Sunday, July 24, 2022

ಮಹರ್ಷಿ ಭಾರತ ಭಾಗ - 7 ಎಲ್ಲವೂ ಜೀವನ ಲಕ್ಷ್ಯವನ್ನು ಜ್ಞಾಪಿಸುವುದೇ (Maharsi Bharata Bhaga -7 Ellavu Jivana Laksyavannu Jnapisuvude)

 ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in) 

ನಮ್ಮ ನಿತ್ಯಜೀವನದ ಸರ್ವ ಕ್ಷೇತ್ರಗಳಲ್ಲೂ ಜೀವನ ಲಕ್ಷ್ಯವನ್ನು ಜ್ಞಾಪಿಸುವ ಕೆಲಸವೇ ನಡೆದಿದೆ. ಪರಂಜ್ಯೋತಿಯನ್ನು ಜ್ಞಾಪಿಸುವ ದೀಪಬೆಳಗುವಿಕೆ-ಪೂಜೆ,ಆರತಿ, ಅಷ್ಟೇಕೆ, ನಾವು ತೆಗೆದುಕೊಳ್ಳುವ ಆಹಾರವನ್ನೂ- ನಿನ್ನಿಂದ ಬಂದದ್ದು ಇದು ಎಂದು ಭಗವಂತನಿಗೆ ನಿವೇದಿಸಿ-"ಕವಳೇ ಕವಳೇ ಗೋವಿಂದಂ ಸ್ಮರೇತ್" ಎಂದು ಭಗವಂತನ ಪ್ರಸಾದವಾಗಿ ಆಹಾರವನ್ನು ಸ್ವೀಕರಿಸುವ ಸಂಸ್ಕೃತಿಯನ್ನು ದೇಶದಲ್ಲಿ ಬೆಳೆಸಿ ನಮ್ಮ ಆಹಾರ ಸೇವನೆಯಲ್ಲೂ ಪರಮಪುರುಷನವರೆಗೆ ತಲುಪಿಸುವ ನಡೆಯನ್ನು ತಂದುಕೊಟ್ಟ ನಾಗರಿಕತೆಯಿಂದ ಕೂಡಿದ ನಾಡು ನಮ್ಮ ಭಾರತ.

 

ನಮ್ಮೀ ಪವಿತ್ರ ಭೂಮಿ:

ಇನ್ನು ಈ ಭೂಮಿಯ ಬಗ್ಗೆ ಹೇಳುವುದಾದರೆ ಯೋಗ ಮಾರ್ಗದ ನಕ್ಷೆಗಳನ್ನು  ಇಲ್ಲಿ ಪ್ರಕೃತಿಮಾತೆಯೇ ಚಿತ್ರಿಸಿಕೊಂಡಿದ್ದಾಳೆ. ಜೀವನದ ಪರಮೋನ್ನತ ಸಿದ್ಧಿಯನ್ನು ಜ್ಞಾಪಿಸುವ -ಪರಾಪ್ರಕೃತಿ-ಪರಮಪುರುಷರ ಸೇರುವೆಯನ್ನು ಒಳಗೂ ಹೊರಗೂ ಸೂಚಿಸುವ ಗೌರಿಶಂಕರ ಶಿಖರ; ಒಳಗಿನ ಸಹಸ್ರಾರ ಚಕ್ರದಲ್ಲಿ ಯೋಗಿಯು ಅನುಭವಿಸಿ ಮೈಮರೆಯುವ ಶಿವ-ಶಕ್ತಿಗಳ ಸಮಾಗಮವನ್ನು ನೆನಪಿಸಲು ಹೊರಗೂ ಹಿಮಾಲಯದ ತಪೋಭೂಮಿಯ ಉತ್ತುಂಗದಲ್ಲಿ ಬೆಳಗುತ್ತಿರುವ ಉನ್ನತವಾದ ಶಿಖರಕ್ಕೆ ಗೌರೀ-ಶಂಕರ ಶಿಖರ ಎಂಬ ನಾಮಧೇಯ ಎಷ್ಟು ಅನ್ವರ್ಥವಾಗಿದೆ! ಯೋಗಮಾರ್ಗದಲ್ಲಿ ಗೋಚರಿಸುವ ಸಪ್ತಪ್ರಾಣಗಳನ್ನು ಸೂಚಿಸುವ ಗಂಗಾದಿ ಸಪ್ತಪ್ರವಾಹಗಳು. ಒಳಗಿನ ಜ್ಞಾನಗಂಗೆ ಅತ್ಯುನ್ನತ ಸ್ಥಾನದಿಂದ ಹರಿದು ನಮ್ಮ ಇಂದ್ರಿಯಭೂಮಿಗಳನ್ನೆಲ್ಲ್ಲಾ ಪಾವನಗೊಳಿಸಿ ಜ್ಞಾನಪ್ರಕಾಶದಲ್ಲಿ ಮುಳುಗುವಂತೆ ಮಾಡಿದಂತೆಯೇ ಹೊರಗೆ ಹಿಮಾಲಯದ ಅತ್ಯುನ್ನತ ಶಿಖರಗಳಿಂದ ಹರಿದು ಬಂದ ಪವಿತ್ರವಾದ ಪಾಪ ನಾಶಿನಿಯಾದ ಈ  ನದಿಯೂ ತನ್ನ ಪಾವಿತ್ರ್ಯದಿಂದ ಅವಗಾಹನೆ ಮಾಡಿದವರೆಲ್ಲರಿಗೂ ಆ ತಂಪನ್ನು ಪಾವಿತ್ರ್ಯವನ್ನು ತರುವುದನ್ನು ಕಂಡು  ಒಳ ಅನುಭವದ ಹಿನ್ನೆಲೆಯಲ್ಲೇ ಆ ನದಿಯನ್ನು ಕೊಂಡಾಡಿದ್ದಾರೆ. ತ್ರಿಭುವನ ಜನನೀ ವ್ಯಾಪಿನೀ ಜ್ಞಾನಗಂಗಾ ಎಂಬ ಶಂಕರಭಗವತ್ಪಾದರ ಮಾತೂ ಸಹ ಇದನ್ನೇ ಸಾರುತ್ತಿದೆ. ಅಲ್ಲದೇ ಈ ದೇಶದ ಜ್ಞಾನಿಗಳು ತಮ್ಮೊಳಗಿನ ಜ್ಞಾನ ಸ್ರೋತಸ್ಸಿನಿಂದ ಹೊರ ನದಿಯನ್ನೂ ಪವಿತ್ರಗೊಳಿಸಿ ತೀರ್ಥವನ್ನಾಗಿಸಿದ್ದಾರೆ ಎಂಬುದನ್ನೂ ನೆನಪಿಡಬೇಕು.

 

ತ್ರಿವೇಣೀ ಸಂಗಮ

ನಮ್ಮ ಶರೀರದಲ್ಲಿ ಚೈತನ್ಯವು ಹರಿಯುವ ಮಾರ್ಗಗಳೆಂದು ಇಡಾ-ಪಿಂಗಲಾ-ಸುಷುಮ್ನಾ ಎಂಬುದಾಗಿ ಮೂರು ಪ್ರಧಾನ ನಾಡೀ ಮಾರ್ಗಗಳನ್ನು ಯೋಗಿಗಳು ಗುರುತಿಸಿದ್ದಾರೆ. ಇಡಾ-ಪಿಂಗಲಾ ನಾಡಿಗಳನ್ನು ಕ್ರಮವಾಗಿ ಗಂಗಾ-ಯಮುನಾ ನದಿಗಳು ಪ್ರತಿನಿಧಿಸಿದರೆ ಜ್ಞಾನದ,ಪರಮ ಪದದ ರಾಜ ಮಾರ್ಗವಾದ, ಆದರೆ ಅತ್ಯಂತ ಸೂಕ್ಷ್ಮವಾದ ಸುಷುಮ್ನಾ ನಾಡಿಯನ್ನು ಗುಪ್ತಗಾಮಿನಿಯಾದ ಸರಸ್ವತೀ ನದಿಯು ಪ್ರತಿನಿಧಿಸುತ್ತದೆ. ಇವುಗಳ ಸಂಗಮವು ಒಳಗೆ ಪ್ರಕಾಶದ ಅನುಭವದ ಎಡೆಯಾದರೆ ಹೊರಗೂ ಅಂತಹ ತ್ರಿವೇಣೀ ಸಂಗಮವು, ಅಲ್ಲಿನ ಸ್ನಾನವು ಪರಮ ಪವಿತ್ರವೆಂದೂ ಅಂತರಂಗದ ಜ್ಞಾನಾನುಭವಕ್ಕೆ ಅತ್ಯಂತ ಸಹಕಾರಿಯೆಂದೂ ಮಹರ್ಷಿಗಳು ಗುರುತಿಸಿದ್ದಾರೆ. ಹೀಗೆ ಒಳ-ಹೊರ ಸಂಗಮವನ್ನು ಲೋಕಹಿತದ ದೃಷ್ಟಿಯಿಂದ ಸಾರಿದ ದೇಶ ಭಾರತ. ಇಂತಹ ಜೀವನ ಧ್ಯೇಯವನ್ನು ನೆನಪಿಸುವ ಅಲಂಕಾರವನ್ನೂ ನಮ್ಮ ಮಾತಾ-ಭಗಿನಿಯರ ಕೇಶವಿನ್ಯಾಸದಲ್ಲಿ ತಂದಿದ್ದಾರೆ. ಜ್ಞಾನರಜ್ಜುವಿನಿಂದ ಆರಂಭಿಸಿ ಕೇಶರಾಶಿಯನ್ನು ಮೂರಾಗಿ ವಿಭಾಗಿಸಿ ಜಡೆ ಹೆಣೆದುಕೊಳ್ಳುವಾಗ ಎರಡು ಭಾಗ ಮಾತ್ರವೇ ಕಾಣುತ್ತದೆ. ಒಂದು ಗುಪ್ತಗಾಮಿಸೀ ಸರಸ್ವತಿಯಂತೆ ಹೊರಗೆ ಕಾಣದು. ಹೀಗೆ ಹೊರಗಿನ ಕೇಶಾಲಂಕಾರವನ್ನು ನೋಡುತ್ತಾ ಒಳಗಿನ ಜೀವನ ಧ್ಯೇಯವನ್ನು ನೆನಪಿಸುವ ಉದಾತ್ತ ಸಂಸ್ಕೃತಿ ಇನ್ನೆಲ್ಲಿದೆ? ನಮ್ಮೀ ಪವಿತ್ರ ಭೂಮಿಯಲ್ಲಿ ಕುಳಿತು ಧ್ಯಾನ ಮಾಡಿದರೆ ಬೇರೆಡೆಗಿಂತ ಶೀಘ್ರವಾಗಿ ಧ್ಯಾನ ಸಿದ್ಧಿಯಾಗುವ ಒಳ ಹೊರ ವಾತಾವರಣವಿಲ್ಲಿದೆ.ಎಲ್ಲೆಲ್ಲಿ ನೋಡಿದರೂ ಪುಣ್ಯ ತೀರ್ಥಗಳು. ತೀರ್ಥವೆಂದರೆ ನಮ್ಮನ್ನು ಭವ ಸಾಗರದಿಂದ ದಾಟಿಸುವ ಸಾಮರ್ಥ್ಯವುಳ್ಳವು-  ಬರಿಯ H2O ಅಷ್ಟೇ ಅಲ್ಲದೆ ಜ್ಞಾನಿಗಳ, ತಪಸ್ವೀ ಜನರ ಚೈತನ್ಯಧಾರೆಯಿಂದ  ತಪಃ ಸಿದ್ಧಿಯನ್ನುಂಟು ಮಾಡುವ ತೀರ್ಥಗಳು ತುಂಬಿದ ನಾಡು. ಯಜ್ಞಯಾಗಾದಿಗಳು ಪುಷ್ಕಳವಾಗಿ ನಡೆಯುವ ಕರ್ಮ ಭೂಮಿ. ಆ ಕರ್ಮದ ಪ್ರಯೋಜನವಾಗಿ ಸಿದ್ಧವಾಗುವ ಬ್ರಹ್ಮ ಸಾಕ್ಷಾತ್ಕಾರದ ಬ್ರಹ್ಮ ಭೂಮಿಯೂ ಆಗಿದೆ. ಯೋಗ-ಭೋಗಗಳಿಗೆ ಅನುಕೂಲಕರವಾದ, ಪುರುಷಾರ್ಥಮಯ ಜೀವನಕ್ಕೆ ಪೋಷಕವಾದ ವಾತಾವರಣ,ಹವಾಗುಣ ತುಂಬಿರುವ ದೇಶ. 


ಸೂಚನೆ : 23/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.