Sunday, July 17, 2022

ಅಷ್ಟಾಕ್ಷರೀ​ - 15 ವಿದ್ಯಾಮರ್ಥಂ ಚ ಸಾಧಯೇತ್ (Astakshara Darshana 14 Vidyam Artham Ca Sadhayet)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

 

 

"ವಿದ್ಯೆಯನ್ನು ಸಾಧಿಸು; ಹಣವನ್ನೂ ಸಂಪಾದಿಸು" - ಎಂಬ ಅರ್ಥದ ಈ ಉಕ್ತಿ ಎರಡು ಸುಭಾಷಿತಗಳ ಎರಡನೆಯ ಪಾದವಾಗಿ ಬರುತ್ತದೆ.

ಅದರಲ್ಲಿ ಒಂದು ಸೂಕ್ತಿಯು ಹೀಗೆ ಹೇಳುತ್ತದೆ: ಕ್ಷಣಕ್ಷಣವೂ ವಿದ್ಯೆಯನ್ನು ಸಂಪಾದಿಸು; ಕಳೆದುಹೋದ ಕ್ಷಣ ಮತ್ತೆ ಬಂದೀತೇ? ಕಣಕಣ ಹಣವನ್ನೂ ಸಂಪಾದಿಸು; ಪುಡಿಗಾಸೆಂದು ಕಡೆಗಾಣಿಸುತ್ತ ಹೋದರೆ ಹಿರಿದಾದ ಸಿರಿ ಕೈಸೇರೀತೇ?   

ಇದಕ್ಕೆ ಸಮಾನವಾದ ಅಭಿಪ್ರಾಯವನ್ನುಳ್ಳ ಕನ್ನಡದ ಗಾದೆಯನ್ನು ಕೇಳಿಯೇ ಇರುತ್ತೇವೆ: ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಬಳ್ಳ. ಒಂದು ಹಳ್ಳದಷ್ಟೋ ಹೊಂಡದಷ್ಟೋ ನೀರಿನ ಶೇಖರಣೆಯಾಗಬೇಕೆಂದರೆ, ಅದು ಸೇರುವುದಾದರೂ ಹನಿಹನಿಯಾಗಿಯೇ: ಒಂದು ಹೊಂಡ ತುಂಬುವಷ್ಟು ನೀರು ಧೊಪ್ಪೆಂದು ಆಕಾಶದಿಂದ ಒಮ್ಮೆಲೇ ಬಿದ್ದೀತೇ? ಎಂತಹ ಭೋರ್ಗರೆವ ಮಳೆಯೆಂದರೂ, ಅದರಲ್ಲಿರುವುದೆಲ್ಲಾ ಎಷ್ಟೇ ಆದರೂ ಕೊನೆಗೆ ಸಣ್ಣಸಣ್ಣ ಹನಿಗಳೇ. ಕಿರಿದಾದವೇ ಹಿರಿದಾಗುವುದಕ್ಕಿದೊಂದು ಉತ್ಕೃಷ್ಟ ಉದಾಹರಣೆಯೇ ಸರಿ.

ಅಪಾರಜ್ಞಾನಸಂಪಾದನೆಯೆಂಬುದಾಗುವುದು ಎಂದೋ ಒಂದೇ ಒಂದು ದಿನ, ಅಥವಾ ಒಂದೆರಡು ದಿನ ಮಾತ್ರ, ಪಟ್ಟಾಗಿ ಹಿಡಿದು ಕುಳಿತು ಓದಿಕೊಂಡುಬಿಡುವುದರಿಂದ ಸಾಧ್ಯವಾಗುವುದಲ್ಲ. ಎಂದೇ, ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಹೆಚ್ಚಾಗಿ ಓದುವ ವಿದ್ಯಾರ್ಥಿಗಳು ಮುಂದೆ ಅದನ್ನು ಶೀಘ್ರದಲ್ಲೇ ಮರೆಯುವರು ಕೂಡ; ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿರಬಹುದು; ಆದರೆ ಹಾಗೆ ಆಗೋದಿಕೊಂಡದ್ದು ಜೀರ್ಣವಾಗಿ ಜಿತವಾಗದು. ನಿತ್ಯವೂ (ಉಪ)ಯುಕ್ತ-ಸದ್ವಿಚಾರಗಳು ಬಿಡಿಬಿಡಿಯಾಗಿಯೇ ಪುಡಿಪುಡಿಯಾಗಿಯೇ ಸೇರಿಕೊಳ್ಳುತ್ತಿದ್ದರೂ, ಬರಬರುತ್ತಾ ಬೃಹತ್ತಾದ ಬೋಧ-ಭಂಡಾರವೇ ನಮ್ಮದಾಗುತ್ತದೆ.

ಇದರ ಬದಲಾಗಿ, "ಇಷ್ಟೇ ತಾನೆ, ಇಷ್ಟಕ್ಕೇನು?" ಎಂದು ಹೇಳುತ್ತಾ, ಸಣ್ಣ ಹಣವನ್ನೇ ದುರ್ವ್ಯಯ-ಅಪವ್ಯಯ ಮಾಡುತ್ತಿದ್ದಂತೆ, ದೊಡ್ಡ ಹಣವು ಕೈಸೇರಿ ದಕ್ಕಿತೆಂದಾಗುವುದು ದೂರದ ಮಾತಾಗುತ್ತದೆ.

ಹೀಗಾಗಿ, "ಇಷ್ಟಿಷ್ಟೇ ಸೇರಿದರೂ ಲಾಭ, ಇಷ್ಟಿಷ್ಟೇ ಕಳೆದರೂ ನಷ್ಟ" - ಎಂಬ ತತ್ತ್ವವನ್ನು ಲೌಕಿಕವಾದ ಧನಕ್ಕೂ ವಿದ್ಯಾರೂಪವಾದ ಧನಕ್ಕೂ ಅನ್ವಯಮಾಡಬಹುದು. (ಇಲ್ಲಿಯ ಮಾತಿನ ಸಾರವನ್ನು ಸರಿಯಾಗಿ ಅರಿಯಬೇಕು: ಇಲ್ಲಿ ಜಿಪುಣತನವನ್ನು ಬೋಧಿಸುತ್ತಿಲ್ಲ; ಪುಸ್ತಕಕ್ಕೇ ಕಟ್ಟುಬೀಳಬೇಕೆಂದು ಹೇಳುತ್ತಿಲ್ಲ. ಅರ್ಜಿಸುವಲ್ಲಿ ಅನವಧಾನ ಅಕ್ಷಮ್ಯ - ಎಂಬುದರಲ್ಲಷ್ಟೆ ಈ ಅಣಿಮುತ್ತಿನ ಒತ್ತು). ಅಂತೂ, ಹೀಗೆ ಎರಡು ವಿಭಿನ್ನವಿಷಯಗಳಿಗೆ ಒಂದೇ ನ್ಯಾಯವನ್ನು ಅನ್ವಯಿಸುವುದನ್ನು ಇಲ್ಲಿ ಕಾಣಬಹುದು.

ಆದರೆ ಎಷ್ಟೋ ಮಂದಿ ಒಂದು ಬಗೆಯ ಇಬ್ಬಂದಿತನವನ್ನೇ ತೋರುತ್ತಾರೆ: ತಮಗೇ ಒಂದು ಲೆಕ್ಕ, ಮತ್ತೊಬ್ಬರಿಗೆ ಮತ್ತೊಂದು. ಇಂತಹವರನ್ನು ಕಪಟಿಗಳೆಂದು ಜನರು ಜರೆಯುವುದನ್ನೂ ಕಾಣುತ್ತೇವೆ. "ಇಲ್ಲಿ ರಾಮನ ಲೆಕ್ಕ, ಅಲ್ಲಿ ಕೃಷ್ಣನ ಲೆಕ್ಕ" ಎಂಬ ಮಾತನ್ನು ಹೇಳಿ ಇಂತಹವರನ್ನು ಕೆಲವರು ಮೂದಲಿಸುವುದೂ ಉಂಟು: ಎಷ್ಟಾದರೂ ರಾಮನ ವ್ಯವಹಾರ ಋಜು, ನೇರ; ಕೃಷ್ಣನ ವ್ಯವಹಾರದಲ್ಲಿ ಕಾಪಟ್ಯ-ಕೌಟಿಲ್ಯಗಳು ಹೆಚ್ಚು - ಎಂಬುದು ಅವರ ಮಾತಿನ ಇಂಗಿತ. ಆದರೆ ಇಂತಹ ಚಮತ್ಕಾರದ ಶಬ್ದಪ್ರಯೋಗಗಳ ಬಗ್ಗೆ ಒಂದು ಎಚ್ಚರ: ಇವು ನಮ್ಮನ್ನು ಭ್ರಾಂತಿಗೊಳಪಡಿಸುವುವು! ಏಕೆ? ರಾಮನು ಇದ್ದುದೂ ಧರ್ಮಕ್ಕಾಗಿಯೇ, ಕೃಷ್ಣನು ಇದ್ದುದೂ ಧರ್ಮಕ್ಕಾಗಿಯೇ; ಕಾಲ-ದೇಶ-ಸಂನಿವೇಶಗಳಿಗನುಗುಣವಾಗಿ ಧರ್ಮವನ್ನು ಅವರು ಸಾಧಿಸಿದ ಬಗೆಗಳು ಬೇರೆ ಬೇರೆ. ಅವರಿಬ್ಬರನ್ನೂ ಧರ್ಮಸ್ವರೂಪರೆಂದೇ ಪರಂಪರೆ ಕಂಡಿಲ್ಲವೇ?: "ರಾಮೋ ವಿಗ್ರಹವಾನ್ ಧರ್ಮಃ" – ಎಂಬುದು ರಾಮಾಯಣದ ಮಾತು; "ಕೃಷ್ಣಂ ಧರ್ಮಂ ಸನಾತನಮ್" ಎಂಬುದು ಮಹಾಭಾರತದ ಮಾತು. ಆದ್ದರಿಂದಲೇ, ವಿವೇಕಿಗಳಾದವರು ಧರ್ಮವಿರುದ್ಧವಾದ ಅಂತಹ ಶಬ್ದಪ್ರಯೋಗಗಳನ್ನು ಮಾಡರು: ಸಾರವಿಲ್ಲದ ಚಮತ್ಕಾರಮಾತ್ರದ ಉಕ್ತಿ ಎಂದಿಗೂ ತ್ಯಾಜ್ಯವೇ.

ಆದರೆ, ಇಲ್ಲೊಂದು ಲೆಕ್ಕ, ಅಲ್ಲೊಂದು ಲೆಕ್ಕ - ಎಂಬುದು ಮೋಸಗಾರರ ಕ್ರಮ ಎಂದೇ ಆಗಿರಬೇಕೆಂಬುದಿಲ್ಲ. 'ಇಲ್ಲೊಂದು ನ್ಯಾಯ, ಅಲ್ಲೊಂದು ನ್ಯಾಯ"ವನ್ನು ಬೋಧಿಸುವ ಶ್ಲೋಕವೊಂದನ್ನು ಆದರಣೀಯವಾದ ಆದರ್ಶವಾಗಿ ಶ್ರೀರಂಗಮಹಾಗುರುಗಳು ನಿದರ್ಶಿಸಿದ್ದರು: ಅದು ವಿದ್ಯಾರ್ಜನೆ-ಧನಾರ್ಜನೆಗಳನ್ನು ಮಾತ್ರವಲ್ಲದೆ, ಮತ್ತೂ ಮುಖ್ಯವಾದ ಮೂರನೆಯದಾದ ಧರ್ಮಾರ್ಜನೆಯನ್ನೂ ಸೇರಿಸಿ ಹೇಳುವ ಸೂಕ್ತಿ.

"ಇನ್ನು ಕೆಲವೇ ಕ್ಷಣಗಳಲ್ಲಿ ನೀನು ಸಾಯುವೆ" - ಎಂದು ಯಾರಾದರೂ ಹೇಳಿಬಿಟ್ಟರೆ - ಹಾಗೂ ಅವರ ಮಾತಿನಲ್ಲಿ ನಂಬಿಕೆ ಹುಟ್ಟಿಕೊಂಡುಬಿಟ್ಟರೆ - ಆಗ ವಿದ್ಯಾರ್ಜನೆಯ ಮಾತಿರಲಿ, ಧನಾರ್ಜನೆಯ ಬಗೆಗಿನ ಉತ್ಸಾಹವೂ ಕುಸಿಯುವುದೇ. ಆದರೆ ನಾವೇನಾದರೂ ದೀರ್ಘಾಯುಷಿಗಳೆಂದು ತಿಳಿದುಬಂದಲ್ಲಿ, ಇನ್ನೂ ಕೈಲಾದಷ್ಟೂ ದಿನ ದುಡಿದು ಸಂಪಾದಿಸಬೇಕೆಂಬ ಬಯಕೆ ಮೂಡುವಂತಹುದೇ; ವಿವೇಕಿಗಳಿಗೆ ಅದು ವಿದ್ಯಾರ್ಜನೆಗೂ ಅನ್ವಯಿಸಬಹುದಾದದ್ದೇ. ಆದರೆ ನಾವು ಅಜರರು (ಎಂದರೆ ಮುಪ್ಪೇ ಮೂಡದಂತಹವರು), ಹಾಗೂ ಅಮರರು (ಎಂದರೆ ಸಾವೇ ಸುಳಿಯದಂತಹವರು) - ಎಂಬ ಭಾವನೆಯನ್ನಿಟ್ಟುಕೊಂಡು, ಅನವರತವೂ ವಿದ್ಯಾರ್ಜನೆ-ಧನಾರ್ಜನೆಗಳನ್ನು ಮಾಡಬೇಕೆಂದು ಆ ಸೂಕ್ತಿಯು ಹೇಳುತ್ತದೆ. ಮುಪ್ಪು-ಸಾವುಗಳು ಯಾರನ್ನೂ ಬಿಟ್ಟಿಲ್ಲವಾದರೂ, ಅವಿಲ್ಲವೇ ಇಲ್ಲವೋ ಎಂಬಂತೆ ವಿದ್ಯೆ-ವಿತ್ತಗಳ ವರ್ಧನೆಯಲ್ಲಿ ವ್ಯಾಪೃತರಾಗಿ(ತೊಡಗಿ)ರತಕ್ಕದ್ದು.

ಆದರೆ ಧರ್ಮಸಂಪಾದನೆಯ ವಿಷಯದಲ್ಲಿ ಇದಕ್ಕೆ ವಿರುದ್ಧವಾದ ನಡೆಯಿರಬೇಕು!: ನಮ್ಮನ್ನೊಯ್ಯಲೆಂದು ಬಂದಾಗಿರುವ ಯಮನು, ಇದೋ ನಮ್ಮ ಜುಟ್ಟನ್ನೇ ಹಿಡಿದುಕೊಂಡುಬಿಟ್ಟಿದ್ದಾನೆಂಬ ಕಳವಳ-ಕಾಳಜಿಗಳೇ ಅಲ್ಲಿ ಬೇಕಾದದ್ದು! ಇನ್ನೇನು ಸಾವು ಸಮೀಪಿಸಿಯಾಯಿತೆನಿಸಿದಾಗ, "ಅಯ್ಯೋ ಇನ್ನೊಂದಿಷ್ಟು ಕಾಲವು ದೊರೆತಿದ್ದಲ್ಲಿ ಒಂದಿಷ್ಟು ಧರ್ಮಕಾರ್ಯಗಳನ್ನು ಮಾಡಬಹುದಾಗಿತ್ತೇ!" ಎಂಬ ಕೊರಗು ಯಾರಿಗೆ ಬರದು? ಆದರಿದೋ ಅದ್ಭುತ: ಸಾವುಗಳ ಸುದ್ದಿಗಳು ಸತತವಾಗಿ ಕಿವಿಗೆ ಬೀಳುತ್ತಿದ್ದರೂ, ಮೃತ್ಯುಗಳನ್ನು ನಿತ್ಯವೂ ಪ್ರತ್ಯಕ್ಷವಾಗಿಯೇ ಕಾಣುತ್ತಿದ್ದರೂ, "ನಾವೂ ಸಾಯತಕ್ಕವರೇ!" – ಎಂಬ ಜಾಗರವು ಮಾತ್ರ ಯಾರ ಚಿತ್ತಕ್ಕೂ ಬಾರದು. "ಇದಕ್ಕಿಂತಲೂ ಮತ್ತೊಂದು ಆಶ್ಚರ್ಯವೇ ಇಲ್ಲ" - ಎಂದು ಇದನ್ನು ಕುರಿತು ತಾನೆ ಯಕ್ಷಪ್ರಶ್ನೆಯು ತಿಳಿಸುವುದೂ?

ಒಟ್ಟಿನಲ್ಲಿ ಈ ದ್ವಂದ್ವನೀತಿಯು ನಮಗೆ ಅತ್ಯಂತ ಉಪಕಾರಿಯಾದದ್ದು: ಜ್ಞಾನಾರ್ಜನೆ-ದ್ರವಿಣಾರ್ಜನೆಗಳನ್ನು ನಾವೆಂದೆಂದಿಗೂ ಅಳಿಯದವರೆಂಬಂತೆ ಸಾಧಿಸುತ್ತಿರತಕ್ಕದ್ದು; ಆದರೆ, ಮೃತ್ಯುವಿನ ಕೈಗೆ ಇದೋ ಸಿಕ್ಕಿಕೊಂಡಾಯಿತೆಂಬಂತೆ ಧರ್ಮಾರ್ಜನೆಯನ್ನು ಮಾತ್ರ ಮಾಡುತ್ತಲೇ ಇರತಕ್ಕದ್ದು. ಮೊದಲನೆಯದು ಇಹಕ್ಕಾಗಿ; ಎರಡನೆಯದು ಪರಕ್ಕಾಗಿ. ಇಹ-ಪರಗಳೆರಡರಲ್ಲೂ ಚೆನ್ನಾಗಿರುವ ಬಾಳೇ ಬಾಳು - ಎಂಬುದು ಮಹಾಗುರುಗಳು ನಡೆದು ತೋರಿಸಿರುವ ಆದರ್ಶ. ಸದ್ವಿದ್ಯೆಯು ಎರಡಕ್ಕೂ ಉಪಕಾರಿ.

ಹೋದದ್ದು ಬರದು; ಕಳೆದ ಕಾಲವಂತೂ ಎಂತೂ ಹಿಂತಿರುಗದು. ಇಹಪರಗಳ ಸಹಬಾಳ್ವೆಗೋಸ್ಕರವಾಗಿ, ಸಮಯದ ಸದ್ವಿನಿಯೋಗದ ಬಗೆಗೆಂದು ದ್ವಂದ್ವನೀತಿಯೊಂದನ್ನು ತಂದುಕೊಳ್ಳುವುದು ಹೀಗೆ ಸರ್ವರಿಗೂ ಉದ್ಧಾರಕವೇ ಆಗಬಲ್ಲುದಲ್ಲವೇ?

ಸೂಚನೆ: 17/07/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.