Monday, September 19, 2022

ವ್ಯಾಸ ವೀಕ್ಷಿತ -4 ವಿದುರೋಪದೇಶ (Vyaasa Vikshita - 4 Viduropadesha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಸಾಧಾರಣನಾಗಿ ಕಂಡರೂ ಅಸಾಧಾರಣವಾದ ಲೌಕಿಕಜ್ಞಾನವನ್ನೂ ಅಲೌಕಿಕಜ್ಞಾನವನ್ನೂ ಪಡೆದಿದ್ದ ವ್ಯಕ್ತಿಯೆಂದರೆ ವಿದುರನೇ ಸರಿ.


ಧೃತರಾಷ್ಟ್ರನ ಹೊಂಚೂ ದುರ್ಯೋಧನನ ಸಂಚೂ ಮೇಳೈಸಿದವು: ಪಾಂಡವರನ್ನು ಕರೆದು ಧೃತರಾಷ್ಟ್ರ ಹೇಳಿದ: "ವಾರಣಾವತನಗರವು ಸೊಗಸಾಗಿದೆಯಂತೆ.  ಅಲ್ಲಿಗೆ ಹೋಗಿ ವಿಹರಿಸಿ ಬನ್ನಿ." ಯುಧಿಷ್ಠಿರನೊಪ್ಪಿದ. ದುರಾತ್ಮ ದುರ್ಯೋಧನ ಒಡನೆಯೇ ಪುರೋಚನನನ್ನು ಏಕಾಂತಕ್ಕೆ ಕರೆಸಿ ಆತ್ಮೀಯತೆಯಿಂದ ಮಾತನಾಡಿಸಿ, "ನೀನೇ ಕಾಪಾಡಬೇಕು. ಅರಗಿನ ಮನೆಯೊಂದನ್ನು ವಾರಣಾವತದಲ್ಲಿ ನಿರ್ಮಿಸು. ಪಾಂಡವರಿಗೆ ಅಲ್ಲಿ ನೆಚ್ಚಿಕೆಯಾಗುವಂತೆ ಮಾಡಿ, ಕೊನೆಗೆ ಕಿಚ್ಚುಹಚ್ಚಿ ಬಾ" ಎಂದ.


ಹಿರಿಯರಿಗೆಲ್ಲ ವಂದಿಸಿ, ಹೊರಡಲು ಸಂನದ್ಧನಾದ, ಯುಧಿಷ್ಠಿರ. ಆಗ ಕೆಲವರು ಹೇಳಿಯೇಬಿಟ್ಟರು: "ಧೃತರಾಷ್ಟ್ರನು ಮಾಡುತ್ತಿರುವುದು ಸರಿಯಲ್ಲ. ಪಾಂಡವರು ಪಾಪಮಾಡರು. ಆದರೆ ಅವರ ಬಗ್ಗೆ ಧೃತರಾಷ್ಟ್ರನಿಗೆ ಸಹನೆಯಿಲ್ಲ. ಭೀಷ್ಮ-ಪಾಂಡುಗಳು ಹೀಗೆಂದೂ ವರ್ತಿಸಲಿಲ್ಲ. ಯುಧಿಷ್ಠಿರನೆಲ್ಲಿಗೆ ಹೋಗುವನೋ ಅಲ್ಲಿಗೇ ನಾವೂ" ಎಂದು. ಅದರೆ ಯುಧಿಷ್ಠಿರನು ಹಾಗೆ ಬೇಡವೆನ್ನಲು ವಾಪಸಾದರು. 


ಆಗ, "ಪ್ರಾಜ್ಞರ ಪ್ರಲಾಪವನ್ನು ಬಲ್ಲ ಪ್ರಾಜ್ಞನಾದ ವಿದುರನು, ಪ್ರಾಜ್ಞನೂ ಪ್ರಾಜ್ಞಪ್ರಲಾಪ-ವನ್ನರಿತವನೂ ಆದ ಯುಧಿಷ್ಠಿರನಿಗೆ ಒಂದೆರಡು ಕಿವಿಮಾತನ್ನು ಹೇಳಿದ" ಎಂದು ವ್ಯಾಸರು ಹೇಳುತ್ತಾರೆ. (ಜಾಣರು ಜಾಣರೊಂದಿಗಾಡುವ ಮಾತುಗಳು ಕೆಲವೊಮ್ಮೆ ಇತರರಿಗೆ ಒಗಟೊಗಟಾಗಿ ತೋರಿದರೂ ಪರಸ್ಪರ ಅರ್ಥವಾಗುತ್ತವೆ). 


(ಸಂಸ್ಕೃತಜ್ಞರಷ್ಟೇ ಸಂಸ್ಕೃತಭಾಷೆಯಲ್ಲಿಯ ಒಗಟನ್ನು ಬಿಡಿಸಿಕೊಳ್ಳಬಲ್ಲರು. ಎಂದೇ ಅದರ ಅಭಿಪ್ರಾಯವನ್ನಿಲ್ಲಿ ಸ್ವಲ್ಪ ಬಿಡಿಸಿಯೇ ಹೇಳೋಣ) ಶತ್ರುವಿನ ಮತಿಯನ್ನರಿತು ಕಾರ್ಯ ಮಾಡಬೇಕು. ಹಾಗೆ ಮಾಡಿದಲ್ಲಿ ಆಪತ್ತನ್ನು ದಾಟಬಹುದು. ಮೈಯನ್ನು ಕೊಯ್ಯಲು ಲೋಹನಿರ್ಮಿತವಲ್ಲದ ನಿಶಿತವಾದ ಶಸ್ತ್ರವೂ ಇರಬಹುದು. ಅದನ್ನರಿತವನನ್ನು- ಘಾತಕ್ಕೆ ಪ್ರತಿಘಾತವನ್ನು ಬಲ್ಲವನನ್ನು - ಅದು ಕೊಲ್ಲದು. (ಇಲ್ಲಿ 'ನಿಶಿ' ಎಂದರೆ 'ರಾತ್ರಿಸಮಯದಲ್ಲಿ' ಎಂಬ ಧ್ವನಿಯಿದೆಯೆಂಬುದನ್ನು ಗಮನಿಸಬೇಕು. 'ಅಲೋಹ'ವೆಂದರೆ ವಿಷವೆಂದೋ ಬೆಂಕಿಯೆಂದೋ ತಿಳಿಯಬೇ್ಕು). ಬೆಂಕಿಯು ಬಿಲದೊಳಗಿರು್ವುದನ್ನು ಧ್ವಂಸಮಾಡದು – ಎಂದರಿತವನು ಸ್ವರಕ್ಷಣೆಮಾಡಿಕೊಳ್ಳಬಹುದು. (ಅರ್ಥಾತ್, ಸುರಂಗವನ್ನು ಸೇರಿಕೊಂಡವರು ಅಗ್ನಿಪೀಡೆಯಿಂದ ಪಾರಾಗಬಹುದು). ಕಣ್ಣಿಲ್ಲದವನಿಗೆ ದಾರಿ ಕಾಣದು, ದಿಕ್ಕೂ ತೋಚದು (ಅರ್ಥಾತ್ ವಿವೇಕವೆಂಬ ಕಣ್ಣಿಲ್ಲದವನಿಗೆ ಆಪತ್ತಿನಿಂದ ತಪ್ಪಿಸಿಕೊಳ್ಳುವ ಹಾದಿಕಾಣದು, ಬರೀ ದಿಗ್ಭ್ರಮೆಯಾಗುತ್ತದೆ). ಧೃತಿಯಿಲ್ಲದವನಿಗೆ ಬುದ್ಧಿಯಿರದು. (ಅರ್ಥಾತ್, ಕ್ಲೇಶಗಳು ಬಂದಾಗ ಕಂಗಾಲಾದರೆ ಸರಿಯಾದದ್ದು ತೋಚದು). ಆಪ್ತರಲ್ಲದವರು ಪ್ರಯೋಗಿಸುವ ಅಲೋಹಶಸ್ತ್ರದಿಂದ (ಅರ್ಥಾತ್ ಅಗ್ನಿಪ್ರಯೋಗದಿಂದ) ಬಿಡಿಸಿಕೊಳ್ಳುವುದನ್ನರಿತಿರಬೇಕು. ಓಡಾಡುತ್ತಿದ್ದರೆ ದಾರಿಗಳ ಪರಿಚಯವಾಗುತ್ತದೆ. (ಅರ್ಥಾತ್ ವಾರಣಾವತದಲ್ಲಿದ್ದಾಗ ಹಗಲೆಲ್ಲ ಊರು ಸುತ್ತುತ್ತಿದ್ದರೆ ಹೆದ್ದಾರಿ-ಕಿರುದಾರಿಗಳೆಲ್ಲ ಗೊತ್ತಾಗುವುವು: ತಪ್ಪಿಸಿಕೊಳ್ಳಲು ಇದೆಲ್ಲ ತಿಳಿದಿರಬೇಕು). ನಕ್ಷತ್ರಗಳಿಂದಲೂ ದಿಕ್ಕುಗಳನ್ನು ತಿಳಿಯಬಹುದು (ಅರ್ಥಾತ್ ಕತ್ತಲಲ್ಲಿ

ತಪ್ಪಿಸಿಕೊಂಡುಹೋಗಬೇಕಾಗುವ ಸಂನಿವೇಶವು ಬರಲಿದೆ). ತಾನೇ ತನ್ನ ಐದನ್ನು ಪೀಡಿಸುತ್ತಿದ್ದರೆ ಪೀಡೆಗೊಳಗಾಗನು (ಅರ್ಥಾತ್ ಪಂಚೇಂದ್ರಿಯಸಂಯಮವನ್ನು ತನ್ನ ಮನಸ್ಸಿನಿಂದಲೇ ಮಾಡಿಕೊಂಡಿರುತ್ತಿದ್ದರೆ – ಅಂದರೆ ಇಂದ್ರಿಯಚಾಪಲ್ಯಗಳಿಗೆ ತುತ್ತಾಗದಿದ್ದರೆ – ಸ್ವರಕ್ಷಣೆಯು ಶಕ್ಯ).


ಹೀಗಿವೆ ವಿದುರನ ಮಾತುಗಳು! ಎಂದೇ ವ್ಯಾಸರು ಆತನನ್ನು ವಿದ್ವಾಂಸರಲ್ಲಿ ಶ್ರೇಷ್ಠ ಎನ್ನುವುದು "ವಿದುರಂ ವಿದುಷಾಂ ಶ್ರೇಷ್ಠಂ"! ವಾರಣಾವತದಲ್ಲಿ ಯಾವ ಬಗೆಯ ವಿಪತ್ತು ಕಾದಿದೆ, ಆತ್ಮರಕ್ಷಣೆ ಹೇಗೆ ? – ಎಂಬಿಷ್ಟನ್ನೂ ಅವನು ಸೂಚಿಸಿದ್ದಾನೆ. ಧರ್ಮಜ್ಞನಾದ ವಿದುರನಿಗೆ

ನಮಸ್ಕಾರ.

ಸೂಚನೆ : 18/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.