Thursday, December 23, 2021

ಬಾಹ್ಯಾಕಾಶ ಮತ್ತು ದಹರಾಕಾಶ(Baahyaakaasha Matthu Daharaakaasha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


ನವಂಬರ್ ೧೧, ೨೦೨೧ ವಿಜ್ಞಾನ ಮತ್ತು ತಂತ್ರಜ್ಞಾನಕ್ಷೇತ್ರದ ಚರಿತ್ರಾರ್ಹದಿನ. ಅಂದು ಭಾರತಮೂಲದ ರಾಜಾಚಾರಿರವರ ನೇತೃತ್ವದ ನಾಲ್ಕು ಸದಸ್ಯರ ಅಂತರಿಕ್ಷಯಾತ್ರಿಗಳು ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಎಂಬ ದ್ವೀಪದ ಉಡಾವಣೆ ಕ್ಷೇತ್ರದಿಂದ ಬಾಹ್ಯಾಕಾಶಕ್ಕೆ ಖಾಸಗಿ ಎನ್ಡೂರನ್ಸ್ ಬಹುತೇಕ ಉಪಯೋಗಿಸಬಲ್ಲ ರಾಕೆಟ್ ಹಾಗೂ ಕ್ಷಿಪಣಿಯ ಮೂಲಕ ಹಾರಿ, ಕೇವಲ ೨೨ ಗಂಟೆಯಲ್ಲಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದ ನೌಕೆಯೊಂದಿಗೆ ತಮ್ಮ ಕ್ಷಿಪಣಿಯನ್ನು ಸೇರಿಸಿ ಆ ನೌಕೆಯೊಳಗೆ ಪ್ರವೇಶಿಸಿದರು. ಎನ್ದ್ಯೂರನ್ಸ್ ಕ್ಷಿಪಣಿಯ ರಾಕೆಟ್ ಈಗಾಗಲೆ ಭೂಮಿಗೆ ಕ್ಷೇಮವಾಗಿ ಹಿಂದಿರುಗಿದೆ.  .    

ಅಮೇರಿಕಾದೇಶದ ಪ್ರಥಮ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನ್ ಎಂಬಾತ ತನ್ನ ಯಾತ್ರೆಯ ಬಗ್ಗೆ "ಈ ಸೃಷ್ಟಿಯ ನೋಟವನ್ನು ನೋಡಿ , ಭಗವಂತನಲ್ಲಿ ನಂಬಿಕೆಯಿಲ್ಲದಿರುವುದು ಅಸಾಧ್ಯ" ಎಂದಿದ್ದಾರೆ. ಈಗ ೭೭ ವರ್ಷಗಳಾಗಿರುವ ಗ್ಲೆನ್ನ್ ಅವರು "ಅಂತರಿಕ್ಷದ ಅನುಭವ ನನಗೆ ದೇವರಲ್ಲಿ ನಂಬಿಕೆಯನ್ನು ಬಲಪಡಿಸಿದೆ" ಎಂದಿದ್ದಾರೆ. ಅನೇಕ ಅಂತರಿಕ್ಷಯಾತ್ರಿಗಳು ಈ ತರಹದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

ಅಂತರಿಕ್ಷ ಯಾತ್ರೆ ಹಾಗೂ ಭಾರತೀಯ ಮಹರ್ಷಿಗಳ ಆಧ್ಯಾತ್ಮಿಕಯಾತ್ರೆ ಹೋಲಿಸುವುದು ಸ್ವಾರಸ್ಯಕರವಾಗಿದೆ. ಬಾಹ್ಯಾಕಾಶದ ನೌಕೆ ಭೂಮಿಯ ಗುರುತ್ವಾಕರ್ಷಣೆಯಿಂದ ದೂರಸರಿಯಬೇಕಾದರೆ, ಅದರ ವೇಗ ಗಂಟೆಗೆ ೪೦ ಸಾವಿರ ಕಿ.ಮಿ. ದಾಟಬೇಕಾಗುತ್ತದೆ. ಮಾನವನು ತ್ರಿಗುಣಗಳೆಂಬ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಟ್ಟು ಸಂಸಾರದಲ್ಲಿದ್ದಾನೆ. ಆತ ದೈವವನ್ನು ಕಂಡ ಹಾಗೂ ತೋರಿಸುವ ಗುರುಗಳ ಉಪದೇಶವೆಂಬ ನೌಕೆಯ ಸಹಾಯದಿಂದ ತ್ರಿಗುಣಾತೀತನಾಗಬೇಕಾಗುತ್ತದೆ. 

ಅಂತರಿಕ್ಷಯಾತ್ರಿಗಳು ಯಾತ್ರೆಯಲ್ಲಿ ನಿರ್ವಾತ, ಉಷ್ಣ ಮತ್ತು ಒತ್ತಡಗಳ ಸಮಸ್ಯೆಯಿಂದ ರಕ್ಷಣೆ ಪಡೆಯಬೇಕಾಗುತ್ತದೆ. ಹಾಗೆಯೇ, ಆಧ್ಯಾತ್ಮಿಕ ಸಾಧನೆಯೆಂಬುದು ಕತ್ತಿಯ ಅಲಗಿನ ಮೇಲೆ ನಡೆಯುವಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಗುರುಗಳ ಅನುಗ್ರಹದಿಂದ ಸಾಧನೆಯ ಪಥದಲ್ಲಿ ರಕ್ಷಣೆ ಪಡೆಯುವುದು ಅತ್ಯಾವಶ್ಯಕವಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯನ್ನು ಅಂತರಿಕ್ಷಯಾತ್ರಿಗಳು ಅನುಭವಿಸುತ್ತಾರೆ. ಹಾಗೆಯೇ ಮುಂದುವರಿದ ಸಾಧಕರು, ಭವಬಂಧನ ಕಳಚಿಕೊಂಡ ಅನುಭವ ಪಡೆಯತ್ತಾರೆ. ಭೌತಿಕ ಅಂತರಿಕ್ಷ ಯಾತ್ರಿಗಳಿಗೆ ಶಾರೀರಿಕ ಬದಲಾವಣೆಗಳಾದಂತೆ, ಸಮಾಧಿ ಅಥವಾ ತುರೀಯ ಸ್ಥಿತಿಯಲ್ಲಿ ಯೋಗಿಗಳ ಶರೀರ ಕಟ್ಟಿಗೆಯಂತಾಗುವುದು, ಇತ್ಯಾದಿ ಅನುಭಗಳು ಉಂಟಾಗುತ್ತವೆ ಎಂಬುದು ಅನುಭವಿಗಳ ಮಾತು.    

ಶ್ರೀರಂಗಗುರುಗಳು ಉಪನಿಷದ್ವಾಣಿಯನ್ನು ಸ್ಮರಿಸಿಕೊಂಡಿರುವುದು ಉಲ್ಲೇಖಾರ್ಹ- "ನಿಮ್ಮ ಹೃದಯ ಒಂದು ಗೇಣಿರಬಹುದು. ಆದರೆ ಅಲ್ಲಿ ಅಂತರ್ಯಾಮಿಯಾಗಿದ್ದರೂ ವಾಸ್ತವವಾಗಿ ನನ್ನ ಪ್ರಭುವು ಭೂರ್ಭುವಸ್ಸುವರ್ಲೋಕಗಳನ್ನು ಮೀರಿ ನಿಂತಿದ್ದಾನೆ. ಅವನು ಅತ್ಯಂತ ಹತ್ತಿರದಲ್ಲಿಯೂ ಇದ್ದಾನೆ, ಅತಿದೂರದಲ್ಲಿಯೂ ಇದ್ದಾನೆ. "  ಉಪನಿಷತ್ತಿನಲ್ಲಿ ತಿಳಿಸಿರುವ ಹಾಗೆ, ಶರೀರವು ಬ್ರಹ್ಮಪುರಿ; ಹೃದಯವೊಂದು ಕಮಲ; ಅದರೊಳಗೊಂದು ಆಕಾಶ; ಆ ಆಕಾಶದೊಳಗಿರುವ ಸಚ್ಚಿದಾನಂದ ಪರವಸ್ತುವನ್ನು ಕಾಣವುದೇ ಜೀವನದ ಪರಮಧ್ಯೇಯ. ಆ ಆಕಾಶವನ್ನೇ ದಹರಾಕಾಶವೆನ್ನುತ್ತಾರೆ. ಬ್ರಹ್ಮಾಂಡವು ಭೌತಿಕ ಕ್ಷೇತ್ರವಾದರೆ, ಅಂತರಂಗದ ಅನುಭವವಾಗುವುದು ಪಿಂಡಾಂಡವೆನ್ನುವ ಕ್ಷೇತ್ರದಲ್ಲಿ. 

ಎಂಡ್ಯೂರನ್ಸ್ ಅಂತರಿಕ್ಷಯಾತ್ರಿಗಳು ಏಪ್ರಿಲ್ ೨೦೨೨ ರಲ್ಲಿ ಭೂಮಿಗೆ ಹಿಂದಿರುಗಿ ಸಹಜ ಜೀವನಕ್ಕೆ ಮರಳಿ ಬರುತ್ತಾರೆ. ಹಾಗೆಯೇ, ಋಷಿಗಳು ತಮ್ಮ ತಪಸ್ಸಿನಿಂದ ಹೊರಬಂದು ತಮ್ಮ ಇಹಜೀವನವನ್ನು "ಜೀವನ್ಮುಕ್ತರಾಗಿ" ನಡೆಸುತ್ತಾರೆ. 

ಗಗನಯಾತ್ರಿಯು ಬಾಹ್ಯಾಕಾಶಕ್ಕೆ ಹಾರುವುದನ್ನು ನೋಡಿ ನಾವು ದಹರಾಕಾಶಕ್ಕೆ ಹಾರುವ ಸ್ಫೂರ್ತಿಯನ್ನು ಪಡೆಯೋಣ. 


ಸೂಚನೆ: 23/12/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.