಳ್ಳುತ್ತಾನೆ. ಅವನ ಯಾವುದು ಅಂಗಗಳಲ್ಲಿ ನ್ಯೂನತೆ ಉಂಟಾಗುವುದು. ಅವನಲ್ಲಿ ಸ್ಮೃತಿಶಕ್ತಿಯ ಕೊರತೆಯನ್ನು ಕಾಣಬಹುದು. ತಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಮತ್ತೆ ಸೇರಬೇಕಾದವನು? ಎಂಬ ಬಗ್ಗೆ ಸ್ಪಷ್ಟವಾದ ಅರಿವು ಇರುವುದಿಲ್ಲ. ಇದನ್ನೇ ಮರೆವು ಎನ್ನುವುದು. ಆದರೆ ಕೇವಲ ಅಂಗಾಂಗಳಲ್ಲಿ ಬರುವ ನ್ಯೂನತೆಯಲ್ಲ ಇದು. ಆದರೆ ಅವತಾರಿಯಾದವನಲ್ಲಿ ಈ ಎಲ್ಲಾ ಅಂಶಗಳ ಸ್ಪಷ್ಟವಾದ ತಿಳಿವಳಿಗೆ ಇದ್ದೇ ಇರುತ್ತದೆ. ಇಅದಕ್ಕೆ ಅಂತಹವರನ್ನು ಮಾತ್ರ 'ಅವತಾರ' ಎನ್ನುತ್ತಾರೆ. ಉಳಿದವರನ್ನು 'ಪತಿತರು' ಎನ್ನುತ್ತಾರೆ.
ಶ್ರೀರಾಮನು 'ಅವತಾರೀ' ಎನ್ನಲು ಶ್ರೀಮದ್ರಾಮಾಯಣದಲ್ಲಿ ಪುರಾವೆಗಳಿವೆ. ದೇವತೆಗಳಿಗೆ ಲಂಕಾಧಿಪನಾದ ರಾವಣನಿಂದ ತೀವ್ರತರವಾದ ಪೀಡೆ ಉಂಟಾಗುತ್ತದೆ. ಅವನ ಉಪಟಳವನ್ನು ತಾಳಲಾರದೆ ದೇವತೆಗಳು ವಿಷ್ಣುವಿನ ಬಳಿ ಹೋಗುತ್ತಾರೆ. ಆಗ ವಿಷ್ಣುವು ಅವರಿಗೆ ಅಭಯವನ್ನು ಕೊಡುತ್ತಾನೆ. "ನಿಮಗೆ ಭಯ ಬೇಡ. ನಿಮ್ಮ ಹಿತಕ್ಕೋಸ್ಕರ ಮಾನುಷರೂಪದಲ್ಲಿ ಬಂದು ದುರುಳನಾದ ರಾವಣನನ್ನು ಕೊಲ್ಲುತ್ತೇನೆ. ಹತ್ತು ಸಾವಿರ ವರುಷ ಭೂಮಿಯನ್ನು ಪಾಲನೆ ಮಾಡುತ್ತೇನೆ" ಎಂಬ ಅಭಯವನ್ನು ಶ್ರೀರಾಮನು ನೀಡುತ್ತಾನೆ. ಮುಂದೆ ವಾನರರೆಲ್ಲ ಎಲ್ಲಾ ದೇವತೆಗಳ ಅಂಶವಾಗಿ ಅವತಾರವನ್ನು ಮಾಡುತ್ತಾರೆ ಎಂಬುದು ರಾಮಾಯಣದಲ್ಲಿ ಬರುವು ಕಥೆ.
ಅಷ್ಟೇ ಅಲ್ಲ ಶ್ರೀರಾಮನು ತನ್ನ ಅವತಾರವಾದ ಮಾನುಷತ್ವವನ್ನು ಎಲ್ಲೂ ಮರೆಯದೆ, ಅತಿಮಾನುಷಶಕ್ತಿಯನ್ನು ಎಲ್ಲೂ ಪ್ರಕಟಪಡಿಸದೆ ಅವತಾರಮಂಗಲವನ್ನು ಮಾಡಿದ. ಶ್ರೀರಾಮನದ್ದು ಅಂಶಾವತಾರ ಶ್ರೀಕೃಷ್ಣನದ್ದು ಪೂರ್ಣಾವತಾರ ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂದರೆ ಶ್ರೀಕೃಷ್ಣಾವತಾರ ಶ್ರೇಷ್ಠ, ಉಳಿದ ಅವತಾರಗಳು ಕನಿಷ್ಠ ಎಂದರ್ಥವಲ್ಲ. ಅಂಶದಲ್ಲೂ ಪೂರ್ಣತೆಗೆ ಬೇಕಾದ ಎಲ್ಲಾ ಸಂಗತಿಗಳು ಇರುತ್ತವೆ. ಬೀಜದಿಂದ ಒಂದು ಗಿಡವಾಗಿ ಮರವಾಗಿ ಕೊನೆಗೆ ಬೀಜಬಾಗಿ ಬೆಳೆದರು ಅಲ್ಲಿ ಎಲ್ಲಾ ಹಂತಗಳಲ್ಲೂ ಬೀಜದ ಅವತಾರಗಳೇ. ಅಂತೆಯೇ ಶ್ರೀರಾಮನದ್ದು ಅಂಶವಾದರೂ ಅಲ್ಲಿ ಮೂಲರೂಪಕ್ಕೆ ಬೇಕಾದ ಎಲ್ಲಾ ಸಂಗತಿಗಳು ಇದ್ದೇ ಇರುತ್ತವೆ. ಅಲ್ಲಿ ಯಾವ ಲೋಪವು ಇಲ್ಲದ ಕಾರಣ ಅವುಗಳನ್ನು ಅವತಾರ ಎನ್ನಬಹುದು.
ಸೂಚನೆ : 10/07/2021 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.