Friday, July 8, 2022

ಮಹರ್ಷಿ ಭಾರತ ಭಾಗ -4 ರಥೋತ್ಸವಗಳು-ದೇವಾಲಯ ಶಿಲ್ಪವೈಭವ (Maharsi Bharata Bhaga -4 Rathotsavagalu-Devalaya Silpavaibhava)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮೀ ದೇಹವನ್ನು  ಪರಮ ಪದಕ್ಕೆ ಏರುವ ಏಣಿಯಾಗಿ, ಭವ ಸಾಗರವನ್ನು ದಾಟುವ ದೋಣಿಯಾಗಿ, ಭಗವಂತನ ಮನೋರಥವನ್ನು ಎಳೆಯುವ ರಥವಾಗಿ ಜ್ಞಾನಿಗಳು ಕಂಡಿದ್ದಾರೆ. ಇದನ್ನು ಪ್ರತಿನಿಧಿಸುವ ಸಲುವಾಗಿ ಹೊರಗೂ ರಥೋತ್ಸವಗಳನ್ನು ತಂದರು.ಇಲ್ಲಿಯ ರಥಗಳ ಶಿಲ್ಪಗಳಲ್ಲಿ ಕೆಳಗಿನ ಪ್ರಾಕಾರಗಳಲ್ಲಿ ಪಶುಗಳ, ರಾಕ್ಷಸರ ಚಿತ್ರಗಳನ್ನೂ ನೋಡುತ್ತೇವೆ .ನಾವೂ ಸ್ಥೂಲ ದೃಷ್ಟಿಯಿಂದ ನೋಡಿದಾಗ ಪಶುಭಾವವೇ ಇದೆ. ಮೇಲು ಮೇಲಿನ ಅಂತಸ್ತುಗಳಲ್ಲಿ ಮಾನವರ,ಋಷಿಗಳ,ದೇವತೆಗಳ ಚಿತ್ರಗಳಿರುತ್ತವೆ. ಸ್ಥೂಲ ದೃಷ್ಠಿಯಲ್ಲೇ ನಿಲ್ಲದೇ ಮೇಲೆ ಮೇಲಕ್ಕೆ ಸೂಕ್ಷ್ಮವಾಗಿ ನೋಡಿದಾಗ ಮಾನವತೆ ಇದೆ, ದೇವತ್ವವಿದೆ ಎಂಬ ಇಡೀ ಸೃಷ್ಟಿಯ ಬಗೆಗೆ ಎಂದು ದಿಗ್ದರ್ಶನ ಮಾಡಿರುವುದನ್ನು ನೋಡುತ್ತೇವೆ. 

 

ಯತ್ತೇ ಶಿಲ್ಪಂ ಕಶ್ಯಪ ರೋಚನಾವತ್...

 

ಈ ಶರೀರ ಶಿಲ್ಪ ಎಷ್ಟು  ಅತ್ಯಾಶ್ಚರ್ಯವಾಗಿದೆ!  ಶ್ರುತಿಯು ಅಪ್ಪಣೆ ಕೊಡಿಸುತ್ತದೆ-ನಿನ್ನ ಶಿಲ್ಪವನ್ನು ಏನೆಂದು ಹೇಳೋಣವಪ್ಪಾ- ಎಲ್ಲೆಲ್ಲಿ ನೋಡಿದರೂ ಪ್ರಕಾಶಮಾನವಾಗಿ ಕಣ್ಸೆಳೆಯುವಂತಿದೆ, ಮನಸೆಳೆಯುವಂತಿದೆ, ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಿಂದ ತುಂಬಿದೆ. ಯಾವ ನ್ಯೂನತೆಯೂ ಇಲ್ಲ.( perfect). ವಿವಿಧ ರೀತಿಯಲ್ಲಿ ಪ್ರಕಾಶವನ್ನು ಹೊಂದಿ ತನ್ನೆಡೆಗೆ ಸೆಳೆಯುವಂತಿದೆ. ಹೆಡ್ ಲೈಟ್(head light) ನಿಂದ ಮುಂದೆ ಬ್ರಾಂಚ್ ಲೈಟ್(branch light) ಗಳಂತೆ  ಪ್ರಕಾಶವನ್ನು ಹೊರ ಸೂಸುವ ಏಳು ದ್ವಾರಗಳನ್ನಿಟ್ಟಿದ್ದಾನೆ. ಇವರೇ ಸಪ್ತಸೂರ್ಯರು-[ ಎರಡು ಕಣ್ಣು,ಎರಡು ಮೂಗಿನ ಹೊಳ್ಳೆಗಳು,ಎರಡು ಕಿವಿ,ನಾಲಿಗೆ] ಇಂತಹ ನಗರದಲ್ಲಿ ಒಬ್ಬರಾಜನಿದ್ದಾನೆ. ಅವನನ್ನು ಆಶ್ರಯಿಸಿ ಜೀವನದಲ್ಲಿ ಸುಖ ಪಡೆಯಿರಿ ಎಂಬುದು ಶ್ರುತಿವಾಕ್ಯದ ಸಾರಾಂಶ. ಇಂತಹ ಶಿಲ್ಪವನ್ನು ದೇಹದಲ್ಲಿ ರಚನೆಮಾಡಿದ್ದನ್ನು ನೋಡಿ ಅದರ ಹೊರಕೃತಿಯಾಗಿ ಇಲ್ಲಿಯ ಶಿಲ್ಪವನ್ನು ತಂದರು.

 

Heart ಇಲ್ಲದ Art ಇಲ್ಲಿ ಬಂದಿಲ್ಲ!

ಎಂದೂ ಈ ಪ್ರಕಾಶದ, ಆನಂದದ ವಿಸ್ಮರಣೆಯಾಗದಿರಲೆಂದೇ ಅವರು ಆ ಪ್ರಕಾಶದ ಸಂಸ್ಮರಣೆಯಿಂದ ತಂದ ಕಲೆಗಳ ನೆಲೆಯೇ  ನಮ್ಮ ದೇವಸ್ಥಾನಗಳು. ಇಲ್ಲಿ ಕಲ್ಲಿನಲ್ಲೇ ಕೊರೆದಿದ್ದರೂ, ಮರದಲ್ಲೇ ಕೊರೆದಿದ್ದರೂ, ಕಾಗದದ ಮೇಲೆ ಗೆರೆ ಎಳೆದಿದ್ದರೂ-ಒಂದು ಕಡೆ ಕೇವಲ ಭೌತಿಕವಾಗಿ (physical ಆಗಿ) ಮುಂದುವರೆಯುವಂತೆ ಕಂಡುಬಂದರೂ, ಹಿಂಬದಿಯಲ್ಲಿ ಆಧ್ಯಾತ್ಮಿಕವಾಗಿ(spiritual) ಆಗಿ ಎರಡೂ ತರಹವಿರುವ ಚಿತ್ರಗಳನ್ನೇ ತಂದಿದ್ದಾರೆ. ಕೇವಲ ಮೈಯ ಉಬ್ಬುತಗ್ಗುಗಳನ್ನು ಅಷ್ಟೇ ಚಿತ್ರಿಸುವ ಶಿಲ್ಪಗಳಾಗಿಲ್ಲ. ಮೈಯ ಉಬ್ಬುತಗ್ಗುಗಳು ಬರಬೇಕಾದರೂ ಅದು ಸೃಷ್ಟಿ ಸಹಜವಾದ ಶಕ್ತಿಯ ಸಂಕಲ್ಪದಲ್ಲಿನ ಉಬ್ಬುತಗ್ಗುಗಳೇ ವಿನಾ  ಸುಮ್ಮನೇ ಇಷ್ಟು ಜಾಗ ದಪ್ಪ ಇರಲಿ, ತೆಳ್ಳಗಿರಲಿ ಎಂದು ಮಾಡಿದ್ದಲ್ಲ. ಜ್ಞಾನಕ್ಕೆ ಪೋಷಕವಾಗಿರುವುದನ್ನೇ ತಂದಿದ್ದಾರೆ. ಹೀಗೆ artificial(ಕೃತಕವಾಗಿ) ಆಗಿ heart ಇಲ್ಲದ (ಹೃದಯವಿಲ್ಲದ) art(ಕಲೆ) ಆಗಿ ಇಲ್ಲಿ ಯಾವುದೂ ಬಂದಿಲ್ಲ ಎಂದು ಪೂಜ್ಯರಾದ ವಿದ್ವಾನ್ ಶ್ರೀ ರಾಮಭದ್ರಾಚಾರ್ಯರು ಸ್ಮರಿಸಿಕೊಳ್ಳುತ್ತಿದ್ದರು. ಕಣ್ಣು ಮುಚ್ಚಿ ಈ ದೇಹವನ್ನು ಅವರು ಹೇಗೆ ಅವಲೋಕಿಸಿದರೋ ಹಾಗೆಯೇ ಅದರ ಪ್ರತಿಕೃತಿಯಾಗಿ ದೇವಸ್ಥಾನವನ್ನೂ ತಂದರು. ಈ ಸೃಷ್ಟಿಯ ಉಸಿರು ಎಲ್ಲಿದೆಯೋ ಆ ಜಾಗದಿಂದ ಇಲ್ಲಿ ಶಿಲ್ಪವನ್ನು ತಂದರು. ಇಲ್ಲಿಯ ದೇವಸ್ಥಾನಗಳನ್ನು ಬರಿಯ ಕಲ್ಪನೆಯಿಂದ ಅವರು ತಂದಿಲ್ಲ.


ಸೂಚನೆ : 2/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.