ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೌರವ-ಪಾಂಡವರ ವಿದ್ಯಾಭ್ಯಾಸವು ಮುಗಿಯಿತು. ಭೀಮನ ಬಲ, ಅರ್ಜುನನ ವಿದ್ಯೆಗಳಿಂದಾಗಿ ದುರ್ಯೋಧನನ ಸಂಕಟವುಕ್ಕಿತು.
ಚೌಕಗಳಲ್ಲಿಯೂ ಸಭೆಗಳಲ್ಲೂ ಜನಗಳು ಹೀಗನ್ನುತ್ತಿದ್ದರು: "ಧೃತರಾಷ್ಟ್ರ ಕುರುಡನಾದ್ದರಿಂದ ರಾಜನಾಗಲಾರ. ಭೀಷ್ಮರೋ ಹಿಂದೆಯೇ ಅದನ್ನು ತೊರೆದವರು. ಯುಧಿಷ್ಠಿರನು ತರುಣನಾದರೂ ನಡತೆಯಲ್ಲಿ ಹಿರಿಯ. ಆತನಿಗೇ ಅಭಿಷೇಕವಾಗಲಿ. ಅವನಲ್ಲವೇ ಭೀಷ್ಮ-ಧೃತರಾಷ್ಟ್ರ-ಕೌರವರನ್ನು ಹೊಂದಿಸಿಕೊಂಡು ಹೋಗುವವ?"
ಈ ಮಾತುಗಳು ದುರ್ಯೋಧನನ ಕಿವಿಗೆ ಬೀಳದಿರಲಿಲ್ಲ. ಸಹನೆಯಿಲ್ಲದ ಆತ ಅಸೂಯೆಯಿಂದ ಬೆಂದು (ಈರ್ಷ್ಯಯಾ ಚಾಪಿ ಸಂತಪ್ತಃ) ಏಕಾಂತದಲ್ಲಿದ್ದ ಧೃತರಾಷ್ಟ್ರನ ಬಳಿ ಹೋಗಿ "ಕೇಳಿದೆಯಾ ತಂದೆ, ಪುರಜನರ ಅನಿಷ್ಟನುಡಿಗಳನ್ನು? ನೀನೂ ಬೇಡವಂತೆ, ಭೀಷ್ಮನೂ ಬೇಡವಂತೆ, ಯುಧಿಷ್ಠಿರನೇ ರಾಜನಾಗಬೇಕಂತೆ! ಭೀಷ್ಮನಿಗೋ ರಾಜ್ಯಭೋಗವೇ ಬೇಕಿಲ್ಲ. ಜನರಿಗೆ ಬೇಕಾದದ್ದು ನಮಗೆ ಪೀಡೆಯುಂಟುಮಾಡುವುದಷ್ಟೆ. ಕುರುಡನಾದದ್ದರಿಂದ ನಿನಗೆ ಸಿಕ್ಕ ರಾಜ್ಯವೂ ದಕ್ಕಲಿಲ್ಲ. ಇನ್ನಿದು ಈಗ ಪಾಂಡವನಿಗೆ, ಮುಂದೆ ಆತನ ಮಕ್ಕಳಿಗೆ, ಮೊಮ್ಮಕ್ಕಳಿಗೆ - ಎಂದು ಮುಂದುವರೆಯುವುದು. ರಾಜವಂಶದ ಕೊಂಡಿಯೇ ನಮ್ಮ ಪಾಲಿಗೆ ಕಳಚಿಹೋಗುವುದು. ಶತ್ರುಗಳಿಕ್ಕುವ ಪಿಂಡವನ್ನು ತಿಂದುಕೊಂಡಿರುವಂತಾಗುತ್ತದೆ. (ಪರಪಿಂಡೋಪಜೀವಿನಃ). ಅದು ಹಾಗಾಗದಂತಹ ನೀತಿಯೊಂದನ್ನು ಮಾಡು." ಎಂದನು.
ಇದಕ್ಕೆ ಸ್ವಲ್ಪ ಮುಂಚೆಯೇ ಕಣಿಕನೆಂಬ ಮಂತ್ರಿ ಧೃತರಾಷ್ಟ್ರನ ತಲೆಕೆಡಿಸಿದ್ದ: "ಯೇನ ಕೇನ ಪ್ರಕಾರೇಣ ಶತ್ರುಧ್ವಂಸ ಮಾಡಬೇಕು." ದುರ್ಯೋಧನನೆಂದ: "ಉಪಾಯ ಮಾಡಿ ಪಾಂಡವರನ್ನು ವಾರಣಾವತಕ್ಕೆ ಕಳುಹಿಸು".
ಇಬ್ಬಂದಿಯ ಮನಸ್ಸು ಧೃತರಾಷ್ಟ್ರನದು: "ಅಯ್ಯೋ ಪಾಂಡುವು ಧರ್ಮಪರಾಯಣನಾಗಿದ್ದ! ಎಲ್ಲರಲ್ಲಿಯೂ ಆತನಿಗೆ ಪ್ರೀತಿಯಿತ್ತು; ನನ್ನ ವಿಷಯದಲ್ಲಿ ಅತಿಶಯವಾಗಿತ್ತು! ಅಪ್ಪನಂತೆ ಈ ಮಗನೂ: ಗುಣಶಾಲಿ, ಜನಪ್ರಿಯ – ಆತನಿಗೆ ಅಪಕಾರಮಾಡುವುದೇ? ಜನ ನಮ್ಮನ್ನು ಬಂಧುಸಮೇತರನ್ನಾಗಿ ಕೊಂದಾರು!"
ದುರ್ಯೋಧನನೆಂದ: "ನನಗಿದು ಗೊತ್ತು. ಪ್ರಧಾನರಿಗೆ ವಿತ್ತವಿತ್ತು "ಸರಿಮಾಡಿ"ಕೊಂಡಿದ್ದೇನೆ. ಮಂತ್ರಿಗಳೂ ನಮ್ಮ ಪರ. ಪಾಂಡವರನ್ನು ಊರಿಂದಾಚೆಗೆ ಕಳುಹಿಸು. ರಾಜ್ಯದಲ್ಲಿ ನಾವಿಲ್ಲಿ ಗಟ್ಟಿಯಾಗಿ ಊರಿದ ಮೇಲೆ ಕುಂತಿಯು ಮಕ್ಕಳೊಂದಿಗೆ ಬರಲಿ".
ಆಗ ಧೃತರಾಷ್ಟ್ರನೆಂದ: "ದುರ್ಯೋಧನ, ನನ್ನ ಮನಸ್ಸಿನಲ್ಲಿಯೂ ಇದೇ ಆಲೋಚನೆಯೇ ಮತ್ತೆ ಮತ್ತೆ ಬರುತ್ತಿದೆ (ಹೃದಿ ಸಂಪರಿವರ್ತತೇ). ಇದು ಪಾಪಕಾರ್ಯ: ಅದಕ್ಕೇ ಬಾಯಿಬಿಡಲಾರೆ. ಪಾಂಡವರನ್ನಾಚೆ ಕಳುಹುವುದನ್ನು ಭೀಷ್ಮ-ದ್ರೋಣ-ವಿದುರ-ಕೃಪರಾರೂ ಒಪ್ಪರು. ನಾವೇನಾದರೂ ಇಲ್ಲಿ ವಿಷಮಮಾಡಿದರೆ ಉಳಿಯುವೆವೆಂದುಕೊಂಡೆಯಾ?"
ದುರ್ಯೋಧನ ಬಿಡುವನೇ? "ಭೀಷ್ಮನು ಯಾವಾಗಲೂ ಮಧ್ಯಸ್ಥ. ಅಶ್ವತ್ಥಾಮ ನನ್ನ ಕಡೆ; ಮಗನೆತ್ತಲೋ ಅಪ್ಪನತ್ತಲೇ. ಮಿಕ್ಕವರ ಚಿಂತೆ ಬೇಡ. ಹೇಗಾದರೂ ಮಾಡಿ ಪಾಂಡವರನ್ನು ತಾಯಿಯೊಂದಿಗೆ ವಾರಣಾವತಕ್ಕೆ ಕಳುಹಿಸು. ನನಗೀ ಚಿಂತೆ ನಿದ್ದೆ ಕೆಡಿಸಿದೆ. ಹೃದಯದಲ್ಲಿ ಶಲ್ಯದಂತಿದೆ."
ಇದೋ ಧೃತರಾಷ್ಟ್ರನ ದೌಷ್ಟ್ಯ: "ಇದು ಪಾಪವೆಂದು ಗೊತ್ತು. ಭೀಷ್ಮಾದಿಗಳೂ ಜನರೂ ನಮ್ಮನ್ನುಳಿಸುವರೇ?" ಎನ್ನುತ್ತಾನೆ!
ದುರ್ಯೋಧನನ ದುಷ್ಟತನದ ಮೂಲ ಧೃತರಾಷ್ಟ್ರ! ಧೃತರಾಷ್ಟ್ರನ ದುಷ್ಟತನದ ಮೂಲವಿದು: "ತಪ್ಪೆಂದು ಗೊತ್ತು. ಆದರೂ ಮಾಡುವುದಕ್ಕೆ ಸಿದ್ಧ. ಆದರೆ ಆಮೇಲೆ ಸಾವಿಗೀಡಾಗಬೇಕಾದರೆ!" – ಎಂಬ ಚಿಂತನೆ. "ತಪ್ಪಾದದ್ದನ್ನು ಮಾಡುವುದು ಬೇಡ" – ಎಂದಲ್ಲ. "ಸಿಕ್ಕಿ ಹಾಕಿಕೊಂಡರೋ" – ಎಂಬುದು. "ನ ಪಾಪಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ"!