Thursday, September 8, 2022

ಚಿತ್ರಕೇತುವಿನ ಆದರ್ಶ (Citraketuvina Adarsha)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಮದ್ಭಾಗವತದಲ್ಲಿನ ಒಂದು ಘಟನೆ. 'ಶೂರಸೇನ' ರಾಜ್ಯವನ್ನು ಚಿತ್ರಕೇತುವೆಂಬ ಚಕ್ರವರ್ತಿಯು ಆಳುತ್ತಿದ್ದನು. ರಾಜ್ಯದಲ್ಲಿ ಸಂಪತ್ಸಮೃದ್ಧಿಯಿದ್ದು,  ಪ್ರಜೆಗಳೆಲ್ಲರೂ ಸಹ ಸುಖದಿಂದ ನಲಿಯುತ್ತಿದ್ದರು. ಆದರೆ ಚಕ್ರವರ್ತಿಗೆ ಅನೇಕ ಪತ್ನಿಯರಿದ್ದರೂ ಸಂತಾನಭಾಗ್ಯವಿಲ್ಲದ ಕೊರತೆಯು ಆತನನ್ನು ಸದಾ ಕಾಡುತ್ತಿತ್ತು. 


ಒಮ್ಮೆ ಮಹರ್ಷಿ ಆಂಗೀರಸರು ಶೂರಸೇನರಾಜ್ಯಕ್ಕೆ ಬಂದರು. ಚಿತ್ರಕೇತು ಮಹಾರಾಜನು ಸಕಲಮರ್ಯಾದೆಗಳಿಂದ ಅವರನ್ನು ಸ್ವಾಗತಿಸಿ, ಸತ್ಕರಿಸಿದನು. "ಸಕಲೈಶ್ವರ್ಯಗಳು-ಸುಖಭೋಗಗಳಿದ್ದರೂ  ಸಂತಾನವಿಲ್ಲದೆ ನನಗೆ ನೆಮ್ಮದಿಯಿಲ್ಲ. ಸಂತಾನಪ್ರಾಪ್ತಿಗೆ ದಾರಿ ತೋರಿಸಬೇಕು" ಎಂದು ಬೇಡಿಕೊಳ್ಳುತ್ತಾನೆ. ಆಂಗೀರಸರು ಪುತ್ರಕಾಮೇಷ್ಟಿಯಾಗವನ್ನು ಮಾಡಲು ಆದೇಶವನ್ನು ನೀಡಿ, ತಾವೇ ಯಾಗವನ್ನು ಮಾಡಿಸಿ ಹಿರಿಯ ರಾಣಿಯಾದ ಕೃತದ್ಯುತಿಗೆ ಯಜ್ಞಶೇಷವನ್ನು ಕೊಟ್ಟರು. "ಪುತ್ರಸಂತಾನದಿಂದ ನಿನಗೆ ಸಂತೋಷ-ದುಃಖಗಳೆರಡೂ ಆಗುವ ಸಂಭವವಿದೆ" ಎಂದು ತಿಳಿಸಿ ಋಷಿಗಳು ಹೊರಟುಬಂದರು. ರಾಣಿಯು ಸಕಾಲದಲ್ಲಿ ಸುಂದರನಾದ  ಗಂಡುಮಗುವನ್ನು ಹಡೆದಳು.   ಮಹಾರಾಜ ಚಿತ್ರಕೇತುವು ಬಹಳ ಸಂತೋಷದಿಂದ  ಚಿನ್ನ ಬೆಳ್ಳಿ-ವಸ್ತು-ವಾಹನಗಳನ್ನು  ದಾನಮಾಡಿದನು. 


ಆದರೆ  ರಾಜನಿಗೆ ಆ ಮಗು ಮತ್ತು ಮಹಾರಾಣಿಯಲ್ಲೇ ಅನುರಾಗವಿರುವುದನ್ನು ಕಂಡ  ಇತರ ರಾಣಿಯರಿಗೆ ಮತ್ಸರ ಉಂಟಾಯಿತು. ವಿಷ ಬೆರೆಸಿದ ಹಾಲನ್ನು  ರಾಜಕುಮಾರನಿಗೆ ಕುಡಿಸಿ ಆತನ ಕಥೆಯನ್ನು ಮುಗಿಸಿದರು. ಚಿತ್ರಕೇತುವಿನ ದುಃಖವು ಮುಗಿಲು ಮುಟ್ಟಿತು. ವಿಧಿಯನ್ನು ಶಪಿಸತೊಡಗಿದನು. 


ಆಗ ಅಲ್ಲಿಗೆ ಆಂಗೀರಸರು ನಾರದರೊಂದಿಗೆ ಬರುತ್ತಾರೆ. ಮಹಾರಾಜನು ಮಗುವನ್ನು ಬದುಕಿಸಲು ಬೇಡುತ್ತಾನೆ. ಅಂಗೀರಸರು ಪುತ್ರನಿಂದ ದು:ಖವೊದಗುವ ಸಂಭವವಿದೆಯೆಂದು   ಹಿಂದೆಯೇ ತಿಳಿಸಿದುದನ್ನು ನೆನೆಪಿಸಿದರು. ರಾಜನು ನಾರದರ ಪಾದಗಳನ್ನು ಹಿಡಿದು ಮಗನನ್ನು ಉಳಿಸಿರೆಂದು ಬೇಡಿಕೊಳ್ಳುತ್ತಾನೆ. ನಾರದರು "ನಿನಗೇನೋ ಮಗು ಬೇಕು, ನಾನೂ ಮಗುವನ್ನು ಜೀವಿತಗೊಳಿಸಬಲ್ಲೆ. ಆದರೆ ಆ ಜೀವವು ಮರಳಿಬರಲು ಇಚ್ಚಿಸಬೇಕಲ್ಲವೇ?   ಕಾಲಕ್ಕೊಳಪಟ್ಟ ದೇಹವು ಎಂದಿಗೂ ಶಾಶ್ವತವಲ್ಲ! ಆದ್ದರಿಂದ ವ್ಯರ್ಥವಾಗಿ ದುಃಖಿಸಬೇಡ" ಎಂದರು. ಚಿತ್ರಕೇತುವು ಪಟ್ಟುಹಿಡಿದುದರಿಂದ ನಾರದರು ಮಗುವನ್ನು ಬದುಕಿಸಿದರು. ನಿದ್ರೆಯಿಂದ ಎದ್ದಂತೆ ಬಂದ ರಾಜಕುಮಾರನು "ನನಗೇಕೆ ಮರುಜೀವವನ್ನು ಕೊಟ್ಟಿರಿ?" ಎಂದು ಪ್ರಶ್ನಿಸಿದ. ಅದಕ್ಕೆ ನಾರದರು "ನಿನಗೆ ಆಯುಷ್ಯವು ಮುಗಿದಿಲ್ಲ. ಅಪಮೃತ್ಯುವಾಗಿದೆ" ಎಂದರು. ಕುಮಾರನು "ನಾರದಮಹರ್ಷಿಗಳೇ, ನಿಮಗೆ ತಿಳಿಯದ್ದೇನಿದೆ? ತಾಯಿ-ತಂದೆ-ಬಂಧುಗಳೆಲ್ಲಾ ಶರೀರಕ್ಕೆ ಆಂಟಿಕೊಂಡಿರುವವರೆಗೆ ಮಾತ್ರ. ಭಗವಂತನ ನಾಮಸ್ಮರಣೆಯೊಂದೇ ಶಾಶ್ವತಸುಖವನ್ನು ನೀಡುವುದು" ಎಂದು ಹೇಳಿ ಅವನು ದೇಹತ್ಯಾಗವನ್ನು ಮಾಡಿದನು. 


ಇದನ್ನು ಕಂಡ ಮಹಾರಾಜನು ಮನಃಪರಿವರ್ತನೆಗೊಂಡು ಮೋಕ್ಷಕ್ಕಾಗಿ ಹಂಬಲಿಸತೊಡಗಿದನು; ನಾರದರಿಂದ ಮಹಾವಿಷ್ಣುವಿನ ಸ್ತುತಿರೂಪ ಮಂತ್ರೋಪದೇಶವನ್ನು ಪಡೆದನು. ಏಳು ದಿನಗಳ ಕಾಲ ಹಗಲು-ರಾತ್ರಿಗಳು ಆಹಾರವಿಲ್ಲದೇ ಕೇವಲ ನೀರನ್ನು ಮಾತ್ರ ಸೇವಿಸಿ ಕಠಿಣವಾದ ತಪಸ್ಸನ್ನು ಮಾಡಿದನು. ಅವನ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷವನ್ನು ಪಡೆದನು ಎಂದು ಶ್ರೀಮದ್ಭಾಗವತವು ವರ್ಣಿಸುತ್ತದೆ. 


ಈ ಘಟನೆಯು ಇಂದಿಗೂ ನಮ್ಮ ಜೀವನಕ್ಕೊಂದು  ಪಾಠವಾಗಿದೆ. ಪುರುಷಪ್ರಯತ್ನವನ್ನು ಮಾಡುವಾಗ ಲೌಕಿಕಸುಖಕ್ಕೆ ಮಾತ್ರ ಅಂಟಿಕೊಳ್ಳದೇ ವಿವೇಕದಿಂದ ವರ್ತಿಸಬೇಕು; ಆತ್ಮಸುಖದ ಕಡೆಗೂ  ಲಕ್ಶ್ಯವಿರಬೇಕೆಂಬುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ, ಈ ಘಟನೆ. ಆಹಾರಕ್ಕಾಗಿ ಬೆಸ್ತನ ತೆಕ್ಕೆಯಲ್ಲಿ ಸಿಕ್ಕಿ ಸಾಯುವ ಮೀನಿನಂತೆ  ಮಾಯೆಗೆ ಸಿಲುಕಿ, ಇಂದ್ರಿಯ ಸುಖವನ್ನು ಮಾತ್ರವೇ ಅನುಭವಿಸಿದರೆ ಮೃತ್ಯುವಿನ ತೆಕ್ಕೆಗೆ ಬಿದ್ದು ಜನನ ಮರಣಗಳ ಚಕ್ರದಲ್ಲೇ ಸುತ್ತಬೇಕಾಗುತ್ತದೆ. ಜ್ಞಾನಿಗಳ ಉಪದೇಶದಂತೆ ಕೈಗೊಳ್ಳುವ  ತಪಸ್ಯೆಯು ಪಾಪಗಳನ್ನು ಕಳೆದು ನಮ್ಮ ಉದ್ಧಾರಕ್ಕೆ ಕಾರಣವಾಗುವುದು.


ಲೌಕಿಕಸುಖಗಳಿಂದ ದೂರವಾಗಬೇಕೆಂಬುದು ಭಾರತೀಯಮಹರ್ಷಿಗಳ ಅಭಿಪ್ರಾಯವಲ್ಲ. ಯೋಗ-ಭೋಗಗಳೆರಡಕ್ಕೂ ಆಯತನ(ಮನೆ)ವಾಗಿರುವ ಈ  ಶರೀರದಲ್ಲಿ  ಯೋಗಕ್ಕೆ ತೊಡಕಾಗದೆ, ಅದಕ್ಕೆ ಪೋಷಕವಾಗುವ ರೀತಿಯಲ್ಲಿ ಭೋಗವನ್ನು ಅನುಭವಿಸಲು ಎಲ್ಲರಿಗೂ ಹಕ್ಕುಂಟು. 


ಚಿತ್ರಕೇತುವಿನಂತೆಯೇ, ಧ್ರುವ-ಪ್ರಹ್ಲಾದನಂತಹ ಭಾಗವತೋತ್ತಮರೂ  ನಾರದರಿಂದಲೇ  ಉಪದೇಶವನ್ನು  ಪಡೆದರು. ಯಾರು ಈ ನಾರದರು?  'ನಾರಂ ಆತ್ಮವಿಷಯಕಂ ಜ್ಞಾನಂ ದದಾತಿ ಇತಿ ನಾರದಃ' ಅಂದರೆ (ಆತ್ಮ) ಪರಮಾತ್ಮನ ವಿಷಯದ ಜ್ಞಾನವನ್ನು ಕೊಡುವಂತಹವನೇ "ನಾರದ". 


ಜ್ಞಾನಿಗಳು ಜ್ಞಾನದೀಪವನ್ನು ನಾನಾ ವಿಧವಾಗಿ ಬೆಳಗಿಸಿಕೊಂಡು ಬಂದಿರುತ್ತಾರೆ. ಅದನ್ನು ಉಜ್ವಲವಾಗಿರಿಸಲು ಅನೇಕ ಸಾಧನಗಳುಂಟು. ಅವುಗಳಲ್ಲಿ ಜ್ಞಾನಿಗಳ ಸಂಗ-ಸೇವೆಗಳು  ಅತ್ಯಂತ ಸುಲಭವಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ಉಪಾಯ. ಸತ್ಸಂಗದ ಮೂಲಕ ಉದ್ಧಾರವಾದ ಅನೇಕರ ಕಥೆಗಳನ್ನು ಪುರಾಣ-ಇತಿಹಾಸಗಳಲ್ಲಿ ಕಾಣಬಹುದಾಗಿದೆ. ಗುರುಭಕ್ತಿ-ಗುರುಸೇವೆಗಳು ನಮ್ಮ ಸಂಸ್ಕೃತಿಯೊಡನೆ ಹೆಣೆದುಕೊಂಡಿರುವ ಜ್ಞಾನಸಂಪ್ರದಾಯದ ಮುಖ್ಯರೂಪಗಳಾಗಿವೆ ಎಂಬ ಶ್ರೀರಂಗಮಹಾಗುರುಗಳ ಅಭಿಪ್ರಾಯವು ಸ್ಮರಣೀಯವಾಗಿದೆ.


ನಾವು ಚಿತ್ರಕೇತುವಿನಂತೆ ವಿವೇಕದಿಂದ ಮುಮುಕ್ಷುಗಳಾಗಿ, ಗುರುಕೃಪೆಯೊಂದಿಗೆ ಸಾಧನೆಯನ್ನು ಮಾಡುವವರಾಗೋಣ.


ಸೂಚನೆ: 8/09/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.