Monday, September 26, 2022

ವ್ಯಾಸ ವೀಕ್ಷಿತ-5 ಪುರೋಚನನ ಸಂಚು - ಪಾಂಡವರ ಹೊಂಚು (Vyaasa Vikshita - 5 Purochanana Sanchu - Pandavara Honchu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ವಿದುರ-ಭೀಷ್ಮರು ಹಿಂದಿರುಗಿದರು. ಆಗ ಕುಂತಿಯು ಕೇಳಿದಳು ಯುಧಿಷ್ಠಿರನನ್ನು: "ಜನರ ನಡುವೆ ಏನನ್ನು ಹೇಳದ ಹಾಗೆಯೂ ಏನನ್ನೋ ಹೇಳಿದ, ವಿದುರ; ನೀನೂ ಹೌದೆಂದೆ; ನನಗೇನೂ ತಿಳಿಯಲಿಲ್ಲ.". ಧರ್ಮಬುದ್ಧಿಯುಳ್ಳ ವಿದುರನು ಹೇಳಿದ್ದು ಇದು: "ನಾವು ಹೋಗಿ ಉಳಿದುಕೊಳ್ಳುವ ಮನೆಯಲ್ಲಿ ಅಗ್ನಿಭಯವಿದೆ. ಊರಿನಲ್ಲಿರುವ ದಾರಿಗಳನ್ನೆಲ್ಲ ಚೆನ್ನಾಗಿ ಪರಿಚಯಮಾಡಿಕೊಳ್ಳಿ."


ವಾರಣಾವತದಲ್ಲಿ ಪಾಂಡವರಿಗೆ ಭಾರೀ ಸ್ವಾಗತವೇ. ಅತಿಶಯವಾದ ಆದರೋಪಚಾರಗಳನ್ನೇ ನೀಡಿದ, ಪುರೋಚನ. ದಿನಗಳು ಕಳೆಯಲು, ಅವರಿಗಾಗಿ 'ಶಿವಗೃಹ'ವೊಂದು ಸಿದ್ಧವಾಗಿರುವುದೆಂದು ಹೇಳಿದ ಪುರೋಚನ. ಅದಂತೂ ತದ್ವಿರುದ್ಧವಾದ ಅಮಂಗಳಗೃಹವೇ. 


ಸೂಕ್ಷ್ಮವಾಗಿ ಗಮನಿಸಿದ ಯುಧಿಷ್ಠಿರ ಭೀಮಸೇನನಿಗೆ ಎಚ್ಚರಿಸಿದ."ಇದು  ಬೆಂಕಿಗೆ ಸುಲಭವಾಗಿ ತುತ್ತಾಗುವಂತಹ ಗೃಹ. ಮೇದಸ್ಸಿನ, ತುಪ್ಪ-ಅರಗುಗಳ ಮಿಶ್ರಣದ, ವಾಸನೆಗಳು ಮೂಗಿಗೆ ಬಡಿಯುತ್ತಿವೆ: ನಮ್ಮನ್ನು ಕೊಲ್ಲುವುದರ ಸನ್ನಾಹವಿದು. ನಮ್ಮ ಅಂತರಂಗವನ್ನು ಬಹಿರಂಗಪಡಿಸದೆ, ಅಪ್ರಮತ್ತರಾಗಿ ನಾವಿಲ್ಲಿರುವುದು ಒಳಿತು. ಪುರೋಚನನಿಗೆ ಸುಳಿವು ಸಿಕ್ಕಿತೋ, ಆತ ನಮ್ಮನ್ನು ಬೇರಾವುದೋ ಉಪಾಯದಿಂದ ಸಾಯಿಸುವವನೇ; ಜನಾಕ್ರೋಶಕ್ಕಾಗಲಿ ಅಧರ್ಮಕ್ಕಾಗಲಿ ಬೆದರುವವನಲ್ಲ. ನಾವೀಗ ಇಲ್ಲಿಂದ ಧಾವಿಸಿದ್ದೇ ಆದರೆ ಗೂಢಚರರ ದ್ವಾರಾ ಘಾತಿಸುವವನೇ ಸರಿ: ನಾವು ಅಧಿಕಾರದಲ್ಲಿಲ್ಲ, ಅವನಿದ್ದಾನೆ; ಅವನಿಗೆ ಕೋಶಬಲ-ಸಹಾಯಕರುಗಳುಂಟು, ನಮಗಿಲ್ಲ. ಈ ಪಾಪಿಪುರೋಚನನನ್ನೂ ಪಾಪಿದುರ್ಯೋಧನನನ್ನೂ ನಾವೇ ವಂಚಿಸುತ್ತಾ ಬದುಕಬೇಕಾಗಿದೆ. ಬೇಟೆಯಾಡುತ್ತಾ ನಾವಿಲ್ಲಿಯ ಮಾರ್ಗಗಳನ್ನೆಲ್ಲ ಪರಿಚಯಮಾಡಿಕೊಂಡಿದ್ದರೆ ಇಲ್ಲಿಂದ ಪಲಾಯನವು ಸುಕರ. ಸುರಂಗವೊಂದಕ್ಕೆ ಈಗಲೇ ಆರಂಭವಾಗಲಿ: ಅದರೊಳಗೆ ಗಾಳಿಯು ಹೆಚ್ಚಾಡದು; ಬೆಂಕಿಯೂ ಜ್ವಲಿಸಲಾಗದು. ನಮ್ಮೀ ವ್ಯವಸ್ಥೆಯ ಬಗ್ಗೆ ಪುರೋಚನನಿಗಾಗಲಿ ಪುರಜನರಿಗಾಗಲಿ ಸುಳಿವೇ ಸಿಗಬಾಗದು."


ಅದೇ ಹೊತ್ತಿಗೆ ಸರಿಯಾಗಿ ಒಬ್ಬ ಕುಶಲನಾದ ಖನಕನು - ಎಂದರೆ ಅಗೆಯುವವನು - ಅಲ್ಲಿಗೆ ಬಂದನು. ಏಕಾಂತದಲ್ಲಿ ಪಾಂಡವರನ್ನು ಕಂಡು " ನಿಮ್ಮ ಹಿತವನ್ನು ಸಾಧಿಸಲೆಂದು ವಿದುರನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ; ನಾನು ಮಾಡಬೇಕಾದ್ದನ್ನು ತಿಳಿಸಿ. ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಂದು ತಮ್ಮ ಭವನದ ಬಾಗಿಲಿಗೆ ಬೆಂಕಿಯಿಕ್ಕಲು ಪುರೋಚನನು ಸಂಕಲ್ಪಿಸಿದ್ದಾನೆ. ಮಾತೃಸಮೇತರಾದ ಪಾಂಡವರನ್ನು ಸುಡುವುದು ದುರ್ಮತಿ ದುರ್ಯೋಧನನ ಚಿಂತಿತವಾಗಿದೆ. ನೀವು ಹೊರಡುವಾಗ ವಿದುರನು ಮ್ಲೇಚ್ಛಭಾಷೆಯಲ್ಲಿ ನಿನಗೇನನ್ನೋ ಹೇಳಿದಾಗ ನೀನು "ತತ್ ತಥಾ" (ಅದು ಹಾಗೆಯೇ) ಎಂದು ಹೇಳಿದೆಯಲ್ಲವೆ? ನಿನಗೆ ನನ್ನ ಮೇಲೆ ನಂಬಿಕೆ ಬರಲು ಇಷ್ಟು ಸಾಕಲ್ಲವೇ?" ಎಂದನು. ಆತನನ್ನು ಗುರುತಿಸಿದ ಯುಧಿಷ್ಠಿರನು "ನೀನು ವಿದುರನಿಗೆ ಆಪ್ತ, ನಿಷ್ಠಾವಂತ. ನೀನವನಿಗೆಂತೋ ನಮಗೂ ಅಂತೆಯೇ. ವಿದುರನು ಹಿಂದೆಯೇ ಕಂಡುಕೊಂಡಿದ್ದ ವಿಪತ್ತು ಇದೀಗ ಒದಗಿದೆ. ನಮ್ಮನ್ನೀಗ ಪಾರುಮಾಡು" ಎಂದನು. ದ್ವಾರವುಳ್ಳ ಭಾರೀಬಿಲವೊಂದನ್ನು ಆತನು ನಿರ್ಮಿಸಿದನು; ದ್ವಾರವು ಕಾಣದಂತೆಯೂ ವ್ಯವಸ್ಥೆಮಾಡಿದನು. 


ಪುರೋಚನನು ಸದಾ ಗೃಹದ್ವಾರದಲ್ಲೇ ಇರುತ್ತಿದ್ದನು; ಪಾಂಡವರಾದರೋ ರಾತ್ರಿಹೊತ್ತು ಸಾಯುಧರಾಗಿರುತ್ತಿದ್ದರು, ಹಗಲು ಬೇಟೆಯಲ್ಲಿರುತ್ತಿದ್ದರು. ಪುರೋಚನನನ್ನು ನಂಬದಿದ್ದರೂ ನಂಬಿದವರಂತೆ, ಸಂತೋಷವಿಲ್ಲದಿದ್ದರೂ ಇರುವವರಂತೆ ವಂಚಕಪುರೋಚನನನ್ನೇ ವಂಚಿಸುತ್ತ ಅಲ್ಲಿದ್ದರು.


ಕಥೆಯ ಜೊತೆಗೆ ಇಲ್ಲಿಯ ತತ್ತ್ವವನ್ನು ನಾವು ಗಮನಿಸಬೇಕು. ಯುಧಿಷ್ಠಿರನನ್ನು ಭೋಳೆಮನುಷ್ಯನೆಂದು ಭಾವಿಸುವವರುಂಟು. "ಮೋಸಕ್ಕೆ ಪ್ರತಿಮೋಸ"ವೆಂಬುದನ್ನು ಆತ ಜಾಣತನದಿಂದಲೇ ಮಾಡುತ್ತಿದ್ದಾನೆಯಲ್ಲವೇ?


ಸೂಚನೆ : 26/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.