Saturday, July 9, 2022

ಮಹರ್ಷಿ ಭಾರತ ಭಾಗ 5 ಅಂತರ್ದೃಷ್ಟಿಯಿಂದ ತಂದ ಹೊರಚಿತ್ರಗಳು (Maharsi Bharata Bhaga -5 Antardrstiyinda Tanda Horacitragalu)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


 

ದೇವತೆಗಳು ನಮ್ಮಂತೆ ರಸ್ತೆಯಲ್ಲಿ ಓಡಾಡುವ ಬದುಕುಗಳಲ್ಲ. ತಪಸ್ಯೆಯಿಂದ ದಿವಿಯ ಭಾವಕ್ಕೆ ಹೋದ ಹೊರತು ದೇವತೆಗಳು ಕಣ್ಣಿಗೆ ಕಾಣುವವರಲ್ಲ.

 

ನ ಶಕ್ಯಃ ಚಕ್ಷುಷಾ ದ್ರಷ್ಟುಂ ದೇಹೇ ಸೂಕ್ಷ್ಮತಮೋ ವಿಭು: ದೃಶ್ಯತೇ ಜ್ಞಾನ ಚಕ್ಷುಭಿ೯: ತಪಶ್ಚಕ್ಷುರ್ಭಿರೇವ ಚ ಎಂಬಂತೆ ಅವರ ಜ್ಞಾನದ ಕಣ್ಣಿಗೆ, ತಪಸ್ಸಿನ ಕಣ್ಣಿಗೆ ಗೋಚರವಾದ ದೇವತೆಗಳ ಚಿತ್ರವನ್ನು ಹೊರಗೆ ತಂದರು. ಅವರ ಅಂತರಂಗದ ಪಯಣ (internal journey) ಎಂದು ಕರೆಯಬಹುದಾದ ತಪಸ್ಸಿನಿಂದ ಅಂತರಂಗದಲ್ಲಿ ಉತ್ತಮೋತ್ತಮ ಭೂಮಿಯಲ್ಲಿ ಕಂಡಂತಹ ಚಿತ್ರಗಳನ್ನು ದರ್ಶನಗಳನ್ನು ಹೊರಗೆ ಇಡುವ ಪ್ರಯತ್ನ ಮಾಡಿದರು. ಹೇಗೆ ಪಿಂಡಾಂಡವೋ ಹಾಗೆ ಬ್ರಹ್ಮಾಂಡ , ಹೇಗೆ ಬ್ರಹ್ಮಾಂಡವೋ ಹಾಗೆ ಪಿಂಡಾಂಡ ಎಂದು ಅವರಿವರು ಹೇಳಿದ್ದನ್ನು ಕೇಳದೆಯೇ ತಮ್ಮ ಅನುಭವದಲ್ಲೇ  ಕಂಡದ್ದನ್ನು ತಂದಿದ್ದಾರೆ. 

 ಕೇವಲ ಇಷ್ಟು ಸಿಮೆಂಟಿನ ರಸ್ತೆ ಇರಲಿ, ಪಕ್ಕದಲ್ಲಿ ಚರಂಡಿ ಇರಲಿ, ಒಂದೇ ತರಹದ ಎರಡು ಕಂಭಗಳಿರಲಿ ಎಂಬ symmetry(ಸಮರೂಪತೆ) ಎಂದು ಈಗೇನು ನಾವು ವಿದೇಶೀಯರ ಅನುಕರಣೆ ಮಾಡಿ ಹೇಳುತ್ತೇವೋ ಅಷ್ಟೇ ಆಗಿರಲಿಲ್ಲ ಅವರು ತಂದ ಶಿಲ್ಪ.  ಮೊದಲು ಈ ದೇಹವನ್ನು ನೋಡಿ ಅಲ್ಲಿಂದ ಅವರು ಸಂಸ್ಕೃತಿ ನಾಗರೀಕತೆಗಳನ್ನು ಪ್ರಾರಂಭಮಾಡಿದರು. ಈ ಶರೀರವನ್ನು ಒಂದು ನಗರವಾಗಿ ಕಂಡು ಅದರಂತೆ ಹೊರಗಿನ ನಾಗರಿಕತೆಯನ್ನು ತಂದರು. ದೇಹೋ ದೇವಾಲಯ: ಪ್ರೋಕ್ತ: ಎಂಬಂತೆ ಇದನ್ನು ದೇವನು ವಾಸಿಸುವ ಜಾಗ -ದೇವಾಲಯವಾಗಿ ಕಂಡರು. ಹೊರಗೂ ದೇವಸ್ಥಾನಗಳನ್ನು ತಂದರು. ಇದನ್ನು ಭಗವಂತನನ್ನಿಟ್ಟುಕೊಂಡ ರಥವಾಗಿ ಕಂಡರು. ಹೊರಗೂ ರಥೋತ್ಸವಗಳನ್ನು ತಂದರು.

 

ಪುರುಷಾರ್ಥಗಳು

ಜಗತ್ತಿನಲ್ಲಿ ಎಲ್ಲರೂ ಚೆನ್ನಾಗಿರಬೇಕೆಂದೇ ಬಯಸುತ್ತಾರೆ. ಆದರೆ ಚೆನ್ನಿನ ಸ್ವರೂಪವೇನು ಎಂದರೆ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟು ಬಗೆಯ ಅಭಿಪ್ರಾಯಗಳಿರುತ್ತವೆ. ಆತ್ಮಹಿತದಿಂದ ಹಿಡಿದು ಇಂದ್ರಿಯ ಹಿತದವರೆಗೆ ಎಲ್ಲಕ್ಕೂ ಹಿತವಾಗುವುದೇ ಚೆನ್ನು ಎಂಬುದು ಭಾರತೀಯ ದೃಷ್ಟಿ. ಅಂತಹ ಆತ್ಮಹಿತವನ್ನು ಮೂಲವಾಗಿಟ್ಟುಕೊಂಡು ಬೆಳೆದ ದೇಶ ನಮ್ಮ ಭಾರತ. ಚತುರ್ವಿಧ ಪುರುಷಾರ್ಥಗಳನ್ನು ಅರ್ಥಮಾಡಿಕೊಂಡು ಅದನ್ನು ಲೋಕ ಹಿತಕ್ಕಾಗಿ ಜೀವನದ ಪರಮಲಕ್ಷ್ಯವಾಗಿ ತಂದ ದೇಶ ನಮ್ಮ ಭಾರತ. ಜೀವನವು ಎಲ್ಲೆ ಮೀರಿ ಗುರಿತಪ್ಪಿ ಸಾಗದಂತೆ ಸಹಜವಾಗಿ ಇರುವ ಒಂದು ಚೌಕಟ್ಟು(framework)  ಈ ಪುರುಷಾರ್ಥಗಳು. ಜೀವನದ ಕಟ್ಟುಗಳನ್ನು ಬಿಡಿಸಿಕೊಳ್ಳಲು ಕೆಲವು ಚೌಕಟ್ಟುಗಳಿಗೆ ಒಳಪಡಬೇಕಾಗುತ್ತದೆ ಎಂದು ಪೂಜ್ಯರಾದ ಶಂಕರನಾರಾಯಣ ಜೋಯಿಸರು ಒಮ್ಮೆ ಮಾರ್ಮಿಕವಾಗಿ ಜ್ಞಾಪಿಸಿಕೊಂಡಿದ್ದರು!

 

 ಧರ್ಮ -ಅರ್ಥ- ಕಾಮ -ಮೋಕ್ಷ.

ವಿಶ್ವವನ್ನೆಲ್ಲ ಧರಿಸಿರುವ ಭಗವಂತನ ಶಾಶ್ವತವಾದ ನಿಯಮಗಳೇ ಧರ್ಮ. ಈ ಸೃಷ್ಟಿ ಸಹಜವಾದ ನಿಯಮಗಳಿಗೆ ಒಳಪಟ್ಟು ಜೀವನ ನಡೆಸಿದಾಗ ಜೀವನಕ್ಕೆ ನೆಮ್ಮದಿ. ಸೃಷ್ಟಿಯಲ್ಲಿನ ಸಮಸ್ತ ಸಂಪತ್ತೂ ಅರ್ಥದ ವ್ಯಾಪ್ತಿಯಲ್ಲಿ ಬರುತ್ತವೆ. ನಮಗೆಲ್ಲ ಇಂದ್ರಿಯಗಳನ್ನು ಕೊಟ್ಟ ಮೇಲೆ ಅವುಗಳ ಸಹಜವಾದ ಅಪೇಕ್ಷೆಗಳೆಲ್ಲ ಕಾಮವೇ.  ಧರ್ಮದ ಎಲ್ಲೆಕಟ್ಟಿನಲ್ಲಿ, ಅದರ ಬೆಳಕಿನಲ್ಲಿ ಅರ್ಥ ಕಾಮಗಳನ್ನೆಲ್ಲ ಅನುಭವಿಸಿದಾಗ ಇಹ ಜೀವನವೂ ಸಮೃದ್ಧ. ನಮ್ಮ ಮೈ ಮನವನ್ನೆಲ್ಲಾ ಧರ್ಮವೇ ಆಳಿದಾಗ ಸಹಜವಾಗಿ ಜೀವನದ ಬಂಧಗಳನ್ನೆಲ್ಲಾ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ನಿರಂಜನರಾಗಿ ನಮ್ಮ ಸ್ವರೂಪವಾದ ಆ ಚೇತನದ ಜೊತೆ ಒಂದಾಗುವುದೇ ಮೋಕ್ಷ. ಅದು ನಮ್ಮೆಲ್ಲರ ನೆಲೆಮನೆಯಾಗಿದೆ. ಭಯರಹಿತವಾಗಿದೆ. ನೆಮ್ಮದಿಯ ತಾಣವಾಗಿದೆ ಎಂಬುದು ಆ ಅಮಿತವಾದ ಸುಖವನ್ನು ಅನುಭವಿಸಿದ ಜ್ಞಾನಿಗಳ ಮಾತು. ಜೀವನದಲ್ಲಿ ಈ  ಚತರ್ಭದ್ರಗಳೇ ಈ ಪುರುಷಾರ್ಥಗಳು. ಜೀವನವನ್ನು ಸರ್ವಾಂಗ ಸುಂದರವಾಗಿ ಅನುಭವಿಸುವ  ಜೀವನವಿಧಾನ ನಮ್ಮ ದೇಶದ ಮಹರ್ಷಿಗಳು ತಂದುಕೊಟ್ಟ ಪುರುಷಾರ್ಥಮಯ ಜೀವನ. ಪರಮಪುರುಷನ ಸಾಕ್ಷಾತ್ಕಾರವನ್ನೇ ಪ್ರಯೋಜನವಾಗಿ ಹೊಂದಿ ಹರಿದ ಜೀವನದಿ ಪುರುಷಾರ್ಥಮಯ ಜೀವನ. ಈ ವ್ಯವಸ್ಥೆಯನ್ನು ತಂದ ದೇಶ ನಮ್ಮದು.


ಸೂಚನೆ : 09/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.