Monday, September 26, 2022

ಕಾಳಿದಾಸನ ಜೀವನದರ್ಶನ -29 ಅರಿಯದೆ ಎಸಗಿದ ಅಪರಾಧ, ಅದಕ್ಕೆ ಮುನಿಯಿತ್ತ ಪರಿಹಾರ (Kalidasana Jivanadarshana - 29 Ariyade Esagida Aparadha, Adakke Muniyitta Parihara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದಿಲೀಪನು ರಘುವಂಶದ ಅರಸ. ವೈವಸ್ವತಮನುವಿನ ವಂಶದಲ್ಲಿ ಜನಿಸಿದವ. ಶುದ್ಧವಾದ ವಂಶದಲ್ಲಿ ಹುಟ್ಟಿ, "ಶುದ್ಧತರ"ನೆನಿಸಿಕೊಂಡವನವನು. ಕ್ಷಾತ್ರಧರ್ಮವೇ ಮೈತಾಳಿ ಬಂದಿರುವಂತಹವನು. ಆತನ ಆಕಾರವೇನು, ಪ್ರಜ್ಞೆಯೇನು, ಶಾಸ್ತ್ರಜ್ಞಾನವೇನು, ಉದ್ಯಮಗಳೇನು, ಕಾರ್ಯಸಿದ್ಧಿಗಳೇನು! - ಎಲ್ಲವೂ ಒಂದಕ್ಕೊಂದು ತಕ್ಕುದೆನಿಸಿದವೇ. ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡವನಿವನು. ಆತನಿಗೆ ಸರಿಸಾಟಿಯಾಗಿದ್ದವಳು ಆತನ ಪತ್ನಿ, ಸುದಕ್ಷಿಣೆ.

ಎಲ್ಲವೂ ಇದ್ದರೂ ಆತನಿಗೆ ಸಂತಾನಸೌಭಾಗ್ಯವು ಒದಗಿಬಂದಿರಲಿಲ್ಲ. ಸಂತಾನವಿಲ್ಲವೆಂದು ಕೊರಗದವರಾರು? ಆ ನೋವಿನ ಪರಿಹಾರಕ್ಕಾಗಿ ಎಳಸದವರಾರು? ಸಂತಾನಾರ್ಥಿಯು ಸೃಷ್ಟಿಕರ್ತನಾದ ವಿಧಾತೃವಿನ ಪೂಜೆಯನ್ನು ಮೊದಲು ಮಾಡಬೇಕಷ್ಟೆ? ಅದನ್ನು ಮಾಡಿ, ದಿಲೀಪ-ಸುದಕ್ಷಿಣೆಯರು ಹೊರಟರು, ಕುಲಗುರುಗಳಾದ ವಸಿಷ್ಠರ ಆಶ್ರಮದತ್ತ. ಹೊರಡುವ ಮುನ್ನ ರಾಜ್ಯಭಾರದ ಹೊರೆಯನ್ನು ಮಂತ್ರಿಗಳಿಗಿತ್ತರು; ರಾಜ್ಯಭಾರವೆಂಬುದು ಎಷ್ಟಾದರೂ ಜವಾಬ್ದಾರಿಯ ಕೆಲಸವಲ್ಲವೇ?

ಪರಿಮಿತಪರಿವಾರದೊಂದಿಗೆ ಆಶ್ರಮದತ್ತ ಹೊರಟರು: ಪುಣ್ಯಾಶ್ರಮವೆಂದರೆ ಅಲ್ಲೇನು ವೈಭವವನ್ನು ಮೆರೆಸಬೇಕೇ? ಸಂಜೆಯ ಸಮಯಕ್ಕೆ ವಸಿಷ್ಠ-ಅರುಂಧತಿಯರ ದರ್ಶನವಾಯಿತು. ಅವರಂತೂ ಅಗ್ನಿದೇವ-ಸ್ವಾಹಾದೇವಿಗಳಂತೆ ಇದ್ದವರು! ಅವರಿಗೆ ಅಭಿವಾದನವನ್ನು ಮಾಡಿ ಆಶೀರ್ವಾದವನ್ನು ಪಡೆದುಕೊಂಡರು, ಅರಸ-ದಂಪತಿಗಳು. ಆಶ್ರಮದಲ್ಲಿದ್ದ ವಸಿಷ್ಠರೇನೋ ಮುನಿಗಳು ಸರಿಯೇ;  ಆದರೆ ದಿಲೀಪನೂ "ರಾಜ್ಯಾಶ್ರಮ"ದಲ್ಲಿಯ ಮುನಿಯೇ - ಎನ್ನುತ್ತಾನೆ, ಕಾಳಿದಾಸ! ಎಂದರೆ, ದಿಲೀಪನು ತನ್ನ ರಾಜ್ಯವನ್ನು ಆಶ್ರಮವೆಂಬಂತೆಯೇ ಕಂಡಿದ್ದವನು: ಅಂತಹ ಧರ್ಮಮತಿ ಅವನದು. ವಸಿಷ್ಠರೋ ಅಥರ್ವವನ್ನು ಬಲ್ಲವರಲ್ಲಿ ಶ್ರೇಷ್ಠರು; ಎಂದೇ ಎಂತಹ ಸಮಸ್ಯೆಗೂ ಪರಿಹಾರದ ದಿಕ್ಕನ್ನು ತೋರಬಲ್ಲವರು. ಅವರಲ್ಲೀಗ ತನ್ನ ದುಃಖವನ್ನು ನಿವೇದಿಸಿಕೊಂಡನು, ದಿಲೀಪ: "ನನ್ನ ಭೂಮಿಯು ರತ್ನಭರಿತಳಾಗಿರಬಹುದು; ಆದರೆ ನನ್ನ ಗೃಹಿಣಿಯು ಪುತ್ರರತ್ನನಿಗೆ ಜನ್ಮವಿತ್ತಿಲ್ಲ: ಪಿತೃ-ಋಣವನ್ನು ನಾ ತೀರಿಸಲಾಗಿಲ್ಲ. ಬಂಜೆಯಾದ ಆಶ್ರಮವೃಕ್ಷವು ಹೇಗೋ ಹಾಗಾಗಿಬಿಟ್ಟಿದ್ದೇನೆ! ಸಹಿಸಲಾಗದ ಈ ನೋವಿಗೆ ಪರಿಹಾರವನ್ನು ಸೂಚಿಸಿ" - ಎಂದವರನ್ನು ಬೇಡಿಕೊಂಡನು.

ಕ್ಷಣಕಾಲ ಕಣ್ಮುಚ್ಚಿ ವಸಿಷ್ಠರು ಧ್ಯಾನದಿಂದ ತಿಳಿದುಕೊಂಡರು: ಆತನಿಗೆ ಹಾಗಾದದ್ದೇಕೆ? - ಎಂಬುದನ್ನು. ಅದಾದದ್ದು ಹೀಗೆ. ಒಮ್ಮೆ ಇಂದ್ರನಲ್ಲಿಗೆ ದಿಲೀಪನು ಹೋಗಿದ್ದನು. ಅಲ್ಲಿಂದ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಕಲ್ಪವೃಕ್ಷದ ಬುಡದಲ್ಲಿ ಕಾಮಧೇನುವು ನಿಂತಿದ್ದಳು. ಸುರಭಿ ಎಂಬ ಹೆಸರಿನ ಆ ಹಸುವು ಪರಮಪೂಜಾರ್ಹವಾದದ್ದು, ಪ್ರದಕ್ಷಿಣಕ್ರಿಯೆಗೆ ಯೋಗ್ಯವಾದದ್ದು. ಕಲ್ಪವೃಕ್ಷವೆಂತೋ ಕಾಮಧೇನುವೂ ಅಂತೆಯೇ: ಕೇಳಿದ್ದನ್ನು ದಯಪಾಲಿಸುವ ಶಕ್ತಿಯನ್ನು ಹೊಂದಿರುವ ಧೇನು(ಹಸು)ವದು. ಆದರೆ ದಿಲೀಪನು ಆಕೆಗೆ ಸಲ್ಲಿಸಬೇಕಾಗಿದ್ದ ಗೌರವವನ್ನು ಸಲ್ಲಿಸಲಿಲ್ಲ!

ಏಕೆ ಹಾಗಾಯಿತು? ಅವಳ ಬಗ್ಗೆ, ಧರ್ಮದ ಬಗ್ಗೆ, ಗೌರವವಿರಲಿಲ್ಲವೇ ಆತನಿಗೆ? ಅದಲ್ಲ. ಆತನ ಮನಸ್ಸಿನಲ್ಲಿ ದುಗುಡವೊಂದಿತ್ತು: ಧರ್ಮಲೋಪದ ಭಯ; ಅದರಿಂದ ಹಾಗಾಯಿತು. ಯಾವ ಭಯ?: ತನ್ನ ಪತ್ನಿಯು ಋತುಸ್ನಾತಳಾಗಿದ್ದಾಳೆ; ಅವಳೊಂದಿಗೆ ಸಂಗಮವು ಕರ್ತವ್ಯವಾಗಿದೆ. ತ್ವರಿತವಾಗಿ ಹಿಂತಿರುಗಬೇಕಾಗಿದೆ. ಈ ಆತಂಕದ ಧಾವಂತದಲ್ಲಿ ನಂದಿನಿಯನ್ನು ಗಮನಿಸಲಿಲ್ಲ. "ನನ್ನನ್ನು ಹೀಗೆ ತಿರಸ್ಕರಿಸಿ ಹೋದೆಯಲ್ಲಾ, ನಿನಗೆ ಸಂತತಿಯಾಗದಿರಲಿ! " - ಎಂಬುದಾಗಿ ಶಾಪವು ಹೊಮ್ಮಿತು, ಸುರಭಿಯಿಂದ: ಸಂತಾನಕ್ಕಾಗಿಯಾದದ್ದು ಆತನ ಧಾವಂತ; ಎಂದೇ ಅದಕ್ಕೇ ಅಡ್ಡಿ! ವಿಧಿಯಾಟವೆಂದರೆ, ಆ ಶಾಪವು ಸಹ ಅವನಿಗೆ ಕೇಳದಾಯಿತು! ಸಾರಥಿಗೂ! ಏಕೆ? ಗಂಗಾಪ್ರವಾಹದೆಡೆಗೆ ಬಂದಿದ್ದ ದಿಗ್ಗಜಗಳ ಘೀಳಿಡುವಿಕೆಯ ಸದ್ದೇನು ಕಡಿಮೆಯೇ? ಅರಿವೇ ಆಗದೆ ತಪ್ಪೇ ನಡೆದುಹೋಯಿತು!

ವಸಿಷ್ಠರಿದನ್ನು ಕಂಡುಕೊಂಡರು. ಸುರಭಿಗಾದ ತಿರಸ್ಕಾರ ಈತನ ಶ್ರೇಯಸ್ಸಿಗೆ ಪ್ರತಿಬಂಧಕ. "ಸುರಭಿಯ ಮಗಳಾದ ನಂದಿನಿಯನ್ನೇ ಆರಾಧಿಸು, ರಾಜನೇ! ಅವಳೂ ಕಾಮದುಘೆಯೇ: ಕೇಳಿದ್ದನ್ನೆಲ್ಲ ಕೊಡುವವಳು" - ಎಂದು ವಸಿಷ್ಠರು ಆತನಿಗೆ ಹೇಳುವರು: ರಾಜನಿಗೆ ತನ್ನ ಅಪರಾಧದ ಅರಿವು ಇದೀಗಷ್ಟೆ ಆಯಿತು; ಮಹಾಭಾಗ್ಯದಿಂದಾಗಿ, ಪರಿಹಾರವೂ ಜೊತೆಗೇ ಬೋಧಿತವಾಯಿತು!

ಅಷ್ಟರಲ್ಲೇ ಶುಭಸೂಚನೆಯೂ ಆಯಿತು: ಅಲ್ಲಿಗಿದೋ ನಂದಿನಿಯೇ ಆಗಮಿಸಿದಳು! ಮಾರನೆಯ ದಿನದ ಪ್ರಭಾತದಿಂದಲೇ ಆರಂಭವಾಯಿತು, ಅವಳ ಸೇವೆ. ಗೋಮಾತೆಯ ಸೇವೆಯೆಂಬುದನ್ನು ಪ್ರೀತ್ಯಾದರಗಳಿಂದ ಮಾಡುವುದು ಹೇಗೆ? - ಎಂಬುದನ್ನು ಕಾಳಿದಾಸನ ರಘುವಂಶದಿಂದಲೇ ತಿಳಿಯತಕ್ಕದ್ದು!

ಅನುಯಾಯಿಗಳಿದ್ದರೂ ಅವರನ್ನು ಹಿಂದಿರುಗಿಸಿ, ರಾಜನೇ ಸೇವೆಯನ್ನು ಕೈಗೊಂಡನು: ಗೋಗ್ರಾಸ ಕೊಡುವುದು, ತುರಿಯನ್ನು ಹೋಗಲಾಡಿಸುವುದು ಮುಂತಾದುವೆಲ್ಲ ನಡೆದವು; ನೆರಳಿನಂತೆ ಅದನ್ನಾತ ಹಿಂಬಾಲಿಸುವನು; ಸಂಜೆಯ ಹೊತ್ತಿಗೆ ಹಿಂದಿರುಗಿಬರುವ ಧೇನುವಿಗೆ ಸುದಕ್ಷಿಣೆಯೇ ಪೂಜೆ ಸಲ್ಲಿಸುವಳು. ಹೀಗೆ ಇಪ್ಪತ್ತೊಂದು ದಿನಗಳು ಕಳೆದವು.

ರಾಜನ ಭಾವವನ್ನು ಪರೀಕ್ಷಿಸಲೆಂದು ಹಿಮಾಲಯದ ಗುಹೆಯೊಂದನ್ನು ನಂದಿನಿಯೊಮ್ಮೆ ಪ್ರವೇಶಿಸಿತು. ಹಿಮಾಲಯದ ಸೊಬಗಿನತ್ತ ರಾಜನ ದೃಷ್ಟಿ ಹರಿಯುತ್ತಿದ್ದಂತೆಯೇ ಥಟ್ಟನೆ ಸಿಂಹವೊಂದು ಬಂದು ಧೇನುವನ್ನು ಆಕ್ರಮಿಸಿತು! ನಂದಿನಿಯ ಆರ್ತಧ್ವನಿ ಕೇಳಿಸಿತು! ಒಡನೆಯೇ ಬಾಣಪ್ರಯೋಗಕ್ಕೆಂದು ಬತ್ತಳಿಕೆಗೆ ರಾಜನು ಕೈಹಾಕಿದನು: ಆದರಿದೋ, ಅಲ್ಲೇ ಕೈ ಅಂಟಿಕೊಂಡಿಬಿಟ್ಟಿತು! ಕೋಪಾಶ್ಚರ್ಯಗಳು ಆತನಲ್ಲುಕ್ಕಿದವು. ಸಿಂಹವಾಗ ಹೇಳಿತು : "ಅಯ್ಯಾ, ನಾನೊಬ್ಬ ಶಿವಸೇವಕ, ಈ ದೇವದಾರುವನ್ನು ಕಾಯಲು ನೇಮಿತನಾಗಿದ್ದೇನೆ. ಹಸಿದ ನನಗೆ ಆಹಾರವಾಗಿ ಬಂದಿದೆ ಈ ಹಸು. ನೀನಿನ್ನು ಹಿಂದಿರುಗಬಹುದು." ಅದಕ್ಕೆ ರಾಜನು, "ಅಯ್ಯಾ, ನನ್ನನ್ನೇ ತಿನ್ನು, ಗುರುವಿಗಾಗಿ ಈ ಧೇನುವನ್ನು ಬಿಡು" - ಎಂದು ಬೇಡಿದ. ಅದಕ್ಕೆ ಸಿಂಹವೆಂದಿತು: "ಮೂಢ, ನಿನ್ನಲ್ಲಿ ಗೋಸಂಪತ್ತಿಗೇನು ಕಡಿಮೆಯೇ? ಗುರುವಿಗೆ ಮತ್ತೊಂದಿತ್ತರಾಗದೇ?"

ಆದರೆ ಋಷಿಧೇನುವನ್ನುಳಿಸಲು ತನ್ನ ಶರೀರವನ್ನೇ ಸಮರ್ಪಿಸಿ ಬಾಗಿದ, ದಿಲೀಪ: ಮರುಕ್ಷಣದಲ್ಲಿ ಪುಷ್ಪವೃಷ್ಟಿಯಾಯಿತು! ತಲೆಯೆತ್ತಿ ನೋಡಿದರಿದೋ ಸಿಂಹವೇ ಇಲ್ಲ! "ನಾನು ನಿನ್ನನ್ನು ಪರೀಕ್ಷಿಸಿದೆ, ಅಷ್ಟೆ. ನಿನಗೇನು ವರ ಬೇಕು? ಕೇಳು" - ಎಂದಿತು ನಂದಿನಿ! ಅನುಗ್ರಹವಾಯಿತು: ಮುಂದೆ ಸತ್ಸಂತಾನವಾಗಿ, ರಘುವು ಜನಿಸಿದ: ವಂಶವೇ ಬೆಳಗಿತು!

ಇಲ್ಲಿ ಗಮನಿಸಬೇಕಾದುದಿದು: ಅರಿಯದೆ ಮಾಡುವ ತಪ್ಪಿಗೂ ಶಿಕ್ಷೆಯುಂಟು; ಅದಕ್ಕೂ ಪಶ್ಚಾತ್ತಾಪ-ಪ್ರಾಯಶ್ಚಿತ್ತಗಳುಂಟೇ ಸರಿ!

ಸೂಚನೆ : 24/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.