Sunday, July 31, 2022

ಮಹರ್ಷಿ ಭಾರತ ಭಾಗ - 8 ಪುಣ್ಯಕ್ಷೇತ್ರಗಳು-ಪುಣ್ಯ ತೀರ್ಥಗಳು (Maharsi Bharata Bhaga -8 Punyaksetragalu-Punya Tirthagalu)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ದಕ್ಷಿಣ-ಉತ್ತರ ಭಾರತವೆಲ್ಲವೂ ಪುಣ್ಯಕ್ಷೇತ್ರಗಳಿಂದ, ಪುಣ್ಯತೀರ್ಥಗಳಿಂದ ತುಂಬಿದೆ. ಇಲ್ಲಿಯ ಕ್ಷೇತ್ರಗಳಿಗೆಲ್ಲ ಇಟ್ಟ ಹೆಸರುಗಳನ್ನು ಗಮನಿಸಿ-ಕಾಶೀ ಪ್ರಕಾಶಮಯವಾದ ಜಾಗ. ಇದು ಭ್ರೂಮಧ್ಯದ ಮೇಲ್ಭಾಗ ಮತ್ತು ಕೆಳಭಾಗ ಎರಡೂ ಸೇರುವ ಪರಮಪ್ರಕಾಶದ ಅನುಭವವಾಗುವ ಜಾಗ. ಯೋಗಿಗಳಿಗೆ ಆಗುವ ಈ ಒಳ ಅನುಭವವು ಸಂಸ್ಕಾರಿಗಳಿಗೆ ಪ್ರಬೋಧವಾಗುವ ಕ್ಷೇತ್ರಧರ್ಮವನ್ನು ಆ ಜಾಗದಲ್ಲಿ ಗುರುತಿಸಿ ಅದಕ್ಕೂ ಕಾಶೀ ಎಂದೇ ಹೆಸರಿಟ್ಟುದು ಜ್ಞಾನಿಗಳ ಮೇಧೆಗೆ ಹಿಡಿದ ಕನ್ನಡಿ. ಸೋಮನಾಥ,ಗೋಕರ್ಣ,ರಾಮೇಶ್ವರ ಇವೆಲ್ಲ ತೀರ್ಥಭೂತವಾದ ಸಮುದ್ರಗಳು. ಜ್ಞಾನಿಗಳು ವಿಶ್ವದ ಬೇರೆಡೆಯಲ್ಲೂ ಹುಟ್ಟಿರಬಹುದು. ಆದರೆ ಅವರು ಇಷ್ಟು ಪುಷ್ಕಳವಾಗಿದ್ದು ಇಡೀ ಸಂಸ್ಕೃತಿಯನ್ನೇ ಜ್ಞಾನಮಯವನ್ನಾಗಿಸಿದ ಏಕೈಕ ದೇಶ ಭಾರತ. ವಿಷ್ಣುಪುರಾಣವು ಭಾರತವನ್ನು ಹೀಗೆ ಕೊಂಡಾಡುತ್ತದೆ-

 ಗಾಯಂತಿ ದೇವಾ: ಕಿಲ ಗೀತಕಾನಿ। ಧನ್ಯಾಸ್ತು ತೇ ಭಾರತ ಭೂಮಿಭಾಗೇ ಸ್ವರ್ಗಾsಪವಗಾ೯ಸ್ಪದ ಮಾರ್ಗಭೂತೇ। ಭವಂತಿ ಭೂಯಃ ಪುರುಷಾ: ಸುರತ್ವಾತ್।।  

(ದೇವತೆಗಳು ಅಪೇಕ್ಷಿಸುವ ಭೂಮಿ. ಭಾರತ ಭೂಮಿಯಲ್ಲಿ ಹುಟ್ಟಿದವರು ನಿಜಕ್ಕೂ ಧನ್ಯರು .ಏಕೆಂದರೆ ಆ ದೇಶವು ಸ್ವರ್ಗ ಮತ್ತು ಅಪವರ್ಗಗಳಿಗೆ ಎಡೆ). ಸ್ವರ್ಗ ಎಂದರೆ ಧರ್ಮಾರ್ಥ ಕಾಮಗಳು. ಅಪವರ್ಗವೆಂದರೆ ಮೋಕ್ಷ. ಇಲ್ಲಿ ಭೋಗ-ಯೋಗಗಳೆರಡಕ್ಕೂ ಹಾದಿಯುಂಟು. ಯೋಗಕ್ಕೆ ಅವಿರೋಧವಾಗಿ ಭೋಗವನ್ನಳವಡಿಸಿಕೊಂಡ ದೇಶವಿದು.

 

ಸ್ವದೇಶೋ ಭುವನತ್ರಯಂ

ಎಲ್ಲರೂ ತಾವು ನೆಲೆಸಿದ ಭೌಗೋಳಿಕ ಕ್ಷೇತ್ರವನ್ನು ತಮ್ಮ ದೇಶ ಎಂದುಕೊಂಡರೆ ಈ ದೇಶದ ಮಹರ್ಷಿಗಳು ಮೂರು ಲೋಕಗಳೂ ತಮ್ಮ ದೇಶ ಎಂದಿದ್ದಾರೆ. ಭೂ:-ಎಂದರೆ ಹೊರಗೆ ಕಾಣುವ ಜಗತ್ತು, ಭುವಃ-ನಿಯಾಮಕರಾಗಿ ವಿಶ್ವವನ್ನು ನಡೆಸುವ ದೇವತೆಗಳ ಕ್ಷೇತ್ರ, ಸುವಃ-ಎಂದರೆ ಅದಕ್ಕೂ ಮೇಲಿನ ಪರಮ ಚೈತನ್ಯದ ಕ್ಷೇತ್ರ. ಆ ಪರಮ ಚೈತನ್ಯವೇ ಈ ಮೂರೂ ಕ್ಷೇತ್ರಗಳನ್ನು ಆಳುತ್ತಿರುವುದು. ಅದೇ ನಮ್ಮಲ್ಲೂ ಇದ್ದು ನಮ್ಮ ಅಸ್ತಿತ್ವಕ್ಕೆ ಕಾರಣವಾಗಿದ್ದು ನಮ್ಮೆಲ್ಲ ಚಟುವಟಿಕೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಅದರ ವ್ಯಾಪ್ತಿ ಇರುವ ಎಡೆ ಎಲ್ಲವೂ ನನ್ನ ದೇಶವೇ ಎಂಬ ಅನುಭವವೇದ್ಯವಾದ ಘೋಷಣೆ ಈ ದೇಶದ ನಮ್ಮ ಧೀರ ಪೂರ್ವಜರದು. ಇಂತಹ ಅನುಭವದ ರಸವನ್ನು ತಾವು ಅನುಭವಿಸಿ ಲೋಕಕ್ಕೆಲ್ಲಾ ಅದರ ಅನುಭವವಾಗುವುದಕ್ಕೆ ಬೇಕಾದ ಜೀವನ ಪಾಠವನ್ನು ಕಲಿಸಿದವರ ಪುಣ್ಯಭೂಮಿ ನಮ್ಮ ಭಾರತ! 

 

ಇವೆಲ್ಲವೂ ಗತವೈಭವವೇ?

 

"ಇವೆಲ್ಲವೂ ಯಾವುದೋ ಗತವೈಭವದ ಪಲ್ಲವಿಯನ್ನು ಹೇಳುತ್ತಿದ್ದೀರಿ . ಈಗಿನ ನಮ್ಮ ಭಾರತವನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಎಲ್ಲೆಲ್ಲೂ ಮೋಸ, ವಂಚನೆ,ಪಾಪಕೃತ್ಯಗಳು,ದುಃಖ ದೈನ್ಯಗಳು,ಅಶಿಸ್ತು ಒಂದೇ ಎರಡೇ. ಇಂತಹ ದೇಶವನ್ನೇಕೆ ಪ್ರೀತಿಸಬೇಕು? ಇಲ್ಲಿನ ದೇವಸ್ಥಾನಗಳು ವ್ಯಾಪಾರ ಕೇಂದ್ರಗಳಾಗಿವೆ. ಸಂಸ್ಕಾರಗಳು, ಜೀವನಕ್ರಮ ಇಲ್ಲಿನ ಮೂಢನಂಬಿಕೆಗಳು ನಮ್ಮ ಪ್ರಗತಿಯನ್ನೇ ಕುಂಠಿತಗೊಳಿಸಿವೆ. ಹೊರದೇಶದವರೆದುರಿಗೆ ನಮ್ಮ ದೇವಾಲಯಗಳು,ಸಂಸ್ಕಾರಗಳೆಲ್ಲ ನಗೆಪಾಟಲಾಗುತ್ತಿವೆ. ನಾವು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಇಂತಹ ದೇಶವನ್ನು ಪ್ರೀತಿಸುವುದು,ಅದಕ್ಕಾಗಿ ಜೀವನದಲ್ಲಿ ತ್ಯಾಗಮಾಡುವುದೆಲ್ಲ ವಿಚಾರ ಹೀನತೆಯ ಲಕ್ಷಣಗಳು"  ಎಂದು ಕೆಲವರು ವಾದಮಾಡುತ್ತಾರೆ. ನಿಜ. ಈ ಎಲ್ಲಾ ಮಾತುಗಳಲ್ಲೂ ಸತ್ಯ ಇಲ್ಲದಿಲ್ಲ . ಕೇಳಲೂ ಮೇಲ್ನೋಟಕ್ಕೆ ಅರ್ಥಪೂರ್ಣವಾದಂತಿವೆ. ಆದರೆ ನಮ್ಮ ಇಂದಿನ ಅವನತಿಯ ಕಾರಣ ಈ ಭೂಮಿಯಲ್ಲ.ಆರ್ಯಮಹರ್ಷಿಗಳ ಸಂಸ್ಕೃತಿಯೂ ಅಲ್ಲ. ನಮ್ಮ ಸಂಸ್ಕೃತಿ ನಾಗರಿಕತೆಗಳನ್ನು ತಿಳಿಯದೇ ಅವುಗಳ ವೈಶಿಷ್ಟ್ಯವನ್ನು ಅರಿಯದೇ ಪಶ್ಚಿಮದ ಅಗ್ಗದ ನಕಲಿನ ಜೀವನ ನಾವು ಮಾಡುತ್ತಿರುವುದರಿಂದ ಇಂದು ನಮಗೆ ಭಾರತೀಯ ಸಂಸ್ಕೃತಿಯ  ಮೇಲೆ ದ್ವೇಷವುಂಟಾಗಿದೆ. ಇದು ಆರ್ಯರ ಸಂಸ್ಕೃತಿ ನಾಗರೀಕತೆಗಳ ದೋಷವಲ್ಲ. ನಮ್ಮ ದೃಷ್ಟಿದೋಷ. ನಮ್ಮ ಆತ್ಮ ವಿಸ್ಮೃತಿಯ ದೋಷ. ಅದನ್ನು ನಾವು ಸರಿಪಡಿಸಿಕೊಳ್ಳಲೇಬೇಕು. ನಾವು ಅರಿಯಲಿಲ್ಲ ಎಂದ ಮಾತ್ರಕ್ಕೆ ಈ ಭೂಮಿಯ ಪಾವಿತ್ರ್ಯವೆಲ್ಲ ನಷ್ಟವಾಯಿತು ಎಂದಾಗದು. ಸಂಸ್ಕೃತಿಯನ್ನು ಅರಿಯದಿರುವುದೇ ಸಂಸ್ಕೃತಿಯನ್ನು ಹಾಳುಮಾಡಿದಂತೆ. ದೇವಾಲಯವನ್ನು ಮಹರ್ಷಿಗಳ ಮನೋಧರ್ಮದಿಂದ ತಿಳಿಯದಿರುವುದೇ ದೇವಾಲಯವನ್ನು ಹಾಳುಮಾಡಿದಂತೆ ಎಂದು ಶ್ರೀರಂಗಪ್ರಿಯ ಸ್ವಾಮಿಗಳು ಹೇಳುತ್ತಿದ್ದರು.  ಭೌತಿಕವಾಗಿ(physical ಆಗಿ)  ದೇವಾಲಯಗಳನ್ನು ರಕ್ಷಣೆಮಾಡುವುದರ ಜೊತೆಗೆ ಅದರ ಮರ್ಮವನ್ನರಿತು ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ನಮ್ಮ ಮನೆಯ ಸಮಸ್ಯೆಯನ್ನು ಇನ್ನೊಬ್ಬರು ಬಂದು ಬಗೆಹರಿಸಬೇಕು ಎಂಬ ನಿರೀಕ್ಷೆ ಅಸಹಜ. ಅದನ್ನು ನಾವೇ ಪರಿಹರಿಸಿಕೊಳ್ಳಬೇಕು. ನಿಜವಾದ 'ಭಾರತ' ರಾಗುವಲ್ಲಿ ನಾವೇ ಹೆಜ್ಜೆಗಳನ್ನಿಡಬೇಕಾಗಿದೆ. ನಮ್ಮ ಮಹರ್ಷಿಗಳ ಮಾರ್ಗದರ್ಶನದ ಬೆಳಕಿನಲ್ಲಿ ನಮ್ಮನ್ನು ನಾವು ಅರಿಯಬೇಕಾಗಿದೆ. ಅದೇ ನಮ್ಮ ಉದ್ಧಾರದ ಮಾರ್ಗವೂ, ಹಾಗೆಯೇ ಲೋಕದ ಉದ್ಧಾರದ ಮಾರ್ಗವೂ ಆಗಿದೆ ಎಂಬುದನ್ನು ಮರೆಯದಿರೋಣ.


ಸೂಚನೆ : 30/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.