Friday, July 8, 2022

ಶ್ರೀ ರಾಮನ ಗುಣಗಳು - 61 ಜ್ಞಾನ-ವಿಜ್ಞಾನ- ನಿಧಿ- ಶ್ರೀರಾಮ (Sriramana Gunagalu-61- Jnana-Vijnana- Nidhi-- Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನು ಜ್ಞಾನ -ವಿಜ್ಞಾನ ನಿಧಿಯಾಗಿದ್ದ.  ಜ್ಞಾನ ಮತ್ತು ವಿಜ್ಞಾನ ಎಂಬ  ಎರಡು ಗುಣಗಳು ಒಂದಕ್ಕೊಂದು ಅವಿನಾಭೂತವಾದವುಗಳು. ಹಾಗಾದರೆ ಈ ಎರಡು ಗುಣಗಳು ಶ್ರೀರಾಮನಲ್ಲಿ ಯಾವ ರೀತಿಯಾಗಿ ಇವೆ ?

ಜ್ಞಾನ ಎಂದರೇನು ? ವಿಜ್ಞಾನ ಎಂದರೇನು? ಇವೆರಡು ಯಾವ ರೀತಿಯಾಗಿ ಪರಸ್ಪರ ಸಂಬಂಧ ಹೊಂದಿವೆ ? ಎಂದು ತಿಳಿಯುವ ಮೊದಲು ಅವುಗಳ ಮೌಲಿಕವಾದ ಅರ್ಥವನ್ನು ತಿಳಿಯಬೇಕು. ಜ್ಞಾನ ಎಂದರೆ ಅರಿವು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಹೇಳಬಹುದು. ಹಾಗಾದರೆ ಯಾವುದೋ ಒಂದು ವಿಷಯದ ಅರಿವುಳ್ಳವನನ್ನೂ ಜ್ಞಾನೀ ಎನ್ನಬೇಕಾಗುತ್ತದೆ. ಜ್ಞಾ- ಅವಬೋಧನೆ  ಎಂದರೆ ತಿಳಿಯುವಂತಹದ್ದು ಮತ್ತು ತಿಳಿಯುವ ಸಾಧನ ಎಂಬ ಎರಡೂ ಅರ್ಥದಲ್ಲೂ ಹೇಳಬಹುದು. 'ಯಜ್ಜ್ಞಾನಾತ್ ನಾಪರಂ ಜ್ಞಾನಮ್' ತಿಳಿಯಲೇ ಬೇಕಾದುದು ಅಥವಾ ಯಾವುದನ್ನು ತಿಳಿದರೆ ಎಲ್ಲವನ್ನು ತಿಳಿದಂತಾಗುವುದೋ ಅದನ್ನು ಮೂಲತಃ ಜ್ಞಾನ ಎಂಬುದಾಗಿ ಹೇಳಬಹುದು. ಅಂದರೆ ಮಾನವನ ಜೀವಿತದಲ್ಲೇ ತಿಳಿಯಬೇಕಾದುದೆಂದರೆ ಅವನಿಗೂ, ಈ ಸೃಷ್ಟಿಗೂ ಮೂಲನಾದ  ಭಗವಂತ ಅಥವಾ ದೇವರು. ಮನುಷ್ಯ ಹುಟ್ಟಿದ ಮಾತ್ರದಿಂದಲೇ ಪಡೆದುಕೊಳ್ಳುವ ಹಕ್ಕು ಅದು. ಇದೇ ವಿಷಯವನ್ನು ಶ್ರೀರಂಗ ಮಹಾಗುರುಗಳು ಹೀಗೆ ಹೇಳುತ್ತಿದ್ದರು " ಹೇಗೆ ಭಾರತದಲ್ಲಿ ಹದಿನೆಂಟು ವರ್ಷವಾಯಿತೆಂದರೆ ಮತ ಚಲಾಯಿಸುವ ಹಕ್ಕು ಬರುವುದೋ ಅಂತೆಯೇ ಮನುಷ್ಯ ಹುಟ್ಟಿದನೆಂದರೆ ಭಗವಂತನನ್ನು ಕಾಣುವ ಹಕ್ಕು ಬರುತ್ತದಪ್ಪ" ಎಂದು. ಅಂದರೆ ಮನುಷ್ಯಜನ್ಮದಲ್ಲಿ ತಿಳಿಯಲೇ ಬೇಕಾದುದು ಅದು ಭಗವಂತ, ಅದೇ ನಿಜವಾದ ಜ್ಞಾನ.

ಜ್ಞಾನವು ಸಮಸ್ತ ಸೃಷ್ಟಿಯಲ್ಲೂ ಸೇರಿಕೊಂಡಿದೆ. ಹಾಗಾಗಿ ಪ್ರಪಂಚದ ಯಾವ ವಿಷಯದ ಅರಿವನ್ನೂ ಜ್ಞಾನ ಎಂದೇ ಕರೆಯಬಹುದು. ಶ್ರೀರಂಗ ಮಹಾಗುರುಗಳು ' ಜ್ಞಾನದ ವಿಸ್ತಾರವೇ ವಿಜ್ಞಾನವಪ್ಪ" ಎಂಬ ಸೂತ್ರರೂಪವಾದ  ಮಾತನ್ನು ಹೇಳಿದ್ದರು. ಅದಕ್ಕೆ ಒಂದು ಉದಾಹರಣೆಯನ್ನೂ ಕೊಡುತ್ತಿದ್ದರು. ಒಂದು ಮಾವಿನ ಬೀಜವನ್ನು ನೆಟ್ಟರೆ ಅದರ ಎಲ್ಲಾ ಮುಂದಿನ ಪ್ರತಿ ಹಂತದಲ್ಲೂ ಮಾವು ಸೇರಿಯೇ ಇರುತ್ತದೆ. ಮಾವಿನ ಬೀಜ, ಮಾವಿನ ಚಿಗುರು, ಮಾವಿನ ಕಾಂಡ, ಮಾವಿನ ಶಾಖೋಪಶಾಖೆ, ಮಾವಿನ ಹೂವು, ಮಾವಿನ ಕಾಯಿ, ಮಾವಿನ ಹಣ್ಣು, ಕೊನೆಯಲ್ಲಿ ಮಾವಿನ ಬೀಜದಲ್ಲೇ ಅದು ಪರ್ಯವಸಾನವಾಗುತ್ತದೆ ಇಲ್ಲಿ ಪ್ರತಿಹಂತದಲ್ಲಿ ಹೇಗೆ ಮಾವು ಕಂಡುಬರುವುದೋ ಅಂತೆಯೇ 'ಈಶಾವಾಸ್ಯಮಿದಂ ಸರ್ವಂ' ಸೃಷ್ಟಿಯ ಪ್ರತಿಯೊಂದು ವಸ್ತುವೂ ಅವನಿಲ್ಲದೆ ಇಲ್ಲ.ಈ ವಿಸ್ತಾರದ ಅರಿವೇ ವಿಜ್ಞಾನ. ಜ್ಞಾನ- ವಿಜ್ಞಾನಗಳು  ಈ ಪ್ರಕಾರವಾಗಿ ಹಾಸುಹೊಕ್ಕಾಗಿವೆ .  

ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಹೇಳುವಂತೆ ಶ್ರೀರಾಮನು ಸಾಕ್ಷಾತ್ ಭಗವಂತನ ಅವತಾರ. ಅವತಾರದಲ್ಲಿ ಮೂಲದ ಪರಿಪೂರ್ಣತೆ ಇರುತ್ತದೆ. ಅವತಾರವು ನಿರ್ದುಷ್ಟವಾಗಿರುತ್ತದೆ. ಅವನಲ್ಲಿ ದೋಷವೇ ಇರದು. ಅವನಲ್ಲಿ ದೋಷವಿದೆ ಎಂದು ಭಾವಿಸುವುದು ಭಾವಿಸುವವನ ದೋಷವೇ ಸರಿ. ಆದ್ದರಿಂದ ಶ್ರೀರಾಮನ ಅರಿವು ಭಗವಂತನ ಅರಿವೇ ಆಗಿದೆ.  ಆ ಅರಿವಿನ ಬೆಳಕಿನಲ್ಲಿ ವಿಸ್ತಾರವಾದ ಇಡೀ ಸೃಷ್ಟಿಯ ನಡೆಯನ್ನೂ ಅವನು ಬಲ್ಲವನಾದ್ದರಿಂದ ಅವನು ವಿಜ್ಞಾನ ನಿಧಿಯೂ ಹೌದು. ಹೀಗೆ ಶ್ರೀರಾಮನು ಜ್ಞಾನ-ವಿಜ್ಞಾನ ನಿಧಿ.

ಸೂಚನೆ : 03/07/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.