ಪ್ರಶ್ನೆ- ೪ ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ ?
ಉತ್ತರ- ಸತ್ಯದಲ್ಲಿ
ಈ ಹಿಂದಿನ ಪ್ರಶ್ನೆಯಲ್ಲಿ ಸೂರ್ಯನ ಗತಿಗೆ ಕಾರಣವೇನು? ಎಂಬುದನ್ನು ತಿಳಿದುಕೊಂಡಿದ್ದೇವೆ. ಈಗಿನ ಪ್ರಶ್ನೆ ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ ? ಎಂದು. ಅದಕ್ಕೆ ಧರ್ಮರಾಜನ ಉತ್ತರ 'ಸತ್ಯದಲ್ಲಿ' ಎಂದು. ಸತ್ಯ ಎಂದರೇನು? ಸತ್ಯದಲ್ಲಿ ಪ್ರತಿಷ್ಠಿತನಾಗುವುದು ಎಂದರೇನು?
ಈ ಸೃಷ್ಟಿಯ ವ್ಯಾಪಾರವು ಬಹಳ ವ್ಯವಸ್ಥಿತವಾಗಿದೆ. ಇಲ್ಲಿ ಸೃಷ್ಟಿ, ಸ್ಥಿತಿ, ಲಯ ಎಂಬ ಮೂರು ಹಂತಗಳಿವೆ. ಮತ್ತು ಸೃಷ್ಟಿಯು ಯಾವ ಬಿಂದುವಿನಿಂದ ಆರಂಭವಾಗಿದೆಯೋ ಅಲ್ಲಿಯೇ ಲಯವಾಗುವುದು ಅದರ ಸಹಜ ಪ್ರಕ್ರಿಯೆಯಷ್ಟೇ. ಈ ಸೃಷ್ಟಿಯು ಪರಬ್ರಹ್ಮ ಎಂಬ ಬಿಂದುವಿನಿಂದ ಆರಂಭವಾಗಿದೆ. ಹಾಗಾಗಿ ಅದು ಅದೇ ಪರಬ್ರಹ್ಮನಲ್ಲಿಯೇ ಲಯ ಹೊಂದಬೇಕಾಗಿದೆ. ಇದಕ್ಕೆ ಸೂರ್ಯನೂ ಹೊರತಲ್ಲ. ಈ ಪ್ರಪಂಚವು ನಡೆಯಲು ಸೂರ್ಯನ ಸ್ಥಾನ ಬಲವಾಗಿದೆ. ಅವನಿಲ್ಲದೆ ಯಾವ ಕಾರ್ಯವು ನಡೆಯದು. ಎಂಭತ್ತ ನಾಲ್ಕು ಲಕ್ಷ ಜೀವ ಜಾತಿಗಳು ತಮ್ಮ ಜೀವನವ್ಯಾಪಾರವನ್ನು ನಿರ್ವಹಿಸಲು ಈ ಸೂರ್ಯನೇ ಆಧಾರ. ಅದನ್ನೇ ವೇದವು "ಸೂರ್ಯ ಆತ್ಮಾ ಜಗತಃ ತಸ್ಥುಶಶ್ಚ" ಎಂದು ಹೇಳಿದೆ. ಈ ಹಿಂದಿನ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಿದಂತೆ ಸೂರ್ಯನೆಂದರೆ ನಮಗೆ ಕಾಣುವ ಉದಯಾಸ್ತಗಳಿಂದ ಕೂಡಿದ ಸೂರ್ಯನು ಮಾತ್ರ ಅಲ್ಲ. ಈ ಸೂರ್ಯನಿಗೂ ಯಾರಿಂದ ಬೆಳಗುವ ಶಕ್ತಿ ಬಂದಿದೆಯೋ; ಆ ಸತ್ಯ ಎಂದು ಕರೆಯುವ ಪರಬ್ರಹ್ಮ ಕೂಡ.
ಈ ವಿಶ್ವಕ್ಕೆಲ್ಲಾ ಯಾವ ಮಹಾಶಕ್ತಿಯಿಂದ ಚೈತನ್ಯ ಒದಗಿದೆಯೋ ಅದನ್ನೇ ಮೂಲತಃ ಸತ್ಯ ಎಂದು ಕರೆಯುತ್ತಾರೆ. ಶ್ರೀರಂಗ ಮಹಾಗುರುಗಳು ಸತ್ಯ ಎಂಬ ಪದಕ್ಕೆ ಛಾoದೋಗ್ಯ ಉಪನಿಷತ್ತಿನ ವಿವರಣೆಯನ್ನು ನೀಡಿ ಬಹಳ ಮನಮುಟ್ಟುವಂತೆ ವಿವರಿಸಿದ್ದರು - ಅದರಂತೆ 'ಸತ್ಯ' ಎಂದರೆ ಸ -ತಿ -ಯಂ ಎಂಬ ಮೂರು ಅಕ್ಷರಗಳಿವೆ - ಯಾವುದು ನಿತ್ಯವೂ ಅಮರವೂ ಆಗಿದೆಯೋ ಅದೇ 'ಸತ್'. 'ತಿ ' ಎಂದರೆ ಮರ್ತ್ಯ. ಇವೆರಡನ್ನೂ ಜೋಡಿಸುವ ವಿಷಯವೇ 'ಯ' ಎಂಬುದು. ಈ ಸತ್ಯದಿಂದಲೇ ಪ್ರಪಂಚದ ಆಗುಹೋಗುಗಳು ನಡೆಯುತ್ತಿವೆ. ಆದ್ದರಿಂದ ಸತ್ಯದಲ್ಲೇ ಎಲ್ಲವೂ ಪ್ರತಿಷ್ಠಿತವಾಗಿವೆ ಎಂಬುದನ್ನು "ಸತ್ಯೇ ಸರ್ವಂ ಪ್ರತಿಷ್ಠಿತಂ ತಸ್ಮಾತ್ ಸತ್ಯಂ ಪರಮಂ ವದಂತಿ" ಎಂದು ಮಹಾನಾರಾಯಣೋಪನಿಷತ್ತು ಸಾರುತ್ತಿದೆ. ನಾವು ಸತ್ಯ ಎಂಬುದಕ್ಕೆ ಸತ್ಯವಾಗಿ ಮಾತನಾಡುವುದು ಎಂಬ ಅರ್ಥವನ್ನು ಮಾತ್ರ ಗ್ರಹಿಸುತ್ತೇವೆ. ಆದರೆ ಸತ್ಯಕ್ಕೆ ಇಷ್ಟು ವ್ಯಾಪಕವಾದ ಅರ್ಥ ಅಡಗಿದೆ. ಒಂದು ಬೀಜದಿಂದ ಆರಂಭವಾದ ವೃಕ್ಷವು ಮತ್ತೆ ಬೀಜದಲ್ಲಿ ಕೊನೆಗೊಳ್ಳುವುದು ಹೇಗೆ ನಿಸರ್ಗಸಹಜವೋ, ಅಂತೆಯೇ ಸತ್ಯದಿಂದ ಆರಂಭಗೊಂಡ ಈ ಸಮಸ್ತ ಬ್ರಹ್ಮಾಂಡವೂ ಅಲ್ಲೇ ಕೊನೆಗೊಳ್ಳುವುದೂ ಅಷ್ಟೇ ಸಹಜ. ಈ ಅರ್ಥದಲ್ಲಿ 'ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ?' ಎಂಬ ಪ್ರಶ್ನೆಗೆ ಧರ್ಮರಾಜನ ಉತ್ತರವಿತ್ತು.